ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣಗೌಡರ ಶ್ರಮ ಶ್ಲಾಘನೀಯ : ಗೌತಮ್ ಗೌಡ

ರಾಮನಗರ : ನಗರದ ರಾಮದೇವರ ಬೆಟ್ಟದ ಬಳಿ ಶ್ರೀರಾಮ ಮಂದಿರ ನಿರ್ಮಾಣ ಮಾಡಬೇಕೆಂಬ ದೃಢ ಹೆಜ್ಜೆ ಇಟ್ಟ ಕರ್ನಾಟಕ ಸರ್ಕಾರಕ್ಕೆ ರಾಮನಗರ ಜಿಲ್ಲಾ ಬಿಜೆಪಿ ಕೃತಜ್ಞತೆ ಸಲ್ಲಿಸುತ್ತದೆ ಎಂದು ಕರ್ನಾಟಕ ರಾಜ್ಯ ರೇಷ್ಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಗೌತಮ್‍ಗೌಡ ಹೇಳಿದರು.

ಇಲ್ಲಿನ ರಾಮನಗರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಡಿನ ಪ್ರತಿಯೊಂದು ವಲಯ, ವರ್ಗಕ್ಕೆ ವಿಶೇಷ ಕಾಳಜಿ ತೋರಿ ಬಜೆಟ್ ಮಂಡಿಸಿದ್ದಾರೆ. ರಾಮನಗರಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ರಾಮದೇವರ ಬೆಟ್ಟದಲ್ಲಿ ಅಯೋದ್ಯೆ ಮಾದರಿ ಶ್ರೀರಾಮ ಮಂದಿರ ನಿರ್ಮಾಣ ಸೇರಿದಂತೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯನ್ನು ಸಹ ಮನಗಂಡು ತುರ್ತು ನಿಗಾ ಚಿಕಿತ್ಸಾ ಘಟಕಗಳ ಬಗ್ಗೆ ತೀರ್ಮಾನ ಮಾಡಿದೆ ಎಂದು ತಿಳಿಸಿದರು.

ಕೋವಿಡ್ ಮುಂಚೆ ಜಿಲ್ಲಾ ಕೇಂದ್ರದಲ್ಲಿ ಒಂದೇ ಒಂದು ತುರ್ತು ನಿಗಾ ಘಟಕ ಇರಲೇ ಇಲ್ಲ. ಕೋವಿಡ್ ಸಂದರ್ಭದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ 100 ಬೆಡ್‍ಗಳ ತುರ್ತು ನಿಗಾ ಘಟಕವನ್ನು ತೆರೆಯಲಾಯಿತು. ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ 100 ಹಾಸಿಗೆಗಳಿಂದ 550 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸಿ, ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯನ್ನು ಮಣಿಪಾಲ್ ಆಸ್ಪತ್ರೆಯವರ ಪರಿಕಲ್ಪನೆಯಂತೆ ನಿರ್ಮಿಸಲಾಗಿದೆ ಎಂದರು.

ವಿಶೇಷವಾಗಿ ಬಜೆಟ್‍ನಲ್ಲಿ ಕೂಡ ತುರ್ತು ನಿಗಾ ಘಟಕಕ್ಕಾಗಿ ವಿಶೇಷವಾಗಿ 50 ಹಾಸಿಗೆಗಳು ಮಂಜೂರು ಮಾಡಲಾಗಿದೆ. ಶಿಕ್ಷಣಕ್ಕೆ ಸಂಬಂಧಪಟ್ಟಂತೆ ರಾಜೀವ್‍ಗಾಂಧಿ ಆರೋಗ್ಯ ವಿವಿ ಕಾಮಗಾರಿ ಆರಂಭ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜನ್ನು ಕೆಇಟಿ ದರ್ಜೆಗೆ ಏರಿಸಲಾಗಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವತ್ಥನಾರಾಯಣಗೌಡರ ಶ್ರಮ ಶ್ಲಾಘನೀಯವಾಗಿದೆ ಎಂದು ಅವರು ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲುವಾಡಿ ದೇವರಾಜು ಮಾತನಾಡಿ ದೇಶವು ಕೋವಿಡ್‍ನಿಂದ ಸಾಕಷ್ಟು ಸಂಕಷ್ಟದಲ್ಲಿದ್ದರೂ ರಾಜ್ಯ ಮತ್ತು ಕೇಂದ್ರದಿಂದ ಜನಪರವಾದ ಪೂರಕ ಬಜೆಟ್ ನೀಡಿರುವುದು ಹರ್ಷ ತಂದಿದೆ. ರಾಮಮಂದಿರ ನಿರ್ಮಾಣಕ್ಕೆ ಮುಂದಾಗಿರುವುದು ಖುಷಿ ತಂದಿದೆ. ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಜನತೆ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಿ ಜನಪರವಾದ ಉತ್ತಮವಾದ ಆಡಳಿತ ಮತ್ತೊಮ್ಮೆ ಬರಲು ಸಹಕಾರ ನೀಡಬೇಕು ಎಂದರು.

ರಾಜೀವ್‍ಗಾಂಧಿ ಆರೋಗ್ಯ ವಿವಿಗೆ ಕಾಮಗಾರಿಗೆ ಹಣ ಮಂಜೂರು ಮಾಡಲಾಗಿದ್ದು, ಆಡಳಿತಾತ್ಮಕ ಟೆಂಡರ್ ಕರೆಯಲಾಗಿದೆ. ಇದರ ಜೊತೆಗೆ ಪ್ರವಾಸೋಧ್ಯಮ ಮತ್ತು ಆರೋಗ್ಯ ಸುಧಾರಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಶೀಘ್ರದಲ್ಲೇ ಜಿಲ್ಲಾ ಆಸ್ಪತ್ರೆ ಲೋಕಾರ್ಪಣೆ ಆಗಲಿದೆ. ರೇಷ್ಮೆ ಮಾರುಕಟ್ಟೆ ನಿರ್ಮಾಣ, ಇ-ಪೇಮೆಂಟ್ ಘೋಷಣೆ ಆಗಿದೆ. ನೂತನ ಆಸ್ಪತ್ರೆಗೆ ಬೇಕಾದ ಸಲಕರಣೆಗಳನ್ನು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಹಿರಿಯ ಮುಖಂಡ ಜಿ.ವಿ. ಪದ್ಮನಾಭ್, ಜಿಲ್ಲಾ ಉಪಾಧ್ಯಕ್ಷ ಆರ್.ವಿ.ಸುರೇಶ್, ಪ್ರಧಾನ ಕಾರ್ಯದರ್ಶಿ ರುದ್ರದೇವರು, ನಗರ ಘಟಕದ ಅಧ್ಯಕ್ಷ ಪಿ. ಶಿವಾನಂದ, ಬಿ.ನಾಗೇಶ್, ಚಂದ್ರಶೇಖರರೆಡ್ಡಿ, ಗೋಪಾಲ್, ನಂಜುಂಡಯ್ಯ, ಮುಖಂಡರಾದ ಗೋಪಾಲ್, ಆನಂದ್, ರಾಜು, ಪುಷ್ಪಲತ, ಚಂದನ್‍ಮೋರೆ, ಕಿರಣ್, ಕಿಶನ್, ಸುಮಂತ್, ಕಾರ್ಪೆಂಟರ್ ಸೀನಪ್ಪ, ಸ್ಲಂ ಮೋರ್ಚಾ ಅಧ್ಯಕ್ಷ ರವಿ ಉಪಸ್ಥಿತರಿದ್ದರು.

ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :

https://chat.whatsapp.com/IY8d8seeQSCIZewIP8uKdh

Leave a Reply

Your email address will not be published. Required fields are marked *