ಜೆಡಿಎಸ್ ಕಥೆ ಮುಗಿದೇ ಹೋಯಿತು ಎನ್ನುವವರಿಗೆ ಶಾಸಕರಾದ ಜಿ.ಟಿ. ದೇವೇಗೌಡ ಹಾಗೂ ಸಾ.ರಾ. ಮಹೇಶ್ ಭೇಟಿ ಉತ್ತರ ಕೊಟ್ಟಿದೆ : ಎಚ್.ಡಿ. ಕುಮಾರಸ್ವಾಮಿ
ರಾಮನಗರ ತಾಲ್ಲೂಕಿನ ಕೂಟಗಲ್ ಗ್ರಾಮದಲ್ಲಿ ಈಚೆಗೆ ನಿಧನರಾದ ದೇವರಾಜು (ಗಾಂಧಿ) ಅವರ ಕುಟುಂಬಕ್ಕೆ ಹಾಗೂ ಶಾನುಬೋಗನಹಳ್ಳಿಯಲ್ಲಿ ಈಚೆಗೆ ನಿಧನರಾದ ದುರ್ಗಾಸಿಂಗ್ ಅವರ ಕುಟುಂಬಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭೇಟಿ ಮಾಡಿ ಸಾಂತ್ವಾನ ಹೇಳಿದರು.
ರಾಮನಗರ : ಜೆಡಿಎಸ್ ಕಥೆ ಮುಗಿದೇ ಹೋಯಿತು ಎನ್ನುವವರಿಗೆ ಶಾಸಕರಾದ ಜಿ.ಟಿ. ದೇವೇಗೌಡ ಹಾಗೂ ಸಾ.ರಾ. ಮಹೇಶ್ ಭೇಟಿ ಉತ್ತರ ಕೊಟ್ಟಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ತಾಲ್ಲೂಕಿನ ಕೂಟಗಲ್ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಾಸಕರಾದ ಜಿ.ಟಿ. ದೇವೇಗೌಡ ಹಾಗೂ ಸಾ.ರಾ. ಮಹೇಶ್ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಇದೊಂದು ಒಳ್ಳೆಯ ಬೆಳವಣಿಗೆ ಎಂದರು.
ಕಾರವಾರದಲ್ಲಿ ಉತ್ತಮ ಆಸ್ಪತ್ರೆಗಾಗಿ ನಡೆದಿರುವ ಹೋರಾಟಕ್ಕೆ ನನ್ನ ಬೆಂಬಲವಿದೆ. ನಾನು ಮುಖ್ಯಮಂತ್ರಿ ಇದ್ದಾಗ ಕಾರವಾರದಲ್ಲಿ ಜಿಲ್ಲಾ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಬಜೆಟ್‌ನಲ್ಲಿ ₹250 ಕೋಟಿ ಅನುದಾನ ಮೀಸಲಿಟ್ಟಿದ್ದೆ. ರಾಜ್ಯ ಸರ್ಕಾರ ಜನರ ಹೋರಾಟಗಳನ್ನು ಗಂಭೀರವಾಗಿ ಪರಿಗಣಿಸಿ ಕನಿಷ್ಠ ಜಿಲ್ಲಾ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಆಗ್ರಹಿಸಿದರು.

ಡಿ.ಕೆ. ಶಿವಕುಮಾರ್ ಕುರಿತು ಕನಕಪುರದ ಜೆಡಿಎಸ್ ಮುಖಂಡ ಡಿ.ಎಂ. ವಿಶ್ವನಾಥ್ ಬೆಂಬಲಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಅವರಿಗೆ ಇತ್ತೀಚೆಗೆ ಶಿವಕುಮಾರ್ ಬಗ್ಗೆ ಪ್ರೀತಿ, ಮೋಹ ಬಂದಿರಬಹುದು. ಅದಕ್ಕೆ ಹೆಚ್ಚಿನ ಮಹತ್ವ ನೀಡುವ ಅಗತ್ಯ ಇಲ್ಲ ಎಂದರು.
ಚನ್ನಪಟ್ಟಣದಲ್ಲಿ ಸಿ.ಪಿ. ಯೋಗೇಶ್ವರ್ ನೇತೃತ್ವದಲ್ಲಿ ಬೊಂಬೆನಾಡು ಉತ್ಸವ ಆಯೋಜನೆ ಕುರಿತು ಪ್ರತಿಕ್ರಿಯಿಸಿದ ಅವರು, ಈ ಕಾರ್ಯಕ್ರಮ ಮಾಡುವುದಾದರೆ ಸ್ವಾಗತ. ಚನ್ನಪಟ್ಟಣದಲ್ಲಿ ಎಲ್ಲವನ್ನೂ ಯೋಗೇಶ್ವರ್ ಅವರೇ ಮಾಡಿ ಮುಗಿಸಿದ್ದಾರೆ. ನಾನೇನೂ ಮಾಡಲು ಆಗುತ್ತಿಲ್ಲ. ನಾನು ಅಂತಹ ಕ್ಷೇತ್ರ ಪ್ರತಿನಿಧಿಸುತ್ತಿದ್ದೇನೆ. ನಾನೇಕೆ ವಿರೋಧ ಮಾಡಲಿ ಎಂದು ತಿಳಿಸಿದರು.

ಕಾಂಗ್ರೆಸ್‌ನವರು ಇ.ಡಿ. ವಿಚಾರಕ್ಕೆ ರಸ್ತೆಗಿಳಿದು ಜನರಿಗೆ ತೊಂದರೆ ಕೊಡುವುದನ್ನು ಬಿಟ್ಟು ಜನಸಾಮಾನ್ಯರ ಸಮಸ್ಯೆ ಮುಂದಿಟ್ಟುಕೊಂಡು ಹೋರಾಟ ಮಾಡಬೇಕು ಎಂದು ತಿಳಿಸಿದರು
ಕೇಂದ್ರ ಸರ್ಕಾರ ಕೆಲವು ಸ್ವಾಯತ್ತ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಸ್ತಬ್ಧ ಮಾಡಲು ಹೊರಟಿರುವುದು ತಪ್ಪು. ಆದರೆ, ಇದೇ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್‌ನವರು ಜನಸಾಮಾನ್ಯರಿಗೆ ತೊಂದರೆ ಕೊಡುವುದು ಸರಿಯಲ್ಲ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಜನಸಾಮಾನ್ಯರಿಗೆ ಬದುಕುವ ಶಕ್ತಿ ತುಂಬುವುದನ್ನು ಬಿಟ್ಟು ಬೇಕಾದವರ ಆದಾಯ ವೃದ್ಧಿಸುತ್ತಿದೆ. ಬಿಜೆಪಿಗೆ ಆತ್ಮೀಯರಾಗಿ ಇರುವವರೊಬ್ಬರ ವರಮಾನ ಒಂದು ದಿನಕ್ಕೆ 1,300 ಕೋಟಿ ರೂ ಇದೆ. ಇಂತಹ ನಡವಳಿಕೆಗಳಿಗೆ ಸಂಬಂಧಿಸಿ ದಾಖಲೆ ಸಂಗ್ರಹಿಸಿ ಬೀದಿಗಿಳಿದು ಪ್ರತಿಭಟನೆ ನಡೆಸಬೇಕು ಎಂದು ತಿಳಿಸಿದರು.
ಶಾಸಕ ಎ. ಮಂಜುನಾಥ್, ಮುಖಂಡರು ಇದ್ದರು.
“ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ :
https://chat.whatsapp.com/HK9U7zQD11W79PK8sGwVCS
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :
WhatsApp : 9880439669
Mail : rudresh.444@gmail.com