ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಮೇಲೆ 66 ಕೋಮು ದಳ್ಳುರಿ ಕೇಸ್ : ಆರೋಪಿಗಳಿಗೆ ಶಿಕ್ಷೆ ಮಾತ್ರ ಶೂನ್ಯ!
ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಮುಖಂಡನ ಹತ್ಯೆ ಬಗ್ಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ಕಾರ್ಯಕರ್ತರೇ ತಮ್ಮ ಸರ್ಕಾರದ ಅಸಹಾಯಕತೆ ವಿರುದ್ಧ ತಿರುಗಿ ಬಿದ್ದಿದ್ದಾರೆ. ಪ್ರತಿ ಹತ್ಯೆ ಬಳಿಕ ಕಠಿಣ ಶಿಕ್ಷೆಯ ವಾಗ್ದಾನ ನೀಡುವ ಬಿಜೆಪಿ ನಾಯಕರು ಅಸಲಿಗೆ ಅಧಿಕಾರ ಚುಕ್ಕಾಣಿ ಹಿಡಿದ ಮೂರು ವರ್ಷಗಳಿಂದ ಒಬ್ಬನೇ ಒಬ್ಬ ಕೋಮು ದ್ವೇಷ ಬಿತ್ತಿದ ಆರೋಪಿಯನ್ನು ಕಠಿಣಾತಿ ಕಠಿಣ ಶಿಕ್ಷೆಗೆ ಗುರಿಪಡಿಸಲಾಗಿಲ್ಲ.
ಬಿಜೆಪಿ ಸರ್ಕಾರ ಬಂದಾಗಿನಿಂದ ನಡೆದ ಕೋಮು ಗಲಭೆ ಪ್ರಕರಣಗಳ ಮೇಲೆ ಕಣ್ಣಾಡಿಸಿದರೆ ಈವರೆಗೆ ಯಾವೊಬ್ಬ ಬಂಧಿತನಿಗೂ ತಕ್ಕ ಶಿಕ್ಷೆ ನೀಡಲು ಸಾಧ್ಯವಾಗಿಲ್ಲ ಎಂಬುದು ಬಯಲಿಗೆ ಬರುತ್ತದೆ. ಹೀಗಾಗಿಯೇ ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ಸಹನೆಯ ಕಟ್ಟೆಯನ್ನು ಒಡೆಯುವಂತೆ ಮಾಡಿದೆ. ತಮ್ಮದೇ ಸರ್ಕಾರ, ಪಕ್ಷದ ರಾಜ್ಯಾಧ್ಯಕ್ಷ ಸೇರಿ ಸಚಿವರ ವಿರುದ್ಧವೇ ಬಿಜೆಪಿ ಕಾರ್ಯಕರ್ತರ ಆಕ್ರೋಶದ ಕಟ್ಟೆ ಒಡೆದಿದೆ.
ಮೂರು ವರ್ಷದಲ್ಲಿ 66 ಕೋಮುಗಲಭೆ: ಕಳೆದ ಮೂರು ವರ್ಷಗಳಲ್ಲಿ ಅಂದರೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ 66 ಕೋಮು ಸಂಘರ್ಷಗಳು ನಡೆದಿವೆ. ಈ ಕೋಮು ದ್ವೇಷಕ್ಕೆ ಹಲವು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಹಿಂದೂ ಕಾರ್ಯಕರ್ತರಾಗಲಿ, ಅಲ್ಪಸಂಖ್ಯಾತರಾಗಲಿ ಕೋಮು ಸಂಘರ್ಷಕ್ಕೆ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
2019ರಲ್ಲಿ ರಾಜ್ಯದಲ್ಲಿ ಒಟ್ಟು 12 ಕೋಮು ಗಲಭೆಗಳು ನಡೆದಿದ್ದರೆ, 2020ರಲ್ಲಿ 21 ಕೋಮು ಗಲಭೆ ಹಾಗೂ 2021ರಲ್ಲಿ 23 ಕೋಮು ದಳ್ಳುರಿಗಳು ಸಂಭವಿಸಿವೆ. 2022ರಲ್ಲಿ ಈವರೆಗೆ 10 ಕೋಮು ಗಲಭೆಗಳು ನಡೆದಿವೆ. ಇದರಲ್ಲೂ ಶಿವಮೊಗ್ಗದಲ್ಲಿ ಕಳೆದ ಮೂರು ವರ್ಷದಿಂದೀಚೆಗೆ ಅತಿ ಹೆಚ್ಚು ಅಂದರೆ 13 ಕೋಮು ಗಲಭೆಗಳು ದಾಖಲಾಗಿವೆ. ಇತ್ತ, ದಕ್ಷಿಣ ಕನ್ನಡದಲ್ಲೂ 12 ಕೋಮು ಸಂಘರ್ಷಗಳು ಜರುಗಿವೆ. ಹಾವೇರಿಯಲ್ಲಿ 10 ಕೋಮು ಸಂಘರ್ಷಗಳು ನಡೆದಿರುವ ಪ್ರಕರಣಗಳು ದಾಖಲಾಗಿವೆ.
ಇತ್ತ, 2016ರಲ್ಲಿ 42 ಕೋಮು ಗಲಭೆಗಳು ದಾಖಲಾಗಿದ್ದವು. 2017ರಲ್ಲಿ ಈ ಪ್ರಕರಣಗಳ ಸಂಖ್ಯೆ 100ಕ್ಕೆ ಏರಿಕೆ ಕಂಡಿತ್ತು. 2018ರಲ್ಲಿ ಕೋಮು ಸಂಘರ್ಷ ಪ್ರಕರಣಗಳು 30ಕ್ಕೆ ಇಳಿಕೆ ಕಂಡಿತ್ತು ಎಂದು ಅಂಕಿ-ಅಂಶಗಳ ಮೂಲಕ ತಿಳಿಯುತ್ತದೆ