ಅರ್ಕಾವತಿ ವಿದ್ಯಾಗಣಪತಿ ಯುವ ಸೇವಾ ಸಂಘದ ವತಿಯಿಂದ ಪ್ರತಿಷ್ಠಾಪಿಸಿದ್ದ ‘ಗರುಡ ಗಣಪತಿ’ ವಿಸರ್ಜನೆ
ರಾಮನಗರ: ಇಲ್ಲಿನ ಛತ್ರದ ಬೀದಿಯಲ್ಲಿ ಶ್ರೀ ಅರ್ಕಾವತಿ ವಿದ್ಯಾಗಣಪತಿ ಯುವ ಸೇವಾ ಸಂಘ ಹಾಗೂ ಅರಳೀಕಟ್ಟೆ ಗೆಳೆಯರ ಬಳಗದವರು ಪ್ರತಿಷ್ಠಾಪಿಸಿದ್ದ ಶ್ರೀ ಗರುಡ ಗಣಪತಿಮೂರ್ತಿಯನ್ನು ನಗರದಲ್ಲಿ ಅದ್ದೂರಿ ಮೆರವಣಿಗೆಯೊಂದಿಗೆ ರಂಗರಾಯನದೊಡ್ಡಿ ಕೆರೆಯಲ್ಲಿ ವಿಸರ್ಜಿಸಲಾಯಿತು.
ಆ.31 ರಂದು ಗಣೇಶ ಚತುರ್ಥಿಯ ದಿನ ಶ್ರೀ ಗರುಡ ಗಣಪತಿಯನ್ನು ವಿಶೇಷ ಆಸ್ಥಾನ ಮಂಟಪವನ್ನು ವಿನ್ಯಾಸಗೊಳಿಸಿ ಪ್ರತಿಷ್ಠಾಪಿಸಲಾಗಿತ್ತು. ಅಂದಿನಿಂದ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಆರಾಧಿಸಿ ಕಣ್ತುಂಬಿಕೊಂಡಿದ್ದ ಭಕ್ತಾಧಿಗಳು ಗಣೇಶ ವಿಸರ್ಜನಾ ದಿನವಾದ ಭಾನುವಾರ ಬೆಳಿಗ್ಗಿನಿಂದಲೇ ವಿಶೇಷ ಪೂಜೆ ಸಮರ್ಪಿಸಿ ಭಕ್ತಿಭಾವ ಮೆರೆದರು.
ಗಣಪತಿಯ ವೈಭವದ ಮೆರವಣಿಗೆಗೆ ನಗರ ಪೊಲೀಸ್ ವೃತ್ತ ನಿರೀಕ್ಷಕ ನರಸಿಂಹಮೂರ್ತಿ ಅವರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ವಿವಿಧ ಹೂವಿನ ಅಲಂಕಾರಗಳಿಂದ ಕಂಗೊಳಿಸುತ್ತಿದ್ದ ಶ್ರೀ ಗರುಡ ಗಣಪತಿ ಮೂರ್ತಿ ಮೆರವಣಿಗೆಯು ಮಂಗಳ ವಾದ್ಯದೊಂದಿಗೆ ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿತು.
ವೈಶಿಷ್ಟ್ಯಪೂರ್ಣ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತಾ ಗಣೇಶನ ವಿಭಿನ್ನ ರೂಪಗಳನ್ನು ಪರಿಚಯಿಸುತ್ತಾ ಗಣೇಶೋತ್ಸವನ್ನು ಅತ್ಯಂತ ವಿಶೇಷವಾಗಿ ಆಚರಿಸುವ ಮೂಲಕ ಭಕ್ತಾಧಿಗಳನ್ನು ಆಕರ್ಷಿಸುವಲ್ಲಿ ಶ್ರೀ ಅರ್ಕಾವತಿ ವಿದ್ಯಾಗಣಪತಿ ಯುವ ಸೇವಾ ಸಂಘ ಮತ್ತು ಅರಳೀಕಟ್ಟೆ ಗೆಳೆಯರ ಬಳಗ ಯಶಸ್ವಿಯಾಗಿದೆ. ಈ ಬಾರಿ ಸಂಘದ 38ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ಗರುಡ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮತ್ತೊಮ್ಮೆ ನಗರವಾಸಿಗಳಲ್ಲಿ ಸಂತಸ ಹರಿಸಿದ್ದಾರೆ.
ಪೂಜಾ ಕಾರ್ಯಕ್ರಮದಲ್ಲಿ ಸಂಚಾರ ವಿಭಾಗದ ಪಿಎಸ್‍ಐ ಸರಸ್ವತಿ, ಎಎಸ್‍ಐಗಳಾದ ಅನಂತು, ದೇವರಾಜು(ದೇವು), ಸಂಘದ ಗೌರವಾಧ್ಯಕ್ಷ ಕೆ.ಆರ್.ನಾಗೇಶ್, ಸಂಘದ ಅಧ್ಯಕ್ಷ ಪಿ.ವೈ.ರವೀಂದ್ರ ಹೇರ್ಳೆ, ಪದಾಧಿಕಾರಿಗಳಾದ ಉಮಾಮಹದೇವಪ್ಪ(ಶಿವು), ರವಿ, ಆಟೋರಾಜ, ಪ್ರದೀಪ್, ಪ್ರಶಾಂತ್, ಗಿರೀಶ್‍ರಾವ್, ಮಹದೇವ್, ಶಿವರುದ್ರ ಮತ್ತಿತರರು ಹಾಜರಿದ್ದರು.
ಮೆರವಣಿಗೆಯು ನಗರದ ಛತ್ರದ ಬೀದಿಯಿಂದ ಆರಂಭವಾಗಿ ಅಗ್ರಹಾರ ಬೀದಿ, ಚಾಮುಂಡೇಶ್ವರಿ ಬಡಾವಣೆ, ಶೆಟ್ಟಿಹಳ್ಳಿ ಬೀದಿ, ಎಂ.ಜಿ.ರಸ್ತೆ, ಬಾಲಗೇರಿ, ಮಂಡಿಪೇಟೆ, ಮುಖ್ಯರಸ್ತೆ, ಐಜೂರು ವೃತ್ತದ ಮೂಲಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ನಂತರ ರಂಗರಾಯನದೊಡ್ಡಿ ಕರೆಯಲ್ಲಿ ವಿಸರ್ಜಿಸಲಾಯಿತು.