ಎಟಿಎಂ ಕೇಂದ್ರಗಳಲ್ಲಿ ಸಾರ್ವಜನಿಕರು ಅಪರಿಚಿತರಿಗೆ ತಮ್ಮ ಕಾರ್ಡ್‌, ಪಿನ್‌ ಸಂಖ್ಯೆ ಸೇರಿದಂತೆ ಯಾವುದೇ ಮಾಹಿತಿಗಳನ್ನು ನೀಡಬೇಡಿ

ರಾಮನಗರ : ಎಟಿಎಂಗಳಲ್ಲಿ ಹಣ ಡ್ರಾ ಮಾಡಿ ಕೊಡುವ ನೆಪದಲ್ಲಿ ಜನರ ಗಮನ ಬೇರೆಡೆ ಸೆಳೆದು ಅವರ ಎಟಿಎಂ ಕಾರ್ಡ್‌ ಹಾಗೂ ಪಿನ್‌ ಪಡೆದು ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಇಲ್ಲಿನ ಐಜೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ವಿವೇಕಾನಂದ ನಗರ ನಿವಾಸಿ ತಿಮ್ಮ ಅಲಿಯಾಸ್‌ ವೆಂಕಟರಾಮ (38) ಹಾಗೂ ಮಾಲೂರು ಪಟ್ಟಣದ ಮಾರುತಿ ಎಕ್ಸ್‌ಟೆನ್ಶನ್‌ ಬಡಾವಣೆ ನಿವಾಸಿ ಟಿ. ಮಂಜುನಾಥ (37) ಬಂಧಿತರು. ಇವರಿಂದ ವಿವಿಧ ಬ್ಯಾಂಕುಗಳ 20 ಎಟಿಎಂ ಕಾರ್ಡುಗಳು, ₹50 ಸಾವಿರ ನಗದು 2 ಮೊಬೈಲ್‌ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ವಿವಿಧ ಗ್ರಾಹಕರಿಗೆ ಹೀಗೆ ವಂಚಿಸಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.
ರಾಮನಗರದ ಯೂನಿಯನ್‌ ಬ್ಯಾಂಕ್‌ನ ಎಟಿಎಂನಲ್ಲಿ ಇದೇ ತಿಂಗಳ 9ರಂದು ಅರಳಿಮರದದೊಡ್ಡಿ ನಿವಾಸಿ ಶಾಂತಮ್ಮ ಎಂಬುವರು ಹಣ ಡ್ರಾ ಮಾಡಲು ಬಂದಿದ್ದರು. ಈ ಸಂದರ್ಭ ಆರೋಪಿಗಳು ಮಹಿಳೆಗೆ ಹಣ ಡ್ರಾ ಮಾಡಿಕೊಳ್ಳಲು ಸಹಾಯ ಮಾಡುವಂತೆ ನಟಿಸಿ, ಆಕೆಯ ಎಟಿಎಂ ಕಾರ್ಡ್‌, ಪಿನ್‌ ಪಡೆದು ಅದರ ಬದಲಿಗೆ ಮತ್ತೊಂದು ಎಟಿಎಂ ಕಾರ್ಡ್‌ ನೀಡಿದ್ದರು. ಬಳಿಕ, ಈ ಎಟಿಎಂನಲ್ಲಿ ಹಣ ಬರುತ್ತಿಲ್ಲ. ಮತ್ತೊಂದು ಎಟಿಎಂಗೆ ಹೋಗಿ ಎಂದು ಮಹಿಳೆಗೆ ಹೇಳಿ ಕಳುಹಿಸಿದ್ದರು. ಬಳಿಕ ಶಾಂತಮ್ಮ ಅವರ ಎಟಿಎಂ ಕಾರ್ಡ್ ಬಳಸಿ 12 ಸಾವಿರ ರೂ. ಹಣ ಡ್ರಾ ಮಾಡಿಕೊಂಡು ವಂಚಿಸಿದ್ದರು. ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ಮೂಲಕ ಆರೋಪಿಗಳನ್ನು ಬಂಧಿಸಿದ್ದಾರೆ.
ಎಟಿಎಂ ಕೇಂದ್ರಗಳಲ್ಲಿ ಅಪರಿಚಿತರಿಗೆ ತಮ್ಮ ಕಾರ್ಡ್‌, ಪಿನ್‌ ಸಂಖ್ಯೆ ಸೇರಿದಂತೆ ಯಾವುದೇ ಮಾಹಿತಿಗಳನ್ನು ಸಾರ್ವಜನಿಕರು ನೀಡಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :

https://chat.whatsapp.com/IY8d8seeQSCIZewIP8uKdh

Leave a Reply

Your email address will not be published. Required fields are marked *