ಬಾಡಿಗೆದಾರರಿಗೂ ಪರಿಹಾರ ವ್ಯವಸ್ಥೆ : ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ
ರಾಮನಗರ: ಕಂಡು ಕೇಳರಿಯದ ಮಳೆಯಿಂದ ಸಂತ್ರಸ್ತರ ಪೈಕಿ ಬಾಡಿಗೆ ಮನೆಗಳಲ್ಲಿದ್ದ ಬಾಡಿಗೆದಾರರಿಗೂ ತಕ್ಷಣವೇ 10 ಸಾವಿರ ರೂ. ಪರಿಹಾರ ಕೊಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಭಾನುವಾರ ಇಲ್ಲಿನ ಅರ್ಕೇಶ್ವರ ಬಡಾವಣೆಗೆ ಭೇಟಿ ನೀಡಿ, ಅವರು ಸಂತ್ರಸ್ತರನ್ನು ಭೇಟಿ ಮಾಡಿ, ಆಗಿರುವ ಹಾನಿಯನ್ನು ಪರಿಶೀಲಿಸಿದರು.
ಮಳೆಯಿಂದ ವಾಣಿಜ್ಯ ಕಟ್ಟಡಗಳಿಗೂ ಅಪಾರ ಹಾನಿಯಾಗಿದೆ. ಇವಕ್ಕೂ ಎನ್.ಡಿ.ಆರ್.ಎಫ್. ಮಾನದಂಡಗಳಡಿ ಪರಿಹಾರ ಕೊಡಿಸಲು ಪ್ರಯತ್ನಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಮನೆ ಹಾನಿಗೆ ಹಿಂದೆ ಕೇವಲ 2 ಸಾವಿರ ರೂ. ಮತ್ತು ಮನೆ ಸಂಪೂರ್ಣ ಬಿದ್ದರೆ ಕೇವಲ 1 ಲಕ್ಷ ರೂ. ಮಾತ್ರ ಪರಿಹಾರ ಕೊಡಲಾಗುತ್ತಿತ್ತು.
ಇದನ್ನು ರಾಜ್ಯ ಬಿಜೆಪಿ ಸರಕಾರ ಕ್ರಮವಾಗಿ 10 ಸಾವಿರ ರೂ ಮತ್ತು 5 ಲಕ್ಷ ರೂಪಾಯಿ ಗಳಿಗೆ ಏರಿಸಿದೆ ಎಂದು ಅವರು ವಿವರಿಸಿದರು.
‘ಮಳೆ ಹಾವಳಿಯ ಸಮಸ್ಯೆಗೆ ಹಿಂದಿನ ಜನಪ್ರತಿನಿಧಿಗಳೇ ಕಾರಣ. ಅವರು ಎಚ್ಚರ ವಹಿಸಿದ್ದರೆ ಇಂತಹ ಅನಾಹುತ ಆಗುತ್ತಿರಲಿಲ್ಲ. ಇನ್ನು ಮುಂದೆ ಒತ್ತುವರಿ ಯನ್ನು ತೆರವುಗೊಳಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಮೈಸೂರು ಮತ್ತು ಬೆಂಗಳೂರು ದಶಪಥ ಹೆದ್ದಾರಿ ಸರಿಯಾಗಿಯೇ ಇದೆ. ಇದರಿಂದ ಜಿಲ್ಲೆಯ ಆರ್ಥಿಕ ಬೆಳವಣಿಗೆಗೆ ಯಥೇಚ್ಛ ಅವಕಾಶ ಸಿಗಲಿದೆ. ಈ ಯೋಜನೆ ಬಗ್ಗೆ ಆರೋಪ ಮಾಡುತ್ತಿರುವವರು ರಾಜಕೀಯ ಬಣ್ಣ ಬಳಿಯುವುದನ್ನು ನಿಲ್ಲಿಸುವುದು ಒಳ್ಳೆಯದು ಎಂದು ಅಶ್ವತ್ಥ ನಾರಾಯಣ ಪ್ರತಿಕ್ರಿಯಿಸಿದರು.