ವೀರಶೈವ-ಲಿಂಗಾಯತರನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಲು ಆಗ್ರಹ

ರಾಮನಗರ : ವೀರಶೈವ ಸಮಾಜದ ಎಲ್ಲ ಪಂಗಡಗಳನ್ನೂ ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡೆಯಿತು.

ವೀರಶೈವ- ಲಿಂಗಾಯತ ಸಮುದಾಯವು 60 ವರ್ಷಗಳಿಂದಲೂ ರಾಜ್ಯದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿದೆ‌ ಆದರೆ, ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬೇಕೆಂಬ ಬೇಡಿಕೆ ಈಡೇರಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ತಮ್ಮ ಬೇಡಿಕೆಗೆ ಪೂರಕವಾಗಿ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದರು.

ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರದೇ ಇರುವುದರಿಂದ ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳು ಮತ್ತು ಅಖಿಲ ಭಾರತ ಸೇವೆಗಳಲ್ಲಿ ವೀರಶೈವ- ಲಿಂಗಾಯತ ಸಮಾಜಕ್ಕೆ ಅನ್ಯಾಯವಾಗುತ್ತಿದೆ. ಇತರ ಸಮುದಾಯಗಳಿಗೆ ನೀಡಿದಂತೆ ವೀರಶೈವ- ಲಿಂಗಾಯತರಿಗೂ ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಮಾನ್ಯತೆ ನೀಡಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಮರಳೇಗವಿ ಮಠದ ಮುಮ್ಮಡಿ ಶಿವರುದ್ರಸ್ವಾಮೀಜಿ, ರೇವಣಸಿದ್ದೇಶ್ವರಸ್ವಾಮಿ ದಾಸೋಹ ಮಠದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ಮರಳವಾಡಿ ಮಠದ ಪ್ರಭು ಕಿರೀಟ ಸ್ವಾಮೀಜಿ, ನಗರಸಭಾ ಸದಸ್ಯೆ ವಿಜಯಕುಮಾರಿ, ವೀರಶೈವ-ಲಿಂಗಾಯತ ಸಮುದಾಯದ ಮುಖಂಡರಾದ ಶಿವರುದ್ರಯ್ಯ, ಕೆ.ಎಸ್. ಶಂಕರಯ್ಯ, ರಾಜಶೇಖರ್, ಎಂ.ಆರ್. ಶಿವಕುಮಾರಸ್ವಾಮಿ, ಎ.ಜೆ. ಸುರೇಶ್, ಎಂ.ಎಸ್. ಶಂಕರಪ್ಪ, ಶಾರದಾನಾಗೇಶ್, ಪಿ. ಶಿವಾನಂದ್, ಸಾಂಬಾಶಿವನ್, ಮಹೇಶ್, ರುದ್ರೇಶ್, ಯೋಗಾನಂದ್, ಹೊನ್ನಶೆಟ್ಟಿ, ಮಾಧು, ಗುರುಲಿಂಗಯ್ಯ, ಗುರುಮಾದಯ್ಯ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *