ಜನತೆಗೆ ಪ್ರಾಮಾಣಿಕ ಸೇವೆ ಸಲ್ಲಿಸಿ ನಾಡಪ್ರಭುವಿಗೆ ಗೌರವ ಸಲ್ಲಿಸೋಣ : ಚಿಕ್ಕಸುಬ್ಬಯ್ಯ

ರಾಮನಗರ: ಸ್ವಾತಂತ್ರ್ಯ ಗಳಿಸಿ 75 ವರ್ಷಗಳು ಸಂದರೂ ದೇಶದ ಜನತೆ ಆರ್ಥಿಕವಾಗಿ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿಗೊಂಡು ಸಮಾನತೆಯಿಂದ ಶಾಂತಿ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ರಾಜಕೀಯ ನೇತಾರರು, ಸರ್ಕಾರಿ ಅಧಿಕಾರಿಗಳು ಜನತೆಗೆ ನಮ್ಮ ಕೈಯಲ್ಲಿ ಆಗುವ ಸೇವೆಯನ್ನು ಪ್ರಾಮಾಣಿಕವಾಗಿ ಒದಗಿಸುವ ಮೂಲಕ ಈ ನಾಡನ್ನು ಕಟ್ಟಿ ನಾಡಿನಲ್ಲಿ, ವಿಶ್ವವೇ ಇತ್ತ ನೋಡುವಂತಹ ಬೆಂಗಳೂರನ್ನು ನಿರ್ಮಾಣ ಮಾಡಿದ ನಾಡಪ್ರಭು ಕೆಂಪೇಗೌಡ ಅವರಿಗೆ ಗೌರವ ಸಲ್ಲಿಸೋಣ ಎಂದು ರಾಮನಗರ ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿ ಚಿಕ್ಕಸುಬ್ಬಯ್ಯ ತಿಳಿಸಿದರು.
ರಾಮನಗರ ಜಿಲ್ಲಾ ಪಂಚಾಯಿತಿ ಕಛೇರಿ ಸಂಕೀರ್ಣದ ಮಿನಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಕಛೇರಿ ಸಿಬ್ಬಂದಿಗಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೆಂಪೇಗೌಡ ಅವರ 513ನೇ ಜಯಂತಿ ದಿನಾಚರಣೆಯಲ್ಲಿ ಭಾಗವಹಿಸಿ, ಕೆಂಪೇಗೌಡ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದ ನಂತರ ಮಾತನಾಡಿದ ಅವರು, ನಾಡುಕಟ್ಟಿ ಜನತೆಯ ಜೀವನ ಮಟ್ಟವನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಾಮಾಜಿಕವಾಗಿ ಸಮಾನತೆಯಿಂದ ಬದಕಲು ಶ್ರಮಿಸಿದ ನಾಡಪ್ರಭು ಕೆಂಪೇಗೌಡ ಅವರು ಹಾಕಿಕೊಟ್ಟ ದಾರಿಯಲ್ಲಿ ನಾವು ಇಂದು ನಡೆಯುತ್ತಿದ್ದೇವೆಯೆಂದು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ ಎಂದರು.
ಪ್ರಸ್ತುತ ಸಮಾಜದಲ್ಲಿ ದೇಶ ಮತ್ತು ರಾಜ್ಯಗಳ ಅಭಿವೃದ್ಧಿಗೆ ಶ್ರಮಿಸಿದ ಮಹನೀಯರುಗಳು ರೂಪಿಸಿದ್ದ ನೀತಿ-ನಿಯಮಗಳಲ್ಲಿ ಹಲವು ಏರು-ಪೇರುಗಳಾಗುತ್ತಿದ್ದು ಜನತೆಯಲ್ಲಿ ಅಸಮಾನತೆಯನ್ನು ಕಾಣುತ್ತಿದ್ದೇವೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಚಿಕ್ಕಸುಬ್ಬಯ್ಯ ಅವರು, ಬ್ರಿಟೀಷರ ಕಾಲದಲ್ಲಿ ಕೆಂಪೇಗೌಡ ಆ ನಂತರ ನಾಲ್ವಡಿ ಕೃಷ್ಣರಾಜಯ ಒಡೆಯರ್, ಜ್ಯೂತಿಬಾಯಿ ಪುಲೆ, ಡಾ|| ಬಿ.ಆರ್. ಅಂಬೇಡ್ಕರ್ ಅವರುಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಪ್ರತಿಯೊಬ್ಬ ಪ್ರಜೆಯೂ ಸುಶಿಕ್ಷಿತರಾಗಿ ಸಮಾನತೆಯಿಂದ ಬದಕಲು ಹಾಕಿಕೊಟ್ಟ ಬುನಾದಿ ಇಂದಿಗೂ ಸಹ ಸಂಪೂರ್ಣವಾಗಿ ಯಶಸ್ವಿಯಾಗದೆ ದೇಶದಲ್ಲಿ ಬಡತನ ಮತ್ತು ಅಸಮಾನತೆಯೇ ಎದ್ದು ಕಾಣುತ್ತಿದೆ ಎಂದು ತಿಳಿಸಿದರು.
ರಾಜ್ಯಕ್ಕೆ ಕೆಂಪೇಗೌಡ ಅವರು ಸಲ್ಲಿಸಿದ ಸೇವೆಯನ್ನು ಸ್ಮರಿಸಿ ಅವರ ಮಾರ್ಗದರ್ಶನಗಳನ್ನು ಅನುಸರಿಸುವುದರ ಮೂಲಕ ಜನತೆಗೆ ಪ್ರಾಮಾಣಿಕ ಸೇವೆಯನ್ನು ನೀಡಿ ಕೆಂಪೇಗೌಡ ಅವರಿಗೆ ಗೌರವ ಅರ್ಪಿಸೋಣ ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಹರ್ಷ, ಸಿಎಓ ರಾಧ, ಸಹಾಯಕ ಕಾರ್ಯದರ್ಶಿ ಮಮತ, ಸಹಾಯಕ ಯೋಜನಾಧಿಕಾರಿ ಲೋಕೇಶ್ ಸೇರಿದಂತೆ ಜಿಲ್ಲಾ ಪಂಚಾಯಿತಿ ಕಛೇರಿಗಳ ಇನ್ನಿತರೆ ಸಿಬ್ಬಂದಿಗಳು ಹಾಜರಿದ್ದರು.

“ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ :

https://chat.whatsapp.com/HK9U7zQD11W79PK8sGwVCS

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :

WhatsApp : 9880439669

Mail : rudresh.444@gmail.com

Leave a Reply

Your email address will not be published. Required fields are marked *