ಅವಿಖ್ಯಾತ ಸ್ವರಾಜ್ಯಕಲಿಗಳು – 68 : ನಾರಾಯಣ ಶೇವಿರೆ ಅವರ ಲೇಖನ : ಆಂಗ್ಲರ ವಿರುದ್ಧ ರಣಕಹಳೆಯೂದಿದ ವನವಾಸಿನಾಯಕ ಬಿರ್ಸಾ ಮುಂಡಾ

ಶಿಕ್ಷಣದ ಯಾವುದೇ ವ್ಯವಸ್ಥೆಯಿಲ್ಲದ ಕಾಡನಡುವಿನಲ್ಲಿ ಹುಟ್ಟಿಬೆಳೆದು, ಶಿಕ್ಷಣಪಡೆಯಲೆಂದು ಮತಾಂತರಗೊಂಡು, ಪಡೆಯುತ್ತಿರುವ ಶಿಕ್ಷಣವು ನಿಜಶಿಕ್ಷಣವಲ್ಲ ಮತಾಂತರದ ದಾರಿಯೆಂದು ಅರಿತು ಧಿಕ್ಕರಿಸಿ, ತನ್ನ ಜನಾಂಗದ ಜನರನ್ನು ಮತಾಂತರಿಸಿ ವಂಚಿಸುತ್ತಿರುವ ಕ್ರೈಸ್ತಮಿಶನರಿಗಳ ವಿರುದ್ಧ ಹಾಗೂ ತನ್ನ ದೇಶವನ್ನು ಗುಲಾಮವಾಗಿಸಿ ದೌರ್ಜನ್ಯವೆಸಗುತ್ತಿದ್ದ ಆಂಗ್ಲರ ವಿರುದ್ಧ ಸೆಟೆದು ನಿಂತು, ಜನಸಂಘಟನೆಗೈದು ಸಶಸ್ತ್ರಕ್ರಾಂತಿ ನಡೆಸಿದ ಬಿರ್ಸಾ ಮುಂಡಾ ಅವರು ಸಾಮಾನ್ಯರ ಪಾಲಿನ ದೇವತೆಯಾಗಿ ಬದುಕಿದವರು.

ಬದಲಿಸಲೊಲ್ಲದ ಗುರುತು

ಈಗಿನ ಜಾರ್ಖಂಡ್ ರಾಜ್ಯದ ಖುಂಟಿ ಜಿಲ್ಲೆಯ ಉಲಿಹಾಟಿ ಅವರ ಜನ್ಮಸ್ಥಾನ. ಹುಟ್ಟಿದ್ದು 1875ರ ನವೆಂಬರ್ 15ರಂದು. ಅವರು ಹುಟ್ಟಿದ ಪ್ರದೇಶದಲ್ಲಾಗಲೀ ಜನಾಂಗದಲ್ಲಾಗಲೀ ಶಿಕ್ಷಣಕ್ಕೆ ಆದ್ಯತೆಯೇನೂ ಇರಲಿಲ್ಲ. ಆಂಗ್ಲಸರಕಾರದ ಸಹಕಾರದಿಂದ ಕ್ರೈಸ್ತಮಿಶನರಿಗಳು ಅಲ್ಲಿ ಮತಾಂತರದ ಉದ್ದೇಶಕ್ಕಾಗಿ ಶಾಲೆಯನ್ನು ತೆರೆದಿದ್ದರು. ಶಿಕ್ಷಣದ ಹಂಬಲಹೊತ್ತಿದ್ದ ಬಿರ್ಸಾ ಅವರಿಗೆ ಆಪ್ತರು ಮಿಶನರಿ ಶಾಲೆಗೆ ಸೇರಲು ಒತ್ತಾಯಿಸಿದರು. ಆ ಶಾಲೆಗೆ ಪ್ರವೇಶಪಡೆಯಬೇಕಿದ್ದರೆ ವಿದ್ಯಾರ್ಥಿಯು ಕ್ರೈಸ್ತ ರಿಲಿಜನ್ನಿಗೆ ಮತಾಂತರವಾಗುವುದು ಕಡ್ಡಾಯವಾಗಿತ್ತು. ಮತಾಂತರದ ಹಿಂದುಮುಂದೇನೆಂಬುದನ್ನು ತಿಳಿದಿರದ ಬಾಲಕ ಬಿರ್ಸಾ ಮತಾಂತರವಾಗಲು ಒಪ್ಪಿ ಶಾಲೆಗೆ ಪ್ರವೇಶಪಡೆದ.
ಮತಾಂತರವಾದ ಬಳಿಕ ಬಿರ್ಸಾ ಮುಂಡಾ ಹೆಸರನ್ನು ಕ್ರೈಸ್ತ ಪಾದರಿ ಬಿರ್ಸಾ ಡೇವಿಡ್ ಎಂದು ಬದಲಾಯಿಸಿದ. ಮತಾಂತರಮಾಡಿದ ತಕ್ಷಣವೇ ಮಿಶನರಿಗಳು ಮಾಡುವ ಮೊದಲ ಕೆಲಸವೇ ಅದು. ಹೆಸರೆನ್ನುವುದು ಯಾವುದೇ ವ್ಯಕ್ತಿಗೆ ಇರುವ ಒಂದು ಗುರುತು. ಕುಲನಾಮವೂ ಅದೇ ರೀತಿಯ ಇನ್ನೊಂದು ಗುರುತು. ಮತಾಂತರದಲ್ಲಿ ಮೊದಲು ಮಾಡುವುದೇ ಇಂಥ ಎಲ್ಲ ಗುರುತುಗಳ ನಾಶ. ಮುಂಡಾ ಅನ್ನುವುದು ಕುಲನಾಮ. ಸೆಮೆಟಿಕ್ ರಿಲಿಜನ್ನಿನಲ್ಲಿ ಮತಾಂತರಿತನು ತನ್ನೆಲ್ಲ ಮೂಲವನ್ನು ಮರೆತುಬಿಡಬೇಕೆಂಬ ಒತ್ತಡವಿರುತ್ತದೆ. ಮತ್ತದನ್ನು ಆತ ತನ್ನೊಳಗೆ ನಾಶಮಾಡಿಕೊಳ್ಳುವುದಲ್ಲದೆ ಉಳಿದೆಲ್ಲರದನ್ನೂ ನಾಶಮಾಡಿಬಿಡಬೇಕೆಂಬ ಆಗ್ರಹವಿರುತ್ತದೆ. ಬಾಲ್ಯದಲ್ಲೇ ಮತಾಂತರಗೊಂಡ ಬಿರ್ಸಾ ಈಯೆಲ್ಲ ಸೂಕ್ಷ್ಮಗಳನ್ನು ಚೆನ್ನಾಗಿ ಅರಿತುಕೊಂಡರು. ತನ್ನ ಗುರುತು ಮಾತ್ರವಲ್ಲದೇ ತನ್ನವರೆಲ್ಲರ ಎಲ್ಲ ಗುರುತುಗಳನ್ನೂ ಧ್ವಂಸಮಾಡುತ್ತಿರುವ ಮಿಶನರಿಕೃತ್ಯವನ್ನು ಕಣ್ಣಾರೆ ಕಂಡ ಅವರು, ಶಿಕ್ಷಣಕ್ಕಿಂತ ತನ್ನ ಪರಂಪರೆಯ ಗುರುತು ಮುಖ್ಯ ಎಂದು ಭಾವಿಸಿ ಮಿಶನರಿಶಿಕ್ಷಣಕ್ಕೆ ಇತಿಶ್ರೀಹಾಡಿ, ಪರಾವರ್ತನಗೊಂಡು ಪುನಃ ಹಿಂದುವಾಗಿ, ಬಿರ್ಸಾ ಮುಂಡರೇ ಆದರು.
ಇಂಥ ಪ್ರಬುದ್ಧ ನಿರ್ಣಯವನ್ನು ತೆಗೆದುಕೊಂಡಾಗ ಬಿರ್ಸಾ ಅವರ ವಯಸ್ಸು ಕೇವಲ ಹನ್ನೊಂದು!

ಧರ್ಮ ಜಾಗೃತಿ

ಮತಾಂತರಗೊಂಡಾಗ ಬೈಬಲ್ ಪಾಠಕೇಳುವುದು ಅನಿವಾರ್ಯ ಇತ್ತಷ್ಟೆ. ಈ ಹಿನ್ನೆಲೆಯಲ್ಲಿ ಅವರಿಗೆ ಇದೀಗ ಹಿಂದೂ ದರ್ಶನದ ಕುರಿತು ತಿಳಿದುಕೊಳ್ಳಬೇಕೆಂಬ ತೀವ್ರವಾದ ಹಂಬಲವುಂಟಾಯಿತು. ಅದಕ್ಕಾಗಿ ಓರ್ವ ಹಿರಿಯ ವೈಷ್ಣವ ಸಂನ್ಯಾಸಿಯ ಬಳಿ ಹೋದರು. ಅಲ್ಲಿ ಅವರಿಗೆ ಹಿಂದೂ ದರ್ಶನಗಳ ಕುರಿತು ಪಾಠವಾಯಿತು. ಹಿಂದೂ ಸಂಸ್ಕೃತಿಯ ಬೇರುಗಳೆನಿಸಿದ ರಾಮಾಯಣ, ಮಹಾಭಾರತಗಳಂಥ ಮಹಾಕಾವ್ಯಗಳನ್ನೂ ಓದಿಕೊಂಡರು. ಬೈಬಲ್ ಪಾಠವನ್ನೂ ಹೇಳಿಸಿಕೊಂಡಿದ್ದ ಅವರಿಗೆ ಇದೀಗ ಹಿಂದೂ ದರ್ಶನವನ್ನು ತೌಲನಿಕವಾಗಿ ಅಧ್ಯಯಿಸಲು ಸಾಧ್ಯವಾಗಿ ಅದರ ಮಹತ್ತ್ವವು ಚೆನ್ನಾಗಿ ಮನದಟ್ಟಾಯಿತು.
ತಾವಿದ್ದ ಪ್ರದೇಶದ ವನವಾಸಿಗಳಲ್ಲಿ ವಾಮಾಚಾರದ ವಿವಿಧ ಪ್ರಕಾರಗಳು ಚಾಲ್ತಿಯಲ್ಲಿದ್ದುದನ್ನು ಕಂಡನುಭವಿಸಿದ್ದರವರು. ಅದಕ್ಕೂ ಹಿಂದೂ ದರ್ಶನಕ್ಕೂ ಯಾವುದೇ ಸಂಬಂಧವಿಲ್ಲದಿರುವುದನ್ನೂ ಅರಿತುಕೊಂಡ ಹಿನ್ನೆಲೆಯಲ್ಲಿ ಅವರು ವನವಾಸಿಬಂಧುಗಳ ನಂಬಿಕೆಗಳನ್ನು ಸುಧಾರಿಸಲು ಯೋಚಿಸಿದರು. ಅದಕ್ಕಾಗಿ ಅವರು ಮಾಡಿದ ಮೊದಲ ಕೆಲಸವೆಂದರೆ ವನವಾಸಿಗಳನ್ನು ವಾಮಾಚಾರದ ನಂಬಿಕೆಗಳಿಂದ ಮುಕ್ತಗೊಳಿಸಿದ್ದು. ಅವರಲ್ಲಿ ಧಾರ್ಮಿಕ ಜಾಗೃತಿಯನ್ನು ಮೂಡಿಸುವುದಕ್ಕಾಗಿ ಒಂದು ಧಾರ್ಮಿಕ ಪಂಥವನ್ನು ಪ್ರಾರಂಭಿಸಿದರು. ಅದೇ ‘ಬಿರ್ಸೈಟ್’ ಪಂಥ. ಅದು ಹಿಂದೂ ದರ್ಶನದ ಆಧಾರದಲ್ಲಿ ರೂಪುಗೊಂಡ ವಾಮಾಚಾರ ಇತ್ಯಾದಿ ಅಪಸವ್ಯಗಳಿಂದ ಮುಕ್ತವಾದ ಪಂಥ. ದೇವರೊಬ್ಬನೇ ನಾಮ ಹಲವು ಎಂಬ ತಿಳುವಳಿಕೆಯನ್ನು ಮೂಡಿಸುವ ಪಂಥ. ಈ ಪಂಥವನ್ನು ಅನುಸರಿಸುವವರು ಯಾವುದೇ ದುಶ್ಟಟಗಳಿಂದ ದೂರವಿರಬೇಕಾಗಿತ್ತು. ವನವಾಸಿಗಳ ಮೂಲನಂಬಿಕೆಗಳನ್ನು ಆದರಿಸಬೇಕಾಗಿತ್ತು. ಇದಕ್ಕಾಗಿ ಅವರು ಜನರಿಗೆ ಮಾಡುತ್ತಿದ್ದ ಬೋಧನೆಯ ಹಿನ್ನೆಲೆಯಲ್ಲಿ ಅವರನ್ನು ಜನರು ‘ಧಾರ್ಮಿಕ ಬೋಧಕ’, ‘ಧಾರ್ಮಿಕ ಚಿಕಿತ್ಸಕ’ ಇತ್ಯಾದಿ ಹೆಸರುಗಳಿಂದ ಗುರುತಿಸಿದರು. ಬಹುತೇಕ ವನವಾಸಿಬಂಧುಗಳು ಅವರ ಅನುಯಾಯಿಗಳಾದರು. ಅವರನ್ನು ‘ಧರ್ತಿ ಅಬ್ಬಾ’ ಅಂದರೆ ಭೂಮಿಯ ಒಡೆಯ ಎಂದು ಕರೆಯಲಾರಂಭಿಸಿದರು.

ಸ್ವರಾಜ್ಯಕ್ಕಾಗಿ ಹೋರಾಟ

1886ರಿಂದ 1890ರವರೆಗಿನ ಕಾಲಾವಧಿಯಲ್ಲಿ ಅವರು ಮಿಶನರಿಗಳ ಚಟುವಟಿಕೆಗಳು ಅಧಿಕವಿದ್ದ ಜಾರ್ಖಂಡಿನ ಚೈಬಾಸಾ ಪ್ರದೇಶದಲ್ಲಿ ಇದ್ದರು. ಆಂಗ್ಲರ ಪ್ರಭಾವವೂ ಅಧಿಕವಿದ್ದ ಪ್ರದೇಶವಾಗಿತ್ತದು. ಹೀಗಾಗಿ ಆಂಗ್ಲರ ದೌರ್ಜನ್ಯದ ಸ್ವರೂಪವನ್ನೂ ಮಿಶನರಿಗಳ ವಂಚನೆಯ ಸ್ವರೂಪವನ್ನೂ ತೀರಾ ಹತ್ತಿರದಿಂದ ಕಾಣುವ ಅವಕಾಶ ಅವರಿಗೆ ಲಭ್ಯವಾಯಿತು.
1882ರಲ್ಲಿ ಆಂಗ್ಲಸರಕಾರವು ಅರಣ್ಯಕಾಯಿದೆಯೊಂದನ್ನು ಜಾರಿಗೆ ತಂದಿತು. ಅದರ ಪ್ರಕಾರ ವನವಾಸಿಗಳು ಕಾಡಿಗೆ ಪ್ರವೇಶಿಸುವಂತಿರಲಿಲ್ಲ. ಅರಣ್ಯದ ಉತ್ಪತ್ತಿಯಿಂದ ಬದುಕು ಸಾಗಿಸುತ್ತಿದ್ದ ವನವಾಸಿಗಳಿಗೆ ಈ ಕಾಯಿದೆ ಮಾರಕವಾಗಿ ಪರಿಣಮಿಸಿತು. ಅರಣ್ಯಸಂರಕ್ಷಣೆಯ ಹೆಸರಿನಲ್ಲಿ ಜಾರಿಗೆ ತಂದ ಈ ಕಾಯಿದೆಯನ್ನು ಬಳಸಿಕೊಂಡು ಆಂಗ್ಲರು ಮಾಡಹೊರಟಿದ್ದು ಅರಣ್ಯಭಕ್ಷಣೆಯನ್ನೇ. ಅದಕ್ಕೆ ಅಡ್ಡಿಯಾಗುತ್ತಿದ್ದ ವನವಾಸಿಗಳನ್ನು ದೂರವಿಟ್ಟು ಕಾಡದರೋಡೆಯ ತಮ್ಮ ಕೃತ್ಯವನ್ನು ಸುಲಲಿತಗೊಳಿಸಲು ಈ ಕಾಯಿದೆಯನ್ನು ಆಂಗ್ಲರು ಜಾರಿಗೆ ತಂದಿದ್ದರು. ಜತೆಗೆ, ಕಷ್ಟಕ್ಕೊಳಗಾದ ವನವಾಸಿಗಳನ್ನು ಸಹಾಯದ ನೆಪದಲ್ಲಿ ಮತಾಂತರಿಸುವುದೂ ಈ ಕಾಯಿದೆಯಿಂದಾದ ಮತ್ತೊಂದು ದುರ್ಲಾಭ. ಇದನ್ನು ಗ್ರಹಿಸಿದ ಬಿರ್ಸಾ ಆಂಗ್ಲ-ಮಿಶನರಿ ಜೋಡಿಗಳ ವಿರುದ್ಧ ಸಮರ ಸಾರಿದರು. ತಮ್ಮ ಜನರಲ್ಲಿ ಧಾರ್ಮಿಕ ಜಾಗೃತಿಯ ಜತೆಜತೆಗೇ ರಾಜಕೀಯ ಜಾಗೃತಿಯನ್ನೂ ಮೂಡಿಸಿದರು.
ಆಂಗ್ಲ-ಮಿಶನರಿಗಳ ವಿರುದ್ಧ ಹೋರಾಡುವುದಕ್ಕಾಗಿ ವನವಾಸಿಗಳ ಒಂದು ಸೇನೆಯನ್ನು ಕಟ್ಟಿಬೆಳೆಸಿದರು. ಅದಕ್ಕೆ ಬೇಕಾದ ತರಬೇತಿಯನ್ನೂ ತಾವೇ ನೀಡಿದರು. ‘ಉಲ್ಗುಲಾನ್’ ಎಂಬ ಹೆಸರಿನಲ್ಲಿ ಅವರು ಆಂದೋಲನವನ್ನು ಪ್ರಾರಂಭಿಸಿದರು. ಉಲ್ಗುಲಾನ್ ಅಂದರೆ ಮಹಾ ಸಮರ ಎಂದರ್ಥ. ಆ ಸಂದರ್ಭದಲ್ಲಿ ಅವರು ಹೊರಡಿಸಿದ ಘೋಷಣೆ: “ರಾಜ್ ಸೆತಾರ್ ಜನಾ, ಮಹಾರಾಣಿ ರಾಜ್ ತುಂಡು ಜನಾ”. ಅಂದರೆ ‘ರಾಣಿಯ ಸಾಮ್ರಾಜ್ಯ ಕೊನೆಗೊಳ್ಳಲಿ ಮತ್ತು ನಮ್ಮ ರಾಜ್ಯ ಸ್ಥಾಪನೆಯಾಗಲಿ’. ಅಷ್ಟು ಚಿಕ್ಕ ವಯಸ್ಸಿನಲ್ಲೇ ಅವರಿಗೆ ಸ್ವರಾಜ್ಯದ ಬಗ್ಗೆ ಅಷ್ಟು ಸ್ಪಷ್ಟವಾದ ಕಲ್ಪನೆಯಿತ್ತು.

ಸ್ವಕೀಯರ ಜಾಗೃತಿ – ಬಂಧನ

ವನವಾಸಿಗಳು ಬದುಕಿಗಾಗಿ ಕಾಡುತ್ಪತ್ತಿಯ ಜತೆಜತೆಗೇ ಕೃಷಿಯನ್ನೂ ಮಾಡುತ್ತಿದ್ದರು. ಸಮೂಹಕೃಷಿಯ ಪದ್ಧತಿ ಅವರದಾಗಿತ್ತು. ಅಂದರೆ ಎಲ್ಲರೂ ಸೇರಿ ಕೃಷಿಮಾಡಿ ಬಂದ ಉತ್ಪನ್ನವನ್ನು ಹಂಚಿಕೊಳ್ಳುವ ಪದ್ಧತಿ. ಕಾಡುತ್ಪತ್ತಿಯನ್ನೂ ಅದೇರೀತಿ ಸಮೂಹಪದ್ಧತಿಯಂತೆ ಅನುಭವಿಸುತ್ತಿದ್ದರು. ಎಷ್ಟು ಸುಸಂಸ್ಕೃತವಾದ ಪದ್ಧತಿಯಿದು! ಹಂಚಿತಿನ್ನುವುದು ಮೂಲಭಾರತೀಯ ಪದ್ಧತಿಯೇ ಆಗಿತ್ತಷ್ಟೆ. ಮಾಡಿದ ದುಡಿಮೆಯ – ಉತ್ಪನ್ನಗಳ ಸೂಚಿತ ಭಾಗವನ್ನು ಸರಕಾರಕ್ಕೆ ನೀಡಲು ಮಧ್ಯವರ್ತಿಗಳನ್ನು ಬಳಸಿಕೊಂಡು ಅದರ ಮೂಲಕ ದೌರ್ಜನ್ಯದ ಅವಕಾಶವುಂಟಾಗುವಂಥ ಪದ್ಧತಿಯನ್ನು ಮೊದಲು ಜಾರಿಗೆ ತಂದದ್ದು ಮೊಗಲರು, ಆ ಬಳಿಕ ಆಂಗ್ಲರು. ಮೊಗಲರು ತಂದಿದ್ದ ಅಂಥ ಜಮೀನ್ದಾರಿ ಪದ್ಧತಿಯನ್ನು ಪಟ್ಟವೇರಿದ ತಕ್ಷಣವೇ ಮೊದಲು ತೆಗೆದುಹಾಕಿ ರೈತರಿಗೆ ಪೂರ್ಣ ಕೃಷಿಸ್ವಾತಂತ್ರ್ಯ ನೀಡಿದವರು ಶಿವಾಜಿ ಮಹಾರಾಜರು. ಆಂಗ್ಲ ಆಡಳಿತದಲ್ಲಿ ಮತ್ತದೇ ಭೂತ ವಕ್ಕರಿಸಿತ್ತು. ನೀವಿರುವ ಕಾಡು ನಿಮ್ಮದಲ್ಲ, ನಿಮ್ಮ ಜಮೀನು ನಿಮ್ಮದಲ್ಲ ಎಂಬ ಧಾಟಿಯಲ್ಲಿ ಆಂಗ್ಲಸರಕಾರವು ತೊಡಗಿ ವನವಾಸಿಗಳನ್ನು ಒಕ್ಕಲೆಬ್ಬಿಸಿ ಸಂಕಷ್ಟಕ್ಕೆ ದೂಡಿದಾಗ ಬಿರ್ಸಾ ಅದರ ವಿರುದ್ಧ ಹೋರಾಟಕ್ಕೆ ಸಿದ್ಧರಾದರು.
ತಮ್ಮ ಭೂಮಿ ತಮ್ಮದಲ್ಲ ಎಂದಾದಾಗ ಅನೇಕ ವನವಾಸಿಬಂಧುಗಳು ಉದ್ಯೋಗಕ್ಕಾಗಿ ಬೇರೆಡೆ ಧಾವಿಸಿದರು. ಆಂಗ್ಲರದೇ ಉದ್ದಿಮೆಗಳಲ್ಲಿ ದುಡಿಯುವುದಕ್ಕಾಗಿ ಪೇಟೆಸೇರಿಕೊಂಡರು. ‘ನಮ್ಮ ಜಮೀನು ನಮ್ಮದೇ. ಕೃಷಿಯೊಂದೇ ಶಾಶ್ವತವಾಗಿ ನಮ್ಮನ್ನುಳಿಸಬಲ್ಲದು’ ಎಂದು ದೂರದೃಷ್ಟಿಯ ಕರೆನೀಡಿ ಹೊರಹೋದ ವನವಾಸಿಗಳನ್ನು ವಾಪಸ್ ಬರುವಂತೆ ಮಾಡುವಲ್ಲಿ ಪ್ರಯತ್ನಶೀಲರಾದ ಬಿರ್ಸಾ, ಯಾರೂ ಆಂಗ್ಲಸರಕಾರಕ್ಕೆ ತೆರಿಗೆ ಕಟ್ಟಕೂಡದೆಂದು ಸೂಚಿಸಿದರು. ಅವರ ಕರೆಯನ್ನು ಮಾನಿಸಿದ ಅನೇಕರು ತಮ್ಮ ಮನೆಗೆ ವಾಪಸಾಗಿ ಕೃಷಿಯಲ್ಲಿ ತೊಡಗಿ ತೆರಿಗೆ ನೀಡದೆ ಛಾತಿಯನ್ನು ತೋರಿಸಿದರು. ಏನೂ ಗೊತ್ತಾಗದ ಮುಗ್ಧರಂತಿದ್ದ ವನವಾಸಿಗಳು ಇದೀಗ ಎಲ್ಲವನ್ನೂ ಗೊತ್ತುಮಾಡಿಕೊಂಡ ನಿಜಶಿಕ್ಷಿತರಾಗಿ ಎದೆಸೆಟೆಸಿ ನಿಂತಿದ್ದರು. ಇದರ ಬಿಸಿಮುಟ್ಟಿಸಿಕೊಂಡ ಆಂಗ್ಲಸರಕಾರವು 1895ರ ನವೆಂಬರ್ 19ರಂದು ರಾತ್ರಿ ಏಕಾಏಕಿ ಬಿರ್ಸಾ ಮನೆಗೆ ದಾಳಿಗೈದು ಜನರನ್ನು ಕಾನೂನಿನ ವಿರುದ್ಧ ಸಂಘಟಿಸಿದ ಆರೋಪಹೊರಿಸಿ ಬಂಧಿಸಿತು. ವಿಚಾರಣೆ ನಾಟಕವಾಡಿ ಎರಡು ವರ್ಷಗಳ ಕಠಿಣ ಶಿಕ್ಷೆಯನ್ನು ನೀಡಿತು.
ಬಿರ್ಸಾ ಆಗ ಇಪ್ಪತ್ತರ ಯುವಕ.

ಪ್ರೇರಣೆಯ ಪರಿ

ಎರಡು ವರ್ಷಗಳ ಕಠಿಣ ಜೈಲುವಾಸ ಮುಗಿಸಿ ಹೊರಬಂದಾಗ ಪರಿಸ್ಥಿತಿ ಮತ್ತಷ್ಟು ವಿಷಮಿಸಿತ್ತು. ಒಂದೆಡೆ ಸಾಂಕ್ರಾಮಿಕ ರೋಗ. ಮತ್ತೊಂದೆಡೆ ಭೀಕರ ಬರಗಾಲ. ಇನ್ನೊಂದೆಡೆ ಕಠೋರ ಆಂಗ್ಲದೌರ್ಜನ್ಯ. ಇವೆಲ್ಲದರಿಂದಾಗಿ ವನವಾಸಿ ಬಂಧುಗಳು ತತ್ತರಿಸಿ ಹೋಗಿದ್ದರು. ಹಲವರು ಊರುಬಿಟ್ಟಿದ್ದರು.
ಮೊದಲು ಸಾಂಕ್ರಾಮಿಕ ರೋಗದ ಉಪಶಮನಕ್ಕಾಗಿ ಬಿರ್ಸಾ ಉಪಕ್ರಮಿಸಿದರು. ಅದಕ್ಕಾಗಿ ಸ್ವಚ್ಛತೆಯ ಕುರಿತು ಜಾಗೃತಿ, ಪಾರಂಪರಿಕ ಔಷಧಿಗಳ ಬಳಕೆ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ರೋಗಿಗಳಿದ್ದೆಡೆ ಹೋಗಿ ತಾವೇ ಉಪಚರಿಸಿದರು. ಹಾಗೆ ಉಪಚರಿಸುವ ಅನೇಕರು ತಯಾರಾದರು. ಕ್ರಮೇಣ ಅವರು ವನವಾಸಿಗಳಿಗೆ ಧನ್ವಂತರಿಯೇ ಆದರು. ಹೊರಹೋದ ವನವಾಸಿಗಳನ್ನು ವಾಪಸ್ ಬರಲು ಒತ್ತಾಯಿಸಿ ಕೃಷಿಕಾರ್ಯದಲ್ಲಿ ತೊಡಗುವಂತೆ ಮಾಡಿದರು. ಆಂಗ್ಲರ ಜಮೀನ್ದಾರಿ ನಡೆಯನ್ನು ವಿರೋಧಿಸಿ ಜನಜಾಗೃತಿ ಮೂಡಿಸಿದರು. ಸಶಸ್ತ್ರಹೋರಾಟಕ್ಕೆ ಜನರನ್ನು ಅಣಿಗೊಳಿಸಿದರು. ‘ಕಾಟ್ ಮಾರ್ ಮಾರ್ ಕೇ ರಹೇಂಗೇ’ (ಕತ್ತರಿಸಿ ಹೊಡೆದೇ ತೀರುತ್ತೇವೆ) ಎಂಬ ಉದ್ಘೋಷ ಎಲ್ಲೆಡೆಗಳಿಂದ ಮೊಳಗಲಾರಂಭವಾಯಿತು.
ಬಿರ್ಸಾ ಅವರ ಪ್ರೇರಣೆ ಎಷ್ಟು ಪರಿಣಾಮಕಾರಿಯಾಗಿತ್ತೆಂದರೆ ವನವಾಸಿ ಮಹಿಳೆಯರೂ ಕತ್ತಿ ಭರ್ಜಿ ಹಿಡಿದು ಹೋರಾಟಕ್ಕೆ ಅಣಿಯಾಗುವಷ್ಟು! ಲಿಂಡಾ ಓರನ್ ಮತ್ತು ಮಾಯಾ ಓರನ್ ಎಂಬ ಇಬ್ಬರು ವನವಾಸಿ ತರುಣಿಯರು ವಿಭಿನ್ನ ಕಾಲಘಟ್ಟದಲ್ಲಿ ಬಿರ್ಸಾ ಚಳವಳಿಯ ನೇತೃತ್ವವನ್ನು ವಹಿಸಿ ಹೋರಾಟಗೈದಿದ್ದರು. ನಾಚಿಕೆಸ್ವಭಾವವುಳ್ಳ ಎಂದು ಹಲವರು ಪರಿಗಣಿಸಿದ್ದ ಜನಾಂಗವೊಂದನ್ನು ಕ್ರೂರ ಆಂಗ್ಲರ ವಿರುದ್ಧ ಬಿರ್ಸಾ ಅವರು ಸಿದ್ಧಪಡಿಸಿದ ಬಗೆ ಇದು.

ಹೋರಾಟದ ಪರಿಣಾಮ

ನೂರಾರು ಸಂಖ್ಯೆಯಲ್ಲಿ ವನವಾಸಿಗಳು ಹೋರಾಟಕ್ಕೆ ಸಜ್ಜಾಗಿ ನಿಂತರು. ಹಲವೆಡೆ ಆಂಗ್ಲರಿಗೆ ಸೋಲೇ ಗತಿಯಾಯಿತು. 1897ರಲ್ಲಿ 400ಕ್ಕೂ ಅಧಿಕ ಸಂಖ್ಯೆಯ ಬಿರ್ಸಾ ಸೇನೆ ಖುಂಟಿ ಪೊಲೀಸ್ ಠಾಣೆಯನ್ನು ಮುತ್ತಿಗೆ ಹಾಕಿ ಅಪಾರವಾದ ನಷ್ಟವನ್ನು ಉಂಟುಮಾಡಿತು. 1898ರಲ್ಲಿ ತಾಂಗಾ ನದಿದಂಡೆಯಲ್ಲಿ ನಡೆದ ಒಂದು ಭೀಕರ ಹೋರಾಟದಲ್ಲಿ ಆಂಗ್ಲರು ತತ್ತರಿಸಿಹೋಗುವಂತೆ ಬಿರ್ಸಾ ಪಡೆ ಯಶಸ್ವೀ ಸಂಗ್ರಾಮವನ್ನು ನೀಡಿತು. ಬಿರ್ಸಾ ಅವರನ್ನು ನಿವಾರಿಸಿಕೊಳ್ಳದೆ ಬೇರೆ ಉಪಾಯವನ್ನೇ ಆಂಗ್ಲರು ಕಾಣದಾದರು.
ಈಟಿ ಭರ್ಜಿಗಳ ಬಿರ್ಸಾ ಪಡೆಗೆ ಸಂಗ್ರಾಮದ ಗೆಲುವನ್ನು ಶಾಶ್ವವಾಗಿಸಲು ಆಂಗ್ಲರ ಮದ್ದುಗುಂಡುಗಳು ಬಿಡಲಿಲ್ಲ. ಆದರೂ ವನವಾಸಿಗಳು ಪುರುಷಮಹಿಳೆಯರೆನ್ನದೆ ಹೋರಾಟವನ್ನು ಜೀವಂತವಿಡುವಲ್ಲಿ ಹಿಂದೆ ಸರಿಯಲಿಲ್ಲ. ಕೊನೆಗೆ ಉಪಾಯಗಾಣದ ಆಂಗ್ಲಪೊಲೀಸರು 1900ರ ಮಾರ್ಚ್ ಮೂರರಂದು ಬಿರ್ಸಾರನ್ನು ಅವರು ವಿಶ್ರಾಂತಿಯಲ್ಲಿದ್ದ ಸಂದರ್ಭದಲ್ಲಿ ಬಂಧಿಸಬಹುದೆಂದು ದಾಳಿಗೈದಾಗ ಆ ಪೊಲೀಸ್ ಪಡೆಯನ್ನೆದುರಿಸಿದವರು ವನವಾಸಿ ಮಹಿಳೆಯರು! ಚಕ್ರಧರಪುರದ ಜಾಮ್ಕೋಯಿಪಾಯ್ ಎಂಬ ಅರಣ್ಯಪ್ರದೇಶದಲ್ಲಿ ಕೊನೆಗೂ ಬಂಧಿತರಾದ ಬಿರ್ಸಾ ಅವರು ಮತ್ತೆ ವಾಪಸ್ ಬರಲಿಲ್ಲ!
1900ರ ಜೂನ್ 9ರಂದು ಬಿರ್ಸಾ ಅವರ ದೇಹವು ಶಾಂತವಾಯಿತು. ಆಗವರಿಗೆ ಕೇವಲ ಇಪ್ಪತ್ತೈದು ವರ್ಷ ವಯಸ್ಸು. ಅವರು ಕಾಲರಾ ರೋಗದಿಂದಾಗಿ ತೀರಿಕೊಂಡರೆಂದು ಆಂಗ್ಲಸರಕಾರ ಸಂದೇಹಾಸ್ಪದ ಹೇಳಿಕೆ ನೀಡಿತು. ಅವರ ಸಾವಿನ ಕಾರಣವು ಇನ್ನೂ ನಿಗೂಢವಾಗಿಯೇ ಉಳಿದಿದೆ. ಅವರ ಹೋರಾಟದ ಪರಿಣಾಮವಾಗಿ ಆಂಗ್ಲಸರಕಾರವು ವನವಾಸಿಗಳ ಭೂಮಿಹಕ್ಕನ್ನು ಅವರಿಗೇ ನೀಡುವ ಕಾಯಿದೆಯನ್ನು ಜಾರಿಗೆತಂದಿತ್ತು. ಆದಾಗ್ಯೂ ಅವರ ಹೋರಾಟಕ್ಕೆ ತಾರ್ಕಿಕ ಕೊನೆಲಭಿಸಿದ್ದು 1947ರಲ್ಲೇ ಅನ್ನಿ.
ಅಶಿಕ್ಷಿತ ಸನ್ನಿವೇಶದಲ್ಲಿ ಜನ್ಮತಾಳಿ, ಮತಾಂತರವಾಗಿರುವುದಕ್ಕಿಂತ ಶಿಕ್ಷಣವು ಹೆಚ್ಚಿನದಲ್ಲವೆಂದು ಪರಕೀಯ ಶಿಕ್ಷಣವನ್ನು ಧಿಕ್ಕರಿಸಿ, ಹಿಂದೂ ದರ್ಶನದ ಸಾರವನ್ನು ತಿಳಿದು ತಮ್ಮವರಿಗೆ ತಿಳಿಹೇಳಿ, ಅದರ ಆಧಾರದಲ್ಲಿ ತಮ್ಮವರನ್ನು ಪರಕೀಯರ ವಿರುದ್ಧ ಜಾಗೃತಗೊಳಿಸಿ, ಸ್ವರಾಜ್ಯದ ಹೋರಾಟವನ್ನು ಗೈಯುತ್ತ ಇಪ್ಪತ್ತೈದರ ಅಲ್ಪಾವಧಿಯಲ್ಲೇ ಮಹತ್ತರವಾದುದನ್ನು ಸಾಧಿಸಿದ ಬಿರ್ಸಾ ನಿಜಕ್ಕೂ ಸ್ವರಾಜ್ಯಾಪೇಕ್ಷಿಗಳೆಲ್ಲರಿಗೂ ಪ್ರಾತಃಸ್ಮರಣೀಯರು.

ನಾರಾಯಣ ಶೇವಿರೆ

ಲೇಖನ : ನಾರಾಯಣ ಶೇವಿರೆ

ಸಂಘಟನಾ ಕಾರ್ಯದರ್ಶಿ
ಅಖಿಲ ಭಾರತೀಯ ಸಾಹಿತ್ಯ ಪರಿಷದ್
ಕರ್ನಾಟಕ.

Leave a Reply

Your email address will not be published. Required fields are marked *