ಕಾಂಗ್ರೆಸ್ ಪಕ್ಷದಿಂದ ಜನಪರ ಕಾರ್ಯಕ್ರಮಗಳು ಜಾರಿಯಾದವು : ಇಕ್ಬಾಲ್ ಹುಸೇನ್

ರಾಮನಗರ : ಭಾರತ ದೇಶದ ಪ್ರಧಾನ ಮಂತ್ರಿಗಳಾಗಿ ಸೇವೆ ಸಲ್ಲಿಸಿದ ಜವಹರಲಾಲ್ ನೆಹರೂ, ಇಂದಿರಾಗಾಂಧಿ, ರಾಜೀವ್‍ಗಾಂಧಿ ಮತ್ತು ಡಾ. ಮನಮೋಹನ್‍ಸಿಂಗ್ ಅವರುಗಳು ನೀಡಿದ ಜನಪರ ಕಾರ್ಯಕ್ರಮಗಳು ಅಪಾರವಾದವು ಎಂದು ಜಿಪಂ ಮಾಜಿ ಅಧ್ಯಕ್ಷ ಎಚ್.ಎ. ಇಕ್ಬಾಲ್‍ಹುಸೇನ್ ಬಣ್ಣಿಸಿದರು.
ತಾಲೂಕಿನ ಕಸಬಾ ಹೋಬಳಿ ಬೆಜ್ಜರಹಳ್ಳಿಕಟ್ಟೆ ಗ್ರಾಮದಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯೋಜಿಸಿರುವ 75ನೇ ಸ್ವಾತಂತ್ರ್ಯೋತ್ಸವ ನಡಿಗೆ ಪಾದಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ದೇಶದಲ್ಲಿ ಎಲ್ಲ ವರ್ಗದ ಜನರಿಗೆ ನ್ಯಾಯವನ್ನು ಕೊಡುವ ಪಕ್ಷ ಎಂದರೇ ಅದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಮಾತ್ರವಾಗಿದೆ. ಈ ಹಿಂದೆ ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ನಡೆಸಿದ ಸಮಯದಲ್ಲಿ ಬಡವರ, ರೈತರ, ದೀನ ದಲಿತರ ಪ್ರಗತಿಗಾಗಿ ಅನೇಕ ಜನಪರವಾದ ಕಾರ್ಯಕ್ರಮಗಳನ್ನು ನೀಡಿ ದೇಶವನ್ನು ಅಭಿವೃದ್ದಿಯತ್ತ ಕೊಂಡೊಯ್ಯುವ ಕೆಲಸ ಮಾಡಿದೆ. ಅದರ ಫಲವಾಗಿಯೆ ಭಾರತ ದೇಶವನ್ನು ವಿಶ್ವಭೂಪಟದಲ್ಲಿ ಗುರ್ತಿಸುವಂತಹ ಶಾಶ್ವತ ಕೆಲಸವಾಗಲು ಸಾಧ್ಯವಾಯಿತು ಎಂದರು.

ದೇಶದಾಧ್ಯಂತ ರಾಷ್ಟ್ರೀಯ ಹಬ್ಬವಾಗಿ ಆಚರಿಸುವ ಅಮೃತ ಮಹೋತ್ಸವ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯಗಳೆರಡು ಕಡೆಗಳಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರಗಳು ಬಡವರು ಪ್ರತಿನಿತ್ಯ ಬಳಸುವ ಆಹಾರ ಪದಾರ್ಥಗಳು, ಗ್ಯಾಸ್, ಹಾಲು, ಮೊಸರು ಕುಡಿಯುವ ನೀರಿನ ಮೇಲೆ ಜಿಎಸ್‍ಟಿ ಹಾಕುವ ಮೂಲಕ ಜನ ಸಾಮಾನ್ಯರಿಗೆ ಬರೆ ಎಳೆಯುತ್ತಿದ್ದಾರೆ. ಇನ್ನು ಪೆಟ್ರೋಲ್, ಡೀಸೆಲ್ ಬೆಲೆಗಳ ಹೆಚ್ಚಳ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿವೆ. ಇದರಿಂದ ಬಡವರನ್ನು ಬಡವರಾಗಿಸುವ, ಕಾರ್ಪೋರೇಟ್‍ಗಳಿಗೆ ಲಾಭ ತರುವಂತಹ ನೀತಿಗಳನ್ನು ಅನುಷ್ಠಾನ ಮಾಡುವ ಹುನ್ನಾರ ವನ್ನು ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರ್ಕಾರಗಳು ನಡೆಸುತ್ತಿವೆ ಎಂದು ಗಂಬೀರವಾಗಿ ಆರೋಪಿಸಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆಯಲ್ಲಿ ಅನ್ನಭಾಗ್ಯ, ಮಕ್ಕಳಿಗೆ ಕ್ಷೀರಭಾಗ್ಯ, ಪಶು ಭಾಗ್ಯ, ಬಿಸಿಯೂಟ, 5 ರೂ. ಗಳಿಗೆ ಇಂದಿರಾ ಕ್ಯಾಂಟಿನ್ ಮೂಲಕ ಹಸಿದವರಿಗೆ ಅನ್ನ ನೀಡುವ ಕೆಲಸ ಸೇರಿದಂತೆ ಹಲವು ಕಾರ್ಯಕ್ರಮ ನೀಡಿದರು. ಇವೆಲ್ಲವನ್ನು ತಾವು ವಿಮರ್ಶಿಸಿ ಮುಂದಿನ ದಿನಗಳಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ನನಗೆ ಹೆಚ್ಚಿನ ಬೆಂಬಲ ನೀಡಿ ಆರ್ಶೀವದಿಸಿ ಎಂದು ಮನವಿ ಮಾಡಿದರು.
ಈ ವೇಳೆ ನಗರ ಬ್ಲಾಕ್ ಸಮಿತಿ ಅಧ್ಯಕ್ಷ ಎ.ಬಿ. ಚೇತನ್‍ಕುಮಾರ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕಗ್ಗಲ್ಲಯ್ಯ, ಪಾಪಣ್ಣ, ಲೋಕೇಶ್, ಕಾಂಗ್ರೆಸ್ ಮುಖಂಡರಾದ ಕೃಷ್ಣಪ್ಪ, ಪುಟ್ಟೇಗೌಡ, ಆಂಜನಪ್ಪ, ಬೈರೇಗೌಡ, ಚಿಕ್ಕಸ್ವಾಮಿ, ಸತೀಶ್, ಅನಿಷ್‍ಗೌಡ, ಪುನಿತ್, ಕಿರಣ್, ಅರುಣ್, ಅರುಣ್‍ಕುಮಾರ್, ಮುಕುಂದ, ಅನಿಲ್ ಜೋಗಿಂದರ್, ವಾಸಿಂ, ಕುಸುಮ ಸೇರಿದಂತೆ ನೂರಾರು ಮುಖಂಡರುಗಳು ಭಾಗವಹಿಸಿದ್ದರು.


ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಮುಂದಾಳತ್ವದಲ್ಲಿ ಹಲವು ಮಹಾನ್ ನಾಯಕರು ದೇಶಕ್ಕೆ ಸ್ವತಂತ್ರ ತಂದು ಕೊಟ್ಟು ಗುಲಾಮಗಿರಿಯಿಂದ ನಮಗೆ ಮುಕ್ತಿ ಕೊಡಿಸಿದರು. ಈಗ ನಾವೆಲ್ಲರೂ ರಾಷ್ಟ್ರೀಯ ಹಬ್ಬವಾಗಿ 75 ವರ್ಷಗಳ ಅಮೃತ ಮಹೋತ್ಸವ ಆಚರಿಸುತ್ತಿರುವ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಮನೆಮನೆಗಳಿಗೆ ತೆರಳಿ ಎಲ್ಲ ಸ್ವತಂತ್ರ ಹೋರಾಟಗಾರರನ್ನು ಸ್ಮರಿಸುತ್ತಾ, ಸ್ವಾತಂತ್ರ್ಯದ ಮಹತ್ವವನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದ ಈ ಕಾರ್ಯಕ್ರಮಕ್ಕೆ ಕ್ಷೇತ್ರದ ಎಲ್ಲ ಹಳ್ಳಿಗಳಲ್ಲಿಯೂ ವ್ಯಾಪಕ ಬೆಂಬಲ ಸಿಗುತ್ತಿದೆ.

  • ಹೆಚ್.ಎ.ಇಕ್ಬಾಲ್‍ಹುಸೇನ್,
    ಮಾಜಿ ಅಧ್ಯಕ್ಷ ಜಿಪಂ.
ಪಾದ್ರಳ್ಳಿ ರಾಜು

ವರದಿ : ಪಾದ್ರಳ್ಳಿ ರಾಜು

ಮೊ : 6360905062

Leave a Reply

Your email address will not be published. Required fields are marked *