ರಾಮನಗರ : ಮಳೆಯ ರುದ್ರನರ್ತನಕ್ಕೆ ಮತ್ತೊಮ್ಮೆ ನಲುಗಿದ ನಾಗರಿಕರು
ರಾಮನಗರ : ರುದ್ರನರ್ತನ ಪ್ರದರ್ಶಿಸಿದ ಮಳೆ ರಾಯ ಸೀರಹಳ್ಳ ಭಾಗದ ತಗ್ಗುಪ್ರದೇಶದಲ್ಲಿನ ಬಡಾವಣೆಗಳಲ್ಲಿ ಅವಾಂತರ ಸೃಷ್ಟಿಸಿದ್ದರಿಂದ ನಾಗರಿಕರು ನಲುಗಿ ಹೋಗಿದ್ದಾರೆ.
ಕಳೆದ ಆಗಸ್ಟ್ ತಿಂಗಳಲ್ಲಿ ಎರಡು ಬಾರಿ ಸುರಿದ ಮಹಾಮಳೆಯಿಂದಾಗಿ ನೀರು ಮನೆಗಳಿಗೆ ನುಗ್ಗಿತ್ತು. ಜನರು ಮನೆಗಳ ಮೇಲೆ ಏರಿ ಪ್ರಾಣ ಉಳಿಸಿಕೊಂಡಿದ್ದರು. ಕೆಸರು ತುಂಬಿದ್ದ ಮನೆಗಳನ್ನು ಸ್ವಚ್ಛಗೊಳಿಸಿ ಜೀವನ ಆರಂಭಿಸಿದ್ದ ಸಂತ್ರಸ್ತರಿಗೆ ಮಹಾಮಳೆ ಮತ್ತೊಮ್ಮೆ ಮನೆ ತೊರೆಯುವಂತೆ ಮಾಡಿದೆ.
ಸೀರಹಳ್ಳದ ತಗ್ಗು ಪ್ರದೇಶದಲ್ಲಿರುವ ಟಿಪ್ಪುನಗರ, ಅರ್ಕೇಶ್ವರ ನಗರ ಕಾಲೋನಿ, ಟ್ರೂಪ್ ಲೈನ್ , ಜಿಯಾವುಲ್ಲಾ ಬ್ಲಾಕ್ ಸೇರಿದಂತೆ ಹಲವು ಬಡಾವಣೆಗಳಿಗೆ ಮಳೆ ನೀರು ನುಗಿದ್ದು, ನೂರಾರು ಜನರು ಮನೆ – ಬದುಕು ಎರಡನ್ನು ಕಳೆದುಕೊಂಡು ನೊಂದು ಹೋಗಿದ್ದಾರೆ.
ನೆರೆ ಹಾವಳಿಗೆ ಕಾರಣವಾಗಿದ್ದ ಟಿಪ್ಪು ಶಾಲೆಯ ಬಳಿ ಸೀರಳ್ಳಕ್ಕೆ ದೊಡ್ಡ ಗಾತ್ರದ ಪೈಪುಗಳ ಮೇಲೆ ನಿರ್ಮಿಸಿದ್ದ ಸಂಪರ್ಕ ಸೇತುವೆಯನ್ನು ತೆರವುಗೊಳಿಸಿ ಹೊಸ ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. 47 ದಿನಗಳ ಕಾಲ ಬಿಡುವು ನೀಡಿದ್ದ ಮಳೆರಾಯ ಮತ್ತೊಮ್ಮೆ ತನ್ನ ಆರ್ಭಟ ಪ್ರದರ್ಶಿಸಿದ್ದಾನೆ.
ಕಳೆದ 3 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭಕ್ಷಿ ಕೆರೆಯಲ್ಲಿ ನೀರು ಸಂಗ್ರಹವಾಗದೆ ಹೊರಗೆ ರಭಸವಾಗಿ ಹರಿಯುತ್ತಿದೆ. ಟಿಪ್ಪು ನಗರದ ಮೂಲಕ ಹಾದು ಹೋಗಿರುವ ಸೀರಹಳ್ಳದಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿಯಲು ಆರಂಭಿಸಿದೆ.
ತಗ್ಗು ಪ್ರದೇಶದಲ್ಲಿದ್ದ ಟಿಪ್ಪು ನಗರ ಹಾಗೂ ಅರ್ಕೇಶ್ವರನಗರ ಬಡಾವಣೆಗಳು ಜಲಾವೃತಗೊಂಡಿದೆ. 4 ರಿಂದ 5 ಅಡಿ ಎತರಕ್ಕೆ ನೀರು ಹರಿದಿದ್ದು, ಅರ್ಕೇಶ್ವರ ಕಾಲೋನಿಯಲ್ಲಿನ ಸರ್ಕಾರಿ ಶಾಲೆ ಸೇರಿದಂತೆ ಸಾವಿರಾರು ಮನೆಗಳು ಜಲಾವೃತಗೊಂಡಿವೆ. ಬೈಕ್, ಕಾರುಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ. ಜನರು ಪ್ರಾಣದಿಂದ ಪಾರಾಗಲು ಮನೆ ತೊರೆದರೆ, ಎರಡು – ಮೂರು ಅಂತಸ್ತಿನ ಮನೆಯವರು ಆತಂಕದಲ್ಲಿ ಕಾಲ ಕಳೆದರು.
ಮನೆಯಲ್ಲಿದ್ದ ದಿನಬಳಕೆ ವಸ್ತುಗಳು ನೀರು ಪಾಲಾಗಿದ್ದು, ಲಕ್ಷಾಂತರ ರುಪಾಯಿ ನಷ್ಟವಾಗಿದೆ. ಇಲ್ಲಿರುವ ರೇಷ್ಮೆ ರೀಲಿಂಗ್ ಘಟಕಗಳಿಗೂ ನೀರು ನುಗ್ಗಿದೆ. ಮಣ್ಣು, ಕಲ್ಮಶ ಮಿಶ್ರಿತ ನೀರು ತುಂಬಿದ್ದರಿಂದ ರೇಷ್ಮೆ ನೂಲು ನಷ್ಟವಾಗಿದೆ.
ನೂರಾರು ಮನೆಗಳು, ರೇಷ್ಮೆ ರೀಲಿಂಗ್ ಹಾಗೂ ಅಂಗಡಿ ಮುಗ್ಗಟ್ಟುಗಳಿಗೆ ಮಳೆ ನೀರಿನ ಜತೆಗೆ ಕೆಸರು ತುಂಬಿದ್ದು, ಅದನ್ನು ಹೊರ ತೆಗೆಯಲು ಜನರು ಹರಸಾಹಸ ಪಡುತ್ತಿದ್ದಾರೆ. ಪೌರಕಾರ್ಮಿಕರು ಸ್ವಚ್ಚತಾ ಕಾರ್ಯದಲ್ಲಿ ತೊಡಗಿದ್ದಾರೆ.
ನೆರೆ ಸಂತ್ರಸ್ತರಿಂದ ತಹಸೀಲ್ದಾರ್ ಗೆ ತರಾಟೆ :
ಮಹಾಮಳೆ ಸೃಷ್ಟಿಸಿದ ಅವಾಂತರ ವೀಕ್ಷಿಸಲು ಅರ್ಕೇಶ್ವರ ನಗರ ಕಾಲೋನಿಗೆ ಭೇಟಿ ನೀಡಿದ ತಹಸೀಲ್ದಾರ್ ವಿಜಯಕುಮಾರ್ ಅವರನ್ನು ಸಂತ್ರಸ್ತರು ತರಾಟೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಅರ್ಕೇಶ್ವರ ನಗರ ಕಾಲೋನಿಗೆ ತಹಸೀಲ್ದಾರ್ ವಿಜಯಕುಮಾರ್ ಭೇಟಿ ನೀಡುತ್ತಿದ್ದಂತೆ ಸಂತ್ರಸ್ತರ ಜತೆಗೆ ಜನರು ವಾಗ್ವಾದಕ್ಕೆ ಇಳಿದು ಮೊದಲ ಮಲೆಯ ಸಂದರ್ಭದಲ್ಲಿನ ಪರಿಹಾರ ಇನ್ನೂ ಬಂದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಇದರಿಂದ ಗರಂ ಆದ ತಹಸೀಲ್ದಾರ್ , ಯಾರಿಗೆಲ್ಲ ಪರಿಹಾರ ಕೊಟ್ಟಿದ್ದೇವೆ ಎಂಬ ಪಟ್ಟಿ ಕೊಡುತ್ತೇನೆ. ಸುಮ್ಮನೆ ಏನೇನೊ ಹೇಳಬೇಡಿ ನನ್ನ ಸ್ಥಾನದಲ್ಲೂ ನಿಂತು ಯೋಚನೆ ಮಾಡಿ ಎಂದು ಸಮಜಾಯಿಷಿ ನೀಡಿದರು. ಆದರೂ ನಿವಾಸಿಗಳು ಸೂಕ್ತ ಪರಿಹಾರಕ್ಕೆ ಪಟ್ಟು ಹಿಡಿದರು.
“ಹಾಯ್ ರಾಮನಗರ” ಫೇಸ್‌ಬುಕ್ ಪುಟವನ್ನು ಫಾಲೋ ಮಾಡಿ :
https://www.facebook.com/HaiRamanagara
“ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ :