ರಾಮನಗರ ನಗರಸಭೆ ಅಧ್ಯಕ್ಷ ಸ್ಥಾನ : ಡಿ.ಕೆ. ಶಿವಕುಮಾರ್ ಭೇಟಿಯಾದ ಕೈ ನಾಯಕರು
ರಾಮನಗರ : ನಗರಸಭೆ ಅಧ್ಯಕ್ಷರ ಆಯ್ಕೆ ವಿಚಾರವಾಗಿ ನಡೆದಿರುವ ರಾಜಕೀಯ ಬೆಳವಣಿಗೆಯನ್ನು ಕಾಂಗ್ರೆಸ್ ನಾಯಕರ ಗುಂಪು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಮನವರಿಕೆ ಮಾಡಿಕೊಟ್ಟಿದೆ.
ಭಾರತ್ ಜೋಡೋ ಯಾತ್ರೆ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಉಳಿದುಕೊಂಡಿದ್ದ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ಕಾಂಗ್ರೆಸ್ ನಾಯಕರು ಪಕ್ಷದೊಳಗೆ ಭಿನ್ನಮತೀಯ ಚಟುವಟಿಕೆ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಪಕ್ಷಕ್ಕೆ ಮುಜುಗರ ಆಗುತ್ತದೆ ಎಂದು ಮನವಿ ಮಾಡಿದರು.
ನಗರಸಭೆಯ 13 ಮಂದಿ ಕಾಂಗ್ರೆಸ್ ಸದಸ್ಯರನ್ನು ಪ್ರವಾಸಕ್ಕೆ ಕರೆದೊಯ್ದಿರುವ ಮಾರ್ಗದರ್ಶಕನ ಪರವಾಗಿ ವಕಾಲತ್ತು ವಹಿಸಲು ಪ್ರಯತ್ನಿಸಿದ ಹಿರಿಯ ನಾಯಕರೊಬ್ಬರನ್ನು ಎಲ್ಲರ ಸಮ್ಮುಖದಲ್ಲಿಯೇ ಡಿ.ಕೆ. ಶಿವಕುಮಾರ್ ತರಾಟೆ ತೆಗೆದುಕೊಂಡರು ಎನ್ನಲಾಗಿದೆ.
ಅ.18ರಂದು ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಅ.17ರಂದು ಸಹೋದರ ಸಂಸದ ಡಿ.ಕೆ. ಸುರೇಶ್ ಅವರನ್ನು ರಾಮನಗರಕ್ಕೆ ಕಳುಹಿಸಿ ಕೊಡುತ್ತೇನೆ. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಸೂಕ್ತ ನಿರ್ಧಾರಕ್ಕೆ ಬರಲಾಗುವುದು. ಯಾರೂ ಪಕ್ಷ ವಿರೋಧಿ ಚಟುವಟಿಕೆಗೆ ಆಸ್ಪದ ನೀಡಬಾರದೆಂದು ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ನಾಯಕರಿಗೆ ತಾಕೀತು ಮಾಡಿದರು.
ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ, ಮಾಜಿ ಶಾಸಕ ಕೆ. ರಾಜು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸೈಯದ್ ಜಿಯಾವುಲ್ಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್, ಜಿಪಂ ಮಾಜಿ ಅಧ್ಯಕ್ಷ ಕೆ. ರಮೇಶ್ ಮತ್ತಿತರರು ಇದ್ದರು.
“ಹಾಯ್ ರಾಮನಗರ” ಫೇಸ್‌ಬುಕ್ ಪುಟವನ್ನು ಫಾಲೋ ಮಾಡಿ :
https://www.facebook.com/HaiRamanagara
“ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ :