ಬಹುಭಾಷಾ ನಟಿ ಮೀನಾ ಪತಿ ವಿದ್ಯಾಸಾಗರ್ ನಿಧನ

ಚೆನ್ನೈ: ಬಹುಭಾಷಾ ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ಇಂದು (ಬುಧವಾರ) ಮುಂಜಾನೆ ನಿಧನರಾಗಿದ್ದಾರೆ. ಇತ್ತೀಚಿಗೆ ಕೋವಿಡ್‌ ಹಾಗೂ ಶ್ವಾಸಕೋಶ ಸಂಬಂಧಿತ ಸೋಂಕಿನಿಂದ ಬಳಲುತ್ತಿದ್ದರು ವಿದ್ಯಾಸಾಗರ್ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ. ವಿದ್ಯಾಸಾಗರ್ ನಿಧನಕ್ಕೆ ಹಿರಿಯ ನಟ ಶರತ್ ಕುಮಾರ್ ಸೇರಿದಂತೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ವ್ಯಕ್ತಪಡಿಸಿದ ಮೀನಾ ಅವರ ಸ್ನೇಹಿತರು, ಅಭಿಮಾನಿಗಳು ಮತ್ತು ಕುಟುಂಬದ ಹಿತೈಷಿಗಳಿಗೆ ಈ ಸುದ್ದಿ ಆಘಾತವನ್ನುಂಟು ಮಾಡಿದೆ ಮತ್ತು ದುಃಖಿತ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇವೆಂದು ಹೇಳಿದ್ದಾರೆ. 

ಕನ್ನಡ ಸೇರಿದಂತೆ ವಿವಿಧ ಭಾಷಾ ಚಿತ್ರಗಳಲ್ಲಿ ನಟಿಸಿದ್ದ ಮೀನಾ, 2009 ರಲ್ಲಿ ವಿದ್ಯಾಸಾಗರ್ ಅವರನ್ನು ವಿವಾಹವಾಗಿದ್ದರು. ದಂಪತಿಗೆ 11 ವರ್ಷದ ನೈನಿಕಾ ಎಂಬ ಮಗಳಿದ್ದಾಳೆ, ತಾಯಿಯ ಹಾದಿಯನ್ನು ಅನುಸರಿಸುತ್ತಿರುವ ನೈನಿಕಾ ‘ತೇರಿ’ ಚಿತ್ರದಲ್ಲಿ ಬಾಲನಟಿಯಾಗಿ ತೆರೆಯ ಮೇಲೆ ಪಾದಾರ್ಪಣೆ ಮಾಡಿದ್ದಾರೆ.

ವಿದ್ಯಾ ಸಾಗರ್ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ವಿವಾಹದ ಬಳಿಕ ವಿದ್ಯಾ ಸಾಗರ್ ಮತ್ತು ಮೀನಾ ಚೆನ್ನೈನಲ್ಲಿ ವಾಸ್ತವ್ಯ ಹೂಡಿದ್ದರು.

Leave a Reply

Your email address will not be published. Required fields are marked *