ರಾಮನಗರ ಜಿಲ್ಲೆಯ ನೆರೆ ಸಂತ್ರಸ್ತರಿಗೆ ಕೊಡಗಿನ ಮಾದರಿಯಲ್ಲಿ 50 ಸಾವಿರ ಪರಿಹಾರ ನೀಡಿ : ಭಾಸ್ಕರ್ ಪ್ರಸಾದ್
ರಾಮನಗರ : ಮಹಾ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರಾಮನಗರ ಜಿಲ್ಲೆಯ ಜನರಿಗೆ ಕೊಡಗು ಜಿಲ್ಲೆಯ ಮಾದರಿಯಲ್ಲಿಯೇ 50 ಸಾವಿರ ಪರಿಹಾರ ನೀಡಬೇಕು ಎಂದು ಎಸ್ ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾ ಮಳೆಯಿಂದಾಗಿ ರಾಮನಗರ ಟೌನ್ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಈ ಹಿಂದೆ ಕೊಡುಗು ಜಿಲ್ಲೆಯಲ್ಲಿ ಮಳೆಯಿಂದಾಗಿ ಹಾನಿಯಾದ ಸಂತ್ರಸ್ತರಿಗೆ ಸರ್ಕಾರ 50ಸಾವಿರ ಪರಿಹಾರ ನೀಡಿತ್ತು. ಆದರೆ, ರಾಮನಗರದಲ್ಲಿ ಉಂಟಾದ ನೆರೆಗೆ ಕೇವಲ 10 ಸಾವಿರ ರುಪಾಯಿ ನೀಡುತ್ತಿರುವುದು ತಾರತಮ್ಯದಿಂದ ಕೂಡಿದೆ ಎಂದು ದೂರಿದರು.
ರಾಮನಗರ ಟೌನ್ ವ್ಯಾಪ್ತಿಯ ಅರ್ಕಾವತಿ ಬಡಾವಣೆ, ಟಿಪ್ಪು ನಗರ, ಜಿಯಾವುಲ್ಲಾ ಬ್ಲಾಕ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ. ಸಂತ್ರಸ್ತರಿಗೆ ಪರಿಹಾರ ರೂಪದಲ್ಲಿ ನೀಡುತ್ತಿರುವ 10 ಸಾವಿರ ಸಾಕಾಗುವುದಿಲ್ಲ. ಈವರೆಗೆ ಶೇ. 20ರಷ್ಟು ಮಂದಿಗೆ ಮಾತ್ರ ಪರಿಹಾರ ಲಭ್ಯವಾಗಿದೆ. ತಕ್ಷಣವೇ 50ಸಾವಿರ ರುಪಾಯಿ ನೀಡಬೇಕು ಎಂದು ಹೇಳಿದರು.
ಪ್ರವಾಹಕ್ಕೆ ಕಾರಣವಾದ ಭಕ್ಷಿ ಕೆರೆ ಮಳೆಯಿಂದ ಭರ್ತಿಯಾಗಿತ್ತು. ಜತೆಗೆ ಕೆರೆ ಏರಿ ಒಡೆಯುವ ಸ್ಥಿತಿಯಲ್ಲಿರುವುದರ ಬಗ್ಗೆ ಸ್ಥಳೀಯರು ಸಾಕಷ್ಟು ಬಾರಿ ದೂರು ನೀಡಿದ್ದರು. ಆದರೆ, ದುರಸ್ತಿ ಕಾರ್ಯವನ್ನು ಸ್ಥಳೀಯ ಆಡಳಿತ ಮಾಡಲಿಲ್ಲ. ಹಾಗಾಗಿ ಕೆರೆ ತುಂಬಿದ ನಂತರ ಏರಿ ಒಡೆದು ಪ್ರವಾಹ ರೀತಿಯಲ್ಲಿ ನೀರು ಹರಿದು ಟೌನ್ ವ್ಯಾಪ್ತಿಯನ್ನು ಜಲಾವೃತಗೊಳಿಸಿತು.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅವೈಜ್ಞಾನಿಕ ಕಾಮಗಾರಿ :
ಇನ್ನು ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೂ ಮುನ್ನಾ ಬೆಟ್ಟಗಳ ಮೇಲೆ ಬಿದ್ದ ನೀರು, ಸರಾಗವಾಗಿ ಹರಿದು ಕೆರೆಗಳಿಗೆ ತಲುಪುತ್ತಿತ್ತು. ಆದರೆ, ಅವೈಜ್ಞಾನಿಕವಾಗಿ ಹೆದ್ದಾರಿ ನಿರ್ಮಾಣ ಮಾಡಿದ ಕಾರಣ, ರಸ್ತೆಯಲ್ಲಿಯೇ ನೀರು ನಿಲುಗಡೆಯಾಗುತ್ತಿದೆ ಎಂದು ತಿಳಿಸಿದರು.
ಪ್ರವಾಹ ಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿಯಿಂದ ಹಿಡಿದು ಶಾಸಕರವರೆಗೆ ಎಲ್ಲರೂ ಪ್ರವಾಸ ಮಾಡಿದ್ದಾರೆ. ಆದರೆ, ಈ ಭೇಟಿ ಕೆಲವು ಪ್ರದೇಶಗಳಿಗೆ ಮಾತ್ರ ಸೀಮಿತವಾಗಿತ್ತು. ಜಿಯಾವುಲ್ಲಾ ಬ್ಲಾಕ್, ಯಾರಬ್ ನಗರ, ಮಹಬೂಬ್ ನಗರ ಇತ್ಯಾದಿ ಪ್ರದೇಶಗಳಿಗೆ ಯಾವ ರಾಜಕಾರಣಿಗಳು ಹಾಗೂ ಜನಪ್ರತಿನಿ„ಗಳು ಭೇಟಿ ನೀಡದೆ ಪೋಟೊ ಶೂಟ್ ಮಾಡಿಕೊಂಡು ಹೋಗಿದ್ದಾರೆ ಎಂದು ಕಿಡಿಕಾರಿದರು.
ಮಳೆಯಿಂದಾಗಿ ಮನೆಗಳಿಗೆ ಮಣ್ಣು ನುಗ್ಗಿದ್ದು, ಗೃಹ ಉಪಯೋಗಿ ಪದಾರ್ಥಗಳು ನೀರು ಪಾಲಾಗಿದೆ. ಶೇ.50ಕ್ಕಿಂತ ಹೆಚ್ಚು ಮನೆಗಳು ಕುಸಿತದಿವೆ. 150ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಹಾಗಾಗಿ ನೆರೆ ಪೀಡತರಿಗೆ ತಕ್ಷಣವೇ ಪರಿಹಾರವನ್ನು ಮಂಜೂರು ಮಾಡಬೇಕು. ರೇಷ್ಮೆ ಉದ್ಯಮ ನಷ್ಟ ಅನುಭವಿಸಿದೆ. ತಕ್ಷಣವೇ ನಷ್ಟ ಪರಿಹಾರವನ್ನು ಒದಗಿಸಿಕೊಡಬೇಕು ಎಂದು ಭಾಸ್ಕರ್ ಪ್ರಸಾದ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಹಾನಿಗೊಂಡಿರುವ ರಸ್ತೆಗಳ ಸ್ವಚ್ಛತೆ ಮತ್ತು ದುರಸ್ತಿ , ವಿದ್ಯುತ್ ಸಂಪರ್ಕ ಮರು ಕಲ್ಪಿಸುವುದು,ಆರೋಗ್ಯ ಕೇಂದ್ರ ಸ್ಥಾಪಿಸಿ ಸಂತ್ರಸ್ತರ ಆರೋಗ್ಯ ತಪಾಸಣೆ ನಡೆಸುವುದು.ನೀರಿನ ಪೈಪ್ ಗಳನ್ನು ಮತ್ತು ಸಂಪರ್ಕಗಳನ್ನ ದುರಸ್ತಿ ಪಡಿಸುವಂತೆ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್ ಡಿಪಿಐನ ಪದಾಧಿಕಾರಿಗಳಾದ ಸೈಯದ್ ಅಲಿ, ಸೈಯದ್ ಅಸಾದುಲ್ಲಾ, ಆರೀಫ್ ಪಾಷ, ಫೈರೋಜï ಅಲಿಖಾನ್, ಅಬ್ದುಲ್ ಪಾಷಾ ಇದ್ದರು.
ಎಸ್ ಡಿಪಿಐ ತಂಡ ಎನ್‍ಜಿಒ ಮತ್ತು ಇತರೆ ಸಂಸ್ಥೆಗಳ ಸಹಯೋಗದೊಂದಿಗೆ ಪರಿಹಾರ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು, ಇಲ್ಲಿಯವರೆಗೆ ಆಹಾರ ಪದಾರ್ಥಗಳು, ಹಾಲು ಮತ್ತು ದಿನಸಿ ಸಾಮಗ್ರಿಗಳನ್ನು ಸಂಕಷ್ಟಕ್ಕೆ ಸಿಲುಕಿರುವವರಿಗೆ ಒದಗಿಸಿದ್ದೇವೆ. ಅಲ್ಲದೆ, 200ಕ್ಕೂ ಹೆಚ್ಚು ಕಾರ್ಯಕರ್ತರು ಹಾನಿಗೆ ಒಳಗಾಗಿರುವ ಮನೆಗಳ ಸ್ವಚ್ಛತಾ ಕಾರ್ಯದಲ್ಲಿ ಮೊದಲ ದಿನದಿಂದಲೇ ತೊಡಗಿದ್ದಾರೆ. ಕಳೆದ ಏಳು ದಿನಗಳಲ್ಲಿ ಸುಮಾರು 500 ಮನೆಗಳನ್ನು ಸ್ವಚ್ಛ ಮಾಡಿಕೊಟ್ಟಿದ್ದಾರೆ. ಪರಿಹಾರ ಒದಗಿಸಿಕೊಡುವಾಗ ಯಾವುದೇ ಜಾತಿ, ಧರ್ಮ, ಪಂಗಡದ ಎಂದು ನೋಡದೆ ಸಂಕಷ್ಟಕ್ಕೆ ಒಳಗಾಗಿರುವ ಪ್ರತಿಯೊಬ್ಬರಿಗೂ ಕೂಡ ನೆರವಾಗುವಂತೆ ಮಾನವೀಯ ನೆಲೆಗಟ್ಟಿನಲ್ಲಿ ಕಾರ್ಯನಿರ್ವಹಿಸಿದೆ.
– ಭಾಸ್ಕರ್ ಪ್ರಸಾದ್, ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ ಡಿಪಿಐ.
ಸಂತ್ರಸ್ತರ ಬೇಡಿಕೆಗಳು ಏನು ?
1. ರಾಮನಗರ ಪಟ್ಟಣ ಎರಡು ಬದಿಗಳಲ್ಲಿ ವಿಭಾಗವಾಗಿದೆ. ಒಂದು ರೈಲ್ವೆ ಹಳಿಗಳ ಮೇಲೆ ಹಾಗೂ ಇನ್ನೊಂದು ರೈಲ್ವೆ ಹಳಿಗಳ ಕೆಳಗಿನ ಭಾಗ ಎಂದಾಗಿದೆ. ರೈಲ್ವೆ ನಿಲ್ದಾಣದ ಹತ್ತಿರ ಇರುವ ಈ ಒಂದು ಅಂಡರ್ ಪಾಸ್ ನಲ್ಲಿ ಅಂದಾಜು 45 ಸಾವಿರ ವಾಹನ ಸಂಚಾರ ಮಾಡುತ್ತವೆ. ಈ ಅಂಡರ್ ಪಾಸ್ ಕುಸಿದು ಬಿದ್ದರೆ ಪಟ್ಟಣದ ಎರಡು ಬದಿಗಳ ಸಂಪೂರ್ಣ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿ ಹೋಗುತ್ತದೆ. ಹಾಗಾಗಿ ಇಲ್ಲಿ ಕನಿಷ್ಠ ಮೂರರಿಂದ ನಾಲ್ಕು ಅಂಡರ್ ಪಾಸುಗಳನ್ನು ತಕ್ಷಣವೇ ನಿರ್ಮಾಣ ಮಾಡಬೇಕು.
2. ನೆರೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಪ್ರತಿಯೊಬ್ಬರಿಗೂ ಕೂಡ ಆದಷ್ಟು ಬೇಗ ಪರಿಹಾರ ಒದಗಿಸಬೇಕು. ಮಳೆಯಿಂದ ಕುಸಿದು ಬಿದ್ದಿರುವ ಅಥವಾ ಹಾನಿಗೆ ಒಳಗಾಗಿರುವ ಮನೆಗಳನ್ನು ಸರ್ಕಾರ ತಕ್ಷಣವೇ ಮರು ನಿರ್ಮಾಣ ಮಾಡಿಕೊಡಬೇಕು.
3. ರೇಷ್ಮೆ ಬೆಳೆಗಾರರು ಮತ್ತು ವ್ಯಾಪಾರಿಗಳು ಇಂದು ಕೋಟಿಗಳ ಲೆಕ್ಕದಲ್ಲಿ ನಷ್ಟವನ್ನು ಅನುಭವಿಸಿದ್ದಾರೆ. ಸರ್ಕಾರ ತಕ್ಷಣವೇ ರೇಷ್ಮೆ ಬೆಳೆಗಾರರಿಗೆ ಪ್ರರಿಹಾರ ನೀಡು ಅವರಿಗೆ ಆಗಿರುವ ನಷ್ಟವನ್ನು ಸರಿಪಡಿಸಬೇಕು.
4.ಪಟ್ಟಣದ ಸುತ್ತ ಇರುವ ನಾಲೆಗಳ ತಡೆಗೋಡೆಗಳನ್ನು ಮರು ನಿರ್ಮಾಣ ಮಾಡಬೇಕು. ಭಕ್ಷಿ ಕೆರೆ / ಕೇತನಹಳ್ಳಿ ಕೆರೆಗಳ ರಿಪೇರಿ ಮತ್ತು ಮರು ನಿರ್ಮಾಣದ ಕಾರ್ಯವನ್ನು ಸರ್ಕಾರ ಕೈಗೆತ್ತಿಕೊಳ್ಳಬೇಕು.
5. ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳ ಕನಿಷ್ಠ ಮೂರು ತಿಂಗಳ ವಿದ್ಯುತ್ ಬಿಲ್ಲನ್ನು ಬೆಸ್ಕಾಂ ಮನ್ನಾ ಮಾಡಬೇಕು. ನೆರೆಯಿಂದ ಪಶು ಮತ್ತು ಇತರೆ ಪ್ರಾಣಿಗಳನ್ನು ಮತ್ತು ಆಹಾರ ಪದಾರ್ಥಗಳ ಸಂಗ್ರಹವನ್ನು ಕಳೆದುಕೊಂಡು ನಷ್ಟ ಅನುಭವಿಸಿದವರಿಗೆ ಸರ್ಕಾರ ಪರಿಹಾರ ಒದಗಿಸಬೇಕು.