ಕೂಟಗಲ್ : ಕುವೆಂಪು ಕಲಾಮಂದಿರ ಲೋಕಾರ್ಪಣೆ

ರಾಮನಗರ : ಆಧುನಿಕತೆಗೆ ತಕ್ಕಂತೆ ಶಿಕ್ಷಣ ನೀತಿಯಲ್ಲಿ ಬದಲಾವಣೆ ತರುವುದರ ಜತೆಗೆ ಮಕ್ಕಳು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವಂತಹ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲೂಕಿನ ಕೂಟಗಲ್ ಗ್ರಾಮದಲ್ಲಿ ಕಣ್ವ ಗ್ರಾಮಾಂತರ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಸಂಸ್ಥೆಯ ಸುವರ್ಣ ಮಹೋತ್ಸವದ ಅಂಗವಾಗಿ ನಿರ್ಮಿಸಿರುವ ಕುವೆಂಪು ಕಲಾಮಂದಿರವನ್ನು ಲೋಕಾರ್ಪಣೆ ಮಾಡಿ ಶ್ರೀಗಳು ಮಾತನಾಡಿದರು.

ಹಿಂದಿನ ಶಿಕ್ಷಣ ಪದ್ಧತಿಯಲ್ಲಿ ಮಕ್ಕಳು ಅಪಾರ ಜ್ಞಾನ, ವಿನಯ, ಸಂಸ್ಕಾರಗಳಂತಹ ಮಾನವೀಯ ಮೌಲ್ಯಗಳಂತಹ ಹಲವು ವಿಚಾರಗಳನ್ನು ಮೈಗೂಡಿಸಿಕೊಂಡು ಹೊರ

ಬರುತ್ತಿದ್ದರು. ಆದರೆ, ಇಂದಿನ ಶಿಕ್ಷಣ ವ್ಯವಸ್ಥೆಯೇ ಬೇರೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಆಧುನಿಕ ಯುಗದಲ್ಲಿ ಬದುಕುತ್ತಿರುವ ಎಲ್ಲರಿಗೂ ಒಳ್ಳೆಯ ಚಿಂತನೆಯ ಅಗತ್ಯವಿದೆ. ಆ ದಾರಿಯಲ್ಲಿ ಸಾಗಬೇಕಾದರೆ ಶಿಕ್ಷಣ ಬಹಳ ಮುಖ್ಯ. ಅಕ್ಷರ ಜ್ಞಾನವಿಲ್ಲದ ನಮ್ಮ ಪೂರ್ವಜರಿಗೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂಬ ಬದ್ಧತೆಯಿತ್ತು. ಆದ್ದರಿಂದಲೇ ಉತ್ತಮ ಶಿಕ್ಷಣ ನೀಡುವ ಜ್ಞಾನ ದೇಗುಲಗಳನ್ನು ನಿರ್ಮಾಣ ಮಾಡುತ್ತಿದ್ದರು. ಇದರ ಪರಿಣಾಮ ವಿದೇಶದಲ್ಲಿ  ನಮ್ಮ ಮಕ್ಕಳಿಗೆ ಪೈಪೋಟಿ ನೀಡುವಲ್ಲಿ ಅಲ್ಲಿನ ಮಕ್ಕಳು ಸೋತಿದ್ದಾರೆ ಎಂದು ಹೇಳಿದರು.

ಕಣ್ವ ಮಹರ್ಷಿಗಳು ಸಂಚರಿಸಿದ ಪುಣ್ಯಸ್ಥಳವಾಗಿರುವ ಕೂಟಗಲï ಗ್ರಾಮದಲ್ಲಿ  ಕಣ್ವ ಗ್ರಾಮಾಂತರ ವಿದ್ಯಾಸಂಸ್ಥೆ ಉತ್ತಮ ಶಿಕ್ಷಣ ನೀಡಿದ್ದರಿಂದ ಹಲವು ಕ್ಷೇತ್ರಗಳಲ್ಲಿ ಸಾಧಕರು ಸೃಷ್ಟಿಯಾಗಿ ಸಾಧನೆ ಮಾಡಲು ಸಾಧ್ಯವಾಯಿತು. ಅಲ್ಲದೆ, ಓದಿದ ಶಾಲೆಗೆ ವಿಶ್ವ ಮಾನವ ಕುವೆಂಪು ಅವರ ಹೆಸರಿನಲ್ಲಿ ಕಲಾ ರಂಗಮಂದಿರ ನಿರ್ಮಿಸಿ ಶಾಲೆಗೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.  

ಪಂಡಿತ್ ಜವಹರಲಾಲ್ ನೆಹರೂ ಮಾತಿನಂತೆ ಇಡೀ ಜಗತ್ತು ಭಾರತದ ಅಭಿವೃದ್ದಿಯನ್ನು ನೋಡಿ ವಿಸ್ಮಯಗೊಳ್ಳುತ್ತದೆ ಎಂದಿದ್ದ ಮಾತು ಗ್ರಾಮೀಣ ಭಾಗದ ಈ ಶಿಕ್ಷಣ ಸಂಸ್ಥೆಗೆ ಅನ್ವಯವಾಗುತ್ತದೆ. ಇದಕ್ಕೆ ಕಾರಣರಾದ ಶಾಲೆಯ ಸಂಸ್ಥಾಪಕರೆಲ್ಲರನ್ನು ನೆನಪಿಸಿಕೊಂಡಾಗ ಮಾತ್ರ ಈ ಕಾರ್ಯಕ್ರಮ ಸಾರ್ಥಕವಾಗಲಿದೆ ಎಂದು ಶ್ರೀಗಳು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎ.ಮಂಜುನಾಥ್, ವಿದ್ಯೆ ಮನುಷ್ಯನಿಗೆ ಬುದ್ಧಿ ಮತ್ತು ಸಂಸ್ಕಾರವನ್ನು ಕಲಿಸುತ್ತದೆ. ಆದರೀಗ ಸಾಂದರ್ಭಿಕ ಶಿಕ್ಷಣ ಮಾತ್ರ ನೀಡಲಾಗುತ್ತಿದೆ. ಮಕ್ಕಳನ್ನು ಗಟ್ಟಿಗೊಳಿಸುವ ಕೆಲಸ ಶಿಕ್ಷಣದಿಂದ ಆಗುತ್ತಿಲ್ಲ. ಕಾಲಕ್ಕೆ ತಕ್ಕಂತೆ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯವಿದೆ ಎಂದರು.

ಯಾರೂ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಮಕ್ಕಳಿಗೆ ಕಡ್ಡಾಯ ಶಿಕ್ಷಣ, ಶಿಕ್ಷಣ ಹಕ್ಕು ಕಾಯ್ದೆಗಳು ಜಾರಿಯಾಗಿವೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಪಂಚಾಯಿತಿಗೊಂದು ಮಾದರಿ ಶಾಲೆ ತೆರೆಯಲಾಗುತ್ತಿದ್ದು, ಇದಕ್ಕೆ ಪೋಷಕರು ವಿನಾಃ ಕಾರಣ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಅಂದು ಅಕ್ಷರ ಕಲಿಸುವ ಉದ್ದೇಶದಿಂದ ದೂರಾಲೋಚನೆ ಇಟ್ಟುಕೊಂಡು ಶಿಕ್ಷಣ ಸಂಸ್ಥೆ ಸ್ಥಾಪನೆ ಮಾಡುತ್ತಿದ್ದರು. ಇಂದು ಹಣ ಗಳಿಸುವ ದುರಾಲೋಚನೆಯಿಂದ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲಾಗುತ್ತಿದೆ. ಹಳೇಯ ಶಿಕ್ಷಣ ಸಂಸ್ಥೆಗಳು ಕಾಲಕ್ಕೆ ತಕ್ಕಂತೆ ಬದಲಾಗಬೇಕು ಎಂದು ಸಲಹೆ ನೀಡಿದರು.

ಈ ಹಿಂದೆ ಜನರಲ್ಲಿ ವಿದ್ಯೆ ಇರಲಿಲ್ಲ. ಆದರೆ, ಮಾನವೀಯತೆ, ಪ್ರೀತಿ ವಿಶ್ವಾಸ, ಮನುಷ್ಯತ್ವ ಇತ್ತು. ಆದರಿಂದು ವಿದ್ಯೆ ಪಡೆದವರಲ್ಲಿ ಅದ್ಯಾವ ಗುಣಗಳು ಇಲ್ಲ. ಈಗಿನ ಶಿಕ್ಷಣ ವ್ಯಾಪಾರೀಕರಣಗೊಂಡು ಕೇವಲ ಹೊಟ್ಟೆಪಾಡಿಗಷ್ಟೇ ಸೀಮಿತವಾಗಿದೆ. ಮಾನವೀಯತೆ ಮತ್ತು ಮನುಷ್ಯತ್ವವನ್ನು ಕಲಿಸಿಕೊಡುವುದೇ ನಿಜವಾದ ಶಿಕ್ಷಣ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಸಾಹಿತಿ ಪ್ರೊ. ಕೃಷ್ಣೇಗೌಡ, ಮೊದಲು ಪೋಷಕರು ಮಕ್ಕಳಿಗೆ ಶಿಕ್ಷಣ ಕೊಡಿಸುವ ವಾತಾವರಣ ನಿರ್ಮಾಣವಾಗಬೇಕಾದರೆ ಬಹಳ ವರ್ಷಗಳೇ ಬೇಕಾಯಿತು. ಈಗಿನದು ಅಕ್ಷರ ಪ್ರಪಂಚ. ಅನಕ್ಷರಸ್ಥರಲ್ಲಿದ್ದ  ಜ್ಞಾನ ನಮಗೆ ಇಂದಿಗೂ ಸ್ಪೂರ್ತಿಯಾಗಿದೆ. ಶಾಲೆ ಕಲಿಯುವ ಜಾಗವಾಗಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸಹ ಕಲಿಯಬೇಕಿದೆ ಎಂದರು.

ಚಿತ್ರನಟ ಕೋಮಲ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಯರೇಹಳ್ಳಿ ಮಂಜು, ತಾಪಂ ಮಾಜಿ ಅಧ್ಯಕ್ಷ ಎಸ್.ಪಿ. ಜಗದೀಶ್, ಶಾಲೆಯ ಮುಖ್ಯೋಪಾಧ್ಯಾಯ ಕರಡೀಗೌಡ, ಕಣ್ವ ವಿದ್ಯಾಸಂಸ್ಥೆಯ ಅಧ್ಯಕ್ಷ ಸಿ. ಹನುಮೇಗೌಡ, ಉಪಾಧ್ಯಕ್ಷ ಎಸ್. ನಾಗರಾಜು, ಕಾರ್ಯದರ್ಶಿ ಶಿವಲಿಂಗಯ್ಯ, ಖಜಾಂಚಿ ದೇವರಾಜು ನಿರ್ದೇಶಕರಾದ ಪಂಚಾಕ್ಷರಿ, ಪರಮಶಿವಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹುಲ್ಲೂರಮ್ಮ, ಉಪಾಧ್ಯಕ್ಷ ರವಿ, ಸದಸ್ಯರಾದ ಭಾಗ್ಯನಟರಾಜು, ಜಗದೀಶ್, ಸವಿತಾ, ಮಂಚೇಗೌಡ, ಎಂಪಿಸಿಎಸ್ ಅಧ್ಯಕ್ಷ ಅಶೋಕ್, ಜೆಡಿಎಸ್ ಮುಖಂಡ ಅಜಯ್  ದೇವೇಗೌಡ ಇತರರು ಪಾಲ್ಗೊಂಡಿದ್ದರು.

ಕಾರ್ಯಕ್ರಮಕ್ಕೂ ಮುನ್ನಾ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ. ನಿರ್ಮಲಾನಂದ ಸ್ವಾಮೀಜಿ ಅವರನ್ನು ವಿವಿಧ ಜನಪದ ಕಲಾತಂಡಗಳೊಂದಿಗೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ವೇದಿಕೆ ಕಾರ್ಯಕ್ರಮದ ನಂತರ ಶ್ರೀ ಕೃಷ್ಣ ಸಂಧಾನ ನಗೆನಾಟಕ, ಗೀತಗಾಯನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

“ಹಾಯ್ ರಾಮನಗರ” ಫೇಸ್‌ಬುಕ್ ಪುಟವನ್ನು ಫಾಲೋ ಮಾಡಿ :

https://www.facebook.com/HaiRamanagara

“ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ :

https://chat.whatsapp.com/HK9U7zQD11W79PK8sGwVCS

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :

WhatsApp : 9880439669

Mail : hairamanagara.news@gmail.com

“ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ವಿಭಾಗಕ್ಕೆ ವ್ಯಕ್ತಿ ಪರಿಚಯ, ಸುದ್ದಿ ಚಿತ್ರಗಳು, ಲೇಖನಗಳು, ಪುಸ್ತಕ ವಿಮರ್ಶೆ, ಕುಂದುಕೊರತೆ, ಸಿನೆಮಾ ವಿಮರ್ಶೆ, ನಾಟಕ ವಿಮರ್ಶೆ, ಕತೆ, ಕವನ, ವರದಿ ಮೊದಲಾದ ವಿಷಯ ವೈವಿಧ್ಯಗಳನ್ನು ಕಳಿಸಲು ವ್ಯಾಟ್ಸ್ ಪ್ ಅಥವಾ ಮೇಲ್ ಮಾಡಿ.

WhatsApp : 9880439669

Mail : hairamanagara.news@gmail.com

Leave a Reply

Your email address will not be published. Required fields are marked *