ಬಿ.ಎಸ್. ಯಡಿಯೂರಪ್ಪ ಅವರನ್ನು ಕಡೆಗಣಿಸಿದರೆ ಬಿಜೆಪಿಗೆ ನಷ್ಟ

ಬೆಂಗಳೂರು : ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಅವರನ್ನು ಸದ್ದಿಲ್ಲದೇ ಮೂಲೆಗುಂಪು ಮಾಡಲಾಗುತ್ತಿದೆ. ಇದಕ್ಕೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಬೆಲೆ ತೆರಬೇಕಾಗಿ ಬರಬಹುದು ಎಂದು ಯಡಿಯೂರಪ್ಪ ಆಪ್ತ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರು ಇತ್ತೀಚೆಗೆ ಸಭೆಯೊಂದರಲ್ಲಿ ಮಾತ ನಾಡುವಾಗ, ‘ಪಕ್ಷ ಕಾರ್ಯಕರ್ತರಿಂದಲೇ ಬೆಳೆದಿದೆ, ಹೀಗಾಗಿ ಯಡಿಯೂರಪ್ಪ ಅಥವಾ ನಳಿನ್‌ಕುಮಾರ್‌ ಅವರು ಅನಿವಾರ್ಯವಲ್ಲ’ ಎಂದು ಹೇಳಿಕೆ ನೀಡಿರುವುದು ಯಡಿಯೂರಪ್ಪ ಆಪ್ತರಲ್ಲಿ ಅಸಮಾಧಾನ ಮೂಡಿಸಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

‘ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಕಾರಣರಾದ ಮತ್ತು ಈಗಲೂ ಗೆಲುವಿನತ್ತ ಮುನ್ನಡೆಸುವ ಸಾಮರ್ಥ್ಯವನ್ನು ಉಳಿಸಿ ಕೊಂಡಿರುವ ಹಿರಿಯ ನಾಯಕರ ಬಗ್ಗೆ ಈ ರೀತಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ? ಈ ಬಾರಿ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಆದರೆ, ಚುನಾವಣೆಯಲ್ಲಿ ಪಕ್ಷದ ಪರವಾಗಿ ಸಕ್ರಿಯವಾಗಿ ಓಡಾಡಿ ಪ್ರಚಾರ ನಡೆಸಿ, ಅಧಿಕಾರಕ್ಕೆ ತರುವುದಾಗಿ ಹೇಳಿದ್ದಾರೆ. ಆದರೆ, ಸ್ವತಂತ್ರವಾಗಿ ಪಕ್ಷದ ಪರ ಪ್ರಚಾರ ನಡೆಸಲು ಅವಕಾಶ ನೀಡದೇ ಅವರನ್ನು ಕಟ್ಟಿ ಹಾಕಲಾಗಿದೆ’ ಎಂಬ ಬೇಸರ ಅವರ ಆಪ್ತರದು.

ಇತ್ತೀಚೆಗೆ ಪಕ್ಷದ ಕೆಲವು ಕಾರ್ಯಕ್ರಮಗಳಿಗೆ ಕರೆಯದೇ ಇದ್ದಾಗ ಬೇಸರಗೊಂಡಿದ್ದ ಯಡಿಯೂರಪ್ಪ ಅವರ ಮನವೊಲಿಸಿ ಪುನಃ ಕಾರ್ಯಕ್ರಮಗಳಿಗೆ ಆಹ್ವಾನಿಸಲಾಯಿತು. ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬೆಂಗಳೂರು ಮತ್ತು ಮಂಡ್ಯಕ್ಕೆ ಬಂದಾಗ ಯಡಿಯೂರಪ್ಪ ಅವರು ಹಾಜರಾಗಲಿಲ್ಲ. ಬದಲಿಗೆ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ಒಂದು ಕಾರ್ಯಕ್ರಮಕ್ಕೆ ಕಳುಹಿಸಿದ್ದರು. ಆದರೆ, ಯಡಿಯೂರಪ್ಪ ಪೂರ್ವ ನಿರ್ಧರಿತ ಪ್ರವಾಸಕ್ಕೆ ತೆರಳಿದ್ದ ಕಾರಣ ಶಾ ಕಾರ್ಯಕ್ರಮದಲ್ಲಿ ಹಾಜರಾಗಿರಲಿಲ್ಲ ಎಂದು ಆಪ್ತ ಮೂಲಗಳು ಹೇಳಿವೆ.

‘ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಅವರು ದೊಡ್ಡ ಪ್ರಮಾಣದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಇಬ್ಬರಿಗೂ ಸಡ್ಡು ಹೊಡೆಯುವ ಸಾಮರ್ಥ್ಯ ಇರುವುದು ಯಡಿಯೂರಪ್ಪ ಅವರಿಗೆ. ಸದ್ಯಕ್ಕೆ ಸರ್ಕಾರ ಮತ್ತು ಪಕ್ಷದಲ್ಲಿ ಯಾವುದೇ ಜವಾಬ್ದಾರಿಗಳು ಇಲ್ಲದ ಕಾರಣ ಅವರನ್ನು ಬಳಸಿಕೊಳ್ಳಬಹುದಿತ್ತು. ಮುಖ್ಯಮಂತ್ರಿ ಹುದ್ದೆ ತೊರೆದ ದಿನದಿಂದಲೂ ರಾಜ್ಯ ವ್ಯಾಪಿ ಪ್ರವಾಸ ಮಾಡುವುದಾಗಿ ಹೇಳಿದರೂ ಯಾರೂ ಕಿವಿಗೂ ಹಾಕಿಕೊಳ್ಳಲಿಲ್ಲ ಮತ್ತು ಪ್ರವಾಸಕ್ಕೆ ಅವಕಾಶ ನೀಡಲಿಲ್ಲ’ ಎಂದು ಮೂಲಗಳು ತಿಳಿಸಿವೆ.

ಕರೆದರಷ್ಟೇ ಹೋಗಲು ತೀರ್ಮಾನ?
ಇನ್ನು ಮುಂದೆ ಪಕ್ಷ ಆಹ್ವಾನಿಸಿದರೆ ಮಾತ್ರ ಯಡಿಯೂರಪ್ಪ ಅವರು ಕಾರ್ಯಕ್ರಮ ಅಥವಾ ಪ್ರಚಾರಕ್ಕೆ ಹೋಗುತ್ತಾರೆ. ಕರೆಯದಿದ್ದರೆ ಅವರಾಗಿಯೇ ಮೇಲೆ ಬಿದ್ದು ಯಾವುದೇ ಕಾರ್ಯಕ್ರಮಗಳಿಗೂ ಹೋಗದಿರಲು ತೀರ್ಮಾನಿಸಿದ್ದಾರೆ.

‘2013 ರ ಚುನಾವಣೆಯಲ್ಲಿ ಯಡಿಯೂರಪ್ಪ, ಶ್ರೀರಾಮುಲು ಅವರು ಪಕ್ಷದಿಂದ ಹೊರ ಹೋದ ಕಾರಣ ರಾಜ್ಯದಲ್ಲಿ ಪಕ್ಷ ಹೀನಾಯವಾಗಿ ಸೋಲು ಅನುಭವಿಸಿತು. ಅದರಿಂದ ಪಾಠ ಕಲಿಯದೇ ಹೋದರೆ ಕಷ್ಟ. ಈಗಲೂ ಅಷ್ಟೇ ಯಡಿಯೂರಪ್ಪ ಇರಬಹುದು, ಜಗದೀಶ ಶೆಟ್ಟರ್, ಕೆ.ಎಸ್‌.ಈಶ್ವರಪ್ಪ, ಶ್ರೀರಾಮುಲು ಅವರಂತಹ ಸಾಮರ್ಥ್ಯವುಳ್ಳವರನ್ನು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಪಕ್ಷವನ್ನು ಅಧಿಕಾರಕ್ಕೆ ತರಲು ಬಳಸಿಕೊಳ್ಳಬೇಕು, ಸಂಪೂರ್ಣ ನಿರ್ಲಕ್ಷಿಸುವುದು ಸರಿಯಲ್ಲ’ ಎಂಬುದು ಯಡಿಯೂರ‍ಪ್ಪ ಆಪ್ತ ವಲಯದ ಪ್ರತಿಪಾದನೆಯಾಗಿದೆ.

ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :

https://chat.whatsapp.com/IY8d8seeQSCIZewIP8uKdh

Leave a Reply

Your email address will not be published. Required fields are marked *