ಕನ್ನಡ ಸಾಹಿತ್ಯ ಪರಿಷತ್ ಆ್ಯಪ್ ಬಿಡುಗಡೆ
ಆ್ಯಪ್ ಅನ್ನು ತಮ್ಮ ಮೊಬೈಲಿನಲ್ಲಿ ಸ್ಥಾಪಿಸಲು https://play.google.com/store/apps/details?id=com.knobly.kasapa ಈ ಕೊಂಡಿಯನ್ನು ಒತ್ತಿ.
ಜಾಲತಾಣದ ಮೂಲಕವೂ ಸದಸ್ಯತ್ವ ಪಡೆಯಲು https://kannadasahithyaparishattu.in/app ಈ ಲಿಂಕ್ ಬಳಸಿ.
ಬೆಂಗಳೂರು : ಮಕ್ಕಳಲ್ಲಿ ಕನ್ನಡದ ಭಾಷೆ, ಸಂಸ್ಕೃತಿ, ಇತಿಹಾಸ ಹಾಗೂ ಪರಂಪರೆ ಕುರಿತು ಅಭಿಮಾನ ಮೂಡಿಸುವ ಕೆಲಸವನ್ನು ಸರ್ಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಜೊತೆಯಾಗಿ ಮಾಡಬೇಕಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಗೃಹ ಕಚೇರಿ ಕೃಷ್ಣಾದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಆ್ಯಪ್ಗೆ ಚಾಲನೆ ನೀಡಿ ಮಾತನಾಡಿದ ಅವರು, ಸಾಹಿತ್ಯ ಪರಿಷತ್ತು ಮತ್ತು ಸರ್ಕಾರದ ಸಂಬಂಧ ಕೇವಲ ಸಾಹಿತ್ಯ ಸಮ್ಮೇಳನ ನಡೆಸುವುದಕ್ಕಷ್ಟೇ ಸೀಮಿತಗೊಳಿಸದೆ, ಕನ್ನಡಾಭಿಮಾನ ಮೂಡಿಸುವ ನಿಟ್ಟಿನಲ್ಲಿ ಸದಾ ಜೊತೆಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ತಂತ್ರಜ್ಞಾನದ ಬಳಕೆಯ ಮೂಲಕ ಸಾಹಿತ್ಯಾಸಕ್ತರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಸಾಹಿತ್ಯ ಪರಿಷತ್ತಿನ ಶ್ರೀಮಂತ ಸಾಹಿತ್ಯ ಭಂಡಾರವನ್ನು ಜನರಿಗೆ ಪರಿಚಯಿಸಲು ತಂತ್ರಜ್ಞಾನದ ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ಇದರೊಂದಿಗೆ ಉತ್ಕೃಷ್ಟ, ಸಮಾಜಮುಖಿ ಸಾಹಿತ್ಯ ರಚನೆಗೆ ಉತ್ತೇಜನ ನೀಡುವ ಕೆಲಸ ಮಾಡುವಂತೆ ತಿಳಿಸಿದರು.
ಸಮಾರಂಭದಲ್ಲಿ ಸಚಿವರಾದ ವಿ. ಸೋಮಣ್ಣ, ಡಾ. ಅಶ್ವತ್ಥನಾರಾಯಣ, ಶಿವರಾಮ ಹೆಬ್ಬಾರ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ್ ಜೋಷಿ, ಶಾಸಕ ನೆಹರು ಓಲೆಕಾರ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಮತ್ತಿತರರು ಉಪಸ್ಥಿತರಿದ್ದರು.
ಸಹೃದಯ ಕನ್ನಡಿಗರೇ,
ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಪ್ರಚಾರದ ಸಮಯದಲ್ಲಿ ನನ್ನ ಪ್ರಣಾಳಿಕೆಯಲ್ಲಿ “ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿಸುವ” ನಿಟ್ಟಿನಲ್ಲಿ ಪರಿಷತ್ತನ್ನು ಮುನ್ನಡೆಸಲಾಗುವುದು ಎಂದು ತಮ್ಮೆಲ್ಲರಿಗೂ ಭರವಸೆಯನ್ನು ನೀಡಿದ್ದೇನು. ಅದರಂತೆ ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ.
ಇದರ ಮೊದಲ ಹಂತವಾಗಿ, ಪರಿಷತ್ತಿನ ಅಸ್ತಿತ್ವಕ್ಕೆ, ಮೂಲ ಆಶಯಕ್ಕೆ, ಧ್ಯೇಯೋದ್ದೇಶಗಳಿಗೆ, ತತ್ತ್ವಗಳಿಗೆ, ನಿಬಂಧನೆಗಳಿಗೆ ಯಾವುದೇ ರೀತಿಯಲ್ಲಿ ವ್ಯತ್ಯಯ ಉಂಟಾಗದಂತೆ; ಬದಲಾಗಿ, ಅವುಗಳನ್ನು ವಿಸ್ತರಿಸುವ ಹಾಗೂ ಪರಿಷತ್ತಿನ ಗೌರವ, ಘನತೆ ವೃದ್ಧಿಗೊಳ್ಳುವ ನಿಟ್ಟಿನಲ್ಲಿ ಪರಿಷತ್ತಿನ ನಿಬಂಧನೆಗಳಿಗೆ ಅಮೂಲಾಗ್ರ ಬದಲಾವಣೆ ತರುವ ಮೂಲಕ ಕ್ರಾಂತಿಕಾರಿ ಹೆಜ್ಜೆಯನ್ನು ಯಶಸ್ವಿಯಾಗಿ ಇರಿಸಲಾಗಿದೆ.
ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ಮಾಡುವ ಸದುದ್ದೇಶದಿಂದಲೂ, ವಿಶ್ವದ್ಯಾಂತ ಕನ್ನಡವನ್ನು ಒಗ್ಗೂಡಿಸಲು ಹೊರರಾಜ್ಯ, ಕೇಂದ್ರಾಡಳಿತ ಪ್ರದೇಶ ಮತ್ತು ಹೊರದೇಶ ಘಟಕಗಳನ್ನು ಸ್ಥಾಪಿಸುವ ದೃಷ್ಟಿಯಿಂದಲೂ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಪರಿಷತ್ತಿಗೆ ಪ್ರಸ್ತುತ ಐದು ವರ್ಷಗಳ ಈ ಅವಧಿಯಲ್ಲಿ ಒಂದು ಕೋಟಿ ಸದಸ್ಯತ್ವವನ್ನು ಹೊಂದುವ ದೃಷ್ಟಿಯಿಂದ ಶ್ರೀಸಾಮಾನ್ಯನೂ ಸಹ ಸದಸ್ಯತ್ವ ಪಡೆಯಲು ಅನುಕೂಲವಾಗುವಂತೆ ರೂ.500-00 ಗಳಿದ್ದ ಸದಸ್ಯತ್ವ ಶುಲ್ಕವನ್ನು ರೂ. 250-00 ಗಳಿಗೆ ಇಳಿಸಲಾಗಿದೆ. ಜೊತೆಗೆ ಸಾಧಾರಣ ಗುರುತಿನ ಚೀಟಿ ನೀಡಲಾಗುತ್ತಿದ್ದನ್ನು ಬದಲಾಯಿಸಿ, ರೂ. 150-00 ಗಳಿಗೆ ಅತ್ಯಾಧುನಿಕ ತಂತ್ರಾಂಶದ ಚಿಪ್ ವುಳ್ಳ ಸ್ಮಾರ್ಟ್ ಕಾರ್ಡ್ ಅನ್ನು ಗುರುತಿನ ಚೀಟಿಯಾಗಿ ಹೊಸದಾಗಿ ನೋಂದಾಯಿಸುವ ಸದಸ್ಯರಿಗೆ ವಿತರಿಸಲಾಗುತ್ತಿದೆ.
ಪ್ರಸ್ತುತ ಕಾಲಟ್ಟಕ್ಕೆ ತಕ್ಕಂತೆ ಅತ್ಯಾಧುನಿಕ ತಂತ್ರಜ್ಞಾನವನ್ನು ಪರಿಷತ್ತಿಗೆ ಅಳವಡಿಸಿಕೊಂಡಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಲು ಇದುವರೆಗೆ ಪರಿಷತ್ತಿನ ಕಚೇರಿಗೆ ಬರಬೇಕಿದ್ದ ಕನ್ನಡಿಗರು, ಇನ್ನುಮುಂದೆ ಮನೆಯಲ್ಲಿಯೇ ಕುಳಿತು, ಸುಲಭವಾಗಿ ಆನ್ಲೈನ್ ಮೂಲಕ ಸದಸ್ಯತ್ವವನ್ನು ಪಡೆಯಲು ಸರಳವಾದ, ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆಧುನಿಕ ಮೊಬೈಲ್ ಆ್ಯಪ್ ಅನ್ನು ಇದೀಗ ಸಿದ್ಧಪಡಿಸಿ, ಮಾನ್ಯ ಮುಖ್ಯಮಂತ್ರಿಗಳಿಂದ ಲೋಕಾರ್ಪಣೆಗೊಳಿಸಲಾಗಿದೆ.
ಹೊಸ ಸದಸ್ಯತ್ವ ಪಡೆಯುವಿಕೆ, ಸದಸ್ಯತ್ವ ವಿಳಾಸ ಪರಿಷ್ಕರಣೆ, ಗುರುತಿನ ಚೀಟಿಯಾಗಿ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳುವುದು ಸೇರಿದಂತೆ, ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲ ಕಾರ್ಯಚಟುವಟಿಕೆಗಳನ್ನು ಈ ಆ್ಯಪ್ ಮೂಲಕ ಸದಸ್ಯರು ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಮುಂಬರುವ ಹಾವೇರಿ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಮಾಹಿತಿ, ಪ್ರತಿನಿಧಿಗಳ ನೋಂದಣಿ ಇನ್ನಿತರೆ ಪ್ರಮುಖ ಮಾಹಿತಿಗಳನ್ನು ಈ ಆ್ಯಪ್ ಒದಗಿಸಲಿದೆ.
ಈ ಆ್ಯಪ್ ಅನ್ನು ತಮ್ಮ ಮೊಬೈಲಿನಲ್ಲಿ ಸ್ಥಾಪಿಸಲು https://play.google.com/store/apps/details?id=com.knobly.kasapa ಈ ಕೊಂಡಿಯನ್ನು ಒತ್ತಿ.
ಜಾಲತಾಣದ ಮೂಲಕವೂ ಸದಸ್ಯತ್ವ ಪಡೆಯಲು https://kannadasahithyaparishattu.in/app ಈ ಲಿಂಕ್ ಬಳಸಿ.
ಕೋಟಿ ಸದಸ್ಯತ್ವದ ಕನಸು ನನಸಾಗಿಸಿ : ಇಂದೇ ಸದಸ್ಯರಾಗಿ
ಕನ್ನಡ ಭಾಷೆಯ ಹಿರಿಮೆ, ಗರಿಮೆಯನ್ನು ಮತ್ತಷ್ಟು ಉತ್ತುಂಗಕ್ಕೆ ಏರಿಸಲು ಮತ್ತು ಕನ್ನಡ ತಾಯಿ ಭುವನೇಶ್ವರಿಯ ರಥವನ್ನು ಒಟ್ಟಾಗಿ ಮುನ್ನಡೆಸಲು ಕೈ ಜೋಡಿಸಿ.
ಗೌರವಪೂರ್ವಕ ವಂದನೆಗಳು
–ನಾಡೋಜ ಡಾ. ಮಹೇಶ ಜೋಶಿ
ಅಧ್ಯಕ್ಷರು
ಕನ್ನಡ ಸಾಹಿತ್ಯ ಪರಿಷತ್ತು
Sir,
Still i tried not opened the web site plese reg sir