ಸಮಸ್ಯೆಗಳ ಇತ್ಯರ್ಥಕ್ಕೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ : ಎ. ಮಂಜುನಾಥ್
ರಾಮನಗರ : ಜನರ ಬಳಿಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತೆರಳಿ ಹಲವು ವರ್ಷಗಳ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ವಿನೂತನ ಕಾರ್ಯಕ್ರಮ ನೆರವಾಗುತ್ತಿದೆ ಎಂದು ಶಾಸಕ ಎ.ಮಂಜುನಾಥ್ ಹೇಳಿದರು.
ಬಿಡದಿ ಹೋಬಳಿ ಬನ್ನಿಕುಪ್ಪೆ (ಬಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತ್ತರಾಯನಗುಡಿ ಪಾಳ್ಯದಲ್ಲಿ ಜಿಲ್ಲಾಡಳಿತ, ಕಂದಾಯ ಇಲಾಖೆ ವತಿಯಿಂದ ಶನಿವಾರ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾಗಡಿ ಕ್ಷೇತ್ರ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಸರ್ಕಾರದ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿದ್ದ ಸಾರ್ವಜನಿಕರ ಸ್ವತ್ತುಗಳಿಗೆ ಎಲ್ಲಿ ಹಕ್ಕಿರುವುದಿಲ್ಲವೋ ಅವರಿಗೆ ಹಕ್ಕನ್ನು ಕೊಡಿಸುವುದು ನಿಜವಾದ ಅಭಿವೃದ್ದಿ ಕಾರ್ಯ ಎಂದು ಭಾವಿಸಿದ್ದೇನೆ. ರಸ್ತೆ, ಚರಂಡಿ, ಡಾಂಬರು ಕೆಲಸ ಗಳನ್ನು ಮಾಡುವುದು ಅಷ್ಟೆ ಅಭಿವೃದ್ದಿ ಕೆಲಸವಲ್ಲ. ಈಗಾಗಲೇ ಗೋಪಳ್ಳಿ, ಕೆಂಪಯ್ಯನಪಾಳ್ಯ ಗ್ರಾಮದ ಜನರಿಗೆ ಹಕ್ಕುಪತ್ರ ವಿತರಿಸಲಾಗಿದೆ. ಬಿಡದಿ ಹೋಬಳಿಯ ರಾಮನಹಳ್ಳಿ, ಗೋಪಳ್ಳಿ ಗ್ರಾಮ ಹೊರತು ಪಡಿಸಿದರೆ ಇನ್ನುಳಿದ ಗ್ರಾಮಗಳ ರೈತರಿಗೆ ಸಾಗುವಳಿ ಹಕ್ಕುಪತ್ರ ವಿತರಿಸಲಾಗುತ್ತಿಲ್ಲ. ಈ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದು ಸಾಗುವಳಿ ಪತ್ರ ಮತ್ತು ನೈಸ್ ಸಂಸ್ಥೆ ಪಹಣಿ ಬರುತ್ತಿರುವ ಮನೆಗಳಿಗೆ ಹಕ್ಕುಪತ್ರ ನೀಡಲಾಗುವುದು. ಮುತ್ತರಾಯನಗುಡಿಪಾಳ್ಯದ ಜನರಿಗೆ ಮನೆ ಇಲ್ಲದವರಿಗೆ ಜಾಗ ಗುರ್ತಿಸಿದ್ದು ಅರ್ಹ ಪಲಾನುಭವಿಗಳಿಗೆ ನಿವೇಶನ ಕೊಡಲಾಗುವುದು. ಸಾರ್ವಜನಿ ಕರು ಈ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
1250 ಹಳ್ಳಿಗಳಿಗೆ 850 ಕೋಟಿ ವೆಚ್ಚದಲ್ಲಿ ಪ್ರತಿಮನೆಗಳಿಗೆ ನೀರು ಕುಡಿಯುವ ನೀರು ಪೂರೈಸುವ ಯೋಜನೆಗೆ ಹದಿನೈದು ದಿನಗಳಲ್ಲಿ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿಯವರನ್ನು ಕರೆಸಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಇದೇ ವೇಳೆ ಹೇಳಿದರು.
ತಹಸೀಲ್ದಾರ್ ಎಂ. ವಿಜಯ್ ಕುಮಾರ್ ಮಾತನಾಡಿ ಸಾರ್ವಜನಿಕರು ಮತ್ತು ಅಧಿಕಾರಿಗಳ ನಡುವೆ ಉತ್ತಮ ಸಾಮರಸ್ಯವಿದ್ದರೆ ಮಾದರಿ ಯಾಗಿ ಸಮಸ್ಯೆ ರಹಿತ ಗ್ತಾಮವಾಗಿ ಮಾಡಬಹುದು. ಶಾಸಕರ ಮಾರ್ಗದರ್ಶನ ಮತ್ತು ಸರ್ಕಾರದ ಆಶಯದಂತೆ ತಿಂಗಳ ಮೂರನೇ ಶನಿವಾರ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಹಲವು ಸಮಸ್ಯೆಗಳು ಬಗೆಹರಿಯುತ್ತಿವೆ ಎಂದರು.
ಇದುವರೆಗೆ ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿ ಕೊಂಡಿರುವ ಸುಮಾರು 800 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಇಂದು ಬಹಳ ಹಿಂದುಳಿದ ಜನ ವಾಸಿಸುತ್ತಿರುವ ಈ ಕಂದಾಯ ಗ್ರಾಮದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಎಲ್ಲ ಇಲಾಖಾ ಅಧಿಕಾರಿಗಳು ಹಾಜರಿದ್ದು, ನಿಮ್ಮಗಳ ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನ ಸೆಳೆಯಿರಿ, ಪಹಣಿ ತಿದ್ದುಪಡಿ, ಪೌತಿ ಖಾತೆ, ಸ್ಮಶಾನ, ಹಕ್ಕುಪತ್ರ, ನಕಾಶೆ ರಸ್ತೆ ಗಳಂತಹ ಹಲವು ಸಮಸ್ಯೆಗಳನ್ನು ಇತ್ಯರ್ಥ ಪಡಿಸುವ ಕೆಲಸ ಮಾಡಲಾಗುವುದು. ಈ ಗ್ರಾಮದ ಸುಮಾರು 103 ಕುಟುಂಬದ ಸ್ವತ್ತುಗಳಿಗೆ ಹಕ್ಕುಪತ್ರ ವಿತರಿಸಲಾಗುತ್ತಿದೆ. ಚೆಕ್ ಬಂದಿ ಸಮಸ್ಯೆ ಇದ್ದರೆ ಬಗೆಹರಿಸಿಕೊಡುವ ಜೊತೆಗೆ ಒಂದು ವಾರದೊಳಗೆ ಇ-ಖಾತೆಯನ್ನು ಮಾಡಿಕೊಡ ಲಾಗುವುದು ಎಂದರು.
ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ಪ್ರದೀಪ್ ಮಾತನಾಡಿ ಕೇವಲ ಕಂದಾಯ ಇಲಾಖೆ ಸಮಸ್ಯೆಗಳಿಗೆ ಮಾತ್ರ ಈ ಕಾರ್ಯಕ್ರಮ ಎಂಬುದನ್ನು ಅರ್ಥೈಸದೆ ವಿವಿಧ ಇಲಾಖೆಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ನೆರವಾಗಲಿದೆ. ಮನರೇಗಾ ಯೋಜನೆಯಡಿ ಸಮುದಾಯ, ವಯುಕ್ತಿಕ ಸವಲತ್ತುಗಳನ್ನು ಪಡೆಯಿರಿ ಎಂದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಸ್ವತ್ತು ಸಂಪೂರ್ಣ ವಾಗಿದ್ದು ಅದೇ ರೀತಿ ಅಂಗನವಾಡಿಗಳಿಗೆ ಇಸ್ವತ್ತು ಮಾಡಲು ಕ್ರಮ ವಹಿಸಲಾಗುವುದು. ಈ ಗ್ರಾಮದಲ್ಲಿ ಸ್ವಾಮಿತ್ವ ಕಾರ್ಯಕ್ರಮ ಸಹ ಪ್ರಾರಂಭಿಸಲಾಗುವುದು ಎಂದರು.
ತಾಲ್ಲೂಕು ಪ್ರಾಥಮಿಕ ಆರೋಗ್ಯ ಅಧಿಕಾರಿ ಶಶಿಕಲಾ ಮಾತನಾಡಿ ಇಂದು ವಿಶ್ವ ಕೈ ತೊಳೆಯುವ ದಿನವಾಗಿದ್ದು ಮುಖ್ಯವಾಗಿದ್ದು ಇಲಾಖಾ ಸಿಬ್ಬಂದಿಗಳು ಆರೋಗ್ಯ ತಪಾಸಣೆಯನ್ನು ಉಚಿತವಾಗಿ ಮಾಡಲಾಗುತ್ತಿದೆ. ಗರ್ಬಿಣಿ, ಬಾಣಂತಿಯರಿಗೆ ಪೌಷ್ಟಿಕ ಆಹಾರ ಪಡೆಯುವುದು, ಮಕ್ಕಳಿಗೆ ಸಕಾಲದಲ್ಲಿ ಲಸಿಕೆ ಪಡೆಯಬಹುದು. ಗ್ರಾಮದ ಶುಚಿತ್ವದಂತಹ ವಿಷಯಗಳನ್ನು ಅನುಸರಿಸುವ ಮೂಲಕ ಆರೋಗ್ಯ ಕಾಳಜಿಗೆ ಆದ್ಯತೆ ನೀಡಿದರೆ ಉತ್ತಮ ಆರೋಗ್ಯ ಪಡೆಯಬಹುದು ಎಂದು ಇಲಾಖಾ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕೈ ತೊಳೆಯುವ ದಿನದ ಅಂಗವಾಗಿ ಪ್ರತಿಜ್ಞಾವಿಧಿ ಭೋದಿಸಲಾಯಿತು. ಆರೋಗ್ಯ ಇಲಾಖೆ ಕೈ ತೊಳೆಯುವ ದಿನದ ಅಂಗವಾಗಿ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಬಿಡದಿ ಹೋಬಳಿಯಲ್ಲಿ ಮಳೆಹಾನಿಯಿಂದ ಮನೆ ಕಳೆದುಕೊಂಡ ಪಲಾನುಭವಿಗಳಿಗೆ ಶಾಸಕ ಎ. ಮಂಜುನಾಥ್ ಪರಿಹಾರ ಚೆಕ್‌ಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ನೋಡೆಲ್ ಅಧಿಕಾರಿ ಉಪ ವಿಭಾಗಾಧಿಕಾರಿ ಮಂಜುನಾಥ್, ಉಪ ತಹಸೀಲ್ದಾರ್ ಮಂಜುನಾಥ್, ಶಂಕರ್, ಬನ್ನಿಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮತಿನಾಗರಾಜು, ಉಪಾಧ್ಯಕ್ಷ ರೇವಣಸಿದ್ದಯ್ಯ, ಸದಸ್ಯರಾದ ಲಕ್ಷ್ಮಣ್, ಕೃಷ್ಣ, ಉದಯ್ ಕುಮಾರ್, ಹೊಂಬೇಗೌಡ, ಸಿಆರ್ ಪಿ ಚಿಕ್ಕವೀರಯ್ಯ ಮುಖಂಡರಾದ ರಂಗಸ್ವಾಮಿ, ಸೋಮೇಗೌಡ, ಪಿಡಿಓ ಕೃಷ್ಣಪ್ಪ, ಕಾರ್ಯದರ್ಶಿ ಯೋಗೇಶ್ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಇದ್ದರು.
“ಹಾಯ್ ರಾಮನಗರ” ಫೇಸ್‌ಬುಕ್ ಪುಟವನ್ನು ಫಾಲೋ ಮಾಡಿ :
https://www.facebook.com/HaiRamanagara
“ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ :