ವರಮಹಾಲಕ್ಷ್ಮಿ ವ್ರತ : ಮುಜರಾಯಿ ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಅರಿಶಿನ-ಕುಂಕುಮ ಮತ್ತು ಹಸಿರು ಬಳೆ

ಬೆಂಗಳೂರು : ಈ ಬಾರಿಯ ವರಮಹಾಲಕ್ಷ್ಮಿ ದಿನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಿ, ದೇವಾಲಯಗಳಿಗೆ ಬರುವ ಮಹಿಳೆಯರಿಗೆ ಉತ್ತಮ ಗುಣಮಟ್ಟದ ಕಸ್ತೂರಿ ಅರಿಶಿಣ-ಕುಂಕುಮ ಮತ್ತು ಹಸಿರು ಬಳೆಗಳನ್ನು ಗೌರವ ಸೂಚಕವಾಗಿ ನೀಡುವಂತೆ ಮುಜರಾಯಿ ಇಲಾಖೆ ಸುತ್ತೋಲೆ ಹೊರಡಿಸಿದೆ.

ಮುಜರಾಯಿ ಸಚಿವರಾದ ಶಶಿಕಲಾ ಜೊಲ್ಲೆ ಅವರ ನಿರ್ದೇಶನದಂತೆ ಇಲಾಖೆ ಈ ಸುತ್ತೋಲೆ ಹೊರಡಿಸಿದೆ. ಪ್ರತಿ ವರ್ಷ ವರಮಹಾಲಕ್ಷ್ಮಿ ವ್ರತ, ಸ್ವರ್ಣಗೌರಿ ವ್ರತ ಮತ್ತು ನವರಾತ್ರಿಗಳಲ್ಲಿಯೂ ಸ್ತ್ರೀ ದೇವತೆಯನ್ನು ಪೂಜಿಸಿ ಆರಾಧಿಸಲಾಗುತ್ತದೆ. ವರಮಹಾಲಕ್ಷ್ಮಿ ವ್ರತದ ದಿನದಂದು ಮಹಿಳೆಯರು ಮನೆಯಲ್ಲಿ ಪೂಜೆಯನ್ನು ನೆರವೇರಿಸಿ ದೇವಾಲಯಗಳಿಗೆ ಭೇಟಿ ನೀಡಿ ದೇವರ ಪ್ರಸಾದ ಸ್ವೀಕರಿಸುವ ಸಂಪ್ರದಾಯವಿದೆ.

ಈ ಸಂಪ್ರದಾಯಕ್ಕೆ ಮತ್ತಷ್ಟು ಇಂಬು ನೀಡುವ ಹಾಗೂ ರಾಜ್ಯದ ಮುಜರಾಯಿ ದೇವಸ್ಥಾನಗಳ ವತಿಯಿಂದ ಮಹಿಳೆಯರಿಗೆ ವಿಶೇಷವಾಗಿ ಮಂಗಳದ್ರವ್ಯಗಳನ್ನು ಹಾಗೂ ಹಸಿರು ಬಳೆಗಳನ್ನು ನೀಡುವುದರ ಮೂಲಕ ಗೌರವಿಸಬೇಕು ಎನ್ನುವ ಉದ್ದೇಶದಿಂದ ಇತ್ತೀಚಿಗೆ ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಲಾಗಿತ್ತು.

ಪ್ರತಿವರ್ಷ ದೀಪಾವಳಿಯ ಸಂಧರ್ಭದಲ್ಲಿ ದೇವಸ್ಥಾನಗಳಲ್ಲಿ ಗೋಪೂಜೆ, ಯುಗಾದಿ ದಿನವನ್ನು ಧಾರ್ಮಿಕ ದಿನವಾಗಿ ಆಚರಣೆ ಮಾಡುವ ಸಂಪ್ರದಾಯಕ್ಕೆ ನಾವು ಮುಂದಾಗಿದ್ದೇವೆ. ಈ ಬಾರಿ ವರಮಹಾಲಕ್ಷ್ಮಿ ವ್ರತದ ದಿನದಂದು ಮಹಿಳೆಯರಿಗೆ ವಿಶೇಷ ಗೌರವ ನೀಡುವುದು ನಮ್ಮ ಉದ್ದೇಶ. ಈ ಹಿನ್ನೆಲೆಯಲ್ಲಿ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದ್ದು, ಲಕೋಟೆಯಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಲಾಗಿರುವ ಆರು ಹಸಿರು ಬಳೆಗಳು ಹಾಗೂ ಕಸ್ತೂರಿ ಅರಿಶಿಣ-ಕುಂಕುಮವನ್ನು ವಿತರಿಸಬೇಕು ಎಂದು ದೇವಾಲಯದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *