ಯೋಗೇಶ್ ಚಕ್ಕೆರೆ ಅವರ ಲೇಖನ : ಸಮಾಜ ಸೇವೆಯನ್ನೇ ಉಸಿರಾಗಿಸಿಕೊಂಡ ಅಪರೂಪದ ವಕೀಲ ಟಿ .ವಿ. ಗಿರೀಶ್

‘ಪರಹಿತಾರ್ಥಕ್ಕಿದಂ ಶರೀರಂ’ ಎಂಬ ನುಡಿಯಂತೆ ಭೂಮಿಯ ಮೇಲೆ ಮನುಷ್ಯನಾಗಿ ಹುಟ್ಟಿದ ಮೇಲೆ ತಾನು ತನಗಾಗಿ ಮಾತ್ರ ಅಲ್ಲ ,ಅನ್ಯರ ಕಷ್ಟಗಳಿಗೂ ನೋವು ನಲಿವುಗಳಿಗೆ ಸ್ಪಂದಿಸಬೇಕು, ಮಿಡಿಯಬೇಕು ಎಂಬ ಅಂಶವನ್ನು ಮೈಗೂಡಿಸಿಕೊಂಡು ಸಾರ್ಥಕ ಜೀವನ ನಡೆಸುವ ವ್ಯಕ್ತಿಗಳು ವಿರಳ .
ಅಂತಹ ಅಪರೂಪದ ವಿರಳ ವ್ಯಕ್ತಿಗಳಲ್ಲಿ ಚನ್ನಪಟ್ಟಣ ತಾಲ್ಲೂಕಿನ ವಕೀಲರ ಸಂಘದ ಮಾಜಿ ಅಧ್ಯಕ್ಷ , ಖ್ಯಾತ ವಕೀಲ ಟಿ. ವಿ .ಗಿರೀಶ್ ರವರು ಕೂಡ ಒಬ್ಬರು .
ವ್ಯಕ್ತಿ ತಾನು ಬದುಕುತ್ತಾ ತನ್ನ ಸುತ್ತಮುತ್ತಲ್ಲಿರುವವರನ್ನು ಕೂಡ ಬದುಕಿಸುವ ವಿಶಾಲ ಹೃದಯ , ಮನೋಭಾವ ಮತ್ತು ವಿಶ್ವಮಾನವ ತತ್ವವನ್ನು ಅಳವಡಿಸಿಕೊಳ್ಳಬೇಕು, ಜಾತಿ, ಮತ, ಪಂಥ, ಧರ್ಮಗಳ ಎಲ್ಲೆಗಳನ್ನು ಮೀರಿ ಸಕಲ ಜೀವಾತ್ಮರ ಒಳಿತಿಗೆ ಕೈಲಾದಷ್ಟು ಶ್ರಮಿಸಬೇಕು. ಈ ರೀತಿಯಾಗಿ ಆಗ ಈಗ ಬಾ ಹೋಗಿ ಬಾ ಎನ್ನದೆ ತನ್ನ ಬಳಿ ಬೇಡಿ ಬಂದವರಿಗೆ ಕರೆದು ಕೊಡುವ ಮೂಲಕ ಕೊಡುಗೈ ದಾನಿಯಾಗಿ , ಬಡವರ ನಿರ್ಗತಿಕರ ದೀನ ದುರ್ಬಲರ ಆಶಾಕಿರಣವಾಗಿ ,ಸಮಾಜ ಸೇವಕನಾಗಿ,ಜಾತ್ಯತೀತ ಮನೋಧರ್ಮದ ಸರ್ವಧರ್ಮ ಸಮನ್ವಯಕಾರನಾಗಿ , ಸಮಾಜ ಸೇವಕರಾಗಿ ಗುರುತಿಸಿಕೊಂಡಿರುವ ಸ್ನೇಹಜೀವಿ ಸಮಾಜ ಸೇವಕ ಕಾಂಗ್ರೆಸ್ ಪಕ್ಷದ ಕಾನೂನು ಘಟಕದ ಜಿಲ್ಲಾಧ್ಯಕ್ಷರಾದ ಟಿ. ವಿ. ಗಿರೀಶ್ ಅವರು ಯುವಸಮುದಾಯದ ಮಾದರಿ ವ್ಯಕ್ತಿಯಾಗಿ ವಿಭಿನ್ನ ಸಾಲಿನಲ್ಲಿ ನಿಲ್ಲುತ್ತಾರೆ .
ಟಿ.ವಿ. ಗಿರೀಶ್ ರವರು ಚನ್ನಪಟ್ಟಣ ತಾಲ್ಲೂಕಿನ ಸ್ವಾತಂತ್ರ ಚಳುವಳಿಯ ಹಿನ್ನೆಲೆಯುಳ್ಳ ತಿಟ್ಟಮಾರನಹಳ್ಳಿ ಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದ ಶ್ರೀಮತಿ ಗೌರಮ್ಮ ಮತ್ತು ವೆಂಕಟಗಿರಿಗೌಡ ದಂಪತಿಗಳ ಸುಪುತ್ರರಾಗಿ17/07/ 1977 ರಲ್ಲಿ ಜನಿಸಿದರು .ಸ್ವಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ, ಚನ್ನಪಟ್ಟಣದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರೌಢ ವಿದ್ಯಾಭ್ಯಾಸವನ್ನು ಮುಗಿಸಿ ,ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ ಪದವಿಯನ್ನು ಮುಗಿಸಿ, ಆನಂತರ ಎಲ್ಎಲ್ ಬಿ ಪದವಿಯನ್ನು ಪಡೆದು ,ಉದ್ಯೋಗವನ್ನು ಅರಸಿಕೊಂಡು ಬೆಂಗಳೂರಿನತ್ತ ಮುಖ ಮಾಡಿದರು. ಕೆಲ ಕಾಲ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿ , ಆನಂತರ ವಕೀಲಿ ವೃತ್ತಿಯನ್ನು ಮಾಡಲು ಮುಂದಾದರು . ವಕೀಲಿ ವೃತ್ತಿಯಲ್ಲಿ ಸಾಕಷ್ಟು ಹೆಸರು ಗಳಿಸಿದ ಮೇಲೆ ತಮ್ಮ ಹುಟ್ಟೂರಾದ ಚನ್ನಪಟ್ಟಣದಲ್ಲಿ ವಕೀಲಿ ವೃತ್ತಿ ನಡೆಸಬೇಕೆಂಬ ಮಹಾದಾಸೆಯೊಂದಿಗೆ ತಾಲ್ಲೂಕಿಗೆ ಮರಳಿದರು.

ವಕೀಲರ ಸಂಘದ ಅಧ್ಯಕ್ಷರಾಗಿ ಉತ್ತಮ ಸೇವೆ ಮಾಡಿದ ಗಿರೀಶ್ :

ವಕೀಲರ ಸಂಘದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಟಿ.ವಿ. ಗಿರೀಶ್ ಅವರು ಕ್ರಿಯಾಶೀಲರಾಗಿ ಸಂಘದ ಮೂಲಕ ಅತ್ಯುತ್ತಮ ಕಾರ್ಯ ಚಟುವಟಿಕೆಗಳನ್ನು ನಿರಂತರವಾಗಿ ಕೈಗೊಂಡರು. ಕಾನೂನು ಅರಿವು ಕಾರ್ಯಾಗಾರ ಆಯೋಜನೆ , ಮನರಂಜನಾ ಕಾರ್ಯಕ್ರಮ ಆಯೋಜನೆ , ವಕೀಲರ ಕ್ರೀಡಾಕೂಟ ಆಯೋಜನೆ ,ಮಹಿಳಾ ದಿನಾಚರಣೆ ,ಸ್ವಾತಂತ್ರ್ಯ ದಿನಾಚರಣೆ ,ಗಣರಾಜ್ಯೋತ್ಸವ ಕಾರ್ಯಕ್ರಮಗಳ ಆಯೋಜನೆ ,ವಕೀಲರಿಗಾಗಿ ವ್ಯಾಕ್ಸಿನ್ ಕಾರ್ಯಾಗಾರ ಸೇರಿದಂತೆ ವಕೀಲ ರಕ್ಷಣೆಗಾಗಿ ‘ವಕೀಲ ರಕ್ಷಣೆ ಕಾಯಿದೆಯನ್ನು’ ಜಾರಿಗೆ ತರುವಂತೆ ಒತ್ತಾಯಿಸಿ ಹೋರಾಟ ವನ್ನು ಕೂಡ ಮಾಡಿದ ಹೆಗ್ಗಳಿಕೆ ಗಿರೀಶ್ ಅವರದು.

ಶ್ರೀ ರಾಮ ಮಂದಿರ ನಿರ್ಮಾಣಕ್ಕೆ 1ಲಕ್ಷ ಸಮರ್ಪಣೆ ಮಾಡಿದ ಟಿ.ವಿ ಗಿರೀಶ್ :

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮನ ಭವ್ಯ ಮಂದಿರ ನಿರ್ಮಾಣಕ್ಕಾಗಿ ಶ್ರೀರಾಮಜನ್ಮಭೂಮಿ ಮಂದಿರ ನಿರ್ಮಾಣ ನಿಧಿ ಸಮರ್ಪಣ ಅಭಿಯಾನ ನಡೆಯುತ್ತಿದ್ದ ಸಂದರ್ಭದಲ್ಲಿ ದೈವಭಕ್ತಿ ಉಳ್ಳ ,ಧಾರ್ಮಿಕ ಮತ್ತು ಆಧ್ಯಾತ್ಮಿಕತೆಯ ಬಗ್ಗೆ ಒಲವುಳ್ಳ, ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳಸುವ ಕಾಳಜಿವುಳ್ಳ ಮನೋಭಾವ ಮೈಗೂಡಿಸಿಕೊಂಡಿರುವ ಚನ್ನಪಟ್ಟಣದ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಟಿ.ವಿ ಗಿರೀಶ್ ರವರು ಒಂದು ಲಕ್ಷ ರೂಗಳನ್ನು ಸಮರ್ಪಣೆ ಮಾಡಿದ್ದಾರೆ.

ಹಸಿದವರಿಗೆ ಕೈ ತುತ್ತು ನೀಡಿದ ಗಿರೀಶ್ :

‘ತಾನು ಉಣ್ಣದ ಪರರಿಗಿಕ್ಕದ ಧನವೇತಕೆ ,ಪರಹಿತಾರ್ಥಕ್ಕಿಲ್ಲದವನ ಶರೀರವೇತಕೆ’ ಎಂಬ ಕನಕದಾಸರ ಮಾತಿನಂತೆ , ಕರೋನಾ ಸಂದರ್ಭದಲ್ಲಿ ಇಡೀ ದೇಶವೇ ತತ್ತರಿಸಿ ಹೋಗಿ ಬಡವರು ನಿರ್ಗತಿಕರು ಅನ್ನಾಹಾರವಿಲ್ಲದೆ ಪರದಾಡುತ್ತಿದ್ದ ಸಂದರ್ಭದಲ್ಲಿ ಗಿರೀಶ್ ಅವರು ಚನ್ನಪಟ್ಟಣ ತಾಲ್ಲೂಕು ಸೇರಿದಂತೆ ವಿವಿಧ ಭಾಗಗಳಲ್ಲಿ ಆಹಾರದ ಅವಶ್ಯಕತೆ ಇರುವಂತವರಿಗೆ, ನೂರಾರು ದಿನಗೂಲಿ ಕಾರ್ಮಿಕರಿಗೆ ಮಾತೃಭೂಮಿ ಸೇವಾ ಫೌಂಡೇಷನ್ ಸಹಯೋಗದೊಂದಿಗೆ ದಿನನಿತ್ಯ ಆಹಾರದ ಪೊಟ್ಟಣಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ ,ಇದಲ್ಲದೆ ಈರುಳ್ಳಿ,ಬೆಳ್ಳುಳ್ಳಿ,ಎಣ್ಣೆ,ತೊಗರಿ ಬೆಳೆ,ಬೆಲ್ಲ,ಸೋಪು, ಬಟ್ಟೆ ಸೋಪು,ಪೇಸ್ಟ್, ಸಾಂಬಾರು ಪುಡಿ,ಉಪ್ಪು, ಈ ಎಲ್ಲಾ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಿ ಹಸಿದವರಿಗೆ ಕೈತುತ್ತು ನೀಡಿ ನೆರವಾಗಿದ್ದಾರೆ.

ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಿದ ಗಿರೀಶ್ :

ಸಾಮಾಜಿಕ ಕಳಕಳಿಯುಳ್ಳ, ಸಮಾಜ ಸೇವೆಯನ್ನೇ ಉಸಿರಾಗಿಸಿಕೊಂಡಿರುವ ಗಿರೀಶ್ ಅವರು ಮಾತೃಭೂಮಿ ಮಡಿಲು ಮಕ್ಕಳ ಸೇವಾಶ್ರಮ ದ ಸಹಯೋಗದೊಂದಿಗೆ ಪ್ರತಿಭಾವಂತ ಮಕ್ಕಳನ್ನು, ಬಡ ಮಕ್ಕಳನ್ನು ಗುರುತಿಸಿ ವ್ಯಾಸಂಗಕ್ಕೆ ಪೂರಕವಾಗಿ ಬೇಕಾದ ಆರ್ಥಿಕ ನೆರವು ನೀಡುವುದು, ಉಚಿತ ನೋಟ್ ಪುಸ್ತಕ ವಿತರಣೆ ,ಬಟ್ಟೆ ಬ್ಯಾಗ್ ಇತರೆ ಪರಿಕರಗಳನ್ನು ವಿತರಣೆ ಮಾಡುವುದು ಮೊದಲಾದ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದಾರೆ ,ಇದಲ್ಲದೆ ವಿದ್ಯಾಭ್ಯಾಸ ಮಾಡಿಸುವ ಸಲುವಾಗಿ ಹಲವಾರು ವಿದ್ಯಾರ್ಥಿಗಳನ್ನು ದತ್ತು ಪಡೆದಿದ್ದಾರೆ. ತಾಲ್ಲೂಕಿನ ಚಿಕ್ಕೇನಹಳ್ಳಿ ಗ್ರಾಮದಲ್ಲಿ ನ ಬಡ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆನ್ ಲೈನ್ ಶಿಕ್ಷಣಕ್ಕೆ ಅನುಕೂಲವಾಗುವಂತೆ ಉಚಿತವಾಗಿ ಲ್ಯಾಪ್ ಟಾಪ್ ಗಳನ್ನು ನೀಡಿ ಪ್ರೋತ್ಸಾಹಿಸಿದ್ದಾರೆ .ಪಕ್ಷ ಬೇಧ, ಜಾತಿ ,ಧರ್ಮ ಎನ್ನದೆ ಮಾತೃಭೂಮಿ ಫೌಂಡೇಶನ್ ಸಂಸ್ಥೆ ನಡೆಸುತ್ತಿರುವ ಸೇವಾಶ್ರಮದಲ್ಲಿ ಹಿಂದೂ ಮತ್ತು ಮುಸ್ಲಿಂ ಮಕ್ಕಳನ್ನು ದತ್ತು ತೆಗೆದುಕೊಂಡು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ .ಸಹಾಯ ಕೋರಿ ಬರುವ ಎಲ್ಲರಿಗೂ ಕೈಲಾದ ಮಟ್ಟಿಗೆ ಸಹಾಯ ಮಾಡುವ ಮೂಲಕ ಅವರ ನೋವಿಗೆ ಸ್ಪಂದಿಸುತ್ತ ಬಂದಿದ್ದಾರೆ.

ಕೊಡುಗೈ ದಾನಿ ಗಿರೀಶ್ :

‘ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ‘ಎಂಬ ನುಡಿಮುತ್ತಿನಂತೆ ಗಿರೀಶ್ ರವರು ತಮ್ಮ ಬಹುಪಾಲು ದುಡಿಮೆಯ ಹಣವನ್ನು ಸಮಾಜದಲ್ಲಿನ ಇಲ್ಲದವರಿಗೆ ನೀಡುವ ಮೂಲಕ ಸಹಾಯ ಹಸ್ತ ಚಾಚುತ್ತ ಬರುತ್ತಿದ್ದಾರೆ .
ತಾಲ್ಲೂಕಿನ ಸಿಂಗರಾಜಿಪುರ ಗ್ರಾಮದ ನಿರ್ಗತಿಕ ಬಡ ರೈತ ಕುಟುಂಬಕ್ಕೆ ಸೀಮೆ ಹಸು ದಾನ ಮಾಡಿದ್ದಾರೆ ಮತ್ತು ವಿದ್ಯುತ್ ಅವಘಡದಿಂದ ಕೈಕಾಲು ಕಳೆದುಕೊಂಡ ವೀರೇಗೌಡನ ದೊಡ್ಡಿ ಗ್ರಾಮದ 8ವರ್ಷದ ಬಾಲಕನಿಗೆ ಆರ್ಥಿಕ ನೆರವು ನೀಡುವುದರ ಜೊತೆಗೆ ತ್ರಿಚಕ್ರ ಸೈಕಲ್ ಕೊಡುಗೆ ನೀಡಿದ್ದಾರೆ .ಬೆನ್ನು ಮೂಳೆ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀವರದರಾಜಸ್ವಾಮಿ ದೇವಸ್ಥಾನದ ಅರ್ಚಕರಿಗೆ ತ್ರಿಚಕ್ರ ಸ್ಕೂಟರ್ ನೀಡಿದ್ದಾರೆ. ಕರೋನಾದಿಂದ ಮೃತಪಟ್ಟ ತಮ್ಮ ಹಿತೈಷಿಗಳ ಕುಟುಂಬಕ್ಕೆ ಕೈಲಾದ ಮಟ್ಟಿಗೆ ಆರ್ಥಿಕ ನೆರವು ನೀಡುತ್ತಾ ಬಂದಿದ್ದಾರೆ. ಅಲ್ಲದೆ ಸಂಭವಿಸಬಹುದಾದ ಅಪಘಾತಗಳನ್ನು ತಪ್ಪಿಸಿ ಸಾಹಸ ಮೆರೆದ ಮಾತೃಭೂಮಿ ಮಡಿಲು ಸೇವಾ ಆಶ್ರಮದ ಮಕ್ಕಳಿಗೆ ಹತ್ತು ಸಾವಿರ ರೂ ಪ್ರೋತ್ಸಾಹ ಧನ ನೀಡಿ ಗೌರವಿಸಿದ್ದಾರೆ. ಖ್ಯಾತ ಸಾಹಿತಿ ಸಿದ್ಧನಹಳ್ಳಿ ರವರು ಸ್ಥಾಪಿಸಿರುವ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ನ ಕಾನೂನು ಸಂಚಾಲಕರಾಗಿ ಟ್ರಸ್ಟ್‌ ನ ಸಮಾಜಮುಖಿ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗಾಗಿ ತಮ್ಮ ತಂದೆ ತಾಯಿಯ ಹೆಸರಿನಲ್ಲಿ 1ಲಕ್ಷ ರೂ ದತ್ತಿ ನೀಡಿ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ,ಸಾಧಕರಿಗೆ ಗೌರವ ಸಮರ್ಪಣೆ ಮಾಡುವ ಕಾರ್ಯ ಮಾಡಿಕೊಂಡು ಬರುತ್ತಿದ್ದಾರೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 250 ಕುರ್ಚಿ ಕೊಡುಗೆ ನೀಡಿದ ಗಿರೀಶ್ :

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸುಮಾರು ಮೂರುಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಒಳಗೊಂಡಿರುವ ಉತ್ತಮ ಶೈಕ್ಷಣಿಕ ವಾತಾವರಣವಿರುವ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ .ಈ ಕಾಲೇಜಿನಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಸಭಾಂಗಣದಲ್ಲಿ ವಿದ್ಯಾರ್ಥಿಗಳು ಕುಳಿತುಕೊಳ್ಳಲು ಸುಮಾರು ಇನ್ನೂರೈವತ್ತು ಕುರ್ಚಿಗಳ ಅವಶ್ಯಕತೆ ಇದೆ ಎಂಬ ವಿಚಾರವನ್ನು ಪ್ರಾಂಶುಪಾಲರಾದ ಡಾ. ವೆಂಕಟೇಶ್ ರವರು ಗಿರೀಶ್ ಅವರ ಬಳಿ ಮನವಿ ಮಾಡಿಕೊಂಡಾಗ ತಕ್ಷಣದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಕಾಲೇಜಿಗೆ ಅಗತ್ಯವಾಗಿರುವ ಕುರ್ಚಿಗಳನ್ನು ಕೊಡುಗೆಯಾಗಿ ನೀಡಿದ ಹೆಗ್ಗಳಿಕೆ ಗಿರೀಶ್ ರವರಿಗೆ ಸಲ್ಲುತ್ತದೆ.

ಬಿಇಒ ಕಚೇರಿ ಕಟ್ಟಡದ ದುರಸ್ತಿಗೆ ನೆರವು ನೀಡಿದ ಗಿರೀಶ್ :

ಚನ್ನಪಟ್ಟಣ ತಾಲ್ಲೂಕಿನ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ನೂತನ ಕಟ್ಟಡದ ಕಾಮಗಾರಿ ಕೆಲಸವು ಹಣದ ಕೊರತೆಯಿಂದ ಅರ್ಧಕ್ಕೆ ನಿಂತು ಸುಮಾರು ವರ್ಷಗಳೆ ಕಳೆದಿದ್ದವು .ಹಲವು ದಾನಿಗಳ ಸಹಕಾರದಿಂದ ಕಟ್ಟಡದವನ್ನು ಪೂರ್ಣಗೊಳಿಸುವ ಜವಾಬ್ದಾರಿಯನ್ನು ತೆಗೆದುಕೊಂಡ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ .ಎನ್ .ಮರೀಗೌಡ ರವರು ಬಿಇಒ ಕಚೇರಿಯ ಕೊಠಡಿಗಳಿಗೆ ಅಗತ್ಯವಿರುವ ಬಾಗಿಲುಗಳನ್ನು ಸಹಾಯ ರೂಪದಲ್ಲಿ ನೀಡುವಂತೆ ಕೋರಿಕೆ ಸಲ್ಲಿಸಿದ ಹಿನ್ನೆಲೆಯಲ್ಲಿ ಶೈಕ್ಷಣಿಕ ಕಾಳಜಿಯುಳ್ಳ ಗಿರೀಶ್ ಅವರು ಬಾಗಿಲುಗಳನ್ನು ತೆಗೆದುಕೊಟ್ಟು ಔದಾರ್ಯ ಮೆರೆದಿದ್ದಾರೆ.

ಆರೋಗ್ಯ ಮತ್ತು ಪರಿಸರಕ್ಕೆ ಹೆಚ್ಚಿನ ಆದ್ಯತೆ ನೀಡುವ ಗಿರೀಶ್ :

ವೃತ್ತಿಯಲ್ಲಿ ವಕೀಲರಾದರೂ ಪ್ರವೃತ್ತಿಯಲ್ಲಿ ಸಮಾಜ ಸೇವಕರಾಗಿರುವ ಗಿರೀಶ್ ರವರು ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಾ ಬರುತ್ತಿದ್ದಾರೆ. ಉಚಿತ ಕಾನೂನು ನೆರವು ,ಕಾನೂನು ಸಲಹೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ . ಕಲೆ ,ಸಾಹಿತ್ಯ, ಸಾಂಸ್ಕೃತಿಕ ,ಕ್ರೀಡೆ, ಪರಿಸರ ಸಂರಕ್ಷಣೆ, ಯುವಕರ ಕ್ರೀಡಾಕೂಟ ,ಕ್ರಿಕೆಟ್ ಪಂದ್ಯಾವಳಿ, ನಿರುದ್ಯೋಗಿ ಯುವಕರ ಅನುಕೂಲಕ್ಕಾಗಿ ಉದ್ಯೋಗ ಮೇಳ ಆಯೋಜನೆ ಮುಂತಾದ ಚಟುವಟಿಕೆಗಳನ್ನು ನಿರಂತರವಾಗಿ ಆಯೋಜಿಸುತ್ತಾ ಯುವಕರನ್ನು ಪ್ರೋತ್ಸಾಹಿಸುತ್ತಾ ಬರುತ್ತಿದ್ದಾರೆ.
ಜುಲೈ 17 ರಂದು ತಮ್ಮ 46 ನೇ ವರ್ಷದ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಳ್ಳುತ್ತಿರುವ ಗಿರೀಶ್ ಅವರು ಚನ್ನಪಟ್ಟಣ ತಾಲ್ಲೂಕಿನಲ್ಲಿ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಗಳಿಸಿರುವ ಅಂಗವಿಕಲ ಮಕ್ಕಳು ಗಳನ್ನು ಗುರುತಿಸಿ ,ಆ ವಿಶೇಷಚೇತನ ಮಕ್ಕಳು ಗಳಿಗೆ ಗೌರವ ಸನ್ಮಾನ ಮತ್ತು ನಗದು ಪುರಸ್ಕಾರವನ್ನು ನೀಡಿ ಅಭಿನಂದಿಸುವ ಮೂಲಕವಾಗಿ ಹುಟ್ಟು ಹಬ್ಬದ ಆಚರಣೆಯಲ್ಲಿಯೂ ತಮ್ಮ ಜೀವನದ ಸಾರ್ಥಕತೆ ಮೆರೆದಿದ್ದಾರೆ .
ಒಟ್ಟಿನಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ,ಸಮಾಜ ಸೇವೆ ,ವಕೀಲಿ ವೃತ್ತಿ ಹೀಗೆ ಬಹುಮುಖ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜಸೇವೆಯನ್ನು ಉಸಿರಾಗಿಸಿಕೊಂಡು, ತಾನು ತನಗಾಗಿ ಅಲ್ಲ ಸಮಾಜಕ್ಕಾಗಿ ಎಂಬುದಾಗಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವ ಟಿ.ವಿ. ಗಿರೀಶ್ ರವರ ಹುಟ್ಟುಹಬ್ಬದ ಈ ದಿನದಂದು ಭಗವಂತ ಅವರಿಗೆ ಸಕಲ ಅಷ್ಟೈಶ್ವರ್ಯಗಳನ್ನು ಕರುಣಿಸಲಿ ಅವರ ಸಾಮಾಜಿಕ ಕಳಕಳಿ ಹೀಗೇ ಮುಂದುವರಿಯಲಿ ಎಂದು ಎಲ್ಲರ ಪರವಾಗಿ ಶುಭ ಹಾರೈಸೋಣ.

ಯೋಗೇಶ್ ಚಕ್ಕೆರೆ

ಲೇಖನ : ಯೋಗೇಶ್ ಚಕ್ಕೆರೆ
ಶಿಕ್ಷಣ ಸಂಯೋಜಕರು
ಸಾಹಿತಿ ,ಕನ್ನಡ ಅಧ್ಯಾಪಕ
ಚನ್ನಪಟ್ಟಣ
. ಮೊ : 9620479970

“ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ :

https://chat.whatsapp.com/HK9U7zQD11W79PK8sGwVCS

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :

WhatsApp : 9880439669

Mail : rudresh.444@gmail.com

Leave a Reply

Your email address will not be published. Required fields are marked *