ಶಾಲಾ ಪ್ರವೇಶಕ್ಕೆ 6 ವರ್ಷ ಆದೇಶ ಹಿಂದಕ್ಕೆ ಪಡೆಯಲು ಮುಖ್ಯಮಂತ್ರಿಗೆ ಪತ್ರ

ಬೆಂಗಳೂರು : ‘ಒಂದನೇ ತರಗತಿಗೆ ದಾಖಲಾಗುವ ವಿದ್ಯಾರ್ಥಿಯ ವಯೋಮಿತಿ ಆಯಾ ಶೈಕ್ಷಣಿಕ ವರ್ಷದ ಜೂನ್ 1ನೇ ತಾರೀಖಿಗೆ ಕಡ್ಡಾಯವಾಗಿ 6 ವರ್ಷ ಪೂರ್ಣಗೊಂಡಿರಬೇಕೆಂದು ರಾಜ್ಯ ಸರ್ಕಾರ ಇತ್ತೀಚೆಗೆ ಹೊರಡಿಸಿರುವ ಆದೇಶ 2009ರ ಆರ್‌ಟಿಇ ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಹೀಗಾಗಿ, ಈ ಆದೇಶವನ್ನು ವಾಪಸು ಪಡೆಯಬೇಕು’ ಎಂದು ಆಗ್ರಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಸಂಘ (ರುಪ್ಸ) ಪತ್ರ ಬರೆದಿದೆ.

‘ಆರ್‌ಟಿಇ ಕಾಯ್ದೆ ಅನ್ವಯ 6 ರಿಂದ 14 ವರ್ಷದ ಎಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವ ಜವಾಬ್ದಾರಿ ಸರ್ಕಾರದ್ದು. 6 ವರ್ಷವೆಂದರೆ 5 ರಿಂದ 6 ವಯಸ್ಸಿನ ಮಕ್ಕಳು ಎಂದರ್ಥ. ಆದರೆ, 6 ವರ್ಷದ ನಂತರ ಅಂದರೆ 7ನೇ ವಯಸ್ಸಿಗೆ ಕಾಲಿಟ್ಟವರು ಎಂದಾಗುತ್ತದೆ. ಹೀಗಾದರೆ ಕಾಯ್ದೆಯನ್ನೇ ಉಲ್ಲಂಘಿಸಿದಂತೆ. ಅಲ್ಲದೆ, ಈ ಆದೇಶದಿಂದ ಪ್ರಸಕ್ತ ವರ್ಷ ಒಂದನೇ ತರಗತಿ, ಎಲ್‌ಕೆಜಿ, ಯುಕೆಜಿಯಲ್ಲಿರುವ ಸುಮಾರು 25 ಲಕ್ಷ ವಿದ್ಯಾರ್ಥಿಗಳ ಪೋಷಕರಿಗೆ ಹಾಗೂ ಶಾಲಾ ಆಡಳಿತ ಮಂಡಳಿಗಳಿಗೆ ಆತಂಕ ಉಂಟಾಗಿದೆ’ ಎಂದು ಸಂಘದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಈವರೆಗೆ ಎಲ್‌ಕೆಜಿಗೆ 3 ವರ್ಷ 5 ತಿಂಗಳು, 1ನೇ ತರಗತಿಗೆ 5 ವರ್ಷ 5 ತಿಂಗಳಿಂದ 7 ವರ್ಷದ ವಯೋಮಿತಿ ನಿಗದಿಪಡಿಸಲಾಗಿತ್ತು. ಇದನ್ನು ಪಾಲಿಸಿ ಎಲ್ಲ ಶಾಲೆಗಳು ವಿದ್ಯಾರ್ಥಿಗಳ ದಾಖಲಾತಿ ಪೂರ್ಣಗೊಳಿಸಿವೆ. ಹೊಸ ಸುತ್ತೋಲೆಯಲ್ಲಿ, ಈಗ ದಾಖಲಾಗಿರುವ ಮಕ್ಕಳನ್ನು ಅದೇ ತರಗತಿಯಲ್ಲಿ ಮುಂದುವರಿಸಬೇಕೆ ಅಥವಾ ಹಿಂದಿನ ತರಗತಿಗೆ ಹಿಂಬಡ್ತಿ ಮಾಡಬೇಕೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಒಂದನೇ ತರಗತಿಗೆ ದಾಖಲಾತಿಗೆ 6 ವರ್ಷ ತುಂಬಿರಬೇಕೆಂದಿದೆ, ಆದರೆ, ಎಷ್ಟು ವರ್ಷದವರೆಗೆ ಒಂದನೇ ತರಗತಿಗೆ ದಾಖಲಾತಿ ಮಾಡಬಹುದೆಂಬ ವಿವರ ಇಲ್ಲ’ ಎಂದೂ ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *