ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ನೆರವಾಗಿ : ಪೂರ್ಣಚಂದ್ರ
ರಾಮನಗರ : ತಾವು ಓದಿದ ಸರ್ಕಾರಿ ಶಾಲೆಗಳಿಗೆ ತಮ್ಮ ಕೈಲಾದಷ್ಟು ನೆರವನ್ನು ನೀಡಿದರೆ ಸರ್ಕಾರಿ ಶಾಲೆಗಳ ಸಬಲೀಕರಣ ಸಾಧ್ಯವಾಗುತ್ತದೆ ಎಂದು ಕವಿ ಪೂರ್ಣಚಂದ್ರ ತಿಳಿಸಿದರು.
ತಾಲ್ಲೂಕಿನ ಕಸಬಾ ಹೋಬಳಿಯ ಚನ್ನಮಾರೇಗೌಡನದೊಡ್ಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಜಿಲ್ಲಾ ಲೇಖಕರ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಲೇಖನ ಸಾಮಗ್ರಿಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳ ಅಭಿವೃಧ್ಧಿಗೆ ದಾನಿಗಳು ಮುಂದಾಗಬೇಕು. ಶಾಲೆಯಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳು ಸೇರಿದಂತೆ ಯಾರೂ ಬೇಕಾದರೂ ಸರ್ಕಾರಿ ಶಾಲೆಗಳ ನೆರವಿಗೆ ನಿಲ್ಲಬೇಕು ಎಂದು ತಿಳಿಸಿದರು.
ಜಿಲ್ಲಾ ಲೇಖಕರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೂ.ಗಿ. ಗಿರಿಯಪ್ಪ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಸಮರ್ಥ ಶಿಕ್ಷಕರಿದ್ದಾರೆ. ಖಾಸಗಿ ಶಾಲೆಗಳಿಗಿಂತಲೂ ಉತ್ತಮ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿ ದೊರೆಯುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಎಸ್ಡಿಎಂಸಿ ಅಧ್ಯಕ್ಷ ಸಿ. ಸೋಮಶೇಖರ್ ಉದ್ಘಾಟಿಸಿದರು. ಶಾಲೆಯ ಮುಖ್ಯಶಿಕ್ಷಕಿ ಎನ್. ದೇವಿಕಾ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಎಂ.ಸಿ. ಶಿವಲಿಂಗಪ್ಪ ಉಪನ್ಯಾಸ ನೀಡಿದರು. ಜಿಲ್ಲಾ ಲೇಖಕರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಸ್. ರುದ್ರೇಶ್ವರ, ಸಮೂಹ ಸಂಪನ್ಮೂಲ ವ್ಯಕ್ತಿ ರೇಣುಕಮ್ಮ, ಶಿಕ್ಷಕಿ ಅನಿತಾ, ನಿವೃತ್ತ ಪ್ರಾಧ್ಯಾಪಕ ಶಿವಲಿಂಗಯ್ಯ, ಮುಖಂಡ ಲೋಕೇಶ್ ಇದ್ದರು.