‘ಮಹಿಳೆ ಯಾವುದೇ ಕ್ಷೇತ್ರದಲ್ಲಿರಲಿ ; ತನ್ನ ಆತ್ಮಗೌರವವನ್ನು ಕಳೆದುಕೊಳ್ಳಬಾರದು ; ಎಂಥ ಸವಾಲುಗಳು ಬಂದರೂ ಎದುರಿಸಿ ಬಾಳಬೇಕು’ : ಜಮುನಾ

ಹೈದರಾಬಾದ್ : ಬಹುಭಾಷಾ ನಟಿ ಜಮುನಾ (87) ವಯೋಸಹಜ ಸಮಸ್ಯೆಗಳಿಂದ ಫೆಬ್ರವರಿ 27ರಂದು ನಿಧನರಾದರು.

ಬಾಲ್ಯದಿಂದಲೇ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಅವರು ಕನ್ನಡ, ತೆಲುಗು, ತಮಿಳು ಹಿಂದಿ ಸೇರಿ ಸುಮಾರು 134 ಚಿತ್ರಗಳಲ್ಲಿ ನಟಿಸಿದ್ದರು. ಕನ್ನಡ ಚಿತ್ರಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಅವರು, ಹೆಚ್ಚು ನಟಿಸಿದ್ದು ತೆಲುಗು ಚಿತ್ರಗಳಲ್ಲಿ. 15ರ ಹರೆಯದಲ್ಲಿಯೇ ‘ಪುಟ್ಟಿಲು’ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪ್ರವೇಶಿಸಿದರು.  ಪೌರಾಣಿಕ ಪಾತ್ರಗಳ ಮೂಲಕ ಹೆಚ್ಚು ಜನಪ್ರಿಯತೆ ಪಡೆದಿದ್ದ ಜಮುನಾ ಅವರು, ದಿಗ್ಗಜ ನಟ ಎನ್.ಟಿ. ರಾಮರಾವ್ ಸೇರಿದಂತೆ ಅನೇಕ ಮೇರು ನಟರೊಂದಿಗೆ ನಟಿಸಿದ್ದರು.

ಆದರ್ಶ ಸತಿ, ತೆನಾಲಿ ರಾಮಕೃಷ್ಣ, ಭೂಕೈಲಾಸ, ರತ್ನಗಿರಿ ರಹಸ್ಯ, ಸಾಕ್ಷಾತ್ಕಾರ, ಮಾಯೆಯ ಮುಸುಕು, ಗುರು ಸಾರ್ವಭೌಮ ಶ್ರೀ ರಾಘವೇಂದ್ರ ಕರುಣೆ, ಪೊಲೀಸ್ ಮತ್ತು ದಾದಾ ಅವರು ನಟಿಸಿದ ಕನ್ನಡ ಚಿತ್ರಗಳು. ‘ಮಿಸ್ಸಮ್ಮ’, ‘ಗುಂಡಮ್ಮ ಕಥೆ’ ಮತ್ತು ‘ಶ್ರೀ ಕೃಷ್ಣ ತುಲಾಭಾರಂ’ ಅವರ ಅಭಿನಯದ ಪ್ರಮುಖ ತೆಲುಗು ಚಿತ್ರಗಳು. ಹಿಂದಿ ಚಲನಚಿತ್ರ ಮಿಲನ್‌ನ ಅಭಿನಯಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದಿದ್ದರು. ತಮಿಳುನಾಡು ಸರ್ಕಾರದ ಎಂಜಿಆರ್‌ ಗೌರವ ಪ್ರಶಸ್ತಿ, ಎನ್‌ಟಿಆರ್‌ ರಾಷ್ಟ್ರಪ್ರಶಸ್ತಿ, ಡಾ.ಬಿ. ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿ, ಜೀವಮಾನದ ಶ್ರೇಷ್ಠ ಸಾಧನೆಗಾಗಿ ಸಂತೋಷಂ ಚಲನಚಿತ್ರ ಪ್ರಶಸ್ತಿ ಅವರಿಗೆ ಸಂದಿವೆ.

ಹುಟ್ಟೂರು ವಿಜಯನಗರ ಜಿಲ್ಲೆಯ ಹಂಪಿ: ಜಮುನಾ ಅವರು ಹುಟ್ಟಿದ್ದು 1936ರಲ್ಲಿ. ಮೂಲ ಹೆಸರು ಜನಾಬಾಯಿ. ಹುಟ್ಟೂರು ವಿಜಯನಗರ ಜಿಲ್ಲೆಯ ಹಂಪಿ. ಬಳಿಕ ಅವರ ಕುಟುಂಬ ಆಂಧ್ರಪ್ರದೇಶದ ದುಗ್ಗಿರಾಳದಲ್ಲಿ ನೆಲೆಯಾಯಿತು. ದಿವಂಗತ ಜೂಲೂರಿ ರಮಣರಾವ್‌ ಇವರ ಪತಿ. ಜಮುನಾ ದಂಪತಿಗೆ ಒಬ್ಬ ಪುತ್ರ ಮತ್ತು ಒಬ್ಬ ಪುತ್ರಿ ಇದ್ದಾರೆ.  

ರಾಜಕಾರಣ: 1989ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಆಂಧ್ರ ಪ್ರದೇಶದ ರಾಜಮಂಡ್ರಿಯಿಂದ ಜಮುನಾ ಅವರು ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾಗಿದ್ದರು.

ತುಂಬು ಸ್ವಾಭಿಮಾನಿ ಯಾಗಿದ್ದ ಅವರ ವೃತ್ತಿಬದುಕಿನಲ್ಲಿ ಸಿನಿ ಕ್ಷೇತ್ರದ ಪ್ರಮುಖರೊಂದಿಗೆ ನಡೆದ ಮನಸ್ತಾಪಗಳು ಅವರಿಗೆ ಬೇಸರ ತರಿಸಿದ್ದವು. ‘ಮಹಿಳೆ ಯಾವುದೇ ಕ್ಷೇತ್ರದಲ್ಲಿರಲಿ. ತನ್ನ ಆತ್ಮಗೌರವವನ್ನು ಕಳೆದುಕೊಳ್ಳಬಾರದು. ಎಂಥ ಸವಾಲುಗಳು ಬಂದರೂ ಎದುರಿಸಿ ಬಾಳಬೇಕು’ ಎಂದು ಜಮುನಾ ಹೇಳುತ್ತಿದ್ದರು.

ನಿರಂತರ ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :

https://chat.whatsapp.com/IY8d8seeQSCIZewIP8uKdh

Leave a Reply

Your email address will not be published. Required fields are marked *