ನೆರೆ ಉಂಟಾಗಲು ರಾಜಕಾಲುವೆಗಳ ಒತ್ತುವರಿಯೇ ಪ್ರಮುಖ ಕಾರಣ : ಡಾ. ಅವಿನಾಶ್ ಮೆನನ್ ರಾಜೇಂದ್ರನ್

ರಾಮನಗರ : ನೆರೆ ಉಂಟಾಗಲು ರಾಜಕಾಲುವೆಗಳ ಒತ್ತುವರಿಯೇ ಪ್ರಮುಖ ಕಾರಣ ಎಂದು ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಗಳ ಸಂಕೀರ್ಣದ ಸಭಾಂಗಣದಲ್ಲಿ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ಕೆರೆಗಳ ಸರ್ವೇ ನಡೆಸಿ, ವರದಿ ಸಿದ್ದಪಡಿಸಿದ ಬಳಿಕ ಒತ್ತುವರಿ ತೆರವುಗೊಳಿಸಲಾಗುವುದು. ಪ್ರತಿ ತಿಂಗಳು ಪ್ರತಿ ತಾಲೂಕಿನ 5 ಕೆರೆಗಳ ಒತ್ತುವರಿ ತೆರವುಗೊಳಿಸುವಂತೆ ಸೂಚನೆಯನ್ನು ನೀಡಲಾಗಿದೆ ಎಂದು ತಿಳಿಸಿದರು.

ಜಾನುವಾರು ಪ್ರಾಣಹಾನಿ ಆದಲ್ಲಿ ಮಾಲೀಕರಿಗೆ ಪ್ರತಿ ಜಾನುವಾರುವಿಗೆ ತಲಾ 30 ಸಾವಿರದಂತೆ ಗರಿಷ್ಠ 90 ಸಾವಿರ ಪರಿಹಾರ ಸಿಗಲಿದೆ. ಕುರಿ–ಮೇಕೆಗೆ ಗರಿಷ್ಠ 30 ಪ್ರಾಣಿಗಳಿಗೆ ತಲಾ 3 ಸಾವಿರದಂತೆ 90 ಸಾವಿರದವರೆಗೂ ಪರಿಹಾರಕ್ಕೆ ಅವಕಾಶವಿದೆ ಎಂದು ತಿಳಿಸಿದರು.

ರಾಮನಗರ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಮಳೆ :

ರಾಮನಗರ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಹೆಚ್ಚುವರಿ ಮಳೆಯಾಗಿದೆ. ಆಗಸ್ಟ್ ಅಂತ್ಯದಲ್ಲಿ ವಾಡಿಕೆಗಿಂತ ಎರಡುವರೆ ಪಟ್ಟು ಹಾಗೂ ಸೆಪ್ಟೆಂಬರ್ ಮೊದಲ ವಾರದಲ್ಲಿ ವಾಡಿಕೆಗಿಂತ 10 ಪಟ್ಟು ಹೆಚ್ಚುವರಿ ಮಳೆಯಾಗಿದೆ. ಇದರಿಂದ ಭಕ್ಷಿ ಕೆರೆ ಕೋಡಿ ಬಿದ್ದಿದ್ದು, 540 ಹೆಕ್ಟೇರ್‌ನಲ್ಲಿನ ತೋಟಗಾರಿಕಾ ಬೆಳೆ, 362 ಹೆಕ್ಟೇರ್ ಕೃಷಿ ಹಾಗೂ 10 ಹೆಕ್ಟೇರ್‌ನಷ್ಟು ರೇಷ್ಮೆ ಬೆಳೆ ಹಾನಿಯಾಗಿದೆ ಎಂದು ಅವರು ಹೇಳಿದರು.

ಮಳೆಯಿಂದ ಕುಸಿದಿರುವ ಸೇತುವೆಗಳ ಜಾಗದಲ್ಲಿ ತಾತ್ಕಾಲಿಕ ನಡಿಗೆ ಪಥ ನಿರ್ಮಾಣದ ಜೊತೆಗೆ ಜಿಲ್ಲೆಯಲ್ಲಿ ಇರುವ ಎಲ್ಲ ಸೇತುವೆಗಳ ಗುಣಮಟ್ಟ ಪರಿಶೀಲನೆಗೆ ಸರ್ವೆ ನಡೆಸಲಾಗುವುದು ಎಂದು ತಿಳಿಸಿದರು.

ಅರ್ಕಾವತಿ ನದಿಯಲ್ಲಿನ ಪ್ರವಾಹ ಪರಿಸ್ಥಿತಿಯಿಂದಾಗಿ ಸುಗ್ಗನಹಳ್ಳಿ ಸೇತುವೆ ಕುಸಿತಗೊಂಡಿದ್ದು, ಹರಿಸಂದ್ರ ಸೇತುವೆ ಬಿರುಕು ಬಿಟ್ಟಿದೆ. ಇಲ್ಲಿ ಜನ–ಜಾನುವಾರು ಓಡಾಟಕ್ಕೆ ಅನುಕೂಲ ಆಗುವಂತೆ ಪಾದಚಾರಿ ಮಾರ್ಗ ಸಿದ್ಧಗೊಳಿಸಲಾಗುವುದು. ಹೊಸ ಸೇತುವೆ ನಿರ್ಮಿಸಲು ಕನಿಷ್ಠ ಒಂದೂವರೆ ವರ್ಷ ಬೇಕಾಗುತ್ತದೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಸುರಿಯುವ ಮಳೆ ನೀರು ತಿಪ್ಪಗೊಂಡನಹಳ್ಳಿ ಜಲಾಶಯದ ಮೂಲಕ ಮಂಚನಬೆಲೆ ಸೇರುತ್ತಿದೆ. ಆ ನೀರನ್ನು ಅಲ್ಲಿಂದ ಅರ್ಕಾವತಿ ನದಿಗೆ ಹರಿಸುತ್ತಿರುವ ಪರಿಣಾಮ ನದಿಯ ನೀರಿನ ಮಟ್ಟ ಹೆಚ್ಚಿದೆ. ಸದ್ಯಕ್ಕೆ 5500 ಕ್ಯುಸೆಕ್‌ನಷ್ಟು ನೀರು ಹರಿಸಲಾಗುತ್ತಿದ್ದು, ಜಲಾಶಯದ ಸಮತೋಲನ ಮಟ್ಟ ಕಾಪಾಡಲಾಗಿದೆ. ಹೆಚ್ಚಿನ ತೊಂದರೆ ಆಗದಂತೆ ಎಚ್ಚರ ವಹಿಸಿದ್ದೇವೆ ಎಂದು ಅವರು ಹೇಳಿದರು.

ಮಳೆಯಿಂದಾಗಿ ಹಾನಿಯಾಗಿರುವ ಮನೆಗಳಿಗೆ ಸದ್ಯಕ್ಕೆ ವಿದ್ಯುತ್ ದರ ವಿಧಿಸುವುದಿಲ್ಲ. ತೀವ್ರ ಮಳೆಯಿಂದಾಗಿ ಮನೆಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗಿದ್ದು, ಸದ್ಯದಲ್ಲೇ ಸರಿಹೋಗಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಸಂತೋ‍ಷ್ ಬಾಬು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *