ನನ್ನ ಜತೆಗೆ ಜೆಡಿಎಸ್‌ನ ಮೂರು–ನಾಲ್ಕು ಶಾಸಕರು ಪಕ್ಷ ಬಿಡಲಿದ್ದಾರೆ : ಎಸ್.ಆರ್. ಶ್ರೀನಿವಾಸ್

ತುಮಕೂರು : ನನ್ನ ಜತೆಗೆ ಜೆಡಿಎಸ್‌ನ ಮೂರು–ನಾಲ್ಕು ಶಾಸಕರು ಪಕ್ಷ ಬಿಡಲಿದ್ದಾರೆ. ಅದು ಮುಂದಿನ ದಿನಗಳಲ್ಲಿ ನಿರ್ಧಾರವಾಗಲಿದೆ. ಯಾರೆಲ್ಲ ಪಕ್ಷ ತೊರೆಯುತ್ತಾರೆ ಎಂಬುದು ಸಮಯ ಬಂದಾಗ ಗೊತ್ತಾಗುತ್ತದೆ ಎಂದು ಎಸ್.ಆರ್.ಶ್ರೀನಿವಾಸ್ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕೆಲವರು ಪಕ್ಷ ಬಿಡುವ ಬಗ್ಗೆ ನನ್ನ ಜತೆಗೆ ಮಾತುಕತೆ ನಡೆಸಿದ್ದಾರೆ. ಶಾಸಕ ಜಿ.ಟಿ.ದೇವೇಗೌಡ ಸಹ ಪಕ್ಷ ತೊರೆಯಲು ಸಿದ್ಧರಾಗಿದ್ದರು. ಕೊನೆಗೆ ಅವರ ಜತೆಗೆ ಸೇರಿಕೊಂಡರು. ಹಾಗಾಗಿ ಈಗಲೇ ಏನನ್ನೂ ಹೇಳಲಾಗದು. ಆದರೆ ನಾನು ಮಾತ್ರ ಜೆಡಿಎಸ್‌ಗೆ ಮತ್ತೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.

ಸಂಸತ್ ಸದಸ್ಯ ಜಿ.ಎಸ್.ಬಸವರಾಜು ವಿರುದ್ಧ ಕಿಡಿಕಾರುತ್ತಲೇ ಬಂದಿರುವ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಈಗ ಜನರ ಜಮೀನು ಲೂಟಿ ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಸಂಸದರಾಗಿ ಆಯ್ಕೆಯಾದ ನಂತರ ಗುಬ್ಬಿ ತಾಲ್ಲೂಕಿನ ಚೇಳೂರು ರಸ್ತೆಯ ದೊಡ್ಡಬಿದರೆ ಗೇಟ್ ಬಳಿ ಎಕರೆಗೆ 80 ಲಕ್ಷದಂತೆ 80 ಎಕರೆ ಜಮೀನು ಖರೀದಿಸಿದ್ದಾರೆ. ಅವರಂತೆ ಲೂಟಿ ಮಾಡಬೇಕಾದರೆ ಹಣ ಹೊಡಿಬೇಕು. ನನಗೆ ಎಲ್ಲಿಂದ ಬರುತ್ತದೆ ಎಂದು ತಿಳಿಸಿದರು.

ಬಗರ್ ಹುಕುಂ ಸಮಿತಿ ಸಭೆಯಲ್ಲಿ ಬಡವರಿಗೆ ಜಮೀನು ಮಂಜೂರು ಮಾಡಲು ಅವಕಾಶ ನೀಡುತ್ತಿಲ್ಲ. ಸಂಸದರು ತಮ್ಮ ಬೆಂಬಲಿಗ ಸಮಿತಿ ಸದಸ್ಯರ ಮೂಲಕ ನಿಯಂತ್ರಿಸಿದ್ದಾರೆ. ಮಂಗಳವಾರ ನಡೆದ ಸಮಿತಿ ಸಭೆಗೆ ಸಂಸದರ ಬೆಂಬಲಿಗ ಸದಸ್ಯರು ಹಾಜರಾಗದಂತೆ ನೋಡಿಕೊಂಡರು. ಒಪ್ಪಿಗೆ ಸಿಕ್ಕಿದ್ದರೆ ನೂರಾರು ರೈತರಿಗೆ ಅನುಕೂಲವಾಗುತ್ತಿತ್ತು. ಬಡವರಿಗೆ ಜಮೀನು ಸಿಗದಂತೆ ಮಾಡಿದರು. ಆದರೆ ಅವರು ಮಾತ್ರ ಜಮೀನು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನಾನು ಶಾಸಕನಾದ ನಂತರ ಒಂದು ಎಕರೆ ಜಮೀನನ್ನೂ ಖರೀದಿಸಿಲ್ಲ. ಖರೀದಿಸಿದ್ದರೆ ತೋರಿಸಲಿ. ನನ್ನ ಅಡಿಕೆ, ತೆಂಗು ತೋಟದಿಂದ ವರ್ಷಕ್ಕೆ 1 ಕೋಟಿ ರೂ. ಆದಾಯ ಬರುತ್ತಿದೆ. ಅದರಲ್ಲೇ ಜೀವನ ರೂಪಿಸಿಕೊಂಡಿದ್ದೇನೆ. ಅವರಂತೆ ಜನರ ಜಮೀನು ಕೊಳ್ಳೆ ಹೊಡೆಯುತ್ತಿಲ್ಲ ಎಂದರು.

ಜೆಡಿಎಸ್ ಚಿಹ್ನೆ ಮೇಲೆ ಆಯ್ಕೆಯಾಗಿದ್ದು, ಪಕ್ಷದಿಂದ ಹೊರಗೆ ಹಾಕಿದ್ದಾರೆ. ಮತ್ತೆ ಪಕ್ಷಕ್ಕೆ ಮರಳುವುದಿಲ್ಲ. ಕಾಂಗ್ರೆಸ್ ಸೇರುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೊ ಯಾತ್ರೆಯಲ್ಲಿ ದೇಶದ ಪ್ರಜೆಯಾಗಿ ಸೌಜನ್ಯಕ್ಕಾಗಿ ಭೇಟಿ ಕೊಟ್ಟಿದೆ. ಗೌರವಯುತವಾಗಿ ನಡೆಸಿಕೊಳ್ಳುವ ಪಕ್ಷ ಸೇರುತ್ತೇನೆ. ಇಲ್ಲವಾದರೆ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ ಎಂದು ಅವರು ಹೇಳಿದರು.

ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :

https://chat.whatsapp.com/IY8d8seeQSCIZewIP8uKdh

Leave a Reply

Your email address will not be published. Required fields are marked *