ಶಿವನೆ ಬಡವರಿಗೆ ಸಾವ ಕೊಡಬ್ಯಾಡ……

ಬಡವಾರು ಸತ್ತಾರೆ ಸುಡುವುದಕೆ ಸೌದಿಲ್ಲೋ
ಒಡಲ ಕಿಚ್ಚಲ್ಲಿ ಹೆಣಬೆಂದೊ / ಶಿವನೆ
ಬಡವರಿಗೆ ಸಾವ ಕೊಡಬ್ಯಾಡ…”

ರಾಮನಗರ : ನಿಧನರಾದವರಿಗೆ ಗೌರವಯುತವಾಗಿ ಅಂತ್ಯಸಂಸ್ಕಾರ ನೆರವೇರಿಸುವುದು ಎಲ್ಲ ಧರ್ಮಗಳಲ್ಲೂ ನಡೆದುಕೊಂಡು ಬಂದಿರುವ ಸಂಪ್ರದಾಯ.

ರಾಮನಗರ ಜಿಲ್ಲೆಯಲ್ಲಿ ಸಾಕಷ್ಟು ಸ್ಮಶಾನ ಭೂಮಿಗಳಿದ್ದರೂ ಮೂಲಸೌಕರ್ಯಗಳ ಕೊರತೆ ಇದೆ. ಜಾಗದ ವಿವಾದಗಳಿವೆ. ಒತ್ತುವರಿ ಆರೋಪಗಳಿವೆ. ಜಾತಿ, ಧರ್ಮಗಳ ಜನರಿಗೆ ಪ್ರತ್ಯೇಕ ಭೂಮಿ ಇದ್ದರೂ ಅವು ಸಮಪರ್ಕವಾಗಿಲ್ಲ. ಕೆಲವು ಜಾತಿಗಳ ಜನರು ಜಾಗಕ್ಕಾಗಿ ಇಂದಿಗೂ ಹೋರಾಟ ನಡೆಸುತ್ತಿದ್ದಾರೆ.

ರಾಮನಗರ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಸ್ಮಾಶನಕ್ಕೆ ಜಾಗವೇ ಇಲ್ಲ. ರಸ್ತೆ ಬದಿ, ಕೆರೆ–ಕಟ್ಟೆಗಳ ಅಂಗಳಗಳಲ್ಲಿಯೇ ಶವಸಂಸ್ಕಾರ ನಡೆಸುತ್ತಿದ್ದಾರೆ.

ಚನ್ನಪಟ್ಟಣದ ತಾಲ್ಲೂಕು ಕಚೇರಿ ಎದುರು ಶವ ಸಂಸ್ಕಾರ ನಡೆಸಲು ಗುಂಡಿ ತೋಡಲು ಮುಂದಾದ ಗ್ರಾಮದ ಯುವಕರು

ಪರಿಶಿಷ್ಟರ ಅಂತ್ಯ ಸಂಸ್ಕಾರಕ್ಕೆ ಸವರ್ಣೀಯರ ತಡೆ : ಚನ್ನಪಟ್ಟಣ ತಾಲ್ಲೂಕು ಕಚೇರಿ ಮುಂದೆ ಶವ ಇಟ್ಟು ಪ್ರತಿಭಟನೆ

ಚನ್ನಪಟ್ಟಣ ತಾಲ್ಲೂಕಿನ ಕೋಡಂಬಹಳ್ಳಿ ಗ್ರಾಮದಲ್ಲಿ ಸೋಮವಾರ ನಿಧನರಾದ ಪರಿಶಿಷ್ಟ ಜಾತಿಯ ಜಯಣ್ಣ (47) ಎಂಬುವರ ಅಂತ್ಯ ಸಂಸ್ಕಾರಕ್ಕೆ ಗ್ರಾಮದ ಕೆಲವು ಸವರ್ಣೀಯರು ಅವಕಾಶ ನೀಡಲಿಲ್ಲ ಎಂದು ಶವವನ್ನು ಚನ್ನಪಟ್ಟಣಕ್ಕೆ ಕೊಂಡೊಯ್ದ ಕುಟುಂಬದ ಸದಸ್ಯರು ಮತ್ತು ಪರಿಶಿಷ್ಟ ಸಮುದಾಯದವರು ತಾಲ್ಲೂಕು ಕಚೇರಿ ಎದುರು ಇಟ್ಟು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಮುದಾಯದ ಕೆಲವು ಯುವಕರು ಶವವನ್ನು ತಾಲ್ಲೂಕು ಕಚೇರಿಯ ಆವರಣದಲ್ಲೆ ಸಂಸ್ಕಾರ ಮಾಡಲು ಗುಂಡಿ ತೋಡಲು ಪ್ರಯತ್ನಿಸಿದರು. ಅವರನ್ನು ಪೊಲೀಸರು ತಡೆದರು.

ಅಧಿಕಾರಿಗಳ ಮನವೊಲಿಕೆಗೆ ಮಣಿಯದ ಕುಟುಂಬದ ಸದಸ್ಯರು ಮತ್ತು ಸಮುದಾಯ ಮುಖಂಡರು ರಾತ್ರಿಯಾದರೂ ಮೃತದೇಹವನ್ನು  ಚನ್ನಪಟ್ಟಣ ತಾಲ್ಲೂಕು ಕಚೇರಿ ಬಳಿಯಿಂದ ತೆರವುಗೊಳಿಸಲಿಲ್ಲ. ಪ್ರತ್ಯೇಕ ಸ್ಮಶಾನ ಜಾಗ ಸಿಗುವರೆಗೂ ಪ್ರತಿಭಟನೆ ವಾಪಸ್ ಪಡೆಯುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದರು.

ಚನ್ನಪಟ್ಟಣದ ತಹಶೀಲ್ದಾರ್ ಸ್ಮಶಾನದ ಜಾಗದ ಸರ್ವೆ ಮಾಡಿಸಿ, ಒತ್ತುವರಿ ತೆರವು ಮಾಡಿಸಬೇಕು. ಅಲ್ಲಿಯವರೆಗೆ ಶವ ತೆಗೆಯುವುದಿಲ್ಲ ಎಂದು ಅವರು ಪಟ್ಟು ಹಿಡಿದರು. ಸ್ಥಳಕ್ಕೆ ಬಂದ ತಹಶೀಲ್ದಾರ್ ಸುದರ್ಶನ್ ಒಂದು ದಿನದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರೂ ಪ್ರತಿಭಟನಕಾರರು ಪಟ್ಟು ಸಡಿಲಿಸಲಿಲ್ಲ.

ನಂತರ ಪೊಲೀಸರ ಜೊತೆ ಗ್ರಾಮದ ಸ್ಮಶಾನಕ್ಕೆ ತೆರಳಿದ ತಹಶೀಲ್ದಾರ್, ಸವರ್ಣಿಯರ ಜೊತೆ ಚರ್ಚಿಸಿ ಸ್ಮಶಾನದ ಜಾಗ ಗುರುತಿಸಿದರು. ಆ ಜಾಗದಲ್ಲಿ ಶವ ಸಂಸ್ಕಾರ ಮಾಡುವಂತೆ ಸೂಚಿಸಿದರು. ಆದರೆ, ಬೇರೆ ಸ್ಮಶಾನ ಜಾಗ ನೀಡುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪ್ರತಿಭಟನಕಾರರು ಹೋರಾಟ ಮುಂದು ವರಿಸಿದರು.

ತಹಶೀಲ್ದಾರ್ ಸುದರ್ಶನ್‌, ಡಿವೈಎಸ್ಪಿ ಓಂಪ್ರಕಾಶ್, ಸರ್ಕಲ್ ಇನ್ ಸ್ಪೆಕ್ಟರ್ ಶಿವಕುಮಾರ್ ಸೇರಿದಂತೆ ಕೆಲವು ಅಧಿಕಾರಿಗಳು ಪ್ರತಿಭಟನಕಾರರ ಮನವೊಲಿಸಲು ಪ್ರಯತ್ನಿದರೂ ಪ್ರಯೋಜನವಾಗಲಿಲ್ಲ.

ಅಂತಿಮವಾಗಿ ತಹಶೀಲ್ದಾರ್ ಹಾಗೂ ಡಿವೈಎಸ್ಪಿ ರಾತ್ರಿ ಸಮುದಾಯ ಮುಖಂಡರ ಜೊತೆ ಮಾತುಕತೆ ನಡೆಸಿ ಒಂದು ದಿನದ ಅವಕಾಶ ನೀಡಿ, ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನೆ ವಾಪಸ್ ಪಡೆದರು.

ಶವವನ್ನು ತಾಲ್ಲೂಕು ಕಚೇರಿಯಿಂದ ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಈ ಹಿಂದೆ ಸಂಸ್ಕಾರ ನಡೆಸುತ್ತಿದ್ದ ಜಾಗದಲ್ಲಿಯೇ ಅಂತ್ಯ ಸಂಸ್ಕಾರ ನಡೆಸಿದರು.

“ಹಲವು ವರ್ಷಗಳಿಂದಲೂ ಕೊಂಡಾಪುರ ಗ್ರಾಮದ ಕೆರೆಯ ಪಕ್ಕದ ಸ್ಮಶಾನದಲ್ಲಿ ಪರಿಶಿಷ್ಟ ಸಮುದಾಯದವರು ಅಂತ್ಯಸಂಸ್ಕಾರ ನಡೆಸುತ್ತಿದ್ದರು. ಇತ್ತೀಚೆಗೆ ಕೆಲವು ವ್ಯಕ್ತಿಗಳು ಆ ಜಾಗ ಒತ್ತುವರಿ ಮಾಡಿಕೊಂಡು ಶವ ಸಂಸ್ಕಾರ ನಡೆಸಲು ಅವಕಾಶ ನೀಡುತ್ತಿಲ್ಲ” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

“ಹಾಯ್ ರಾಮನಗರ” ಫೇಸ್‌ಬುಕ್ ಪುಟವನ್ನು ಫಾಲೋ ಮಾಡಿ :

https://www.facebook.com/HaiRamanagara

“ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ :

https://chat.whatsapp.com/GSaux9WeiVP6RPZDaCYWfR

Leave a Reply

Your email address will not be published. Required fields are marked *