ವೈದ್ಯಕೀಯ, ಉನ್ನತ ಶಿಕ್ಷಣದಲ್ಲಿ ಸರ್ಕಾರಿ ನೌಕರರ ಮಕ್ಕಳಿಗೆ ಮೀಸಲಾತಿ ನೀಡಿ : ಸಿ.ಎಸ್. ಷಡಾಕ್ಷರಿ
ರಾಮನಗರ : ಸರ್ಕಾರಿ ನೌಕರರ ಮಕ್ಕಳಿಗೆ ವೈದ್ಯಕೀಯ, ಉನ್ನತ ಶಿಕ್ಷಣದಲ್ಲಿ ಶೇ. 10ರಷ್ಟು ಮೀಸಲಾತಿ ನೀಡುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ರಾಮನಗರ ಜಿಲ್ಲಾ ಸರ್ಕಾರಿ ನೌಕರರ ಸಂಘದಿಂದ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಸರ್ಕಾರಿ ನೌಕರರ ಸೇವಾರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಇದರಿಂದ ಮಕ್ಕಳು ಕಡಿಮೆ ವೆಚ್ಚದಲ್ಲಿ ಉನ್ನತ ವಿದ್ಯಾಭ್ಯಾಸ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ರಾಜ್ಯದಲ್ಲಿನ ಸರ್ಕಾರಿ ನೌಕರರ ಮಕ್ಕಳಿಗೆ ಉಚಿತವಾಗಿ ಯುಪಿಎಸ್‌ಸಿ ಹಾಗೂ ಕೆಪಿಎಸ್‌ಸಿ ಪರೀಕ್ಷಾ ತರಬೇತಿ ನೀಡಲಾಗುತ್ತದೆ. ಕೆಎಎಸ್ ಹಾಗೂ ಐಎಎಸ್‍ನಂತಹ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಪಡೆಯಲು ಸಾಕಷ್ಟು ಹಣ ವ್ಯಯಿಸಬೇಕಾಗಿದೆ ಎಂದರು.

ಇದನ್ನು ಮನಗಂಡು ಸರ್ಕಾರಿ ನೌಕರರ ಮಕ್ಕಳಿಗೆ ಸಂಘದಿಂದ ಉಚಿತವಾಗಿ ತರಬೇತಿ ನೀಡಲಾಗುತ್ತದೆ. ಸಂಘಟನೆಯ ಕಚೇರಿ ಆವರಣದಲ್ಲಿ ಸುಸಜ್ಜಿತವಾದ ಕಟ್ಟಡ ಹಾಗೂ ಗ್ರಂಥಾಲಯದ ವ್ಯವಸ್ಥೆ ಇದೆ. ಇವುಗಳನ್ನು ಸದ್ಬಳಕೆ ಮಾಡಿಕೊಂಡು ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.

ರಾಜ್ಯದಾದ್ಯಂತ ಈ ವರ್ಷ 10 ಸಾವಿರ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ನಗದು ಬಹುಮಾನ ವಿತರಣೆ ಮಾಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ 1 ಕೋಟಿ ರೂ.ಗೂ ಹೆಚ್ಚು ವೆಚ್ಚವಾಗುತ್ತಿದೆ ಎಂದು ತಿಳಿಸಿದರು.

ಶಾಸಕ ಎ. ಮಂಜುನಾಥ್ ಮಾತನಾಡಿ ಜನಪ್ರತಿನಿಧಿಗಳು ಹಾಗೂ ಸರ್ಕಾರಿ ನೌಕರರು ಉತ್ತಮ ರೀತಿಯಲ್ಲಿ ತಮ್ಮ ಕರ್ತವ್ಯ ನಿರ್ವಹಿಸಿದರೆ ಕ್ಷೇತ್ರ ಅಭಿವೃದ್ಧಿಯಾಗುತ್ತದೆ. ಸರ್ಕಾರಿ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಣೆ ಮಾಡಿದರೆ ಜನತೆಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಸಾರ್ವಜನಿಕರು ತಮ್ಮ ಕಷ್ಟಗಳನ್ನು ಅಧಿಕಾರಿಗಳ ಮುಂದೆ ಹೇಳಲು ಬಂದರೆ ಸಹನೆಯಿಂದ ವರ್ತಿಸಬೇಕು. ಅಧಿಕಾರಿಗಳ ಹೃದಯ ಶ್ರೀಮಂತಿಕೆಯಿಂದ ಸಾಕಷ್ಟು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಲು ಸಾಧ್ಯವಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಅ. ದೇವೇಗೌಡ ಮಾತನಾಡಿ ನಮ್ಮ ಸಂಸ್ಕೃತಿ, ಸಂಸ್ಕಾರ ಉಳಿಯಬೇಕು ಎಂದರೆ ಮಕ್ಕಳಿಗೆ ನಮ್ಮ ಮಾತೃಭಾಷೆಯಲ್ಲಿಯೇ ಶಿಕ್ಷಣ ಸಿಗಬೇಕು ಎಂದು ತಿಳಿಸಿದರು.
ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಸಂತೋಷ್ ಬಾಬು, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಟಿ.ಕೆ. ರಮೇಶ್, ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ಜಿ.ಎಲ್. ಪದ್ಮಾ, ತಹಶೀಲ್ದಾರ್ ಎಂ. ವಿಜಯಕುಮಾರ್ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜತೆಗೆ, ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಅಂಗವಿಕಲ ಮಕ್ಕಳನ್ನೂ ಸನ್ಮಾನಿಸಿದ್ದು ವಿಶೇಷವಾಗಿತ್ತು.
ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪಂಚಾಯಿತಿ ಸಿಇಒ ದಿಗ್ವಿಜಯ್ ಬೋಡ್ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಸಂತೋಷ್ ಬಾಬು, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ. ಸತೀಶ್, ರಾಜ್ಯ ಪರಿಷತ್ ಸದಸ್ಯ ಸುರೇಂದ್ರ, ಪದಾಧಿಕಾರಿಗಳಾದ ಟಿ. ನರಸಯ್ಯ, ಶಿವಸ್ವಾಮಿ, ಎಂ. ಕಾಂತರಾಜು, ಸತೀಶ್ ಪಾದ್ರಳ್ಳಿ, ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಎಂ.ಜಿ. ಶಿವರಾಮಯ್ಯ, ಎಚ್.ಎಸ್. ಚಂದ್ರಶೇಖರ, ಶಿವಲಿಂಗೇಗೌಡ ಇತರರು ಉಪಸ್ಥಿತರಿದ್ದರು.
“ಹಾಯ್ ರಾಮನಗರ” ಫೇಸ್‌ಬುಕ್ ಪುಟವನ್ನು ಫಾಲೋ ಮಾಡಿ :
https://www.facebook.com/HaiRamanagara
“ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ :