ಆರ್‌ಎಸ್‌ಎಸ್‌ನವರು ಸಿದ್ದರಾಮಯ್ಯ ಹತ್ಯೆಗೆ ಸಂಚು ರೂಪಿಸಿದ್ದರು : ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆರೋಪ

ಮೈಸೂರು : ಕೊಡಗು ಜಿಲ್ಲೆಯಲ್ಲಿ ನೆರೆ ಹಾನಿ ಪ್ರದೇಶಗಳ ವೀಕ್ಷಣೆಗೆ ತೆರಳಿದ್ದ ವೇಳೆ, ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಯಾಣಿಸುತ್ತಿದ್ದ ಕಾರ್‌ಗೆ ಆರ್‌ಎಸ್‌ಎಸ್‌ ಕಾರ್ಯಕರ್ತರು ಮೊಟ್ಟೆಯೊಂದಿಗೆ ಬಟನ್‌ ಚಾಕು ಒಂದನ್ನು ಎಸೆದಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಆರೋಪಿಸಿದರು.
ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನೂ ಸಿದ್ದರಾಮಯ್ಯ ಅವರ ಕಾರ್‌ನಲ್ಲಿದ್ದೆ. ಘಟನೆಗೆ ನಾನೇ ಸಾಕ್ಷಿ. ಬಟನ್‌ ಚಾಕು ಎಸೆದಿರುವ ಬಗ್ಗೆ ಲಭ್ಯವಾಗಿರುವ ದಾಖಲೆಗಳನ್ನು ಕೊಡಗು ಎಸ್ಪಿಗೆ ಸಲ್ಲಿಸಿರುವ ದೂರಿನೊಂದಿಗೆ ನೀಡಿದ್ದೇನೆ. ಆರ್‌ಎಸ್‌ಎಸ್‌ನವರು ಸಿದ್ದರಾಮಯ್ಯ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಆರೋಪಿಸಿದರು.
ಮೊಟ್ಟೆ ಎಸೆದಿದ್ದ ಸಂಪತ್ ಪಕ್ಕಾ ಆರ್‌ಎಸ್ಎಸ್‌ ಸಕ್ರಿಯ ಕಾರ್ಯಕರ್ತ. ಆತ ಕಾಂಗ್ರೆಸ್‌ನವನಲ್ಲ. ಆತ ನಮ್ಮ ಪಕ್ಷದ ಒಂದಾದರೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರೆ ದಾಖಲೆ ಕೊಡಲಿ. ಜನರ ದಿಕ್ಕು ತಪ್ಪಿಸಲು ಆತ ಕಾಂಗ್ರೆಸ್‌ನವರು ಎನ್ನುವ ಹುನ್ನಾರವನ್ನು ನಡೆಸಲಾಗುತ್ತಿದೆ ಎಂದು ಆಪಾದಿಸಿದರು.
ದಾವಣಗೆರೆ ಕಾರ್ಯಕ್ರಮದ ನಂತರ ಸಿದ್ದರಾಮಯ್ಯ ಅವರ ಜನಪ್ರಿಯತೆ ಉತ್ತುಂಗದಲ್ಲಿದೆ. ಹೀಗಾಗಿ, ಅದನ್ನು ಕಡಿಮೆ ಮಾಡುವುದಕ್ಕಾಗಿ ಅವರ ಮೇಲೆ ಆಕ್ರಮಣ ನಡೆಸಬೇಕು ಎಂದು ಪಕ್ಷದ ಹೈಕಮಾಂಡ್‌ ಸೂಚಿಸಿದೆ ಎಂದು ಬಿಜೆಪಿ ಮುಖಂಡ ಕೆ.ಜಿ.ಬೋಪಯ್ಯ ಹೇಳಿರುವ ಆಡಿಯೊ ನನ್ನ ಬಳಿ ಇದೆ. ಆ ದಾಖಲೆಯನ್ನು ಸೂಕ್ತ ಕಾಲದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *