ನಾಳೆ (ಜುಲೈ 29) ರಾಮನಗರ ಪ್ರವಾಸೋದ್ಯಮ ಹೂಡಿಕೆದಾರರ ಸಮಾವೇಶ

ಜಿಲ್ಲೆ ಅಭಿವೃದ್ಧಿಗೆ‌ ಇಂತಹ ಮೊದಲ ಪ್ರಯತ್ನ
ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ವಿನೂತನ ಹೆಜ್ಜೆ, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಭಾಗಿ

ಬೆಂಗಳೂರು : ರಾಜಧಾನಿಗೆ ತಾಗಿಕೊಂಡಿರುವ ರಾಮನಗರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಮತ್ತು ಆತಿಥ್ಯೋದ್ಯಮ ಹಾಗೂ ಸಾಹಸಕ್ರೀಡೆಗಳ ಬೆಳವಣಿಗೆಗೆ ವಿಫುಲ ಅವಕಾಶಗಳಿವೆ. ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಲು ಇದೇ 29ರಂದು ಇಡೀ ದಿನ ಕನಕಪುರ ತಾಲ್ಲೂಕಿನ ಗಾಳಿಬೋರೆಯಲ್ಲಿ ‘ರಾಮನಗರ ಪ್ರವಾಸೋದ್ಯಮ ಹೂಡಿಕೆದಾರರ ಸಮಾವೇಶ’ ಆಯೋಜಿಸಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರ ಪ್ರಯತ್ನದ ಫಲವಾಗಿ ಈ ಮೇಳ ಆಯೋಜಿಸಿದ್ದು, ಪ್ರವಾಸೋದ್ಯಮ ಸಚಿವ ‌ಆನಂದಸಿಂಗ್ ಕೂಡ ಭಾಗವಹಿಸಲಿದ್ದಾರೆ. ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ/ ಹೂಡಿಕೆದಾರರ ಜತೆ ಸಮಾಲೋಚನೆ‌ ನಡೆಸಲಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, `ಗಾಳಿಬೋರೆಯಲ್ಲಿರುವ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ ನಲ್ಲಿ ಅಂದು ಬೆಳಿಗ್ಗೆ 11.30ಕ್ಕೆ ಸಭೆ ಆರಂಭವಾಗಲಿದ್ದು, ಸಂಜೆಯವರೆಗೂ ನಡೆಯಲಿದೆ. ಹೂಡಿಕೆಗೆ ಇರುವ ಅವಕಾಶಗಳು ಮತ್ತು ತಾಣಗಳನ್ನು ತೀರ್ಮಾನಿಸಿ, ಮುಂದೆ ಇಡಬೇಕಾದ ಹೆಜ್ಜೆಗಳನ್ನು ತೀರ್ಮಾನಿಸಲಾಗುವುದು’ ಎಂದಿದ್ದಾರೆ.

`ಬೆಂಗಳೂರಿನಲ್ಲಿ ಒಂದೂ ಕಾಲು ಕೋಟಿ ಜನಸಂಖ್ಯೆ ಇದ್ದು, ಅಪಾರ ಸಂಖ್ಯೆಯ ಜನ ವಾರಾಂತ್ಯಗಳಲ್ಲಿ ಪ್ರವಾಸ ಹೋಗುತ್ತಿರುತ್ತಾರೆ. ಆದರೆ ಹೆಚ್ಚಿನ ಜನರಿಗೆ ಶನಿವಾರ-ಭಾನುವಾರಗಳಂದು ಬೆಳಿಗ್ಗೆ ಮನೆ ಬಿಟ್ಟು ಸಂಜೆ ವಾಪಸ್ಸಾಗುವಂಥ ಪ್ರವಾಸಿ ತಾಣಗಳು ಬೇಕಾಗಿವೆ. ರಾಮನಗರ ಜಿಲ್ಲೆಯಲ್ಲಿ ಕಾಡು, ನದಿ, ಬೆಟ್ಟ, ಜಲಾಶಯ, ಕೋಟೆ, ದೇವಸ್ಥಾನಗಳು, ಕೃಷಿ ಎಲ್ಲವೂ ಸಮೃದ್ಧವಾಗಿವೆ. ಹೀಗಾಗಿ ಇಲ್ಲಿ ಪ್ರವಾಸೋದ್ಯಮ ಮತ್ತು ಆತಿಥ್ಯೋದ್ಯಮವನ್ನು ಬೆಳೆಸಲು ಯಥೇಚ್ಛ ಅವಕಾಶಗಳಿವೆ’ ಎಂದು ಅವರು ಹೇಳಿದ್ದಾರೆ.

ಇನ್ವೆಸ್ಟ್ ಕರ್ನಾಟಕ’ ಮಾದರಿಯಲ್ಲಿಇನ್ವೆಸ್ಟ್ ರಾಮನಗರ’ ಮಾದರಿಯನ್ನು ಮುನ್ನೆಲೆಗೆ ತರಲಾಗುತ್ತಿದೆ. ಇಂತಹ ವಿಕೇಂದ್ರೀಕೃತ ಪ್ರಯತ್ನ ರಾಜ್ಯದ ಬೇರಾವ ಜಿಲ್ಲೆಯಲ್ಲೂ ನಡೆದಿಲ್ಲ. ಉದ್ದೇಶಿತ ಸಭೆಯಲ್ಲಿ ಹಲವು ಉದ್ಯಮಿಗಳು ಭಾಗವಹಿಸಲಿದ್ದಾರೆ. ಜತೆಗೆ ಜಿಲ್ಲಾಧಿಕಾರಿ ಅವಿನಾಶ್ ಮೆನನ್, ಜಿಪಂ ಸಿಇಒ ದಿಗ್ವಿಜಯ್ ಮತ್ತು ಪ್ರವಾಸೋದ್ಯಮ ಇಲಾಖೆಯ ಸಂಬಂಧಿತ ಉನ್ನತಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಸೈಕ್ಲಿಂಗ್, ಟ್ರೆಕ್ಕಿಂಗ್, ಅಗ್ರಿ-ಟೂರಿಸಂ, ಪರ್ವತಾರೋಹಣ, ಜಲಕ್ರೀಡೆಗಳು ಮುಂತಾದವಕ್ಕೆಲ್ಲ ರಾಮನಗರ ಜಿಲ್ಲೆಯಲ್ಲಿ ಅಪಾರ ಬೆಳವಣಿಗೆಯ ಸಾಧ್ಯತೆಗಳಿವೆ. ಇದರಿಂದ ಬೆಂಗಳೂರಿನ ಜನರಿಗೂ ಅನುಕೂಲವಾಗಲಿದೆ. ಅಂತಿಮವಾಗಿ ಇದು ಜಿಲ್ಲೆಯ ಆರ್ಥಿಕ ಬೆಳವಣಿಗೆಗೆ ನೆರವಾಗಲಿದೆ. ಮುತ್ತತ್ತಿ, ಸಂಗಮ, ಇಗ್ಗಲೂರು ಮತ್ತು ಕಣ್ವ ಜಲಾಶಯಗಳು, ಸಾವನದುರ್ಗ, ರೇವಣಸಿದ್ದೇಶ್ವರ ಬೆಟ್ಟ, ರಾಮೇಶ್ವರ ಬೆಟ್ಟ, ರೇಷ್ಮೆ ಕ್ಷೇತ್ರಗಳು ಇವೆಲ್ಲವನ್ನೂ ಆಕರ್ಷಕ ತಾಣಗಳಾಗಿ ಬೆಳೆಸಲು ಯೋಚಿಸಲಾಗಿದೆ ಎಂದು ಸಚಿವರು ಅಭಿಪ್ರಾಯ ಪಟ್ಟಿದ್ದಾರೆ.

ಬೆಂಗಳೂರಿನ ಜನರು ಸದ್ಯಕ್ಕೆ ಪ್ರವಾಸ ಹೋಗಬೇಕೆಂದರೆ ಹತ್ತಿರದಲ್ಲಿ ನಂದಿ ಬೆಟ್ಟ ಬಿಟ್ಟರೆ ಸೂಕ್ತ ತಾಣವಿಲ್ಲ. ವಾರಾಂತ್ಯದ ನಂತರ ಪುನಃ ಕೆಲಸಕ್ಕೆ ತೆರಳುವ ಧಾವಂತದಲ್ಲಿರುವವರಿಗೆ ದೂರದ ಜಾಗಗಳಿಗೆ ಹೋಗುವುದು ಸಾಧ್ಯವಿಲ್ಲ. ಜಿಲ್ಲೆಯಲ್ಲಿ ಕೃಷಿ ಜಮೀನುಗಳನ್ನು ಬೇಕಾದರೆ ಆಯ್ದುಕೊಂಡು, ಬೆಳೆ ತೆಗೆಯಲು ಕೂಡ ಪ್ರವಾಸೋದ್ಯಮದ ಭಾಗವಾಗಿ ಅವಕಾಶ ಕೊಡುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ಅಶ್ವತ್ಥನಾರಾಯಣ ವಿವರಿಸಿದರು.

ಹೂಡಿಕೆ‌ ಮಾಡಲು ಮುಂದೆ ಬರುವವರಿಗೆ ಮುಕ್ತ ಅವಕಾಶ ಕಲ್ಪಿಸಲಾಗುವುದು. ಸರ್ಕಾರದ ಕಡೆಯಿಂದಲೂ ಎಲ್ಲ ರೀತಿಯ ಅನುಮತಿ ಗಳನ್ನೂ ಸುಲಭವಾಗಿ ಕೊಡಿಸುವ ಕೆಲಸ‌ ಮಾಡಲಾಗುವುದು ಎಂದು ಸಚಿವರು ವಿವರಿಸಿದರು.

“ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ :

https://chat.whatsapp.com/HK9U7zQD11W79PK8sGwVCS

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :

WhatsApp : 9880439669

Mail : rudresh.444@gmail.com

Leave a Reply

Your email address will not be published. Required fields are marked *