ಪ್ರಧಾನಿ ನರೇಂದ್ರ ಮೋದಿ ಆಸ್ತಿ ವಿವರ : ಆದಾಯದಲ್ಲಿ ಹೆಚ್ಚಳ! ಇದ್ದ ತುಂಡು ಭೂಮಿಯೂ ದಾನ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಆಸ್ತಿ ವಿವರ ಬಹಿರಂಗವಾಗಿದೆ. ಮೋದಿಯವರು 2.23 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಅವೆಲ್ಲವೂ ಬಹುತೇಕ ಬ್ಯಾಂಕ್ ಠೇವಣಿಗಳಾಗಿವೆ. ಆದರೆ ಅವರು ಗಾಂಧಿನಗರದ ಒಂದು ತುಂಡು ಭೂಮಿಯಲ್ಲಿ ತಮ್ಮ ಪಾಲನ್ನು ದಾನ ಮಾಡಿರುವುದರಿಂದ ಯಾವುದೇ ಸ್ಥಿರ ಆಸ್ತಿಯನ್ನು ಹೊಂದಿಲ್ಲ ಎಂದು ಅವರು ಇತ್ತೀಚಿನ ಆಸ್ತಿ ವಿವರ ಬಹಿರಂಗಪಡಿಸಿದ್ದಾರೆ.
ಅವರು ಯಾವುದೇ ಬಾಂಡ್, ಷೇರು ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿ ಯಾವುದೇ ಹೂಡಿಕೆಯನ್ನು ಹೊಂದಿಲ್ಲ. ಯಾವುದೇ ವಾಹನವನ್ನು ಹೊಂದಿಲ್ಲ. ಆದರೆ 1.73 ಲಕ್ಷ ರೂ. ಮೌಲ್ಯದ ನಾಲ್ಕು ಚಿನ್ನದ ಉಂಗುರಗಳನ್ನು ಹೊಂದಿದ್ದಾರೆ ಎಂದು ಅವರ ಘೋಷಣೆಯ ಪ್ರಕಾರ ಮಾರ್ಚ್ 31 ರವರೆಗೆ ನವೀಕರಿಸಿರುವ ಆಸ್ತಿ ವಿವರದಲ್ಲಿ ತಿಳಿದುಬಂದಿದೆ.
ಪಿಎಂ ಮೋದಿಯವರ ಚರ ಆಸ್ತಿಯು ಒಂದು ವರ್ಷದಲ್ಲಿ 26.13 ಲಕ್ಷ ರೂ. ಹೆಚ್ಚಾಗಿದೆ. ಆದರೆ ಅವರ ಬಳಿ ಮಾರ್ಚ್ 31, 2021 ರಂತೆ ಇದ್ದ 1.1 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿಯನ್ನು ಆಗ ಹೊಂದಿಲ್ಲ. ಪ್ರಧಾನ ಮಂತ್ರಿಗಳ ಕಚೇರಿ (PMO) ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ವಿವರಗಳ ಪ್ರಕಾರ ಮಾರ್ಚ್ 31, 2022 ರಂತೆ ಅವರ ಒಟ್ಟು ಆಸ್ತಿ ಮೌಲ್ಯ 2,23,82,504 ರೂ.
ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅಕ್ಟೋಬರ್ 2002 ರಲ್ಲಿ ಮೋದಿ ಅವರು ಜಂಟಿಯಾಗಿ ವಸತಿ ನಿವೇಶನ ಖರೀದಿಸಿದ್ದರು. ಅದರಲ್ಲಿ ಮೂವರು ಪಾಲುದಾರರಿದ್ದರು. ಸರ್ವೆ ಸಂಖ್ಯೆ 401/ಎ ನಲ್ಲಿ ಇದ್ದ ಆ ಭೂಮಿಯನ್ನು ದಾನ ಮಾಡಲಾಗಿದೆ. ಹೀಗಾಗಿ ಅದರ ಮೇಲೆ ಮೋದಿ ಅವರ ಮಾಲೀಕತ್ವ ಇಲ್ಲ ಎಂದು ತಿಳಿಸಲಾಗಿದೆ.
ಮಾರ್ಚ್ 31, 2022 ರಂತೆ ಪ್ರಧಾನ ಮಂತ್ರಿಯವರ ಕೈಯಲ್ಲಿರುವ ನಗದು 35,250 ರೂ. ಮತ್ತು ಅಂಚೆ ಕಚೇರಿಯಲ್ಲಿ ಅವರ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳ ಮೊತ್ತ 9,05,105 ರೂ. 1,89,305 ರೂ. ಮೌಲ್ಯದ ಜೀವ ವಿಮಾ ಪಾಲಿಸಿಗಳನ್ನು ಹೊಂದಿದ್ದಾರೆ.

Leave a Reply

Your email address will not be published. Required fields are marked *