ಅವಿಖ್ಯಾತ ಸ್ವರಾಜ್ಯಕಲಿಗಳು – 66 : ನಾರಾಯಣ ಶೇವಿರೆ ಅವರ ಲೇಖನ : ಮೊದಲ ಸ್ವಾತಂತ್ರ್ಯಸಂಗ್ರಾಮದ ಬಗೆಯಲ್ಲಿ ಯೋಜನೆ ರೂಪಿಸಿದ ಲಾಲಾ ಹರದಯಾಳ
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಲಾಲಾ ಲಜಪತರಾಯರು ಮತ್ತು ಅಜಿತಸಿಂಗರನ್ನು ಬಂಧಿಸಿ ಗಡೀಪಾರು ಮಾಡಿದಾಗ ಅಂಥ ಆಂಗ್ಲಸರಕಾರದ ವಿದ್ಯಾರ್ಥಿವೇತನವನ್ನು ತಿರಸ್ಕರಿಸಿ, ಸಂಪ್ರದಾಯವನ್ನು ಮೀರಿನಿಂತು ಪತ್ನಿಯನ್ನೂ ವಿದೇಶಕ್ಕೆ ಕರಕೊಂಡು ಹೋಗಿ ಶಿಕ್ಷಣ ನೀಡಿ, ವಿದೇಶಗಳಲ್ಲಿದ್ದ ಭಾರತೀಯರನ್ನು ಸಂಘಟಿಸಿ ಆಂಗ್ಲಸಾಮ್ರಾಜ್ಯದ ವಿರುದ್ಧ ಹೋರಾಟ ನಡೆಸಿದ ಲಾಲಾ ಹರದಯಾಳರು ನಾಡು ಸ್ಮರಿಸಬೇಕಾದ ಮಹಾಪುರುಷರಲ್ಲೊಬ್ಬರು.
ಮರುಪಾವತಿಸಿದ ಶಿಷ್ಯವೇತನ
ಗೌರಿದಯಾಳ ಮಾಥುರ್ ಮತ್ತು ಬೋಲೀರಾಣಿ ದಂಪತಿಗಳ ಮಗನಾಗಿ 1884ರ ಅಕ್ಟೋಬರ್ 14ರಂದು ದಿಲ್ಲಿಯಲ್ಲಿ ಜನಿಸಿದ ಹರದಯಾಳರಿಗೆ ಪ್ರಾಥಮಿಕ ಶಿಕ್ಷಣಸಂಸ್ಕಾರವು ತಾಯಿ ಹೇಳುತ್ತಿದ್ದ ರಾಮಾಯಣ ಮಹಾಭಾರತ ಇತ್ಯಾದಿ ಇತಿಹಾಸ-ಪುರಾಣಗಳ ಕಥೆಗಳಿಂದ ಲಭಿಸಿತ್ತು. ಐದನೆಯ ತರಗತಿಯಲ್ಲಿದ್ದಾಗಲೇ ಒಂಭತ್ತನೆಯ ತರಗತಿಯಲ್ಲಿ ಓದುತ್ತಿದ್ದವನ ಓದನ್ನು ಕೇಳಿ ಆತನಿಗೇ ಆ ಪಾಠವನ್ನು ಒಪ್ಪಿಸಿ ಏಕಪಾಠಿಯೆನಿಸಿದ್ದರು. ಇಂಗ್ಲಿಷ್ ಮತ್ತು ಇತಿಹಾಸದ ವಿಷಯಗಳಲ್ಲಿ ಎಂ.ಎ. ಓದಿದ ಅವರಿಗೆ ಆಂಗ್ಲಸಾಹಿತ್ಯದ ಆಮೂಲಾಗ್ರ ಅಧ್ಯಯನವಿತ್ತು. ಸರಕಾರದ ಶಿಷ್ಯವೇತನ ಪಡೆದು ಇಂಗ್ಲೆಂಡಿನ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣಕ್ಕಾಗಿ ಸೇರಿದರು.
ಬಂಗಾಳದ ವಿಭಜನೆಯ ವಿರುದ್ಧ ಹೋರಾಟ ಮಾಡಿದ ಲಾಲಾ ಲಜಪತರಾಯರನ್ನು ಮತ್ತು ಅಜಿತಸಿಂಹರನ್ನು ಆಂಗ್ಲಸರಕಾರ ಬಂಧಿಸಿ ಗಡೀಪಾರು ಮಾಡಿ ಬರ್ಮಾಕ್ಕೆ ಕಳಿಸಿತ್ತು. ಈ ವಿಷಯ ತಿಳಿದಾಗ ಇಂಥ ದಬ್ಬಾಳಿಕೆ ಮಾಡುವ ಸರಕಾರದ ಶಿಷ್ಯವೇತನ ಬೇಡವೆಂದು ತಿರಸ್ಕರಿಸಿ ಪತ್ರಬರೆದು ಅಲ್ಲಿಯವರೆಗೆ ಪಡೆದ ಹಣವನ್ನೂ ಎಲ್ಲೆಲ್ಲಿಂದಲೋ ಹೊಂದಿಸಿ ವಾಪಸುಮಾಡಿದರು. ಈ ಹಣವನ್ನು ಕೈಬಿಟ್ಟರೆ ಜೀವನನಿರ್ವಹಣೆ ಹೇಗೆ ಎಂಬ ಪತ್ನಿಯ ಎಚ್ಚರಿಕೆಯ ಪ್ರಶ್ನೆಗೆ ‘ಅದು ಅನಂತರದ ಪ್ರಶ್ನೆ, ಮೊದಲು ಈ ದಾಸ್ಯದ ಹಣದಿಂದ ಮುಕ್ತನಾಗಬೇಕು’ ಎಂದುತ್ತರಿಸಿದರು.
ಈ ವಿದೇಶೀ ವಿಶ್ವವಿದ್ಯಾಲಯದಲ್ಲಿ ಪಡೆದ ಪದವಿಯಿಂದೇನು ಉಪಯೋಗ? ಅದರಿಂದೇನೂ ಮಹಾಜ್ಞಾನ ಲಭ್ಯವಾಗದು. ಹಾಗಾಗಿ ಅದನ್ನು ಕೈಬಿಡುವುದೇ ಲೇಸೆಂದು ಕಾಲೇಜಿನ ಪ್ರಾಂಶುಪಾಲರಿಗೆ ಹೇಳಿ ತ್ಯಾಗಪತ್ರ ಬರೆದುಕೊಟ್ಟರು.
ಧ್ಯೇಯಜೀವನಕ್ಕಾಗಿ ಸಂಸಾರತ್ಯಾಗ!
ಇಂಗ್ಲೆಂಡಿನಲ್ಲಿ ಅವರಿಗೆ ಶ್ಯಾಮ್ ಜೀ ಕೃಷ್ಣವರ್ಮ, ಸ್ವಾತಂತ್ರ್ಯವೀರ ಸಾವರ್ಕರ್ ಮುಂತಾದವರ ಪರಿಚಯವಾಯಿತು. ಶ್ಯಾಮ್ ಜೀ ಸ್ವಾತಂತ್ರ್ಯ ಹೋರಾಟದ ಪ್ರಚಾರಕ್ಕಾಗಿ ನಡೆಸುತ್ತಿದ್ದ ‘ಇಂಡಿಯನ್ ಸೋಷಿಯಾಲಜಿಸ್ಟ್’ ಪತ್ರಿಕೆಗೆ ಲೇಖನಗಳನ್ನು ಬರೆಯತೊಡಗಿದರು. ಪತ್ನಿಯನ್ನು ಆಗ ಇಲ್ಲಿದ್ದ ಸಂಪ್ರದಾಯಕ್ಕೆ ವಿರುದ್ಧವಾಗಿ ಇಂಗ್ಲೆಂಡಿಗೆ ಕರಕೊಂಡು ಹೋಗಿ ಆಕೆಗೂ ಅಲ್ಲಿ ಶಿಕ್ಷಣದ ವ್ಯವಸ್ಥೆಯನ್ನು ಮಾಡಿದರು. ಸಾವರ್ಕರ ಸಂಪರ್ಕದಲ್ಲಿ ತಯಾರಾದ ಅವರಲ್ಲಿ ಸ್ವಾತಂತ್ರ್ಯವನ್ನು ಶಸ್ತ್ರಹಿಡಿದು ಹೋರಾಡಿಯೇ ಪಡೆಯಬೇಕು ಎಂಬ ನಿಲುವು ಗಟ್ಟಿಯಾಯಿತು.
ವಾಪಸ್ ಭಾರತಕ್ಕೆ ಬಂದು ತಿಲಕರನ್ನು ಭೇಟಿಯಾಗಿ ಚರ್ಚಿಸಿ ತಮ್ಮ ಮುಂದಿನ ಹೆಜ್ಜೆಗಳನ್ನು ಯೋಜಿಸಿಕೊಂಡರು. ತಾನು ಸ್ವೀಕರಿಸಿದ ದಾರಿಯಲ್ಲಿ ಸಾಗಲು ಸಂಸಾರವು ಅಡ್ಡಿಯೆಂದು ಭಾವಿಸಿ ಪತ್ನಿಗೆ ಮನವರಿಕೆ ಮಾಡಿಕೊಟ್ಟು ಸಂಸಾರಜೀವನದಿಂದ ಮುಕ್ತರಾದರು.
ರಾಷ್ಟ್ರಕಾರ್ಯಕ್ಕಾಗಿ ಸಂನ್ಯಾಸ
ಕಾನ್ಪುರದ ಸ್ನೇಹಿತರೊಬ್ಬರ ಮನೆಯಲ್ಲಿ ಎಂಟುಮಂದಿಯನ್ನು ಸೇರಿಸಿ ಒಂದು ರಾಜಕೀಯ ವರ್ಗವನ್ನು ನಡೆಸಿದರು. ಬೇರೆ ಬೇರೆ ದೇಶಗಳ ಕ್ರಾಂತಿಕಾರಿ ಚಟುವಟಿಕೆಗಳು, ಹೋರಾಟದ ಪರಿ, ಎದುರಾಗುವ ಸವಾಲುಗಳು ಇತ್ಯಾದಿ ವಿಷಯಗಳ ಕುರಿತು ಅಲ್ಲಿ ಚರ್ಚೆ ಸಂವಾದ ನಡೆಸಲಾಯಿತು. ಮುಂದೆ ಲಾಹೋರನ್ನು ತಮ್ಮ ಚಟುವಟಿಕೆಗಳ ಕೇಂದ್ರವಾಗಿಸಿದರು. ಶಿಷ್ಯರ ಸಂಖ್ಯೆಯೂ ಹೆಚ್ಚುತ್ತಹೋಯಿತು. ತನ್ನೆಲ್ಲ ಸಹಕಾರಿಗಳಿಗೂ ಹರಿದ್ವಾರದ ಯಾವುದಾದರೂ ಸಂನ್ಯಾಸಪಂಥದಿಂದ ಸಂನ್ಯಾಸದೀಕ್ಷೆ ಕೊಡಿಸುವ ಅವರ ಪ್ರಯತ್ನ ವಿಫಲವಾದಾಗ ತಾವೇ ಸಂನ್ಯಾಸ ಸ್ವೀಕರಿಸಲು ಮುಂದಾದರು.
ಅವರ ಕ್ರಾಂತಿಕಾರಿ ಕಾರ್ಯ ತೀವ್ರಗತಿಯಲ್ಲಿ ಸಾಗುತ್ತಿದ್ದಂತೆ ಸರಕಾರಕ್ಕೂ ಅದರ ವಾಸನೆಬಡಿಯಿತು. ಪ್ರಮುಖ ಸಹಕಾರಿ ಅಮೀರಚಂದರಿಗೆ ಇಲ್ಲಿಯ ಕಾರ್ಯವನ್ನು ನೋಡಿಕೊಳ್ಳಲು ಸೂಚಿಸಿ ಅವರು ಯೂರೋಪಿಗೆ ಹಾರಿದರು.
ಅಮೆರಿಕದ ಭಾರತೀಯರ ಸಂಘಟನೆ
ಇಂಗ್ಲೆಂಡಿನಲ್ಲಿ ಕ್ರಾಂತಿಕಾರಿ ಮದನಲಾಲ್ ಧೀಂಗ್ರನಿಗೆ ಮರಣದಂಡನೆ ಶಿಕ್ಷೆಯಾಗಿ ಪೊಲೀಸರು ಉಳಿದ ಕ್ರಾಂತಿಕಾರಿಗಳ ಶೋಧಕ್ಕೆ ತೊಡಗಿದ್ದರು. ಬೇರೆ ಬೇರೆ ದೇಶಗಳ ಕ್ರಾಂತಿಕಾರಿಗಳು ಪ್ಯಾರಿಸ್ಸಲ್ಲಿ ಇರುವುದರಿಂದ ಅದನ್ನು ತಮ್ಮ ಚಟುವಟಿಕೆಯ ಕೇಂದ್ರವಾಗಿಸಿಕೊಂಡರು. ಅಲ್ಲಿ ಮೇಡಂ ಕಾಮಾ ಕೂಡಾ ಹಲವು ಕ್ರಾಂತಿಕಾರಿಗಳೊಂದಿಗೆ ಚಟುವಟಿಕೆ ನಡೆಸುತ್ತಿದ್ದರು. ಅವರು ಪ್ರಾರಂಭಿಸಿದ ‘ವಂದೇಮಾತರಂ’ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದರು. ಅಲ್ಲಿದ್ದಾಗ; ಬ್ರಿಟಿಷ್ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಸಮುದ್ರ ಈಜಿ ಫ್ರಾನ್ಸ್ ತೀರವನ್ನು ತಲಪಿದ್ದ ಸಾವರ್ಕರರನ್ನು ರಕ್ಷಿಸುವ ಯೋಜನೆಯಲ್ಲಿಯೂ ಅವರ ಮಹತ್ತ್ವದ ಪಾತ್ರವಿತ್ತು. ಆದರೆ ಆ ಯೋಜನೆ ಫ್ರಾನ್ಸಿನ ಭ್ರಷ್ಟ ಪೊಲೀಸರಿಂದಾಗಿ ವಿಫಲವಾಯಿತು.
ಅವರು ಕಟ್ಟಿದ ತರುಣರ ತಂಡ ದಿಲ್ಲಿಯಲ್ಲಿ ವೈಸರಾಯ್ ಹಾರ್ಡಿಂಜ ಮೆರವಣಿಗೆ ಹೊರಟಾಗ ಬಾಂಬೆಸೆದಿತ್ತು. ಪ್ರಮಾದವಶಾತ್ ಆ ಘಟನೆಯಲ್ಲಿ ಆತ ಉಳಕೊಂಡ. ಆದರೆ ಆಂಗ್ಲಸಾಮ್ರಾಜ್ಯವನ್ನು ನಡುಗಿಸಿದ ಪ್ರಕರಣವಾಯಿತದು. ರಾಸ್ ಬಿಹಾರಿ ಬೋಸ್ ಆ ಬಾಂಬನ್ನು ಎಸೆದಿದ್ದರು. ಈ ಬಾಂಬ್ ಪ್ರಕರಣದ ಕುರಿತು ‘ಯುಗಾಂತರ ಸರ್ಕ್ಯುಲರ್’ಎಂಬ ಪುಸ್ತಿಕೆಯನ್ನು ಬರೆದು ಭಾರತಕ್ಕೆ ಕಳಿಸಿದರು.
ಅವರು ತಮ್ಮ ಕಾರ್ಯದ ಕೇಂದ್ರವನ್ನು ಅಮೆರಿಕದ ಸ್ಯಾನ್ಫ್ರಾನ್ಸಿಸ್ಕೋಗೆ ಬದಲಾಯಿಸಿದರು. ಅಮೆರಿದ ಭಾರತೀಯರ ಸಂಘಟನೆಯಲ್ಲಿ ತೊಡಗಿದರು. ಅಲ್ಲಿ ಭಾರತೀಯರನ್ನು ಕೀಳಾಗಿ ನೋಡುವ ಪ್ರವೃತ್ತಿಯಿತ್ತು. ಇದರ ವಿರುದ್ಧ ಭಾರತೀಯರು ಅಸಮಾಧಾನ ಹೊಂದಿದ್ದರು. ಎಲ್ಲಿಯವರೆಗೆ ಭಾರತ ಪರಕೀಯ ಆಂಗ್ಲರ ಗುಲಾಮನಾಗಿರುತ್ತದೋ ಅಲ್ಲಿಯವರೆಗೆ ಈ ದೈನೀಸೀ ಸ್ಥಿತಿ ತಪ್ಪಿದ್ದಲ್ಲ ಎಂದು ವಿವರಿಸಿ ಅಮೆರಿಕದ ಭಾರತೀಯರನ್ನು ಭಾರತದ ಸ್ವಾತಂತ್ರ್ಯ ಹೋರಾಟಕ್ಕಾಗಿ ಸಿದ್ಧಗೊಳಿಸಿದರು. ಅಲ್ಲಿಯ ಭಾರತೀಯರಲ್ಲಿ ಈ ನಿಟ್ಟಿನಲ್ಲಿ ಜಾಗೃತಿಮೂಡಿಸುವುದಕ್ಕಾಗಿ 1913ರಲ್ಲಿ ‘ಗದರ್’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ಅಂಡಮಾನಿನಲ್ಲಿ ಸಾವರ್ಕರ್ ಎಣ್ಣೆಗಾಣವನ್ನು ಎಳೆಯುತ್ತಿರುವ ಚಿತ್ರವನ್ನು ಅದರ ಮೊದಲ ಸಂಚಿಕೆಯಲ್ಲಿ ಪ್ರಕಟಿಸಿದರು.
ಏಕಕಾಲಕ್ಕೆ ದಂಗೆಯೇಳುವ ಯೋಜನೆ
ಅಮೆರಿಕದ ಭಾರತೀಯರು ನಡೆಸಿದ್ದ ಕ್ರಾಂತಿಯ ತಯಾರಿಯನ್ನು ಗಮನಿಸಿದ ಆಂಗ್ಲಸರಕಾರ ಅಮೆರಿಕದ ಜತೆ ಮಾತುಕತೆ ನಡೆಸಿ ಹರದಯಾಳರನ್ನು ಒಪ್ಪಿಸಲು ಕೇಳಿಕೊಂಡಿತು. ಹರದಯಾಳರು ಕೂಡಲೇ ಅಮೆರಿಕ ಬಿಡಬೇಕಾಗಿಬಂತು. ಅಲ್ಲಿಂದ ಸ್ವಿಟ್ಜರ್ಲೆಂಡಿಗೆ ಹೋಗಿ ಅಲ್ಲಿಯ ಸಹಕಾರವನ್ನು ಕೋರಿದರು. ಜರ್ಮನಿಯ ಸಂಪರ್ಕ ಬೆಳೆಸಿದರು. ಅದಾಗಲೇ ಅಲ್ಲಿ ಚಂಪಕರಾಮನ್ ಪಿಳ್ಳೈಯವರು ಭಾರತದ ವಿಮೋಚನೆಗಾಗಿ ‘ಭಾರತೀಯ ಸ್ವಾತಂತ್ರ್ಯ ಸಮಿತಿ’ಯನ್ನು ಸ್ಥಾಪಿಸಿದ್ದರು. ಹರದಯಾಳರ ಗದರ್ ಪಕ್ಷ ಮತ್ತು ಪಿಳ್ಳೈಯವರ ಸಮಿತಿ ಒಂದಾಗಿ ದಂಗೆಯೇಳಲು ಯೋಜನೆ ಸಿದ್ಧಗೊಂಡಿತು. ಕ್ಯಾಲಿಫೋರ್ನಿಯಾದಿಂದ ಕರ್ತಾರ ಸಿಂಗ್ ಮತ್ತು ಪಿಂಗಳೆ ಭಾರತಕ್ಕೆ ಬಂದು ರಾಸ್ ಬಿಹಾರಿ ಬೋಸರನ್ನು ಸಂಪರ್ಕಿಸಿ ಸೇನಾಸ್ಥಾವರಗಳಿಗೆ ಭೇಟಿನೀಡಿ 1915ರ ಫೆಬ್ರವರಿ 21ರಂದು ಏಕಕಾಲದಲ್ಲಿ ದಂಗೆಯೇಳಲು ಸಕಲ ಯೋಜನೆಗಳನ್ನೂ ರೂಪಿಸಿದರು. ಆದರೆ ಅದು ಕೃಪಾಲ ಸಿಂಗನೆಂಬ ದ್ರೋಹಯಿಂದಾಗಿ ಸರಕಾರಕ್ಕೆ ಗೊತ್ತಾಗಿ ಯೋಜನೆ ವಿಫಲವಾಯಿತು. ಅದೇರೀತಿ ಹರದಯಾಳರ ಮತ್ತೊಂದು ಯತ್ನವೂ ವಿಫಲವಾಯಿತು.
ತಮ್ಮ ಕೊನೆಯ ದಿನಗಳಲ್ಲಿ ಅವರು ಅಧ್ಯಾತ್ಮಸಾಧನೆಯಲ್ಲಿ ತೊಡಗಿಕೊಂಡರು.
ದಾಸ್ಯದ ದುಡ್ಡನ್ನು ತುಚ್ಛೀಕರಿಸಿ, ದಾಸ್ಯದ ಶಿಕ್ಷಣವನ್ನು ನಿರಾಕರಿಸಿ, ಭಾರತದ ದಾಸ್ಯವನ್ನು ಹೋಗಲಾಡಿಸಲು ವಿದೇಶಗಳಲ್ಲಿ ಪ್ರಯತ್ನಪಟ್ಟು, ವಿಫಲವೇ ಆದರೂ ಮೊದಲ ಸ್ವಾತಂತ್ರ್ಯ ಹೋರಾಟದ ರೀತಿಯಲ್ಲಿ ಒಂದು ಯೋಜನೆಯನ್ನು ರೂಪಿಸಿದ ಲಾಲಾ ಹರದಯಾಳರು ಭಾರತದ ಓರ್ವ ಅಪ್ರತಿಮ ಕ್ರಾಂತಿಕಾರಿ ನೇತಾರ.
ಆಧಾರ & ರಾಷ್ಟ್ರೋತ್ಥಾನ ಸಾಹಿತ್ಯ

ಲೇಖನ : ನಾರಾಯಣ ಶೇವಿರೆ
ಸಂಘಟನಾ ಕಾರ್ಯದರ್ಶಿ
ಅಖಿಲ ಭಾರತೀಯ ಸಾಹಿತ್ಯ ಪರಿಷದ್
ಕರ್ನಾಟಕ.