ಅಂಗನವಾಡಿ ಕಾರ್ಯಕರ್ತೆಯರಿಗೆ ಶಿಕ್ಷಕಿ ಸ್ಥಾನ
ಬೆಂಗಳೂರು : ಅಂಗನವಾಡಿಗಳ ಜತೆಗೆ ಒಂದು ಮತ್ತು ಎರಡನೇ ತರಗತಿ ಗಳನ್ನು ಸಂಯೋಜಿಸಿ ಶಾಲಾ ಸಾಂಸ್ಥಿಕ ಸ್ವರೂಪ ನೀಡಲು, ಅಂಗನವಾಡಿ ಕಾರ್ಯಕರ್ತೆಯರನ್ನು ಶಿಕ್ಷಕಿಯರೆಂದು ಪರಿಗಣಿಸಲು ರಾಷ್ಟ್ರೀಯ ಶಿಕ್ಷಣ ನೀತಿ ಶಿಫಾರಸು ಮಾಡಿದೆ. ಉತ್ತರಾಖಂಡ ರಾಜ್ಯವು ಇದನ್ನು ಜಾರಿ ಮಾಡಿದ್ದು, ಕರ್ನಾಟಕವೂ ಅನುಷ್ಠಾನಕ್ಕೆ ಮುಂದಾಗಿದೆ.
ಎನ್‌ಇಪಿ ಆಶಯವನ್ನು ದೇಶದ ಎಲ್ಲ ರಾಜ್ಯಗಳೂ ಅನುಷ್ಠಾನಕ್ಕೆ ತಂದರೆ 13,13,935 ಅಂಗನವಾಡಿ ಕಾರ್ಯಕರ್ತೆಯರು ಶಿಕ್ಷಕಿಯರ ಗೌರವಕ್ಕೆ ಪಾತ್ರರಾಗಲಿದ್ದಾರೆ. ಅವರು ಪಡೆಯುತ್ತಿರುವ ₹10 ಸಾವಿರ ಗೌರವಧನ ವೇತನವಾಗಿ ಪರಿವರ್ತನೆಯಾಗಲಿದೆ. ಜತೆಗೆ ಸೇವಾ ಭದ್ರತೆಯೂ ದೊರಕಲಿದೆ. ಈಗಾಗಲೇ ಉತ್ತರಾಖಂಡ ರಾಜ್ಯ ಎನ್‌ಇಪಿಯ 1ನೇ ಅಧ್ಯಾಯವನ್ನು ಜಾರಿಗೊಳಿಸಿದ್ದು, ಅಲ್ಲಿನ 4,457 ಅಂಗನವಾಡಿಗಳಿಗೆ ಶಾಲಾ ಸಾಂಸ್ಥಿಕ ಸ್ವರೂಪ ನೀಡಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

3 ವರ್ಷದಿಂದ 6 ವರ್ಷದ ಒಳಗಿನ ಮಕ್ಕಳ ಕಲಿಕೆಗೆಂದು ಕಾರ್ಯಕರ್ತೆಯರನ್ನು ನೇಮಿಸಿಕೊಂಡಿದ್ದರೂ, ಅವರನ್ನು ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಅಡಿ ಮಕ್ಕಳು, ಬಾಣಂತಿಯರು, ಕಿಶೋರಿಯರು, ಗರ್ಭಿಣಿಯರ ಆರೋಗ್ಯದ ಮೇಲೆ ನಿಗಾ ಇರಿಸಲು, ಪೌಷ್ಟಿಕ ಆಹಾರ ವಿತರಣೆ ಸೇರಿದಂತೆ ಸರ್ಕಾರದ ಹಲವು ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ. 2021–22ನೇ ಸಾಲಿನಲ್ಲಿ ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ಕಲಿಸುವ ಜತೆಗೆ, 56.50 ಲಕ್ಷ ಫಲಾನುಭವಿಗಳಿಗೆ ಸೇವೆ ಒದಗಿಸಿದ್ದಾರೆ.
ದೇಶದ ಇತಿಹಾಸದಲ್ಲಿ ಇದುವ ರೆಗೂ ಅಂಗನವಾಡಿ, ಬಾಲವಾಡಿ ಹಾಗೂ ಪೂರ್ವ ಪ್ರಾಥಮಿಕ ತರಗತಿಗಳನ್ನು ಶಾಲಾ (ಸ್ಕೂಲಿಂಗ್) ಹಂತವೆಂದು ಪರಿಗಣಿಸಿರಲಿಲ್ಲ. ಶಾಲಾ ತರಗತಿಗಳ ಕೆಳಹಂತದ ವಿಸ್ತರಣೆಯ ಚಟುವಟಿಕೆಗಳೆಂದು ನೋಡಲಾಗುತ್ತಿತ್ತು. ಪ್ರಸ್ತುತ ಮಗುವಿನ ಬೌದ್ಧಿಕ, ಮಿದುಳಿನ ವಿಕಾಸದ ಆಧಾರದ ಮೇಲೆ ಶಿಕ್ಷಣವನ್ನು ನಾಲ್ಕು ಹಂತಗಳಾಗಿ ವಿಭಾಗಿಸಲಾಗಿದೆ. ಮೂರು ವರ್ಷಗಳ ಅಂಗನವಾಡಿ ಸೇರಿ 2ನೇ ತರಗತಿಯವರೆಗೆ ಪ್ರಾಥಮಿಕ, 3ರಿಂದ 5ರವರೆಗೆ ಮಾಧ್ಯಮಿಕ, 6ರಿಂದ 8ರವರೆಗೆ ಪೂರ್ವಪ್ರೌಢ, 9ರಿಂದ 12ರವರೆಗೆ ಪ್ರೌಢಶಾಲಾ ಹಂತಗಳೆಂದು ಗುರುತಿಸಲಾಗಿದೆ.
“ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ :
https://chat.whatsapp.com/HK9U7zQD11W79PK8sGwVCS
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :
WhatsApp : 9880439669
Mail : rudresh.444@gmail.com