ಬಿರುಕು ಬಿಟ್ಟ ಸ್ಥಳದಲ್ಲಿ ಗಿಡಗಂಟೆಗಳು ಬೆಳೆದು 200 ವರ್ಷಗಳ ಇತಿಹಾಸವಿರುವ ‘ಅರ್ಕಾವತಿ ಸೇತುವೆ’ ಶಿಥಿಲ !

ರಾಮನಗರ : ರಾಮನಗರದಲ್ಲಿ ಈಚೆಗೆ ಮಳೆಯಿಂದಾಗಿ ಹಲವಾರು ಸೇತುವೆಗಳನ್ನು ಭೂಮಿ ತನ್ನ ಒಡಲಲ್ಲಿ ಸೇರಿಸಿಕೊಂಡಿದೆ. ಇದೇ ಸಾಲಿಗೆ ಶತಮಾನಗಳ ಇತಿಹಾಸವಿರುವ ರಾಮನಗರದ ಅರ್ಕಾವತಿ ಸೇತುವೆ ಸೇರುವ ಮುನ್ನ ಇದನ್ನು ರಕ್ಷಣೆ ಮಾಡಬೇಕಿದೆ.
ಅರ್ಕಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಈ ಸೇತುವೆ ರಾಮನಗರದ ಎರಡೂ ಭಾಗಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಈ ಸೇತುವೆಗೆ ಈಗ ಕಂಟಕ ಎದುರಾಗಿದ್ದು, ಇದನ್ನು ದುರಸ್ತಿಪಡಿಸುವ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ಗಮನ ಹರಿಸಬೇಕಿದೆ.

ಅರ್ಕಾವತಿ ಸೇತುವೆ

ರಾಮನಗರದ ಒಳಗಿರುವ ಅರ್ಕಾವತಿ ಸೇತುವೆಗೆ ಸುಮಾರು ಇನ್ನೂರು ವರ್ಷಗಳ ಇತಿಹಾಸವಿದೆ. ಇದನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದ್ದು, ಜಿಲ್ಲಾಡಳಿತ ಮತ್ತು ಸ್ಥಳೀಯ ಸಂಸ್ಥೆ ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಿದೆ.

ಸೇತುವೆಯ ಮೇಲೆ ಗಿಡಗಂಟೆಗಳು ಬೆಳೆಯುತ್ತಿವೆ. ಇವು ದಿನಗಳು ಕಳೆದಂತೆ ಸೇತುವೆಯನ್ನು ದುರ್ಬಲಗೊಳಿಸುತ್ತಿವೆ. ರಾಮನಗರ ಬೆಳೆದಂತೆಲ್ಲಾ ವಾಹನ ದಟ್ಟಣೆಯೂ ಹೆಚ್ಚಾಗಿದ್ದರಿಂದ ಹಾಲಿ ಹಳೇ ಸೇತುವೆಯನ್ನು ಐದಾರು ಅಡಿಗಳಷ್ಟು ವಿಸ್ತರಿಸಲಾಗಿದೆ. ಸದ್ಯ ಈ ಸೇತುವೆಗೆ ಮಾಡಿರುವ ಪ್ಲಾಸ್ಟರಿಂಗ್ನಲ್ಲಿ ಬಿರುಕು ಬಿಟ್ಟಿರುವ ಕಡೆಯೆಲ್ಲ ಗಿಡಗಂಟಿಗಳು ಬೆಳೆದಿವೆ. ಈ ಬಾರಿ ಸುರಿದ ಭಾರಿ ಮಳೆ ಹಾಗೂ ಸತತವಾಗಿ ಹರಿದ ನೀರಿನಿಂದಾಗಿ ಕೊಳಚೆಯಿಂದಲೇ ತುಂಬಿ ಹೋಗಿದ್ದ ಅರ್ಕಾವತಿ ನದಿ ಶುದ್ಧಗೊಂಡಿದೆ. ಇದರ ಜತೆಗೆ ಭಾರೀ ಪ್ರಮಾಣದ ನೀರು ಸೇತುವೆಯ ಶಕ್ತಿಯನ್ನು ಕಸಿದುಕೊಂಡಿದೆ ಎಂದರೆ ತಪ್ಪಾಗಲಾರದು.

Leave a Reply

Your email address will not be published. Required fields are marked *