ಪ್ರದೀಪ್ ಆತ್ಮಹತ್ಯೆಗೆ ಪ್ರಚೋದನೆ ನೀಡುವ ಅಂಶಕಂಡುಬಂದಿಲ್ಲ ; ಶಾಸಕ ಅರವಿಂದ ಲಿಂಬಾವಳಿ ಅವರಿಂದ ಹೇಳಿಕೆ ಪಡೆಯಲಾಗುವುದು

ರಾಮನಗರ : ತಲೆಗೆ ಗುಂಡು ಹಾರಿಸಿಕೊಂಡು ಉದ್ಯಮಿ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧ ಕಗ್ಗಲಿಪುರ ಠಾಣಾ ಪೊಲೀಸರು ಐವರಿಗೆ ನೋಟಿಸ್ ಜಾರಿ ಮಾಡಿ ನಾಲ್ವರನ್ನು ವಿಚಾರಣೆಗೊಳಪಡಿಸಿದ್ದಾರೆ.

ನಾಲ್ವರನ್ನು ವಿಚಾರಣೆ ನಡೆಸಿದಾಗ ಪ್ರದೀಪ್​ಗೆ ಎಲ್ಲೂ ವಂಚನೆ ಮಾಡಿರುವುದು ಕಂಡುಬಂದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಸಂತೋಷ್ ಬಾಬು ಮಾಹಿತಿ ನೀಡಿದ್ದಾರೆ.

ಪ್ರದೀಪ್ ಆತ್ಮಹತ್ಯೆಗೆ ಪ್ರಚೋದನೆ ನೀಡುವ ಅಂಶ ಕೂಡ ತನಿಖೆಯಿಂದ ಕಂಡುಬಂದಿಲ್ಲ. ಪ್ರಕರಣದಲ್ಲಿ ಹೆಸರು ಕೇಳಿಬಂದಿರುವ ಹಿನ್ನಲೆ ಶಾಸಕ ಅರವಿಂದ ಲಿಂಬಾವಳಿ ಅವರಿಂದ ಹೇಳಿಕೆ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಈಗಾಗಲೇ ನಾಲ್ವರು ಆರೋಪಿಗಳ ವಿಚಾರಣೆ ‌ಮಾಡಲಾಗಿದೆ. ಗೋಪಿ ಎಂಬ ಆರೋಪಿಯ ವಿಚಾರಣೆ ಬಾಕಿ ಇದೆ. ಪ್ರಾಥಮಿಕ ತನಿಖೆಯಿಂದ ಇದು ಸಿವಿಲ್ ವ್ಯಾಜ್ಯ (ಆಸ್ತಿಗೆ ಸಂಬಂಧಿಸಿದ ವ್ಯಾಜ್ಯ) ಎಂಬುದಾಗಿ ತಿಳಿದುಬಂದಿದೆ.

 ಕೊವಿಡ್ ಸಂದರ್ಭದಲ್ಲಿ ‌ಕ್ಲಬ್​ನಲ್ಲಿ ಲಾಸ್ ಆಗಿ ಹಣ ಹಿಂತಿರುಗಿಸುವುದು ಕಷ್ಟವಾಗಿರುವುದು ಕಂಡು ಬಂದಿದೆ. ಗೋಪಿ ಎಂಬಾತನೇ ಪ್ರದೀಪ್​ಗೆ ಮೈನ್ ಪಾಟ್ನರ್ ಆಗಿದ್ದನು ಎಂದು ತಿಳಿಸಿದರು.

ತಲೆಮರೆಸಿಕೊಂಡಿರುವ ಆರೋಪಿ ಗೋಪಿ ವಿಚಾರಣೆ ನಂತರ ಮತ್ತಷ್ಟು ಸತ್ಯಾಂಶ ತಿಳಿದುಬರಲಿದೆ. ಗೋಪಿ, ಸೋಮಯ್ಯ, ಪ್ರದೀಪ್ ಮಾತ್ರ ಕ್ಲಬ್​ನ ಪಾರ್ಟ್ನರ್​ಗಳಾಗಿದ್ದರು. ಗೋಪಿ ಯಾಕೆ ತಲೆ ಮರೆಸಿಕೊಂಡಿದ್ದಾನೆ ಗೊತ್ತಿಲ್ಲ. ಗೋಪಿ ವಿಚಾರಣೆ ನಂತರ ಶಾಸಕ ಅರವಿಂದ್ ಲಿಂಬಾವಳಿ ಹೇಳಿಕೆ ಪಡೆಯುತ್ತೇನೆ ಎಂದರು.

ಪ್ರದೀಪ್ ಆತ್ಮಹತ್ಯೆ ಪ್ರಕರಣ ಸಂಬಂಧ ಎ2 ಆರೋಪಿ ಸೋಮಯ್ಯ, ಎ4 ರಮೇಶ್ ರೆಡ್ಡಿ, ಎ5 ಜಯರಾಮ್ ರೆಡ್ಡಿ, ಎ6 ರಾಘವ್ ಭಟ್ ವಿಚಾರಣೆಯನ್ನು ಮುಗಿಸಿದ ಕಗ್ಗಲಿಪುರ ಪೊಲೀಸರು, ಪ್ರತಿಯೊಬ್ಬರ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಪ್ರಮುಖ ಆರೋಪಿ ಗೋಪಿಯ ಬಂಧನಕ್ಕೆ ಶೋಧ ಮುಂದುವರಿಸಿದ್ದಾರೆ.

ಆರೋಪಿಗಳ ಹೇಳಿಕೆ ಜೊತೆಗೆ ಹಲವು ಮಾಹಿತಿ ಕಲೆ ಹಾಕಿರುವ ಪೊಲೀಸರು, ಉದ್ಯಮಿ ಪ್ರದೀಪ್​ಗೆ ಸೇರಿದ ಬ್ಯಾಂಕ್ ವಹಿವಾಟು ವಿವರಗಳನ್ನು ಕೂಡ ಸಂಗ್ರಹ ಮಾಡಿದ್ದಾರೆ.

ಪ್ರದೀಪ್ ಆತ್ಮಹತ್ಯೆ ಬಳಿಕ ಪೊಲೀಸರು ಬ್ಯಾಂಕ್​ಗೆ ಪತ್ರ ಬರೆದು ಹಣಕಾಸಿನ ವರ್ಗಾವಣೆ ವಿವರ ಕೇಳಿದ್ದರು. ಇದೀಗ ಪ್ರದೀಪ್ ಬ್ಯಾಂಕ್ ಖಾತೆ ಟ್ರಾನ್ಸಕ್ಷನ್​ಗೆ ಸೇರಿದ ಸಂಪೂರ್ಣ ವಿವರ ಪೊಲೀಸರ ಕೈ ಸೇರಿದ್ದು, ಕಳೆದ ಕೆಲ ವರ್ಷಗಳಿಂದ ಪ್ರದೀಪ್ ಬ್ಯಾಂಕ್ ಖಾತೆಗೆ ಯಾವ ಯಾವ ಮೂಲಗಳಿಂದ ಹಣ ಜಮೆಯಾಗಿದೆ, ಪ್ರದೀಪ್ ಖಾತೆಗೆ ಹಣ ಬಂದಿರುವ ಮತ್ತು ಹೋಗಿರುವ ವಿವರಗಳ ಮಾಹಿತಿ ಕಲೆ ಹಾಕುತ್ತಿದ್ದಾರೆ.

ನಿರಂತರ ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :

https://chat.whatsapp.com/IY8d8seeQSCIZewIP8uKdh

Leave a Reply

Your email address will not be published. Required fields are marked *