ಕ.ಗಂ. ಶಶಿಕುಮಾರ್ ಅವರ ಲೇಖನ : ಕದಡಲಿ ಕರಾಳತೆ ಅರಳಲಿ ಸ್ವಾತಂತ್ರ್ಯತೆ..

ದೇಶ ಕಟ್ಟಾಗಿದೆ ಸ್ವಾತಂತ್ರ್ಯ ಸಿಕ್ಕಾಗಿದೆ ಎಂದು ಕುಳಿತ ಮಧ್ಯೆ ಕೇಳದೆ ಅಲಕ್ಷಿತರ ಮಾತು, ಕತ್ತಲಲ್ಲಿರುವವರ ಮಾತು,ಶೋಷಿತರ ಮಾತು, ಬೇಸತ್ತವರ ಮಾತು ಸ್ವಾತಂತ್ರ್ಯಕೆ ಪ್ರಾಣ ತೆತ್ತ ಹೋರಾಟದಭಿಮಾದ ಹಣತೆಗಳಿಗೆ ಶಿರಬಾಗುತ ಸಾವಿಲ್ಲದ ಶರಣು. ಅವರಿಲ್ಲದೆ ನಾವಿಲ್ಲ ದೇಶವಿಲ್ಲ ಎಂಬುದ ನೆನಪಿನಲ್ಲಿಡೋಣ ವಂದಿಸೋಣ, ಗೌರವಿಸೋಣ ಅವರ ಜೀವನಾದರ್ಶಗಳನ್ನು ಕೆಚ್ಚೆದೆಯ ಕಲಿತನಗಳನ್ನು ಮೈಗೂಡಿಸಿಕೊಳ್ಳೋಣ ಅವರರಿಸಿದ ತ್ಯಾಗ ಬಲಿದಾನದ ನೆತ್ತರ ತೇದು ದೇಶ ಬೆಳಗೋ ದೀಪಗಳಾಗೋಣ. ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮದೇ ಅನಿಷ್ಟ ಆಚರಣೆಗಳಲ್ಲಿ ನಲುಗಿದ ಬ್ರಿಟಿಷರ ಅಡಿಯಲ್ಲಿ ನರಳಿದ ನರಕ ದಿನಗಳು ಉಮ್ಮಳಿಸಿ ಬರುತ್ತವೆ ದೇಶ ನಮ್ಮದು ನಮ್ಮ ಬದುಕಿನ ಹಕ್ಕು ನಮ್ಮದು ಯಾರದೋ ಕಪಿಮುಷ್ಠಿಯಲ್ಲಿ ಉದುರಿ ಹೋದದ್ದು ನೋವಿನ ಚರಿತ್ರೆ, ಅಸಹಾಯಕತೆಯ ಚರಿತ್ರೆ ನಮ್ಮವರಿಂದ ನಮ್ಮಗಳ ಇರಿತವೇ ಮುಖ್ಯ ಕೊರತೆ. ಸ್ವಾತಂತ್ರ್ಯ(1947ಆ.15) ನಂತರದ ದಿನ ಅದು ಪ್ರತಿ ಭಾರತೀಯನ ಸ್ವಾತಂತ್ರ್ಯದ ದಿನ ಸಂವಿಧಾನ ದೊರೆತ ದಿನ ಸ್ವತಂತ್ರವಾಗಿ ಬದುಕಲೊರಟ ದಿನ ಭಾರತ ಬ್ರಿಟೀಷರ ಸಂಕೋಲೆಗಳಿಂದ ಹೊರಬಂದಿತೆಂಬ ನಿಟ್ಟುಸಿರು ಮೊಳಗುತ್ತಿದ್ದರೆ ಒಗ್ಗೂಡದ ಭಾರತೀಯರು ವಿಭಾಗಿಗಳಾಗಿಯೇ ಉಳಿದರು ಅಧಿಕಾರ ಹಿಡಿದ ಸರ್ಕಾರಗಳು ದೇಶ ಸುಧಾರಿಸುವಲ್ಲಿ ದಾಪುಗಾಲನಿಟ್ಟವು ಬಂಡವಾಳ ಶಾಹಿಯೆದುರು ಕಾರ್ಮಿಕನು, ಶ್ರೀಮಂತನೆದುರು ಬಡವನು, ಬಲಿತ ಬುರುಡೆಯೆದುರು ದಲಿತ ಬುರುಡೆಯು, ಉಂಬುವನೆದುರು ಬೆವರ ಬಸಿವ ರೈತನು,ಪಾತಕಿಯ ಅಂಗೈಯಲ್ಲಿ ಹೊಸಕಿಹೋದ ಹೂಗಳು ಬದುಕುವ ಕನಸಿನಲ್ಲಿ ಕಮರಿ ಹೋದವು. ಲಿಂಗ ಅಸಮಾನತೆ, ಜಾತಿ ಪಜೀತಿಯ ಅತಿರೇಕತೆ, ಧರ್ಮ ದೇವರುಗಳೆಸರಿನ ಯಜಮಾನ್ಯತೆ, ಭಾಷಾಭಿನ್ನತೆ, ಪರಕೀಯತೆ ಎಂಬ ಭಾವತೆ, ಶ್ರೇಷ್ಠತೆ ಎಂಬ ಮಾನಸಿಕ ಖಿನ್ನತೆ ವ್ಯಕ್ತಿ ಸ್ವತಂತ್ರ ಹಕ್ಕಿಯಾಗಾರಲಾಗದೆ ಪಂಜರದಕ್ಕಿಯಾಗಿ ಉಳಿದುಬಿಟ್ಟ. ಒಂದೆಡೆ ಮನೆಯಿಂದೊರ ಬಂದು ಶಾಲೆ ಕಲಿತ ಹೆಣ್ಣು ಮೇಲ್ಜಾತಿಯವನೆದುರು ಕೆಳಜಾತಿಯವನ ಕೂಗು ಹೀಗೆ ಎಲ್ಲಾ ಸ್ಥರಗಳಲ್ಲೂ ಆತ್ಮ ಗೌರವತೆ ಕಂಡು ಬಂದವು.
ಹಸಿದ ಒಡಲೊಂದೆಡೆ ಸೂರಿಲ್ಲದೆ ಸೊರಗಿದವರೊಂದೆಡೆ ದುಡ್ಡಿಲ್ಲದೆ ದಣಿದವರೊಂದೆಡೆ ತುತ್ತಿಲ್ಲದಿದ್ದರೂ ತೆರಿಗೆ ಕಟ್ಟಿದವರೊಂದೆಡೆ ಅನಾರೋಗ್ಯದಿ ಅತ್ತು ಅತ್ತು ಸತ್ತವರೊಂದೆಡೆ ತುಂಡು ಭೂಮಿ ಕಾಣದೆ ದಣಿ ತೋಟಕೆ ದೇಹ ತೆತ್ತವರೊಂದೆಡೆ ಅಕ್ಷರ ಕಾಣದೆ ಬೀದಿ ಬದಿಯಲ್ಲಿ ಬಿದ್ದವರೊಂದೆಡೆ ನಿರುದ್ಯೋಗದಿ ನಲುಗಿದೊಂದೆಡೆ ಚಿಂದಿ ಪೇಪರ್ ಆಯುವರೊಂದೆಡೆ ಮಾತಿದ್ದರೂ ಮೌನ ಮುರಿದ ಜನತೆ ಒಂದೆಡೆ ಹಲವು ಅಬದ್ಧತೆಗಳೆದುರು ಮೂಖಗೊಂಡ ಮನಸ್ಸುಗಳ ಲೆಕ್ಕಿಸದ ಅಲಕ್ಷ್ಯ ಒಂದು ಕಡೆ ಹೀಗೆ ದೇಶ ಸರ್ವರೊಳು ಅಭ್ಯುದಯ ಕಾಣುವುದೇ ಸವಾಲಾಗಿತ್ತು. ಜನತೆ ಮಾನ್ಯತೆ ಎಂಬಂತೆ ಸುಮ್ಮನಿತ್ತು ಜೈಕಾರ ಗೊತ್ತಿತ್ತು ಕೊಬ್ಬಿದವನೊಬ್ಬ ಕೊಂದು ತಿನ್ನುವುದಕ್ಕೆ ನಾಂದಿಯಾಗಿತ್ತು ದೇಶಾಭಿಮಾನ ಹೆಚ್ಚಿತ್ತು ಅಂಧ ಆಚರಣೆಯಲ್ಲಿ ನಂಬಿಕೆಯ ಬಲವಿತ್ತು ಕುಂಠಿತ ಏಳ್ಗೆಯಲ್ಲೂ ಕುಳಿತು ಕೇಳ್ವ ತಾಳ್ಮೆ ಇತ್ತು ನಿಜಕ್ಕೂ ಸ್ವಾತಂತ್ರ್ಯದ ಅರ್ಥವೇ ಸತ್ತಿತ್ತು ಈ ಅಕಾರ್ಯಕ್ಕೇಕೆ ಸ್ವಾತಂತ್ರ್ಯ, ಅಧಿಕಾರ..? ಎಂಬಂತಿತ್ತು. ಬಡತನ, ಭ್ರಷ್ಟಾಚಾರ, ಕೋಮುವಾದ, ನಿರುದ್ಯೋಗ, ಮೂಢನಂಬಿಕೆ, ಜಾತೀಯತೆ,ಲಿಂಗ ಅಸಮಾನತೆ, ಭಯೋತ್ಪಾದನೆ, ಅನಕ್ಷರತೆ, ಅಸುರಕ್ಷತೆ ದೇಶದ ಒಡಲ ಒಂದೊಂದಾಗಿ ಹಿಂಸಿಸಲಾರಂಭಿಸಿದವು. ಕಟ್ಟಿಕೊಂಡ ಕುಟುಂಬಕ್ಕೆ ನ್ಯಾಯ ಒದಗಿಸುವುದರಲ್ಲೇ ಕಳೆದು ಅನ್ಯಾಯಕೆ ಎದುರು ನಿಲ್ಲುವುದೇಕೆ ನಿಂತರು ಉಸಿರು ಹಾರುವುದಕ್ಕೆ ಎಂಬಂತೆ ವ್ಯಕ್ತಿ ಸ್ವಾತಂತ್ರ್ಯ ಅತಂತ್ರವಾಯಿತು ಅನಾಚಾರಗಳೆದುರು ಎದರಿ ತೆಪ್ಪಗಾಯಿತು. ಸ್ವಾತಂತ್ರ್ಯ ನಂತರ ಯಾರದೋ ಪಾಲಾದ ದೇಶ ಎಲ್ಲರ ಪಾಲಾಗಲಿಲ್ಲ ಆಳುವ ಉಳ್ಳವರ ಹಣೆಪಟ್ಟಿಯಲ್ಲಿ ಸಿಲುಕಿ ಸಾಮಾನ್ಯನಿಗೆ ತನ್ನ ದೇಶವೇ ತನಗೆ ಅಪಾತ್ರಕ್ಕೀಡಾಯಿತು. ದೇಶದ ದುರಂತತೆಯನ್ನು ಇಂಚಿಂಚಾಗಿ ಕಂಡರು ಹಿಂದೆ ಸರಿಯದ ಯೋಧ ಪ್ರಜ್ವಲಿಸುತ್ತಿರುವುದು ಪ್ರತಿ ಭಾರತೀಯರಿಗೂ ಚೈತನ್ಯವೇ ಸರಿ
ಈಗ ಆಗಲೇಬೇಕಾದ ಕೆಲಸ ನಮ್ಮವರೊಂದಿಗೆ ನಾವೇ ಸೆಣಸಾಡಿ ಸ್ವಾತಂತ್ರ್ಯ ಹೊಂದುವುದು. ತೊಡರು ಹೆಜ್ಜೆ ಇಡುವ ಮಂದಿಗೆ ದೇಶ ಜಾಗತಿಕ ಮಟ್ಟದಲ್ಲಿ, ಜನಸಂಖ್ಯೆಯಲ್ಲಿ ಬೆಳೆಯುತ್ತಿರುವುದು ಗೊತ್ತು ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ,ಶಿಕ್ಷಣ, ಕಲೆ,ಸಾಹಿತ್ಯ ವಾಸ್ತುಶಿಲ್ಪ, ಸಂಗೀತ, ನೃತ್ಯ, ಜಾನಪದ, ಕಾನೂನು, ಸಿನಿಮಾ, ರಾಜಕೀಯ ಎಲ್ಲಾ ರಂಗಗಳಲ್ಲೂ ಪ್ರಜ್ವಲಿಸುತ್ತಿದೆ. ಆದರೆ ಬೆಳಕು ಕಾಣದ ಬಡವನೆದೆಯಲ್ಲಿ, ದಲಿತನ ದನಿಯಲ್ಲಿ, ಹೆಣ್ಣಿನ ಆರ್ತನಾದದಲ್ಲಿ, ರೈತನ ಬೆವರಲ್ಲಿ,ಕಾರ್ಮಿಕನ ಕೆಲಸದಲ್ಲಿ, ನಿರುದ್ಯೋಗದ ನಾಟ್ಯದಲ್ಲಿ ಬದುಕು ಬಲಹೀನದಿ ಸ್ವಾತಂತ್ರ್ಯ ಉಸಿರುಗಟ್ಟಿಸದೆ ಉಸಿರು ನೀಡಬೇಕಿದೆ ದೇಶವನ್ನು ಈ ನಿಟ್ಟಿನಲ್ಲಿ ಕಟ್ಟಬೇಕಿದೆ. ಸಿಕ್ಕ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ(2022ಆ.15) ಪ್ರತೀ ಭಾರತೀಯನು ಹರ್ಷ ಹೆಮ್ಮೆಯ ವಿಷ್ಯ ಸಂಖ್ಯೆ ಬೆಳೆದದ್ದಷ್ಟೇ ಹರ್ಷ ಉರುಳುವುದಷ್ಟೇ ವರ್ಷ
ಅಸಾಮರಸ್ಯಗಳಲ್ಲಿ ಇಸುಕಿ ಹೋದವರೆದೆಯಲ್ಲಿ ಉಲ್ಬಣಿಸಿದೆ ಸ್ವಾತಂತ್ರ್ಯವೆಂಬುದೇನದು ಹರ್ಷ ಘೋಷ..? ಹೌದು ಸ್ವಾತಂತ್ರ್ಯವೆಂಬುದು ದೇಹಕ್ಕೋ(ಜನಕ್ಕೋ)..? ದೇಶಕ್ಕೋ..? ಬೇಕು ಘರ್ಷ ಮುಕ್ತ ಸ್ಪರ್ಶ ಬಂಧ ಮುಕ್ತ ಹರ್ಷ. ಹಾಗಾದರೆ ದೇಶವೇನು ಕೊಡಲೇ ಇಲ್ಲವೇ..? ಬರೀ ನೋವಷ್ಟೆಯಾ ಎಂದರೆ..? ಬದುಕಲು ಜಾಗ, ತಿನ್ನಲು ಅನ್ನ, ಕುಡಿಯಲು ನೀರು, ಕಲಿಯಲು ಶಿಕ್ಷಣ, ಆಳಲು ಅಧಿಕಾರ, ದುಡಿಯಲು ಕೆಲಸ, ಆರೋಗ್ಯಕೆ ಆಸ್ಪತ್ರೆ, ರಕ್ಷಣೆಗೆ ಕಾನೂನು, ಸಂಚಾರಕೆ ಸಾರಿಗೆ, ಇಡೀ ದೇಶಾದ್ಯಂತ ಜೀವಿಸಲು ಓಡಾಡಲು ಸ್ವಾತಂತ್ರ್ಯ ಮಾತನಾಡಲು ಸ್ವಾತಂತ್ರ್ಯ ಎಲ್ಲಾ ಕ್ಷೇತ್ರದಲ್ಲೂ ಸದ್ವಿನಿಯೋಗಿಯಾಗುವ ಹಕ್ಕು, ಸ್ವಾತಂತ್ರ್ಯ, ಕರ್ತವ್ಯ ಕೊಟ್ಟಿತು. ಜನಿಸಿದಕ್ಕೆ ಜನ್ಮಪತ್ರ, ಸತ್ತದಕ್ಕೆ ಸತ್ತಪತ್ರ, ಜಾತಿ ಅನ್ವಯಕೆ ಜಾತಿಪತ್ರ,ಮತದಾನಕ್ಕೆ ಮತಪತ್ರ, ಭಾರತೀಯರೆಂಬುದಕ್ಕೆ ಆಧಾರ್ ಪತ್ರ, ಪಡಿತರ ಪತ್ರ, ವಿಧವೆಯರಿಗೆ, ವೃದ್ಧರಿಗೆ, ರೈತರಿಗೆ, ಅಂಗವಿಕಲರಿಗೆ, ಯೋಧರಿಗೆ, ಮಂಗಳಮುಖಿಯರಿಗೆ, ಕಲಾವಿದರಿಗೆ, ವಿದ್ಯಾರ್ಥಿಗಳಿಗೆ ಹೀಗೆ ಪ್ರತೀ ಭಾರತೀಯರ ಏಳ್ಗೆಗೆ ದೇಶದುನ್ನತಿಗೆ ಪಣತೊಟ್ಟು ದುಡಿಯುತ್ತಿದೆ ನಿರಂತರ. ನಾವೀಗ ಸ್ವತಂತ್ರ ಸಮೃದ್ಧರಾಗಿ ದೇಶದೇಳ್ಗೆಯೊಂದಿಗೆ ಐಕ್ಯತೆಯಿಂದ ಬಾಳಬೇಕಾದರೆ ಜವಾಬ್ಧಾರಿ ಮರೆತು ದರ್ಪ ತೋರುವ ಭ್ರಷ್ಟ ರಾಜಕಾರಣಿಗಳಿಗೆ ಮಕ್ಕುಗಿದು ನೀನು ಜನನಾಯಕನಲ್ಲ ಜನಸೇವಕ ಎಂದೆಚ್ಚರಿಸಿ ದೇಶದುನ್ನತಿಗೆ ಜನಪ್ರಗತಿಗೆ ದುಡಿಯುವಂತೆ ಮಾಡೋಣ ಅವರೊಡ್ಡುವ ಆಮಿಷಗಳ ಕಿತ್ತೊಗೆದು ಪ್ರಜಾಪ್ರಭುತ್ವದ ಪ್ರಬುದ್ಧತೆಯ ಪ್ರಭುಗಳಾಗೋಣ. ಅಪ್ರಾಮಾಣಿಕ,ಅದಕ್ಷ, ಆರಕ್ಷಕ ಅಧಿಕಾರಿಗಳಿಗೆ ಎದರುವ ಜಾಯಮಾನ ಬಿಟ್ಟು ಅವರೆಸಗೋ ಚೋರತನದ ತಪ್ಪುಗಳ ಜಾಡ ಹಿಡಿದು ಜಾಡಿಸಿ ಪ್ರಾಮಾಣಿಕ ಸಾರ್ವಜನಿಕ ಸೇವಕನನ್ನಾಗಿ ಮಾಡೋಣ ಆರಕ್ಷಕರ ಕಂಡರೆ ಭಯ ಬದಲು ನಮ್ಮ ಕಾಯ್ವ ರಕ್ಷಕ ಎಂಬ ಅಭಿಮಾನದ ಅಭಯ ಭಾವ ಹೊಮ್ಮುವಂತೆ ಮಾಡೋಣ. ಕಡಿಮೆ ವೆಚ್ಚದ ಹಾಗೂ ಗುಣಮಟ್ಟದ ಶಿಕ್ಷಣ ಸೇವೆ, ಆರೋಗ್ಯ ಸೇವೆ, ದಿನಸಿ ಪದಾರ್ಥಗಳ ಸೇವೆ, ಇಂಧನ ಸೇವೆ, ವಿದ್ಯುತ್ ಸೇವೆ, ವಸ್ತುಗಳ ಸೇವೆ, ಸಾರಿಗೆ ಸೇವೆ, ಮುಂತಾದ ಸೇವೆಗಳು ದುಬಾರಿಯಾಗದೆ ಜನಸಾಮಾನ್ಯರೆಲ್ಲರಿಗೂ ದೊರಕುವಂತೆ ಮಾಡೋಣ. ಕೃಷಿ ಚಟುವಟಿಕೆಗೆ ಹೆಚ್ಚು ಆದ್ಯತೆ ನೀಡಿ ಬೆಳೆಗಳ ಇಳುವರಿಯನ್ನು ಉತ್ಪಾದನೆಯನ್ನು ಹೆಚ್ಚಿಸಿ ಜಾಗತಿಕ ಮಾರುಕಟ್ಟೆಯಲ್ಲಿ ಅಧಿಕ ಹಣ ಗಳಿಸುವಂತೆ ಮಾಡಬೇಕಿದೆ ಕಾರ್ಖಾನೆಗಳಲ್ಲಿ ಉತ್ತಮ ವಸ್ತುಗಳ ಸರಕುಗಳ ತಯಾರಿಸಿ ಉತ್ಪಾದನೆಗಳನ್ನು ಹೆಚ್ಚಿಸಿ ರಫ್ತು ಮಾಡಿ ಹೆಚ್ಚು ಆದಾಯ ಹೊಂದುವಂತೆ ಮಾಡಬೇಕಿದೆ. ಪ್ರತೀ ಕುಟುಂಬದ ಆದಾಯದ ಮೇರೆಗೆ ಅನುಗುಣವಾಗಿ ದೇಶ ತೆರಿಗೆ ಹೊಂದಬೇಕಿದೆ ಕೋಟಿ ಲೂಟಿ ಹೊಡೆದಿರುವ ಭ್ರಷ್ಟರ ಹಣವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡು ಬಕ್ಕಸವನ್ನು ತುಂಬಬೇಕಿದೆ ಹೀಗೆ ಆರ್ಥಿಕವಾಗಿ ದೇಶ ಸುಧಾರಿಸುತ್ತಾ ಜಾಗತಿಕ ಮಟ್ಟದಲ್ಲಿ ಭಾರತವು ಬಲಿಷ್ಠ ದೇಶವೆಂದು ತೋರಬೇಕಿದೆ. ಗುಡಿಸಲಿನಲ್ಲಿರುವವರಿಗೊಂದು ಬದುಕು ಭಿಕ್ಷೆ ಬೇಡುವವರಿಗೊಂದು ಬದುಕು ಚಿಂದಿ ಪೇಪರ್ ಆಯುವವರಿಗೊಂದು ಬದುಕು ಕೂಲಿ ಕಾರ್ಮಿಕರಿಗೊಂದು ಬದುಕು ಅಂಗವಿಕಲರಿಗೊಂದು ಬದುಕು ಮಾನಸಿಕ ಅಸ್ವಸ್ಥರಿಗೊಂದು ಬದುಕು ಅನಾಥರಿಗೆ ವೃದ್ಧರಿಗೊಂದು ಬದುಕು ಬಡವನಿಗೊಂದು ಬದುಕು ಶೋಷಿತರಿಗೊಂದು ಬದುಕು ಕೆಳಸ್ಥರದಲ್ಲಿ ಬದುಕು ಕಟ್ಟಿಕೊಳ್ಳಲಾರದೆ ನೋವು ನುಂಗುತ್ತಿರುವವರೆಲ್ಲರಿಗೂ ಸಮೃದ್ಧ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವಲ್ಲಿ ಸರ್ಕಾರ ಕಣ್ತೆರೆಯಬೇಕು ಆ ನಿಟ್ಟಿನಲ್ಲಿ ಆಗ್ರಹಿಸೋಣ ದುಡಿವ ಕೈಗೆ ಕೆಲಸ ಸಿಗುವಂತಾಗಬೇಕು ಓಡುತ್ತಿರುವ ವೇಗಯುಗದಲ್ಲಿ ತನ್ನ ಕುಟುಂಬವನ್ನು ನಿಭಾಯಿಸಲು ಸಾಧ್ಯವಾಗುವಷ್ಟಾದರೂ ವೇತನ ದುಡಿಮೆಗಾರರಿಗೆ ದೊರಕುವಂತೆ ಸರ್ಕಾರ ಮಾಡಬೇಕು ಪ್ರತೀ ಮನೆಗೊಂದರಂತೆ ವಿದ್ಯಾರ್ಹತೆಗನುಗುಣವಾಗಿ ಸರ್ಕಾರಿ ಕೆಲಸ ಕೊಟ್ಟರು ಒಳ್ಳೆಯದು. ಯುವಕರು ಹಾಳಾಗದೆ ಭವಿಷ್ಯತ್ತಿನ ಬದುಕಿಗೆ ಸಜ್ಜಾದರೆ ಅನ್ಯಾಯ ಅಕ್ರಮಗಳು ಅದುರಿ ದೇಶ ಗಟ್ಟಿಯಾಗುತ್ತದೆ ಯುವಕರ ಪಾತ್ರವನ್ನು ಯುವಕರು ಅರಿಯಲೇ ಬೇಕು ಸ್ವಚ್ಛಂದ ಸಮಾಜ ಸ್ವತಂತ್ರ ಸ್ವಾಭಿಮಾನದ ಸಮಾಜ ನಿರ್ಮಾಣಕ್ಕಾಗಿ ಎಲ್ಲಾ ಕ್ಷೇತ್ರದಲ್ಲಿ ಯುವಕರ ಕಾಣ್ಕೆ ಪಾತ್ರ ಹೆಚ್ಚಾಗಬೇಕು ದೇಶದ ಅಧಿಕಾರ ಹಿಡಿಯಬೇಕು ಭ್ರಷ್ಟರೇ ದುಷ್ಟರೇ ವೃದ್ಧರೇ ದೇಶವನ್ನಾಳಿದರೆ ಯುವಕರೆಲ್ಲಿ ಹೋಗಬೇಕು..? ಎಚ್ಚೆತ್ತುಕೊಳ್ಳಿ ಯುವಕರೇ ಎತ್ತ ಸಾಗುತ್ತಿದೆ ನೋಡ ಯುವಜನತೆಯ ಜಾಡ ಎಂದಾಗಬಾರದು ಯುವಕರ ನಡೆ ದೇಶದ ಕಡೆ ಜನರ ಕಡೆ ಪ್ರತಿಯೋರ್ವನ ಸ್ವಾತಂತ್ರ್ಯದ ಕಡೆ ಎಂದಾಗಬೇಕು. ಓದಿದವರಿಗೆ ಉದ್ಯೋಗ ಅಸಹಾಯಕನಿಗೆ ಆಸರೆ ದಣಿದವನ ದನಿ ಕೇಳುವಂತಾಗಬೇಕು ಪ್ರಕೃತಿ ಸಂಪತ್ತನ್ನು ಉಳಿಸಿ ರೈತರಿಗೆ ಸೂಕ್ತ ಸ್ಥಾನದಿ ಕೃಷಿ ಕ್ಷೇತ್ರವನ್ನು ಬೆಳಗಿಸೋಣ. ಉಳ್ಳವರಿಂದ ಆಗುವ ಅನ್ಯಾಯಕೆ ಎದರದೆ ಸ್ವಾಭಿಮಾನದಿಂದಿಮ್ಮೆಟ್ಟಿಸೋಣ ತರತರದ ತಾರತಮ್ಯಗಳೆಲ್ಲೂ ಕಾಣದಂತೆ ಬಡಿದು ಓಡಿಸೋಣ ಸಮತೆಯೇ ಸಾರಗೊಂಡು ವಿಶ್ವ ಗುರು ಭಾರತ ಎಂಬಂತೆ ಮಾಡೋಣ ಮನುಷ್ಯತ್ವ ಮೆತ್ತುಕೊಂಡು ಬಾಳೋಣ ದೇಶ ಕಾಯುವ ಯೋಧನನ್ನು ಅವನೆದೆಯ ದೇಶಾಭಿಮಾನವನ್ನು ಎದೆಗಪ್ಪಿಕೊಳ್ಳೋಣ ಗಡಿಯೊಳಗಿನ ಯೋಧರಂತೆ ನಮ್ಮಿಂದ ನಮಗೆ ರಕ್ಷಣೆಯಂತೆ ಸ್ವಾತಂತ್ರ್ಯ ಪೂರ್ವಕವಾಗಿ ದೇಶವನ್ನು ಜನತೆಯನ್ನು ವ್ಯಕ್ತಿ ಸ್ವಾತಂತ್ರ್ಯವನ್ನು ಸಾಮಾಜಿಕ ನ್ಯಾಯವನ್ನು ಸಂವಿಧಾನದ ಅಡಿಯಲ್ಲಿ ಕಾನೂನಿನಲ್ಲಿ ರಕ್ಷಿಸಿಕೊಳ್ಳೋಣ. 75ರ ಹೊಸ್ತಿಲ ಸ್ವಾತಂತ್ರ್ಯ ನೂರರ ಹೊತ್ತಿಗೆ ಎಲ್ಲಾ ನಿರ್ಬಂಧಗಳಿಂದ ಮುಕ್ತಿ ಹೊಂದಿ ಸೌಹಾರ್ದತೆಯ ಸ್ವಾತಂತ್ರ್ಯೋತ್ಸವ ಆಚರಿಸೋಣ. ನಮಗಾಗಿ ನಮ್ಮ ದೇಶಕ್ಕಾಗಿ ದುಡಿದ ಸ್ವಾತಂತ್ರ್ಯ ಹೋರಾಟಗಾರರ ಮಹಾಸಂಪತ್ತುಗಳ ಸ್ಮರಿಸಿ ಅವರ ಆದರ್ಶ ಸ್ತುತಿ ಸರ್ವರ ಮುಕ್ತಿಯಾಗಲಿ ಸ್ವಾತಂತ್ರ್ಯ ಎಂಬ ಪದಕ್ಕೆ ಸ್ವಲ್ಪ ಅರ್ಥ ಬರಲಿ ನಾವು ಸ್ವಾತಂತ್ರ್ಯೀಯರು ಎಂದು ಹೇಳಿ ಕೇಳಿ ತೆಪ್ಪಗಿರುವಲ್ಲೂ ಪ್ರಜ್ಞೆ ಬರಲಿ ಇಷ್ಟೆಲ್ಲಾ ಇದ್ದರೂ ದೇಶ ಕಟ್ಟಾಗಿದೆ ಸ್ವಾತಂತ್ರ್ಯ ಸಿಕ್ಕಾಗಿದೆ ಎಂದು ಸುಮ್ಮನೆ ಕುಳಿತರೆ ಹೇಗೆ..? ಭಾರತ ಬದಲಾಗದ ಹಾಗೆ.

ಕ.ಗಂ. ಶಶಿಕುಮಾರ್

ಲೇಖನ : ಕ.ಗಂ. ಶಶಿಕುಮಾರ್ (ಕವಿವರ್ಮ)
ಕವಿ ಹಾಗೂ ಕನ್ನಡ ಉಪನ್ಯಾಸಕ
ಕರೇಹನುಮಯ್ಯನ ಪಾಳ್ಯ
ರಾಮನಗರ ಜಿಲ್ಲೆ

Leave a Reply

Your email address will not be published. Required fields are marked *