ನಾಳೆ (ಜುಲೈ 31) ಐತಿಹಾಸಿಕ ಮಹಾಮಸ್ತಾಭಿಷೇಕಕ್ಕೆ ಗೌಡಗೆರೆ ಚಾಮುಂಡೇಶ್ವರಿ ಶ್ರೀಕ್ಷೇತ್ರ ಸಜ್ಜು
ಸಕಲ ಸಿದ್ಧತೆಯೊಂದಿಗೆ ಸಿಂಗರಿಸಿಕೊಂಡು ನಿಂತ ಚಾಮುಂಡೇಶ್ವರಿ ಸನ್ನಿಧಾನ
ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜಿ ಅವರಿಂದ ನಾಡಿನ ಗಣ್ಯಾತಿಗಣ್ಯರಿಗೆ ಖುದ್ದು ಆಹ್ವಾನ

ರಾಮನಗರ : ಬೊಂಬೆ ಆಟಿಕೆಗಳಿಗೆ ವಿಶ್ವವಿಖ್ಯಾತವಾಗಿರುವ ಬೊಂಬೆನಗರಿ ಚನ್ನಪಟ್ಟಣ ತಾಲ್ಲೂಕಿನಲ್ಲಿ ಮತ್ತೊಂದು ಅದ್ಭುತ ತಲೆ ಎತ್ತಿ ನಿಂತು ಈಗಾಗಲೇ ಎಲ್ಲೆಡೆ ಭಕ್ತಿಪೂರ್ವಕ ಪ್ರೀತಿಗೆ ಪಾತ್ರವಾಗಿರುವ ಶ್ರೀಕ್ಷೇತ್ರ ಗೌಡಗೆರೆ ಚಾಮುಂಡೇಶ್ವರಿ ವಿಗ್ರಹಕ್ಕೆ ಇದೇ ಪ್ರಪ್ರಥಮ ಬಾರಿಗೆ ಮಹಾಮಸ್ತಾಭಿಷೇಕ ಜುಲೈ 31ರಂದು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರ ಮದುವಣಗಿತ್ತಿಯಂತೆ ಸಕಲ ರೀತಿಯಲ್ಲೂ ಸಿಂಗರಿಸಿಕೊಂಡು ಸಿದ್ಧಗೊಂಡಿದೆ.
ಈ ಪುಣ್ಯವನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಹಾಗೂ ಗಣ್ಯಾತಿಗಣ್ಯರು ಆಗಮಿಸಲಿದ್ದಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಗೌಡಗೆರೆ ಶ್ರೀಕ್ಷೇತ್ರದಲ್ಲಿ ಇದೇ ಭಾನುವಾರ ಮಹಾಮಸ್ತಾಭಿಷೇಕ ನಡೆಯುವ ಹಿನ್ನೆಲೆಯಲ್ಲಿ ಬೊಂಬೆನಗರಿ ಚನ್ನಪಟ್ಟಣ ಸಜ್ಜಾಗುತ್ತಿದ್ದು, ಈಗಾಗಲೇ ವಿಶ್ವ ವಿಖ್ಯಾತಿ ಎಂದು ಹೆಸರು ಪಡೆದಿರುವ ಚನ್ನಪಟ್ಟಣಕ್ಕೆ ಮತ್ತೊಂದು ಗರಿ ಸಿಗುವುದಕ್ಕೆ ಕ್ಷಣಗಣನೆ ಆರಂಭಗೊಂಡಿದೆ.
ವರ ನೀಡುವ ಚಾಮುಂಡೇಶ್ವರಿ ತಾಯಿ :
ಇಲ್ಲಿ ನೆಲೆಸಿರುವ ಆ ತಾಯಿಯನ್ನ ನಂಬಿ ಒಮ್ಮೆ ಬಂದು ಪ್ರಾರ್ಥಿಸಿದ್ರೆ ಸಾಕು ನಿಮ್ಮ ಕಷ್ಟಗಳಿಗೆ ಮುಕ್ತಿ ಶತಸಿದ್ದ. ಇಲ್ಲಿರುವ ಜೀವಂತ ಪವಾಡ ಬಸವಪ್ಪನಿಗೆ ನಿಮ್ಮ ಕಷ್ಟ ಹೇಳಿಕೊಂಡ್ರೆ ಆ ಬಸವಪ್ಪ ತಥಾಸ್ತು ಅಂದ್ರೆ ನಿಮ್ಮ ಸಂಕಷ್ಟವೆಲ್ಲವೂ ಕೂಡ ದೂರಾಗಲಿದೆ. ಇಲ್ಲಿ ಬೇಟಿಕೊಟ್ಟು ತಮ್ಮ ಕಷ್ಟದ ಬಗ್ಗೆ ಈ ತಾಯಿಯನ್ನ ಪ್ರಾರ್ಥಿಸಿ ಮತ್ತೆ ನಮಗೆ ಅದೇ ಹಳೆಯ ಕಷ್ಟವೇ ಇದೆ ಎಂದು ಮತ್ತೆ ಬಂದವರ ಉದಾಹರಣೆಗಳೇ ಇಲ್ಲ. ಇದಲ್ಲದೆ ರಾಜ್ಯದ ಹಲವು ದೇವಸ್ಥಾನಗಲ್ಲಿ ಅನೇಕ ಅಚ್ಚರಿ ವಿಸ್ಮಯಗಳನ್ನ ಕೇಳಿದ್ದೀರಾ ಜೊತೆಗೆ ನೋಡಿದ್ದೀರಾ. ಹಾಗೆಯೇ ಈ ದೇಗುಲ ಬಹಳ ಅಚ್ಚರಿ ಜೊತೆಗೆ ಅನೇಕ ವಿಶ್ಮಯಗಳನ್ನ ತನ್ನೊಡಲೊಳಗೆ ಇಟ್ಟುಕೊಂಡಿರುವ ದೇವಸ್ಥಾನವಾಗಿದೆ. ಇಲ್ಲಿ ದೇಗುಲದ ಬಂದಿದ್ದೇ ಒಂದು ಅಚ್ಚರಿಯಾಗಿದೆ.
ಐತಿಹಾಸಿಕ ಮಹಾಮಸ್ತಾಭಿಷೇಕಕ್ಕೆ ಸಿದ್ದತೆ :
ತಾಲೂಕಿನ ವಿಶ್ವ ವಿಖ್ಯಾತ ಗೌಡಗೆರೆ ಚಾಮುಂಡೀಶ್ವರಿ ತಾಯಿಗೆ ಇದೇ ಜುಲೈ 31 ರಂದು ಮಹಾ ಮಸ್ತಾಭಿಷೇಕ ಮಾಡಲು ದೇವಸ್ಥಾನದ ಆಡಳಿತ ಮಂಡಳಿ ಸಜ್ಜಾಗಿದೆ. ಬಾಹುಬಲಿ ವಿಗ್ರಹಕ್ಕೆ ನಡೆದ ಮಹಾಮಸ್ತಾಭಿಷೇಕ ಮಾದರಿಯಲ್ಲೆ ಈ ಗೌಡಗೆರೆಯಲ್ಲೂ ಕೂಡ ಚಾಮುಂಡೇಶ್ವರಿ ತಾಯಿಗೆ ಮಸ್ತಾಭಿಷೇಕ ನಡೆಸಲು ಸಜ್ಜಾಗಿದೆ.
ಜುಲೈ 31 ರಂದು ಭಾನುವಾರ ಮಸ್ತಾಭಿಷೇಕ ನಡೆಸಲಾಗುತ್ತಿದ್ದು, ಈ ಪುಣ್ಯವನ್ನ ಕಣ್ಬುಂಬಿಕೊಳ್ಳಲು ಗಣ್ಯಾತಿಗಣ್ಯರು ಪಾಲ್ಗೊಳ್ಳುವ ನಿರೀಕ್ಷೆ ಇಡಲಾಗಿದೆ. ಜುಲೈ 29 ರಂದು ಅಮ್ಮನವರ ಮೂಲಕ ವಿಗ್ರಹಕ್ಕೆ ಮಂಗಳ ಸ್ನಾನ, ಅಭಿಷೇಕ, ಪಂಚಾಮೃತ ನೈವೇದ್ಯ ಹಾಗೂ ಭಕ್ತಾಧಿಕಾಗಳಿಗ ಪ್ರಸಾದ ವಿನಿಯೋಗ ನಡೆಯಲಿದೆ.
ಶ್ರೀ ಕ್ಷೇತ್ರದ ಬನ್ನಿಮಂಟಪದಿಂದ 108 ಹಾಲರಬಿಯನ್ನು ಮೆರವಣಿಗೆಯಲ್ಲಿ ತರುವ ಮೂಲಕ ಬಸಪ್ಪನಿಗೆ ಕ್ಷೀರಾಭಿಷೇಕ ನಡೆಯಲಿದೆ.
ಬನ್ನಿಮಂಟಪದಿಂದ ಡೊಳ್ಳು ಕುಣಿತ, ಪೂಜಾಕುಣಿತ ವೀರಗಾಸೆ, ಉತ್ತರ ಕರ್ನಾಟಕದ ಹೆಸರಾಂತ ಗುಗ್ಗಳ ಕುಣಿತ ಹಾಗೂ ತೆಂಗಿನ ಕಾಯಿ ಪವಾಡ ಸೇರಿದಂತೆ 108 ಹಾಲರಬಿ ವಿಶೇಷ ಅಭಿಷೇಕವು ಅಮ್ಮನವರಿಗೆ ನೆರವೇರಲಿದೆ.
ಗಣ್ಯಾತಿಗಣ್ಯರ ಉಪಸ್ಥಿತಿ :
ಶ್ರೀಕ್ಷೇತ್ರ ಗೌಡಗೆರೆಯ ಚಾಮುಂಡೇಶ್ವರಿ ದೇವಿಯ ಮಹಾಮಸ್ತಾಭಿಷೇಕ ಕಾರ್ಯಕ್ರಮ ವಿಕ್ಷಣೆಗೆ ಸಾವಿರಾರು ಮಂದಿ ಬರುವ ನಿರೀಕ್ಷೆ ಇದೆ. ಈಗಾಗಲೇ ದೇಗುಲ ಧರ್ಮದರ್ಶಿ ಡಾ. ಮಲ್ಲೇಶ್ ಗೂರೂಜಿ ರವರು, ರಾಜ್ಯಸಭಾ ಸದಸ್ಯರಾದ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಸಿದ್ದಗಂಗಾ ಮಠಾಧೀಶರಾದ ಸಿದ್ದಲಿಂಗ ಸ್ವಾಮೀಜಿ, ರಾಮನಗರ ಆದಿಚುಂಚನಗಿರಿ ಮಠದ ಅನ್ನದಾನೇಶ್ವರ ಸ್ವಾಮೀಜಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಪ್ರದಾನಿ ಹೆಚ್.ಡಿ.ದೇವೇಗೌಡ, ಕ್ಷೇತ್ರದ ಶಾಸಕ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಮೈಸೂರು ಸಂಸ್ಥಾನ ರಾಜವಂಶಸ್ಥ ಯದುವೀರ ಶ್ರೀಕಂಠದತ್ತ ಒಡೆಯರ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವಥ್ ನಾರಾಯಣ್, ಸಂಸದ ಡಿ.ಕೆ.ಸುರೇಶ್, ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ಚಿತ್ರನಟರಾದ ಸುದೀಪ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್ ಸೇರಿದಂತೆ ಹಲವು ಸಚಿವರು ಹಾಗೂ ಶಾಸಕರಿಗೆ ಖುದ್ದು ಆಹ್ವಾನ ನೀಡಿದ್ದಾರೆ.
ಒಟ್ಟಾರೆ ಇದೇ ಪ್ರಪ್ರಥಮ ಭಾರಿಗೆ ವಿಶ್ವ ವಿಖ್ಯಾತ ಐತಿಹಾಸಿಕ ಗೌಡಗೆರೆ ಬೃಹತ್ ಚಾಮುಂಡೇಶ್ವರಿ ವಿಗ್ರಹಕ್ಕೆ ಮಹಾಮಸ್ತಾಭಿಷೇಕ ನಡೆಯಲಿದ್ದು ನೀವು ಕೂಡ ಆ ಅಪರೂಪ ಕ್ಷಣವನ್ನು ನೋಡಬೇಕಾದತೆ ಕುಟುಂಬ ಸಮೇತರಾಗಿ ಆಗಮಿಸಿ ಎಂಬುದು ಶ್ರೀಕ್ಷೇತ್ರ ಗೌಡಗೆರೆ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜಿ ಅವರ ಮನವಿಯಾಗಿದೆ.
ಗೌಡಗೆರೆ ಚಾಮುಂಡೇಶ್ವರಿ ತಾಯಿ ಇತಿಹಾಸ…
ಬೊಂಬೆನಗರಿ ಚನ್ನಪಟ್ಟಣಕ್ಕೆ ಗೌಡಗರೆ ಗ್ರಾಮದ ಚಾಮುಂಡೇಶ್ವರಿ ಪಂಚಲೋಹದ ಬೃಹತ್ ವಿಗ್ರಹದಿಂದ ಮತ್ತಷ್ಟು ಗರಿ ಬಂದಂತೆ ಆಗಿದೆ. ಗೌಡಗೆರೆ ಶ್ರೀ ಕ್ಷೇತ್ರದಲ್ಲಿ ನೆಲಮಟ್ಟದಿಂದ ಅರವತ್ತು ಅಡಿ ಎತ್ತರವಿರುವ, ಹದಿನೆಂಟು ಭುಜಗಳ ಶಂಖ ಚಕ್ರ, ಗದಾ ಹಸ್ತೆ, ಸರ್ಪ ಶಾರ್ದೂಲ, ಕಮಂಡಲ, ಅಂಕುಶ, ಖಡ್ಗ, ಪರಶು, ಧನಸ್ಸು ಹೀಗೆ ಇನ್ನೂ ಮೊದಲಾದ ಹದಿನೆಂಟು ಬಗೆಯ ಆಯುಧಗಳನ್ನು ತಮ್ನ ಕೈಗಳಲ್ಲಿ ಧರಿಸಿರುವ ಸೌಮ್ಯ ರೂಪಿಯಾಗಿ ನಿಂತಿರುವ ಭಂಗಿಯಲ್ಲಿ ನಾಡ ದೇವತೆ, ಜಗನ್ಮಾತೆ ತಾಯಿ ಚಾಮುಂಡೇಶ್ವರಿ ಅಮ್ಮನವರ ಸುವರ್ಣ ಲೇಪಿತ ಪಂಚಲೋಹ ಬೃಹತ್ ವಿಗ್ರಹ ಭಕ್ತರನ್ನು ಕೈ ಬೀಸಿ ಕರೆಯುತ್ತಿದೆ.
ಕಬ್ಬಿಣ, ಹಿತ್ತಾಳೆ, ತಾಮ್ರ, ಚಿನ್ನ ಮತ್ತು ಬೆಳ್ಳಿ ಲೋಹಗಳಿಂದ ತಯಾರಾಗಿರುವ ಈ ವಿಗ್ರಹ ಈಗಾಗಲೇ ಲೋಕಾರ್ಪಣೆಗೊಂಡು ಸಾವಿರಾರು ಭಕ್ತಾಧಿಗಳ ಆಗಮನಕ್ಕೆ ಕಾರಣವಾಗಿದೆ. ಅದರಲ್ಲೂ ಈ ಶಕ್ತಿ ದೇವಿಗೆ ಮಂಗಳವಾರ, ಶುಕ್ರವಾರ ವಿಶೇಷ ಪೂಜೆ
ಚಾಮುಂಡೇಶ್ವರಿಯ ಮಹಿಮೆಯ ಎಲ್ಲಾ ವಿಚಾರಗಳು ಎಲ್ಲಡೆ ಬಹುಬೇಗ ಪ್ರಚಾರ ಪಡೆದು ಊರಿನ ಹಾಗೂ ಅಕ್ಕ ಪಕ್ಕದ ಜನ ಆ ಗುಡಿಸಲಿನ ದೇವಿಯ ಬಳಿಗೆ ಬರಲು ಆರಂಭಿಸುತ್ತಾರೆ. ಪ್ರತಿ ಮಂಗಳವಾರ ಶುಕ್ರವಾರ ಶಕ್ತಿ ದೇವತೆ ಯಾದ ಚಾಮುಂಡೇಶ್ವರಿ ಬಳಿ ತಮ್ಮ ಕಷ್ಟಗಳನ್ನ ಹೇಳಿಕೊಳ್ಳಲು ಆರಂಭಿಸುತ್ತಿದ್ದಾರೆ.
ಇಷ್ಟಾರ್ಥ ಸಿದ್ಧಿಗೆ ಹೆಸರುವಾಸಿ :
ಅಚ್ಚರಿಯೆಂಬತೆ ರಾಜ್ಯ ಹಾಗೂ ಹೊರ ದೇಶಗಳಿಂದ ಬರುವ ಬಂದ ಜನರ ಕಷ್ಟಗಳು ನಿವಾರಣಿಸುವ ಕರುಣಾಮಯಿ ಎಂಬ ಕೀರ್ತಿಗೆ ತಾಯಿ ಹೆಸರುವಾಸಿಯಾಗಿದೆ. ಕಾಲಕಳೆದಂತೆ ಸಾವಿರಾರು ಚಾಮುಂಡೇಶ್ಚರಿ ಭಕ್ತಾಧಿಗಳು ಇಲ್ಲಿಗೆ ಹರಿದು ಬರಲು ಆರಂಭಿಸಿದ್ದು, ಬಂದ ಜನಗಳ ಕಷ್ಟಗಳು ನಿವಾರಣೆಯಾಗಿ ಇದೊಂದು ಪವಾಡ ದೇವತೆಯೆಂಬ ಮಾತುಗಳು ಹೇಳಿಬರುತ್ತವೆ. ಗೌಡಗೆರೆ ಗ್ರಾಮದ ಮಲ್ಲೇಶ್ ಗುರೂಜಿಗಳು ಪ್ರತಿನಿತ್ಯ ದೇವಿ ಆರಾಧಕನಾಗಿ ಬಂದ ಜನರ ಕಷ್ಟ ನಿವಾರಣೆಗೆ ದೇವಿಯ ನಡುವಿನ ಕೊಂಡಿಯಾಗಿದ್ದಾರೆ. ಅದು ಚಿಕ್ಕ ಗುಡಿಸಲಿನಲ್ಲಿ ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡುತ್ತಿದ್ದ ದೇವಸ್ಥಾನ ಇಂದು ಬೃಹತ್ ಗಾತ್ರದ ಪಂಚಲೋಹ ವಿಗ್ರಹ ಸ್ಥಾಪನೆ ಮೂಲಕ ವಿಶ್ವ ವಿಖ್ಯಾತಿ ಪಡೆದಿದೆ.
ಗೌಡಗೆರೆ ಶ್ರೀ ಕ್ಷೇತ್ರದಲ್ಲಿ ವಿಸ್ಮಯಗಳ ಸರಮಾಲೆ :
ಗೌಡಗೆರೆಯ ಚಾಮುಂಡೇಶ್ವರಿ ದೇಗುಲದಲ್ಲಿ ವಿಸ್ಮಯಗಳು ಪವಾಡಗಳು ನಡೆಯುತ್ತಲೇ ಇರುತ್ತವೆ.
ಒಂದು ದಿನ ಕನಕಪುರ ಮೂಲದ ಒಂದು ಹೆಣ್ಣು ಮಗಳ ಕನಸ್ಸಲ್ಲಿ ಯಾವುದಾದರೂ ಒಂದು ದೇವಸ್ಥಾನಕ್ಕೆ ಗೋವುವೊಂದನ್ನು ಕಾಣಿಕೆ ನೀಡುವಂತೆ ಪದೇ ಪದೇ ಕನಸು ಬೀಳುತ್ತಿರುತ್ತದೆ. ನಂತರ ಆ ಹೆಣ್ಣು ಮಗಳ ತಂದೆ ಯಾವ ದೇವಸ್ಥಾನಕ್ಕೆ ಉಡುಗೊರೆ ನೀಡುವುದು ಎಂಬ ವಿಚಾರ ಬಂದಾಗ ಅವರ ಪರಿಚಯಸ್ಥರೊಬ್ಬರು ಗೌಡಗೆರೆಯ ಚಾಮುಂಡೇಶ್ವರಿ ಸನ್ನಿಧಾನಕ್ಕೆ ಕೊಡುವಂತೆ ಸಲಹೆ ನೀಡುತ್ತಾರೆ. ಅದರಂತೆ ಆ ತಂದೆ ಗೌಡಗೆರೆಯ ಕ್ಷೇತ್ರಕ್ಕೆ ಆಗಮಿಸಿ ಮಗಳ ಕನಸ್ಸಿನಲ್ಲಿ ಬರುವ ವಿಚಾರವನ್ನ ತಿಳಿಸಿ ನೀವೇ ಪರಿಹಾರ ಮಾಡಿಕೊಡುವಂತೆ ನಿವೇದನೆ ಮಾಡಿಕೊಳ್ಳುತ್ತಾರೆ. ನಂತರ ಪರಿಹಾರ ಕೂಡ ಮಾಡಿಕೊಡುತ್ತಾರೆ. ನಂತರ ಕ್ಷೇತ್ರಕ್ಕೆ ಕೊಟ್ಟ ಉಡುಗೊರೆಯನ್ನು ಯಾವುದನ್ನು ನಿರ್ಲಕ್ಷ್ಯ ಮಾಡದ ಮಲ್ಲೇಶ್ ಗುರೂಜಿ ಅದೇ ವಿಚಾರದಲ್ಲಿ ಇದ್ದಾಗ ರೈತನೊಬ್ಬ ಎತ್ತೊಂದನ್ನು ಕಸಾಯಿಖಾನೆಗೆ ಮಾರಲು ತೆಗೆದುಕೊಂಡು ಹೋಗುತ್ತಿರುತ್ತಾನೆ. ಅದೇ ಎತ್ತನ್ನು ಮಲ್ಲೇಶ್ ಗೂರೂಜಿ ಕೊಂಡುಕೊಂಡು ಅದನ್ನು ದೇವಸ್ಥಾನದ ಆವರಣಕ್ಕೆ ಕರೆತರುತ್ತಾರೆ. ಹಾಗೇ ತಂದ ಎತ್ತಿಗೆ ದೇವರ ಗುಡ್ಡ ಎಂದು ಬಿಟ್ಟು ಮುದ್ರೆ ಹಾಕಿಸುತ್ತಾರೆ.
ಆ ಎತ್ತೇ ಇಂದು ಕ್ಷೇತ್ರದಲ್ಲಿ ಹಲವು ಪವಾಡಗಳನ್ನ ಸೃಷ್ಟಿಸುತ್ತಿರುವ ಈ ಪವಾಡ ಬಸವಪ್ಪ ಕಸಾಯಿಖಾನೆ ಸೇರಬೇಕಾದ ಈ ಬಸವ ಇಲ್ಲಿನ ತಾಯಿಯ ಆಗೋಚರ ಶಕ್ತಿಯಿಂದಾಗಿ ಇಂದು ಸಾವಿರಾರು ಜನರ ಪಾಲಿನ ಜೀವಂತ ದೇವರಾಗಿ ಸೇವೆ ಮಾಡಿದೆ. ಇಂದು ಆ ಪವಾಡ ಬಸವ ಇಹಲೋಕ ತ್ಯಜಿಸಿದ್ದು, ಆ ಸ್ಥಾನಕ್ಕೆ ಮತ್ತೊಂದು ಬಸವನನ್ನು ಶ್ರೀ ಕ್ಷೇತ್ರಕ್ಕೆ ತರಲಾಗಿದೆ.
ಗುಡಿಸಲಿನಿಂದ ದೇವಸ್ಥಾನದವರೆಗೆ…
ಅಂದು ಚಿಕ್ಕಗುಡಿಸಲಿನಲ್ಲಿ ಪ್ರತಿಷ್ಠಾಪನೆಯಾಗಿದ್ದ ತಾಯಿ ಚಾಮುಂಡೇಶ್ವರಿಗೆ ನಂತರ ಭಕ್ತರ ಸಹಕಾರದಿಂದ ಇದೇ ಸ್ಥಳದಲ್ಲಿ ದೇವಸ್ಥಾನ ನಿರ್ಮಿಸಿ ತಾಯಿಯನ್ನು ಪುನರ್ ಪ್ರತಿಷ್ಠಾಪನೆ ನಡೆಸಲಾಗಿದೆ. ಇಲ್ಲಿನ ತಾಯಿಯ ಪವಾಡಗಳು ಎಲ್ಲೆಡೆ ಪ್ರಚಾರ ಪಡೆದು ಸಾವಿರಾರು ಭಕ್ತಾದಿಗಳು ಇಲ್ಲಿಗೆ ಹರಿದು ಬರಲು ಆರಂಭವಾಯಿತು. ಹೀಗೆ ಬರುವ ಭಕ್ತಾಧಿಗಳ ಕಷ್ಟಕಾರ್ಪಣ್ಯಗಳು ಆಚ್ಚರಿಯೆಂಬತೇ ಕರಗಲು ಆರಂಭವಾದವು. ಅದು ಮಲ್ಲೇಶ ತನ್ನ ಕಷ್ಟ ಕಳೆಯಲು ಪೂಜೆ ಆರಂಭಿಸಿದ ನಂತರ ಈ ತಾಯಿ ನೊಂದವರ ಪಾಲಿನ ಆಶಾಕಿರಣವಾಗಿದೆ. ಮಲ್ಲೇಶ್ ತಾಯಿ ಚಾಮುಂಡಿ ಆರಾಧಕರಾಗಿ ಬರುವ ಭಕ್ತಾಧಿಗಳ ನೋವಿಗೆ ಕಿವಿಯಾಗಲೂ ಆರಂಭಿಸುತ್ತಾರೆ.
ದಿನಕಳೆದಂತೆ ಈ ಕ್ಷೇತ್ರ ಅಚ್ಚರಿಯಂತೆ ಅಭಿವೃದ್ದಿಯ ಹಾದಿಯಲ್ಲಿ ಸಾಗುತ್ತಿದ್ದು, ಇಲ್ಲಿ ಕಷ್ಟ ಎಂದು ಹೇಳಿಕೊಂಡು ಬರುವ ಸಾವಿರಾರು ಉದ್ಯಮಿಗಳ, ಸಂತಾನ ಸಮಸ್ಯೆ, ಉದ್ಯೋಗ ಸಮಸ್ತೆ ಹಲವು ಸಮಸ್ಯೆ ನೊಂದ ಜನ ಇಲ್ಲಿ ಬಂದ ಮೇಲೆ ಆಗುವ ಒಳಿತಿನಿಂದ ತಾವೇ ನಿಂತು ಈ ದೇವಸ್ಥಾನ ಅಭಿವೃದ್ದಿಪಡಿಸಲು ಮುಂದಾಗುತ್ತಾರೆ. ಹಾಗಾಗೀ ಇಂದು ಸುಂದರ ತಾಯಿಯ ದೇವಸ್ಥಾನ ಇಲ್ಲಿ ನಿರ್ಮಾಣವಾಗಿದ್ದು, ಅಲ್ಲದೇ! ಇಲ್ಲಿರುವ ಚಾಮುಂಡೇಶ್ವರಿಯ ವಿಗ್ರಹ ಪ್ರಮುಖ ಆಕರ್ಷಣೆ ಕೇಂದ್ರವಾಗಿದೆ.
ಗೌಡಗೆರೆಗೆ ಹೋಗುದು ಹೀಗೆ :
ಶ್ರೀ ಚಾಮುಂಡೇಶ್ವರಿ ದೇವಿಯ 18 ಭುಜಗಳ ಪಂಚಲೋಹ ವಿಗ್ರಹವನ್ನು ಲೋಕಾರ್ಪಣೆಗೊಂಡಿದೆ. ದೇಶದಲ್ಲೆ ಪ್ರಪ್ರಥಮ ಹಾಗೂ ಅತಿ ದೊಡ್ಡ ವಿಗ್ರಹ ಇದಾಗಿದೆ. ಗೌಡಗೆರೆ ಶ್ರೀಕ್ಷೇತ್ರಕ್ಕೆ ಬೆಂಗಳೂರಿನಿಂದ ಬರುವವರು ಬೆಂಗಳೂರು- ಮೈಸೂರು ರಸ್ತೆಯಲ್ಲಿ ಚನ್ನಪಟ್ಟಣಕ್ಕೆ ಆಗಮಿಸಿ ಅಲ್ಲಿಂದ 12 ಕಿ.ಮೀ. ಬೇವೂರು- ಮಲ್ಲನಕುಪ್ಪೆ ಮುಖ್ಯರಸ್ತೆಯಲ್ಲಿ ಕ್ರಮಿಸಿದರೆ ಗೌಡಗೆರೆ ಗ್ರಾಮ ಸಿಗುತ್ತದೆ. ಮೈಸೂರಿನಿಂದ ಬರುವವರು ಮದ್ದೂರು ಬಳಿ ಕೆಸ್ತೂರು ಮುಖ್ಯರಸ್ತೆಯಲ್ಲಿ ಮಲ್ಲನಕುಪ್ಪೆ ಗೇಟ್ಗೆ ಆಗಮಿಸಿ ಅಲ್ಲಿಂದ 5 ಕಿ.ಮೀ ಕ್ರಮಿಸಿದರೆ ಗೌಡಗೆರೆ ಗ್ರಾಮ ತಲುಪಬಹುದು.
ಚಾಮುಂಡೇಶ್ವರಿ ತಾಯಿ ಮಹಾಮಸ್ತಕಾಭಿಷೇಕಕ್ಕೆ ಹರಿಶಿನ, ಕುಂಕುಮ, ಕಾಶ್ಮೀರ ಕೇಸರಿ, ಎಳನೀರು, ಕಬ್ಬಿನ ಹಾಲು, ಹಾಲು, ಮೊಸರು, ತುಪ್ಪ ಸೇರಿದಂತೆ ಐವತ್ತಕ್ಕೂ ಹೆಚ್ಚು ಬಗೆಯ ವಸ್ತುಗಳನ್ನು ಬಳಸಿಕೊಳ್ಳಲಾಗುತ್ತಿದ್ದು, ಈ ಅಪರೂಪದ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಶ್ರೀಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಮಾಡುವ ದೃಷ್ಟಿಯಿಂದ ಚಾಮುಂಡೇಶ್ವರಿ ದೇವಿ ವಿಗ್ರಹ ಹಿಂಭಾಗ ಬೃಹತ್ ಸಿಂಹ ಹಾಗೂ ಕೃತಕ ಬೆಟ್ಟ ನಿರ್ಮಾಣ ಮಾಡಿ, ಬೆಟ್ಟದಿಂದ ಝರಿ (ನೀರು) ಬೀಳುವಂತೆ ಮಾಡಲಾಗುವುದು ಎಂದು ಗೌಡಗೆರೆ ಶ್ರೀಕ್ಷೇತ್ರದ ಧರ್ಮದರ್ಶಿ ಡಾ. ಮಲ್ಲೇಶ್ ಗುರೂಜಿ ತಿಳಿಸಿದರು.
“ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ :
https://chat.whatsapp.com/HK9U7zQD11W79PK8sGwVCS
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :
WhatsApp : 9880439669
Mail : hairamanagara.news@gmail.com