ಕೆಂಪಯ್ಯನಪಾಳ್ಯ ಇಡೀ ಗ್ರಾಮಕ್ಕೆ 94 ಸಿ ಅಡಿಯಲ್ಲಿ ಹಕ್ಕು ಪತ್ರ ವಿತರಣೆ : ಶಾಸಕ ಎ. ಮಂಜುನಾಥ್

ರಾಮನಗರ : ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಪಯ್ಯನಪಾಳ್ಯ ಇಡೀ ಗ್ರಾಮಕ್ಕೆ 94 ಸಿ ಅಡಿಯಲ್ಲಿ ಹಕ್ಕುಪತ್ರ ವಿತರಣೆ ಮತ್ತು ಇ-ಖಾತೆ ಮಾಡಿಸಿಕೊಡುವ ಮೂಲಕ ಶಾಶ್ವತವಾದ ಕೆಲಸ ಮಾಡಲಾಗಿದೆ ಎಂದು ಮಾಗಡಿ ಕ್ಷೇತ್ರ ಶಾಸಕ ಎ. ಮಂಜುನಾಥ್ ತಿಳಿಸಿದರು.

ಬಿಡದಿ ಪುರಸಭಾ ವ್ಯಾಪ್ತಿಯ ವಾರ್ಡ್ 22ರ ಇಟ್ಟಮಡು ಗ್ರಾಮದಲ್ಲಿ 30 ಲಕ್ಷ ರುಪಾಯಿ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಕೆಂಪಯ್ಯನಪಾಳ್ಯ ಗ್ರಾಮದ ಜನರು ನೂರಾರು ವರ್ಷಗಳಿಂದ ವಾಸಿಸುವ ಜಾಗಕ್ಕೆ ದಾಖಲೆ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದರು. ಇಡೀ ಗ್ರಾಮಕ್ಕೆ ಯಾವುದೇ ದಾಖಲೆಯಿಲ್ಲದೆ ಬೇಚಾರು ಗ್ರಾಮವಾಗಿತ್ತು. ಗ್ರಾಮದ 18 ಪಲಾನುಭವಿಗಳಿಗೆ 94 ಸಿ ಹಕ್ಕು ಪತ್ರಗಳನ್ನು ವಿತರಿಸಿದ್ದು, 41 ಪಲಾನುಭವಿಗಳಿಗೆ ಇ-ಖಾತೆ ಮಾಡಿಸಿಕೊಡುವ ಮೂಲಕ ಸಮಸ್ಯೆ ಬಗೆಹರಿಸಲಾಗಿದೆ. ಇದರಿಂದ ಪಂಚಾಯಿತಿಗೆ ಕಂದಾಯ ಪಾವತಿ ಮತ್ತು ಬ್ಯಾಂಕಿನೊಂದಿಗೆ ವ್ಯವಹಾರ ಮಾಡಬಹುದಾಗಿದೆ. ಇನ್ನುಳಿದವರಿಗೂ ಸಹ ಶೀಘ್ರವಾಗಿ ಹಕ್ಕುಪತ್ರ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

ನಾನು ನಿರಂತರವಾಗಿ ಕ್ಷೇತ್ರದ ಅಭಿವೃದ್ಧಿಯ ಕನಸ್ಸನ್ನು ನನಸು ಮಾಡುವುದರ ಜತೆಗೆ ಸಾರ್ವಜನಿಕರ ಆರೋಗ್ಯ ಸೇವೆಗೆ ಶ್ರಮಿಸುತ್ತಿದ್ದೇನೆ. ಹೊಸೂರು ಗ್ರಾಮದಲ್ಲಿ ಸಾರ್ವಜನಿಕರಿಗೆ ಕಣ್ಣಿನ ತಪಾಸಣೆ ನಡೆಸಿ ಅವಶ್ಯಕತೆಯಿದ್ದ 50 ಜನರಿಗೆ  ಉಚಿತವಾಗಿ ಎ.ಮಂಜು ಚಾರಿಟಬಲ್ ಟ್ರಸ್ಟ್ ವತಿಯಿಂದ ಕನ್ನಡಕಗಳನ್ನು ವಿತರಣೆ ಮಾಡಿದ್ದೇನೆ ಎಂದು ತಿಳಿಸಿದರು.

ಪುರಸಭೆ ವ್ಯಾಪ್ತಿಯ ತಿಮ್ಮೇಗೌಡನದೊಡ್ಡಿ ಗ್ರಾಮದಲ್ಲಿ ಕೋಕೋ ಕೋಲಾ ಕಂಪನಿ ವತಿಯಿಂದ 12 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿರುವ ಅಂಗನವಾಡಿ ಕೇಂದ್ರವನ್ನು ಲೋಕಾರ್ಪಣೆ ಮಾಡಿದ್ದೇನೆ. ಕಾವೇರಿ ನೀರಾವರಿ ನಿಗಮದ ವತಿಯಿಂದ ಎಸ್‍ಎಫ್ ಸಿ ಯೋಜನೆಯಡಿ ಇಟ್ಟಮಡು ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗುವುದು. ಇದು ಈ ಭಾಗದ ಜನರ ಬಹುದಿನಗಳ ಕನಸು. ಗುತ್ತಿಗೆದಾರರು ಗುಣಮಟ್ಟದ ರಸ್ತೆ ನಿರ್ಮಿಸುವಂತೆ  ಸೂಚನೆ ನೀಡಿರುವುದಾಗಿ ಮಂಜುನಾಥ್  ತಿಳಿಸಿದರು.

ಶಾಸಕರು ಕಂಚುಗಾರನಹಳ್ಳಿ, ಇಟ್ಟಮಡು, ಹೊಸೂರು ಗ್ರಾಮಗಳಲ್ಲಿನ ಕಾರ್ಯಕ್ರಮಗಳ ನಡುವೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಲಾಗುವುದು ಎಂದು ಭರವಸೆ ನೀಡುವ ಮೂಲಕ ಸಾರ್ವಜನಿಕರ ಅಹವಾಲಿಗೆ ಧ್ವನಿಯಾದರು.

ಈ ವೇಳೆ ಜಿಪಂ ಮಾಜಿ ಸದಸ್ಯ ಎಚ್.ಎಲ್. ಚಂದ್ರು, ಬಿಡದಿ ಪುರಸಭೆ ಸದಸ್ಯರಾದ ಭಾನುಪ್ರಿಯ, ದೇವರಾಜು, ಮುಖ್ಯಾಧಿಕಾರಿ ಅಮರನಾಥ್, ಕಂಚುಗಾರನಹಳ್ಳಿ ಗ್ರಾಪಂ ಉಪಾಧ್ಯಕೆ ಭಾರತಿ ಚನ್ನಕೇಶವರೆಡ್ಡಿ, ಪಿಡಿಒ ಮಂಜುನಾಥ್, ಕಾರ್ಯದರ್ಶಿ ದೇವರಾಜು, ಬೈರಮಂಗಲ ಪಿಎಸಿಎಂಎಸ್ ಮಾಜಿ ಅಧ್ಯಕ್ಷ ಸಿದ್ದರಾಜು, ಆರ್ ಎಸ್‍ಎಬಿಎನ್ ಮಾಜಿ ಅಧ್ಯಕ್ಷರಾದ ನರಸಿಂಹಯ್ಯ, ಚಂದ್ರಶೇಖರ್  , ಮುಖಂಡರಾದ ಇಟ್ಟಮಡು ಸೋಮಣ್ಣ, ಪುಟ್ಟಣ್ಣ, ಗೋಪಾಲ್, ಕೃಷ್ಣಮೂರ್ತಿ ಕಂಚುಗಾರನಹಳ್ಳಿ ಗ್ರಾಪಂ ಸದಸ್ಯರಾದ ಶಿವರಾಮು, ಶಿವಕುಮಾರ್  , ಹರೀಶ್  ಕುಮಾರ್  ಮತ್ತಿತರರು ಹಾಜರಿದ್ದರು.

“ಹಾಯ್ ರಾಮನಗರ” ಫೇಸ್‌ಬುಕ್ ಪುಟವನ್ನು ಫಾಲೋ ಮಾಡಿ :

https://www.facebook.com/HaiRamanagara

“ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ :

https://chat.whatsapp.com/HK9U7zQD11W79PK8sGwVCS

Leave a Reply

Your email address will not be published. Required fields are marked *