ಉದಾಸೀನತೆ ಬಿಟ್ಟು ಮೂರನೇ ಡೋಸ್ ಪಡೆಯಿರಿ ; ಒಳಾಂಗಣ ಸ್ಥಳ, ಎಸಿ ಇರುವ ಕಡೆಗಳಲ್ಲಿ ಮಾಸ್ಕ್ ಧರಿಸಬೇಕು : ಡಾ.ಕೆ. ಸುಧಾಕರ್

ಬೆಳಗಾವಿ : ಚೀನಾ ಸೇರಿದಂತೆ ಬೇರೆ ದೇಶಗಳಲ್ಲಿ ಕೋವಿಡ್‌ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಚರ್ಚಿಸಲಾಗಿದೆ. ಈಗಾಗಲೇ 2-3 ಸಾವಿರ ಜನರಿಗೆ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ. ಇದರ ಜೊತೆಗೆ, ರಾಜ್ಯದಲ್ಲಿ ಐಎಲ್‌ಐ ಮತ್ತು ಸಾರಿ ಸಮಸ್ಯೆ ಇರುವವರಿಗೆ ಕಡ್ಡಾಯವಾಗಿ ಕೊರೊನಾ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ, ಕೋವಿಡ್‌ ನಿರ್ವಹಣೆ ಕುರಿತ ಸಭೆ ಬಳಿಕ ಮಾತನಾಡಿದ ಸಚಿವರು, ಬೇರೆ ದೇಶಗಳಲ್ಲಿ ಕೋವಿಡ್‌ ಪ್ರಕರಣ ಹೆಚ್ಚಳ ಹಾಗೂ ಹೊಸ ರೂಪಾಂತರಿ ವೈರಾಣು ಕಂಡುಬಂದ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಐಎಲ್‌ಐ ಮತ್ತು ಸಾರಿ ಸಮಸ್ಯೆ ಇರುವವರಿಗೆ ಕಡ್ಡಾಯವಾಗಿ ಕೊರೊನಾ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.

ಒಳಾಂಗಣ ಸ್ಥಳ, ಎಸಿ ಇರುವ ಕಡೆಗಳಲ್ಲಿ ಮಾಸ್ಕ್‌ ಧರಿಸಬೇಕು ಎಂದು ಸೂಚನೆ ನೀಡಲಾಗುವುದು. ವಿದೇಶದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಬರುವ ಪ್ರಯಾಣಿಕರಿಗೆ ಪರೀಕ್ಷೆ ಮಾಡಲು ಕೇಂದ್ರ ಸರ್ಕಾರದ ಮಾರ್ಗಸೂಚಿ ಅನುಸರಿಸಲಾಗುವುದು. ಈಗಾಗಲೇ ವಿಮಾನ ನಿಲ್ದಾಣದಲ್ಲಿ ಕೆಲವರಿಗೆ ಪರೀಕ್ಷೆ ಮಾಡಲಾಗುತ್ತಿದೆ ಎಂದರು.

ಕೋವಿಡ್‌ ಪ್ರಕರಣ ಕಡಿಮೆಯಾದ ಹಿನ್ನೆಲೆಯಲ್ಲಿ, ಜನರು ಮೂರನೇ ಡೋಸ್‌ನ ಲಸಿಕೆ ಪಡೆಯಲು ಆಸಕ್ತಿ ತೋರುತ್ತಿಲ್ಲ. ಇದರಿಂದಾಗಿ 3 ನೇ ಡೋಸ್‌ ಲಸಿಕಾಕರಣದಲ್ಲಿ ಶೇ. 20 ರಷ್ಟು ಮಾತ್ರ ಪ್ರಗತಿಯಾಗಿದೆ. ಇದಕ್ಕಾಗಿ ಎಲ್ಲಾ ತಾಲೂಕುಗಳಲ್ಲಿ ವಿಶೇಷ ಲಸಿಕಾ ಶಿಬಿರ ಏರ್ಪಡಿಸಿ, 3 ನೇ ಡೋಸ್‌ನಲ್ಲೂ ಶೇ 100 ರಷ್ಟು ಗುರಿ ತಲುಪಲು ಸೂಚಿಸಲಾಗಿದೆ ಎಂದರು.

ಜನರು ಆದಷ್ಟು ಬೇಗ ಮೂರನೇ ಡೋಸ್‌ ಪಡೆಯಬೇಕು. ಪರವಾಗಿಲ್ಲ ಎಂಬ ಉದಾಸೀನತೆ ಬಿಡಬೇಕು. ಮೂರನೇ ಡೋಸ್‌ ಪಡೆದರೆ ಅಡ್ಡ ಪರಿಣಾಮ ಇದೆಯೇ ಎಂಬುದು ಸದನದಲ್ಲೂ ಕೇಳಿಬಂತು. ಇಂತಹ ಅಂತೆಕಂತೆ ಮಾತುಗಳನ್ನು ಯಾರೂ ಕೇಳಬಾರದು. ಲಸಿಕೆಯಿಂದ ಅಪಾಯವಾಗುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ದಾಖಲೆ ಇಲ್ಲ. ಲಸಿಕೆ ಪಡೆದು ನಮ್ಮನ್ನು ನಾವು ಕೋವಿಡ್‌ನಿಂದ ರಕ್ಷಿಸಿಕೊಳ್ಳಬಹುದು. ಹಾಗೆಯೇ ಮಾಸ್ಕ್‌ ಕೂಡ ಧರಿಸಬೇಕು. ರೂಪಾಂತರಿ ವೈರಾಣು ಯಾವುದೇ ಪರಿಣಾಮ ಬೀರದಂತೆ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು ಎಂದರು.

“ಹಾಯ್ ರಾಮನಗರ” ಫೇಸ್‌ಬುಕ್ ಪುಟವನ್ನು ಫಾಲೋ ಮಾಡಿ :

https://www.facebook.com/HaiRamanagara

“ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ :

https://chat.whatsapp.com/GSaux9WeiVP6RPZDaCYWfR

Leave a Reply

Your email address will not be published. Required fields are marked *