ಬ್ಯಾಂಕ್ ಆಫ್ ಬರೋಡಾ ರಾಮನಗರ ಶಾಖೆ ವತಿಯಿಂದ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ ಸಾಲದ ಚೆಕ್ ವಿತರಣೆ
ರಾಮನಗರ: ಸ್ತ್ರೀ-ಶಕ್ತಿ ಸ್ವಸಹಾಯ ಸಂಘಗಳು ಬ್ಯಾಂಕಿನ ನಿಯಮಗಳನ್ನು ಸರಿಯಾಗಿ ಪಾಲಿಸುವ ಪ್ರವೃತ್ತಿ ಅಳವಡಿಸಿಕೊಂಡರೆ ಮತ್ತಷ್ಟು ಆರ್ಥಿಕವಾಗಿ ಸಧೃಡವಾಗಲು ಸಾಧ್ಯ ಎಂದು ಬ್ಯಾಂಕ್ ಆಫ್ ಬರೋಡಾ ಮಂಡ್ಯ ಪ್ರಾದೇಶಿಕ ಕಚೇರಿಯ ವ್ಯವಸ್ಥಾಪಕರಾದ ರೂಪ ಅಭಿಪ್ರಾಯಪಟ್ಟರು.
ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಬ್ಯಾಂಕ್ ಆಫ್ ಬರೋಡಾ ರಾಮನಗರ ಶಾಖೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ ಸಾಲದ ಚೆಕ್ ವಿತರಣೆ ಮಾಡಿ ಮಾತನಾಡಿದ ಅವರು ಜಿಲ್ಲೆಯಲ್ಲಿ 1990 ರಿಂದ ಬರೋಡಾ ಬ್ಯಾಂಕಿನಲ್ಲಿ ಸ್ತ್ರೀ-ಶಕ್ತಿ ಸಂಘದ ಖಾತೆಗಳಿದ್ದು, ಸ್ವ-ಸಹಾಯ ಸಂಘಗಳು ಉತ್ತಮ ರೀತಿಯಲ್ಲಿ ಬ್ಯಾಂಕಿನ ಜೊತೆ ಭಾಂದವ್ಯ ಇರಿಸಿಕೊಂಡು ಆರ್ಥಿಕ ವ್ಯವಹಾರ ನಡೆಸುತ್ತಿರುವುದು ನನಗೆ ಸಂತಸ ತಂದಿದೆ. ಬ್ಯಾಂಕಿನಿಂದ ನೀವು ಯಾವ ಉದ್ದೇಶಕ್ಕೆ ಸಾಲ ಪಡೆಯುತ್ತೀರಿ ಅದು ಸಾಕಾರವಾಗುವಂತೆ ಆ ಹಣವನ್ನು ಬಳಕೆ ಮಾಡಬೇಕು. ಆಗ ಮಾತ್ರ ನಿಮ್ಮ ಮತ್ತು ಸಂಘದ ದ್ಯೇಯೋದ್ದೇಶಗಳು ಈಡೇರಲು ಸಾಧ್ಯ ಎಂದರು.
ಬ್ಯಾಂಕ್ ಮತ್ತು ಗ್ರಾಹಕರುಗಳ ನಡುವೆ ಅಧಿಕಾರಿಗಳು ಕೊಂಡಿಯಾಗಿ ಕೆಲಸ ಮಾಡುತ್ತಿದ್ದಾರೆ. ಆಗಾಗಿ ಬ್ಯಾಂಕಿನ ಜೊತೆ ಉತ್ತಮ ಬಾಂಧವ್ಯ ಇರಿಸಿಕೊಳ್ಳಿ, ಬಹು ಮುಖ್ಯವಾಗಿ ಸಂಘದ ಹಣಕಾಸಿನ ಲೆಕ್ಕಾಚಾರ ಸರಿಯಾಗಿದ್ದರೆ, ಸಂಘದ ಆರ್ಥಿಕ ಪರಿಸ್ಥಿಯ ಆದಾರದ ಮೇಲೆ ಬ್ಯಾಂಕ್ ಸಾಲ ನೀಡಲು ಮುಂದಾಗಲಿದೆ. ಇದನ್ನು ಗಮನದಲ್ಲಿರಿಸಿಕೊಂಡು ಪಡೆದ ಸಾಲವನ್ನು ಸಕಾಲದಲ್ಲಿ ಬ್ಯಾಂಕಿಗೆ ಮರು ಪಾವತಿ ಮಾಡಿ, ಬ್ಯಾಂಕ್ ಆಪ್ ಬರೋಡಾ ನಿಮ್ಮ ಸೇವೆಗೆ ಸದಾ ಸಿದ್ದವಿದೆ ಎಂದರು.
ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಶಾಂತ್ ಮಾತನಾಡಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಆಗಿ ಲೀಡ್ ಬ್ಯಾಂಕ್ ಕೆಲಸ ನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ ಹಲವಾರು ಸ್ವಸಹಾಯ ಸಂಘಗಳು ಒಂದಲ್ಲಾ ಒಂದು ಆರ್ಥಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿವೆ. ಆಗೆಯೆ ಕೃಷಿಯೇತರವಾಗಿ ಸಾಲ ಪಡೆದು ಮಹಿಳೆಯರು ತಮ್ಮ ಪ್ರಗತಿಯಲ್ಲಿ ಶ್ರಮಿಸುತ್ತಿದ್ದಾರೆ. ಆಗಾಗಿ ಇನ್ನಷ್ಟು ಸಂಘಗಳ ರಚನೆ ಮಾಡಿ ಉಳಿತಾಯ ಮತ್ತು ಅಭಿವೃದ್ದಿಯ ಬಗ್ಗೆ ಒಬ್ಬರಿಗೆ ಒಬ್ಬರು ಸಹಕರಿಸಿಕೊಂಡರೆ ಹೆಚ್ಚು ಪ್ರಗತಿ ಹೊಂದಬಹುದಾಗಿದೆ.
ಪ್ರಧಾನ ಮಂತ್ರಿ ಆಹಾರ ಸಂಸ್ಕರಣಾ ಯೋಜನೆಯಡಿ ಸ್ವಯಂ ಉದ್ಯೋಗ ಮಾಡುತ್ತಿರುವ ಸಂಘದ ಸದಸ್ಯರಿಗೆ ತಲಾ 40 ಸಾವಿರ ಸಹಾಯಧನ ನೀಡುತ್ತಿದ್ದು, ಜಿಲ್ಲೆಯಲ್ಲಿ 5 ಕೋಟಿ ರೂಗಳ ಸಹಾಯಧನವನ್ನು ಪಡದಿದ್ದಾರೆ. ಸಾಲ ವಿಳಂಭ ಅಥವಾ ಸಬ್ಸಿಡಿ ಪಡೆಯುವ ಬಗ್ಗೆ ಯಾವುದೇ ಬ್ಯಾಂಕಿನಲ್ಲಿ ಸಮಸ್ಯೆಗಳಿದ್ದರೆ ಸದಸ್ಯರು ನೇರವಾಗಿ ಲೀಡ್ ಬ್ಯಾಂಕ್ ಗಮನಕ್ಕೆ ತರಬಹುದಾಗಿದೆ ಎಂದು ಕರೆ ನೀಡಿದರು.
ಜಿಲ್ಲಾ ಅಭಿಯಾನ ವ್ಯವಸ್ಥಾಪಕರಾದ ರಾಮಕೃಷ್ಣ ಮಾತನಾಡಿ ಸರ್ಕಾರ ಮಹಿಳಾ ಸಬಲೀಕರಣ ಮಾಡುವ ಉದ್ದೇಶದಿಂದ ಬ್ಯಾಂಕಿನ ಮೂಲಕ ಅವರಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡಿತು. ಸ್ವಸಹಾಯ ಸಂಘ ರಚಿಸಿ ಒಬ್ಬರಿಗೆ ಒಬ್ಬರು ನೆರವು ನೀಡುವ ವಾತಾವರಣ ನಿರ್ಮಿಸಿತು. ಜೊತೆಗೆ ಸ್ವಸಹಾಯ ಸಂಘಗಳ ಸದಸ್ಯರಿಗೆ ಸಹಾಯಹಸ್ತ ನೀಡಿ ಭದ್ರತೆ ಸಹ ಒದಗಿಸುವ ಕೆಲಸ ಮಾಡಿದೆ. ಅದರ ಪರಿಣಾಮ ಇಂದು ಸ್ವಸಹಾಯ ಗುಂಪುಗಳಿಂದ ಎಷ್ಟೋ ಕುಟುಂಬಗಳು ಆರ್ಥಿಕವಾಗಿ ಪ್ರಗತಿ ಪಡೆದು ಬೇರೊಬ್ಬರನ್ನು ಅವಲಂಬಿಸದೆ ಮಹಿಳೆಯರು ಸ್ವಂತವಾಗಿ ಕೆಲಸ ಮಾಡುತ್ತಿರುವ ಅನೇಕ ಉದಾಹರಣೆಗಳಿವೆ ಎಂದರು.
ಬ್ಯಾಂಕ್ ಆಫ್ ಬರೋಡಾ ರಾಮನಗರ ಶಾಖಾ ವ್ಯವಸ್ಥಾಪಕ ತುಸಿತ್ ನಾರಾಯಣ್ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ಚಟುವಟಿಕೆಗಳ ಜೊತೆಗೆ ಸದಸ್ಯರಿಗೆ ಖಾತೆ ತೆರೆದಿರುವ ಬ್ಯಾಂಕಿನಲ್ಲಿ ಸಾಮಾಜಿಕ ಭದ್ರತಾ ಯೋಜನೆಯ ವಿಮೆ ಮಾಡಿಸಿಕೊಂಡು ಪಂಚಸೂತ್ರದಡಿ ಸ್ವಸಹಾಯ ಸಂಘದ ಚಟುವಟಿಕೆ ನಡೆಸಿ ಎಂದ ಅವರು ಬ್ಯಾಂಕಿನ ವತಿಯಿಂದ ವಿವಿಧ 7 ಸ್ವಸಹಾಯ ಸಂಘಗಳಿಗೆ 61.5 ಲಕ್ಷ ರೂಗಳ ಸಾಲದ ಚೆಕ್ಕನ್ನು ವಿತರಿಸಲಾಗುತ್ತಿದೆ. ಸ್ವಸಹಾಯ ಸಂಘದ ಸದಸ್ಯರು ವರ್ಷಕ್ಕೆ ಒಂದು ಬಾರಿ ಕಟ್ಟುವ ಸರ್ಕಾರದ ಜೀವನ ಜ್ಯೋತಿ ವಿಮೆ ಸೇರಿದಂತೆ ಹಲವು ಯೋಜನೆಗಳನ್ನು ಪಡೆದರೆ ನಿಮ್ಮ ರಕ್ಷಣೆಗೆ ನೆರವಾಗಲಿವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಂಡ್ಯ ಪ್ರಾದೇಶಿಕ ಕಚೇರಿಯ ಹಿರಿಯ ವ್ಯವಸ್ಥಾಪಕ ಕತಿರಾವನ್, ಬ್ಯಾಂಕಿನ ಸಿಬ್ಬಂದಿಗಳಾದ ಸುವರ್ಣ, ಕಿರಣ್, ಗಂಗಾಧರ್, ಗಣೇಶ್ ಸೇರಿದಂತೆ ಸ್ವ-ಸಹಾಯ ಗುಂಪುಗಳ ಸದಸ್ಯರು ಭಾಗವಹಿಸಿದ್ದರು.