ಬಿ. ಬಸವಲಿಂಗಪ್ಪನವರ ಜನ್ಮ ಶತಮಾನೋತ್ಸವವನ್ನು ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಆಯೋಜಿಸಲಾಗುವುದು : ಕೆ. ಶೇಷಾದ್ರಿ (ಶಶಿ)

ರಾಮನಗರ : ತಲೆಯ ಮೇಲೆ ಮಲ ಹೊರುವ ಅನಿಷ್ಠ ಪದ್ದತಿಯನ್ನು ರದ್ದು ಮಾಡಿದ, ಶೋಷಿತ ವರ್ಗಗಳ ಕಲ್ಯಾಣಕ್ಕೆ ಅಹಿರ್ನಿಷಿ ಶ್ರಮಿಸಿದ, ಶಾಸಕರಾಗಿ, ಸಚಿವರಾಗಿ ಉತ್ತಮ ಆಡಳಿತ ನೀಡಿದ ಬಿ. ಬಸವಲಿಂಗಪ್ಪನವರ ಜನ್ಮ ಶತಮಾನೋತ್ಸವವನ್ನು ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಜಿಲ್ಲೆಯಲ್ಲಿ ಆಯೋಜಿಸುವುದಾಗಿ ಜನ ಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಕೆ.ಶೇಷಾದ್ರಿ (ಶಶಿ) ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಬಿ.ಬಸವಲಿಂಗಪ್ಪ ಜನ್ಮ ಶತಮಾನೋತ್ಸವ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. 21.4.1921ರಲ್ಲಿ ಜನಿಸಿದ ಬಿ.ಬಸವಲಿಂಗಪ್ಪನವರು ತಮ್ಮ ಬದುಕಿನುದ್ದಕ್ಕೂ ತುಳಿತಕ್ಕೆ ಒಳಗಾದವರಿಗಾಗಿ ಶ್ರಮಿಸಿದ್ದಾರೆ. ಶೋಷಿತರ ಪರ ದನಿ ಎತ್ತಿದ್ದಾರೆ. 26.12.1992ರಲ್ಲಿ ಅವರು ನಿಧನರಾಗಿದ್ದಾರೆ. ಪರಿನಿಬ್ಬಾಣರಾಗಿ 30 ವರ್ಷ ಹಾಗೂ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಅವರನ್ನು ಸ್ಮರಿಸಬೇಕಾಗಿದೆ. ಅವರ ಚಿಂತನೆಗಳು, ಚಳವಳಿಗಳು, ಆವರ ಅಧಿಕಾರವಧಿಯಲ್ಲಿ ಜಾರಿಯಾದ ಕಾನೂನುಗಳು ಮತ್ತು ಅವರ ಸಾಧನೆಗಳನ್ನು ಮೆಲಕು ಹಾಕುವ ಹಾಗೂ ಇಂದಿನ ಪೀಳಿಗೆಗೆ ಪರಿಚಯಿಸಬೇಕಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಅವರ ಜನ್ಮಶತಮಾನೋತ್ಸವವನ್ನು ಹಮ್ಮಿಕೊಳ್ಳುವುದು ಸೂಕ್ತ ಎಂದರು.

ತಲೆಮೇಲೆ ಮಲ ಹೊರುವ ಅನಿಷ್ಠ ಪದ್ದತಿ ಜಾರಿಯಲ್ಲಿತ್ತು. ಶೋಷಿತ ಸಮುದಾಗಳ ಜನರನ್ನು ಈ ಪದ್ದತಿಯಲ್ಲಿ ಬಳಸಿಕೊಳ್ಳಲಾಗುತ್ತಿತ್ತು. ಬಿ.ಬಸವಲಿಂಗಪ್ಪ ಅವರು ಸಚಿವರಾಗಿದ್ದ ವೇಳೆ ಈ ಪದ್ದತಿಯನ್ನು ನಿಷೇಧ ಮಾಡಿದರು. ಇಡೀ ದೇಶದಲ್ಲಿ ಹೀಗೆ ಕಾನೂನು ಜಾರಿ ಮಾಡಿದ್ದು ಬಿ.ಬಸವಲಿಂಗಪ್ಪ ಮೊದಲಿಗರು. ತದ ನಂತರ ಕೇಂದ್ರ ಸರ್ಕಾರ ಈ ಕಾನೂನನ್ನು ಇಡೀ ದೇಶಕ್ಕೆ ವಿಸ್ತರಿಸಿದೆ. ಉಳುವವನಿಗೆ ಭೂಮಿ, ಮಹಿಳೆಯರಿಗೆ ರಾಜಕೀಯ ಅಧಿಕಾರ, ದಲಿತ ಸಮುದಾಯಗಳ ಪರ ದನಿ ಎತ್ತಲು ದಲಿತ ಸಂಘರ್ಷ ಸಮಿತಿ ರಚನೆ, ಹೀಗೆ ಅನೇಕ ವಿಚಾರಗಳಲ್ಲಿ ಬಿ.ಬಸವಲಿಂಗಪ್ಪ ರಾಜಕರಣಿಯಾಗಿ ಹೋರಾಟ ಮಾಡಿದ್ದಾರೆ. ಅವರ ಹೋರಾಟಗಳು, ಚಿಂತನೆಗಳು ಇಂದಿನ ಕಾಲಘಟ್ಟದಲ್ಲಿ ಪ್ರಸ್ತುತ ಎಂಬುದನ್ನು ಇಂದಿನ ಪೀಳಿಗೆ ಅರಿಯಬೇಕಾಗಿದೆ ಹೀಗಾಗಿ ಜನ್ಮ ಶತಮಾನೋತ್ಸವದ ವೇದಿಕೆಯ ಮೂಲಕ ಬಿ.ಬಸವಲಿಂಗಪ್ಪ ಅವರ ಕ್ರಾಂತಿಕಾರಿ ಹೆಜ್ಜೆಗಳನ್ನು ಸ್ಮರಿಸಬೇಕಾಗಿದೆ ಎಂದರು.

ಕನ್ನಡ ಸಾಹಿತ್ಯವನ್ನು ಬೂಸ ಎಂದು ಹೇಳಿಕೆ ಕೊಟ್ಟು ಕ್ರಾಂತಿಯ ಕಿಡಿ ಹೊತ್ತಿಸಿದ ವಿಶಿಷ್ಟ, ವಿಭಿನ್ನತಯೆ ಮೇರು ವ್ಯಕ್ತಿತ್ವದ ಬಿ.ಬಸವಲಿಂಗಪ್ಪ ಅವರ ಜನ್ಮ ಶತಮಾನೋತ್ಸವಕ್ಕೆ ಜಾತಿ, ಧರ್ಮ, ರಾಜಕೀಯ ಬೇಧ ಮರೆತು ಭಾಗಿಯಾಗಬೇಕು ಎಂದು ಕೆ.ಶೇಷಾದ್ರಿ ಕರೆ ಕೊಟ್ಟರು.

ಬಿ.ಬಸವಲಿಂಗಪ್ಪನವರ ಒಡೆನಾಡಿಯಾಗಿದ್ದ ಸಾಹಿತಿ ಡಾ.ಕಾಳೇಗೌಡ ನಾಗವಾರ ಮಾತನಾಡಿ, ಬಿ.ಬಸವಲಿಂಗಪ್ಪನವರ ಜೀವನ, ರಾಜಕೀಯ, ಅವರ ಚಿಂತನೆಗಳು, ಶೋಷಿತ ಸಮುದಾಯಗಳ ಬಗ್ಗೆ ಅವರಿಗಿದ್ದ ಕಾಳಜಿ, ಸಮಾಜದ ಏಳಿಗೆಗೆ ಅವರಲ್ಲಿದ್ದ ಚಿಂತನೆಗಳ ಬಗ್ಗೆ ಮಾತನಾಡಿದರು. ಬಿ.ಬಸವಲಿಂಗಪ್ಪನವರೊಂದಿಗಿನ ಅವರ ಒಡೆನಾಟದ ಬಗ್ಗೆ ಸ್ಮರಣೆಯ ಸುರುಳಿ ಬಿಚ್ಚಿಟ್ಟರು.

ಸಭೆಯಲ್ಲಿ ಎಂ.ಎಲ್.ಸಿ ಸಿ.ಎಂ.ಲಿಂಗಪ್ಪ, ಪ್ರಗತಿಪರ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್, ಪಾರ್ವತೀಶ ಬಿಳಿದಾಳೆ ಮಾತನಾಡಿದರು. ನಗರಸಭೆಯ ಅಧ್ಯಕ್ಷೆ ಬಿ.ಸಿ.ಪಾವರ್ತಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಮೊಯಿನ್ ಖುರೇಷಿ, ಪ್ರಮುಖರಾದ ನರಸಿಂಹಯ್ಯ, ದೌಲತ್ ಷರೀಫ್, ಫೈರೋಜ್ ಪಾಷ, ಸೋಮಶೇಖರ್ (ಮಣಿ), ಲಕ್ಷ್ಮಿಪತಿ, ಬಿ.ರಾಮಚಂದ್ರಯ್ಯ, ಶಿವಶಂಕರ್, ಚಲುವರಾಜು, ಬಾಬು ಕುಂಬಾಪುರ, ಪೌರ ಸೇವಾ ನೌಕರರ ಸಂಘ, ಸ್ವಾಭಿಮಾನಿ ಸಮಿತಿ, ದಲಿತ ಸಂಘಟನೆಗಳು ಮುಂತಾದ ಅನೇಕ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *