ಮೈಸೂರು ದಸರಾ : ವಜ್ರಮುಷ್ಠಿ ಕಾಳಗದಲ್ಲಿ ಗೆದ್ದು ರಾಮನಗರ ಜಿಲ್ಲೆಗೆ ಕೀರ್ತಿ ತಂದ ಮನೋಜ್ ಜಟ್ಟಿ

ವಜ್ರಮುಷ್ಟಿ ಕಾಳಗ

ರಾಮನಗರ : ಮೈಸೂರು ದಸರಾದ ಐತಿಹಾಸಿಕ ಜಂಬೂಸವಾರಿಗೂ ಮುನ್ನಾ ನಡೆಯುವ ವಜ್ರಮುಷ್ಟಿ ಕಾಳಗದಲ್ಲಿ ಚನ್ನಪಟ್ಟಣದ ಮನೋಜ್ ಜೆಟ್ಟಿ ಎದುರಾಳಿ ಫೈಲ್ವಾನನ ನೆತ್ತಿಯಿಂದ ನೆತ್ತರು ಹರಿಸುವ ಮೂಲಕ ನಾಡಹಬ್ಬದಲ್ಲಿ ರಾಮನಗರ ಜಿಲ್ಲೆಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ.


ಹಲವು ಸಾಂಪ್ರದಾಯಿಕ ಸಾಹಸ ಕಲೆಗಳ ಪ್ರದರ್ಶನಕ್ಕೆ ವೇದಿಕೆಯಾಗಿರುವ ದಸರಾದಲ್ಲಿ ವಜ್ರಮುಷ್ಟಿ ಕಾಳಗ ಸಾಕಷ್ಟು ಪ್ರಾಮುಖ್ಯತೆ ಪಡೆದಿದೆ. ಉಳಿದೆಲ್ಲಾ ಕುಸ್ತಿಗಳು ಅರಮನೆಯ ಹೊರಾಂಗಣದಲ್ಲಿ ನಡೆದರೆ ವಜ್ರಮುಷ್ಟಿ ಕಾಳಗ ಮಾತ್ರ ಅರಮನೆಯ ಒಳಾಂಗಣದಲ್ಲಿರುವ ಕರಿಕಲ್ಲು ತೊಟ್ಟಿ ಕುಸ್ತಿ ಅಖಾಡದಲ್ಲಿ ನಡೆಯುತ್ತದೆ. ಕುಸ್ತಿ ಪದ್ದತಿಯಲ್ಲೇ ಇದಕ್ಕೆ ಸಾಕಷ್ಟು ಮಹತ್ವ ವಿದೆ. ವಜ್ರಮುಷ್ಟಿ ಕಾಳಗ ಮುಗಿದ ಬಳಿಕವೇ ಜಂಬೂಸವಾರಿ ಹೊರಡುವುದು ಮೈಸೂರು ದಸರಾದಲ್ಲಿ ಹಿಂದಿನಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ.


ವಜ್ರಮುಷ್ಟಿ ಕಾಳಗದಲ್ಲಿ ಪಾಲ್ಗೊಳ್ಳುವ ಜಟ್ಟಿಪರಂಪರೆಗಳು ಇರುವುದು ರಾಜ್ಯದ ನಾಲ್ಕು ಕಡೆಗಳಲ್ಲಿ ಮಾತ್ರ. ಚನ್ನಪಟ್ಟಣ, ಬೆಂಗಳೂರು, ಮೈಸೂರು ಮತ್ತು ಚಾಮರಾಜ ನಗರದಲ್ಲಿ ಮಾತ್ರ. ನಾಲ್ಕು ಮಂದಿ ಫೈಲ್ವಾನರು ಒಂದೇ ಬಾರಿ ಅಖಾಡಕ್ಕೆ ಇಳಿಯುತ್ತಾರೆ. ಹಾಗೂ ಎರಡು ಜೋಡಿಗಳು ಎದುರು ಬದುರಾಗಿ ದ್ವಂದ್ವ ಕಾಳಗ ನಡೆಸುತ್ತಾರೆ. ಈಬಾರಿ ಚಾಮರಾಜ ನಗರದ ಅಚ್ಯುತ್‍ಜೆಟ್ಟಿಯ ಜೊತೆ ಮುಖಾಮುಖಿಯಾದ ಚನ್ನಪಟ್ಟಣದ ಮನೋಜ್ ಜೆಟ್ಟಿ ಒಂದೇ ಏಟಿಗೆ ಎದುರಾಳಿ ತಲೆಯಿಂದ ನೆತ್ತರು ಕೆಡವುವ ಮೂಲಕ ವಿಜಯಶಾಲಿಯಾದರು. ಇವರ ತಂದೆ ಪುರುಷೋತ್ತಮ್ ಜೆಟ್ಟಿ ಸಹ ಸುಮಾರು 20ಕ್ಕೂ ಹೆಚ್ಚುಬಾರಿ ವಜ್ರಮುಷ್ಟಿ ಕಾಳಗದಲ್ಲಿ ಪಾಲ್ಗೊಂಡು ಸಾಕಷ್ಟು ಬಾರಿ ಗೆಲುವು ಸಾಧಿಸಿದ್ದಾರೆ.


ಮೈಸೂರು ದಸರಾ ಸಮಯದಲ್ಲಿ ನಡೆಯುವ ಪ್ರಸಿದ್ದ ವಜ್ರಮುಷ್ಟಿ ಕಾಳಗ ಹಲವು ವೈಶಿಷ್ಟ್ಯಗಳಿಂದ ಕೂಡಿದೆ. ಈ ಕುಸ್ತಿಯಲ್ಲಿ ತಲೆಯನ್ನು ಬೋಳಿಸಿಕೊಂಡು ತಮ್ಮ ಕುಲದೇವಿ ನಿಂಬಾಂಜಾ ದೇವಿಯನ್ನು ಪೂಜಿಸಿ ಕುಸ್ತಿ ಅಖಾಡಕ್ಕಿಳಿಯುವ ಜಟ್ಟಿಗಳು ಬಲಗೈಗೆ ಪರಂಪರಾನುಗತವಾಗಿ ಬಂದಿರುವ ವಜ್ರನಖ ಎಂಬ ಆಯುದವನ್ನು ದರಿಸಿ, ಎಡಗೈಯನ್ನು ಬಟ್ಟೆಯಲ್ಲಿ ಕಟ್ಟಿಕೊಂಡು ಅಖಾಡದಲ್ಲಿ ಎದುರು ಬದುರಾಗುತ್ತಾರೆ. ಎದುರಾಳಿಯ ನೆತ್ತಿಗೆ ಬಲವಾಗಿ ಹೊಡೆದು ಯಾರು ಮೊದಲು ನೆತ್ತರು ಕೆಡುವುತ್ತಾರೆ ಅವರು ಗೆದ್ದಂತೆ. ಇನ್ನು ವಜ್ರಮುಷ್ಟಿ ಕಾಳಗದಲ್ಲಿ ದರಿಸುವ ವಜ್ರನಖವನ್ನು ಆನೆಯ ದಂತ ಅಥವಾ ಸಾರಂಗದ ಕೊಂಬಿನಿಂದ ಮಾಡಿರುತ್ತಾರೆ. ಈ ಆಯುಧವನ್ನು ಕುಲದೇವಿಯೇ ದುಷ್ಟ ಶಿಕ್ಷಣೆಗಾಗಿ ನೀಡಿದ್ದಾಳೆ ಎಂಬುದು ಜಟ್ಟಿಗಳ ನಂಬಿಕೆಯಾಗಿದೆ.
ಕುಸ್ತಿ ಪಟುಗಳಾಗಿದ್ದ ಹಾಗೂ ಕುಸ್ತಿ ಕಲೆಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಮೈಸೂರು ಮಹಾರಾಜರು ಈ ಸಾಹಸ ಕಲೆಗೆ ವಿಶೇಷ ಮಾನ್ಯತೆ ನೀಡಿದ್ದಾರೆ. ಅರಮನೆಯ ಒಳಭಾಗದಲ್ಲಿರುವ ಕರಿಕಲ್ಲು ತೊಟ್ಟಿ ಅಖಾಡದಲ್ಲಿ ನಡೆಯುವ ಈ ಕುಸ್ತಿಗೆ ಖುದ್ದು ಮೈಸೂರು ಅರಸರೇ ನಿಂತು ಚಾಲನೆ ನೀಡುತ್ತಾರೆ. ಅರಮನೆಯ ಮೊದಲ ಮಹಡಿಯಲ್ಲಿ ನಿಂತು ಮಹಾರಾಜರು ಚಾಲನೆ ನೀಡಿದ ಬಳಿಕ ಅಖಾಡ ಆರಂಭಗೊಳ್ಳುತ್ತದೆ. ಜಟ್ಟಿಗಳ ನೆತ್ತರು ನೆಲಕ್ಕೆ ಬಿದ್ದರೆ ನಾಡಿಗೆ ಶುಭಸೂಚಕ ಎಂಬುದು ಹಿಂದಿನಿಂದ ನಡೆದುಕೊಂಡು ಬಂದಿರುವ ನಂಬಿಕೆ.


ವಜ್ರಮುಷ್ಟಿ ಕಾಳಗದಲ್ಲಿ ಪಾಲ್ಗೊಳ್ಳುವ ಜಟ್ಟಿಗಳ ಆಯ್ಕೆಯನ್ನು ಗರಡಿ ಮನೆಯ ಹಿರಿಯ ಉಸ್ತಾದ್‍ಗಳು ಸಭೆ ನಡೆಸಿ 6 ತಿಂಗಳ ಹಿಂದೆಯೇ ಆಯ್ಕೆಮಾಡುತ್ತಾರೆ. 6 ತಿಂಗಳುಗಳ ಕಾಳ ತಾಲೀಮುನಡೆಸಿ ತಯಾರಿ ನಡೆಸುವ ಜಟ್ಟಿಗಳು, ನವರಾತ್ರಿ ಆರಂಭಗೊಳ್ಳುತ್ತಿದ್ದಂತೆ ಊಟ, ಹಾಗೂ ದೈನಂದಿನ ಚಟುವಟಿಕೆಯಲ್ಲಿ ಹಲವಾರು ಕಟ್ಟುನಿಟ್ಟಿನ ಪದ್ದತಿಯನ್ನು ಆಚರಿಸಿ ಅಖಾಡಕ್ಕೆ ಅಣಿಗೊಳ್ಳುತ್ತಾರೆ. ಎಲ್ಲಾ ತಯಾರಿ ಹಿರಿಯ ಉಸ್ತಾದ್‍ಗಳ ಮಾರ್ಗದರ್ಶನಲ್ಲಿ ನಡೆಯಲಿದೆ.

15 ಸೆಕೆಂಡ್ ಗಳಲ್ಲೇ ಮುಗಿದ ಜಟ್ಟಿ ಕಾಳಗ

ಮೈಸೂರು: ಸಂಪ್ರದಾಯದಂತೆ ಅಂಬಾವಿಲಾಸ ಅರಮನೆಯಲ್ಲಿ ಅಕ್ಟೋಬರ್ 5 ರ ಬುಧವಾರದಂದು ನಡೆದ ಪಾರಂಪರಿಕ ವಜ್ರಮುಷ್ಠಿ ಕಾಳಗ ಮೈ ನವಿರೇಳುವಂತೆ ಮಾಡಿತು. ಕಾತುರದಿಂದ ಗಂಟೆಗಟ್ಟಲೆ ಕಾದು ಕುಳಿತಿದ್ದವರಿಗೆ ಕಾಳಗವನ್ನು ಕಣ್ತುಂಬಿಕೊಂಡಿದ್ದು 15 ಸೆಕೆಂಡ್ ಮಾತ್ರ !

ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪಟ್ಟದ ಕತ್ತಿಗೆ ಪೂಜೆ ಸಲ್ಲಿಸಿದ ಕೂಡಲೇ ಕಾಳಗ ಪ್ರಾರಂಭಗೊಂಡಿತು.
ಚನ್ನಪಟ್ಟಣದ ಉಸ್ತಾದ್ ಪುರುಷೋತ್ತಮ್ ಜಟ್ಟಿ ಶಿಷ್ಯ ಮನೋಜ್ ಜಟ್ಟಿ ದುರಾಳಿ ಚಾಮರಾಜನಗರದ ಉಸ್ತಾದ್ ಬಂಗಾರ ಜಟ್ಟಿ ಶಿಷ್ಯ ಅಚ್ಯುತ್ ಜಟ್ಟಿಯ ತಲೆಭಾಗಕ್ಕೆ ವಜ್ರನಖ ದಿಂದ ಹೊಡೆದು ಕ್ಷಣಾರ್ಧದಲ್ಲೇ ರಕ್ತ ಚಿಮ್ಮಿಸುವ ಮೂಲಕ ಮುಕ್ತಾಯಗೊಂಡಿತು.

ಈ ಬಾರಿ ಮೈಸೂರಿನ ಉಸ್ತಾದ್ ಟೈಗರ್ ಬಾಲಾಜಿ ಅವರ ಮಗ ಮೈಸೂರಿನ ವಿಷ್ಣು ಜಟ್ಟಿ ಮತ್ತು ಬೆಂಗಳೂರಿನ ಉಸ್ತಾದ್ ಕೃಷ್ಣ ಶೆಟ್ಟಿ ಶಿಷ್ಯ ತಾರಾನಾಥ ಜೆಟ್ಟಿ ನಡುವೆ ಕಾಳಗ ನಡೆಯಿತು. ಎರಡನೇ ಜೋಡಿಯಾಗಿ ಚಾಮರಾಜನಗರದ ಉಸ್ತಾದ್ ಬಂಗಾರ ಜಟ್ಟಿ ಶಿಷ್ಯ ಅಚ್ಯುತ್ ಜಟ್ಟಿ ಮತ್ತು ಚನ್ನಪಟ್ಟಣದ ಉಸ್ತಾದ್ ಪುರುಷೋತ್ತಮ್ ಜಟ್ಟಿ ಶಿಷ್ಯ ಮನೋಹರ ಜಟ್ಟಿ ನಡುವೆ ಕಾಳಗ ಜರುಗಿತು.ಇದಕ್ಕೂ ಮೊದಲು ನಿಂಬುಜಾದೇವಿ ದೇವಸ್ಥಾನದ ಬಳಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಜಟ್ಟಿಗಳನ್ನು ಕರೆ ತರಲಾಯಿತು. ಜಟ್ಟಿ ಕಾಳಗ ನಡೆಯುವಾಗ ರಾಜಮನೆತನದ ಕುಟುಂಬದವರು ಹಾಜರಿದ್ದು ವೀಕ್ಷಿಸಿದರು.

“ಹಾಯ್ ರಾಮನಗರ” ಫೇಸ್‌ಬುಕ್ ಪುಟವನ್ನು ಫಾಲೋ ಮಾಡಿ :

https://www.facebook.com/HaiRamanagara

Leave a Reply

Your email address will not be published. Required fields are marked *