ಹೊಟ್ಟೆ ಕೊಯ್ದು ಹೊಲಿಗೆ ಹಾಕದ ವೈದ್ಯ : ನರಳಿ ನರಳಿ ಪ್ರಾಣ ಬಿಟ್ಟ ವೃದ್ಧೆ

ದಾವಣಗೆರೆ: ನಗರದ ಕೆ ಆರ್ ರಸ್ತೆಯಲ್ಲಿ ಇರುವ ಗುರುನಾಥ ಖಾಸಗಿ ಆಸ್ಪತ್ರೆ ಇಂದು ರಣರಂಗವಾಗಿತ್ತು. ಈ ಆಸ್ಪತ್ರೆಯ ವೈದ್ಯ ಡಾ. ದಿಲೀಪ್ ಬೊಂದಡೆ ಮಾಡಿದ ಎಡವಟ್ಟಿಗೆ 65 ವರ್ಷದ ವೃದ್ಧೆ ನರಳಿ ನರಳಿ ಮೃತಪಟ್ಟಿದ್ದಾರೆ. ಕಳೆದ 15 ದಿನಗಳ ಹಿಂದೆ ಮಾಡಿದ್ದ ಶಸ್ತ್ರಚಿಕಿತ್ಸೆಯ ಎಡವಟ್ಟಿನಿಂದಾಗಿ ಅನ್ನಪೂರ್ಣಮ್ಮ ಎಂಬ ವೃದ್ಧೆ ಕೊನೆಯುಸಿರೆಳೆದಿದ್ದಾರೆ.

ಹೊಟ್ಟೆ ನೋವು ಇದ್ದ ಕಾರಣ ವೈದ್ಯ ಡಾ. ದಿಲೀಪ್​ ಶಸ್ತ್ರಚಿಕಿತ್ಸೆ ಮಾಡುವುದಾಗಿ ಹೇಳಿದ್ದರು. ಶಸ್ತ್ರ ಚಿಕಿತ್ಸೆ ಏನೋ ಆಯಿತು. ಆದ್ರೆ ಬಳಿಕ ಕೊಯ್ದ ಹೊಟ್ಟೆಗೆ ಹೊಲಿಗೆ ಹಾಕಿರಲಿಲ್ಲ. ಈ ಪ್ರಕರಣ ದೇಶಾದ್ಯಂತ ಸುದ್ದಿಯಾಗಿತ್ತು. ಹತ್ತು ದಿನಗಳಾದ್ರು ವೃದ್ಧೆಗೆ ನೋವು ಕಡಿಮೆ ಆಗಲಿಲ್ಲ. ಮೇಲಾಗಿ ಮೂರು ಲಕ್ಷ ರೂಪಾಯಿ ಬಿಲ್ ಆಗಿದ್ದು, ಕೇಳಿದ್ರೆ ತಾನಾಗೆ ಗಾಯ ಮಾಯವಾಗುತ್ತದೆ ಎಂಬ ಸಬೂಬನ್ನು ವೈದ್ಯ ದಿಲೀಪ್​ ಹೇಳಿದ್ದರಂತೆ.

ಇಂತಹ ಪರಿಸ್ಥಿತಿಯಲ್ಲಿ ಕುಟುಂಬ ಸದಸ್ಯರು ದಿಟ್ಟ ನಿರ್ಧಾರ ತೆಗೆದುಕೊಂಡು ನಾಲ್ಕು ದಿನಗಳ ಹಿಂದೆ ದಾವಣಗೆರೆ ಜಿಲ್ಲಾಸ್ಪತ್ರೆಗೆ ವೃದ್ಧೆಯನ್ನು ದಾಖಲಿಸಿದ್ದರು. ತೀವ್ರ ಗಾಯದಿಂದ ಬಳಲಿದ್ದ ಅಜ್ಜಿ ಇಂದು ಜಿಲ್ಲಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಜಿಲ್ಲಾಸ್ಪತ್ರೆಯಿಂದ ಶವವನ್ನ ಗುರುನಾಥ ಆಸ್ಪತ್ರೆಗೆ ತಂದು ಕುಟುಂಬ ಸದಸ್ಯರು ಹೋರಾಟ ನಡೆಸಿದ್ರು. ಸಕಾಲಕ್ಕೆ ಬಂದ ಪೊಲೀಸರು ವೈದ್ಯನನ್ನು ರಕ್ಷಣೆ ಮಾಡಿದರು.

ವೈದ್ಯನ ಎಡವಟ್ಟಿನಿಂದ ತಮ್ಮ ತಾಯಿಯ ಆರೋಗ್ಯ ಹಾಳಾಗಿದೆ ಎಂದು ನಾಲ್ಕು ದಿನಗಳ ಹಿಂದೆಯೇ ಇಲ್ಲಿನ ಬಸವನಗರ ಠಾಣೆಗೆ ಪುತ್ರಿ ದೂರು ನೀಡಿದ್ದರು. ದೂರು ನೀಡಿದ ಬಳಿಕ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲವಂತೆ. ಹೀಗಾಗಿ ವೈದ್ಯನ ವಿರುದ್ಧ ಮತ್ತೊಂದು ದೂರನ್ನು ಸಹ ನೀಡಲು ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ.

Leave a Reply

Your email address will not be published. Required fields are marked *