ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಪಕ್ಷ ನನಗೆ ನೀಡಿದ ಗೌರವ ಮತ್ತು ಸ್ಥಾನಗಳನ್ನು ನನ್ನ ಜೀವಿತಾವಧಿಯಲ್ಲಿ ಮರೆಯಲು ಸಾಧ್ಯವಿಲ್ಲ : ಬಿ.ಎಸ್. ಯಡಿಯೂರಪ್ಪ
‘ನನ್ನ ಜೀವನದ ಕೊನೆಯ ಉಸಿರು ಇರುವವರೆಗೂ ನಾನು ಬಿಜೆಪಿಯನ್ನು ಕಟ್ಟಲು ಮತ್ತು ಅಧಿಕಾರಕ್ಕೆ ತರಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಅದರಲ್ಲಿ ಯಾವುದೇ ಅನುಮಾನ ಬೇಡ. ಈ ಭಾಗದಲ್ಲಿರುವ ನಮ್ಮ (ಬಿಜೆಪಿ) ಎಲ್ಲಾ ಶಾಸಕರಿಗೆ ನಾನು ಹೇಳಲು ಬಯಸುತ್ತೇನೆ. ಆತ್ಮವಿಶ್ವಾಸದಿಂದ ಕೆಲಸ ಮಾಡಿ. ಚುನಾವಣೆಗೆ ಸಿದ್ಧರಾಗಿ. ಆ ಕಡೆಯಿಂದ (ವಿರೋಧಿ ಪಕ್ಷಗಳ) ಹಲವರು ನಮ್ಮೊಂದಿಗೆ ಬರಲು ಸಿದ್ಧರಿದ್ದಾರೆ. ನಿಮಗೆ ವಿಶ್ವಾಸವಿದ್ದರೆ ಅವರನ್ನು ಕರೆದುಕೊಂಡು ಹೋಗಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತರಬಹುದು’
-ಬಿ.ಎಸ್. ಯಡಿಯೂರಪ್ಪ
ಕರ್ನಾಟಕ ವಿಧಾನಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ‘ವಿದಾಯ ಭಾಷಣ’ ಮಾಡಿದರು. ಬಿಜೆಪಿಯಾಗಲಿ, ಪ್ರಧಾನಿ ಮೋದಿಯಾಗಲಿ ನನ್ನನ್ನು ಎಂದಿಗೂ ಕಡೆಗಣಿಸಿಲ್ಲ ಎಂದು ಬಿಎಸ್‌ವೈ ಸ್ಪಷ್ಟನೆ ನೀಡಿದರು. ಇದು ಅವರು ವಿಧಾನ ಸಭೆಯಲ್ಲಿ ನೀಡಿದ ಕೊನೆಯ ಭಾಷಣವಾಗಿದೆ.
‘ಜೀವನದ ಕೊನೆಯ ಉಸಿರು ಇರುವವರೆಗೂ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ’ ಎಂದು ರಾಜ್ಯ ಬಿಜೆಪಿಯ ಪ್ರಬಲ ನಾಯಕ ಬಿಎಸ್ ಯಡಿಯೂರಪ್ಪ ಹೇಳಿದರು. ಕರ್ನಾಟಕದಲ್ಲಿ ಪಕ್ಷವನ್ನು ಕಟ್ಟಿ ಮತ್ತೆ ಅಧಿಕಾರಕ್ಕೆ ತರಬೇಕು ಎಂದೂ ಅವರು ತಿಳಿಸಿದರು.
ಈಗಾಗಲೇ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿರುವ 79 ವರ್ಷದ ಹಿರಿಯ ನಾಯಕ, ‘ಮನೆಯಲ್ಲಿ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ. ವಿಧಾನಸಭೆ ಅಧಿವೇಶನದ ನಂತರ ರಾಜ್ಯ ಪ್ರವಾಸ ಮಾಡಿ ಪಕ್ಷ ಮತ್ತು ಅದರ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತೇನೆ’ ಎಂದು ಹೇಳಿದರು.
ರಾಜ್ಯ ಬಜೆಟ್ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಯಡಿಯೂರಪ್ಪ, ವಿಶ್ವಾಸದಿಂದ ಜನರ ಮುಂದೆ ಹೋಗಿ ಮತ ಕೇಳುವಂತೆ ಆಡಳಿತ ಪಕ್ಷದ ಶಾಸಕರನ್ನು ಒತ್ತಾಯಿಸಿದರು. ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ ಎಂದರು.
‘ಈ ಚುನಾವಣೆಯ ಐದು ವರ್ಷಗಳ ನಂತರ ಮುಂದಿನ ಚುನಾವಣೆಯಲ್ಲೂ ದೇವರು ನನಗೆ ಶಕ್ತಿ ನೀಡಿದರೆ, ನಾನು ಬಿಜೆಪಿ ಅಧಿಕಾರಕ್ಕೆ ಬರಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇನೆ. ನಿಮಗೆ ತಿಳಿದಿರುವಂತೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷ ನನಗೆ ನೀಡಿದ ಗೌರವ ಮತ್ತು ಸ್ಥಾನಗಳನ್ನು ನನ್ನ ಜೀವಿತಾವಧಿಯಲ್ಲಿ ಮರೆಯಲು ಸಾಧ್ಯವಿಲ್ಲ’ ಎಂದು ಅವರು ಹೇಳಿದರು.
ಶುಕ್ರವಾರದಂದು ಅಧಿವೇಶನ ಮುಕ್ತಾಯವಾಗಲಿದ್ದು, ವಿಧಾನಸಭೆಯಲ್ಲಿ ಕೊನೆಯ ಬಾರಿಗೆ ಮಾತನಾಡುತ್ತಿರುವುದಾಗಿ ಯಡಿಯೂರಪ್ಪ ತಿಳಿಸಿದರು. ‘ಇದು ಒಂದು ರೀತಿಯಲ್ಲಿ ನನ್ನ ವಿದಾಯ, ಏಕೆಂದರೆ ನಾನು ವಿಧಾನಸಭೆಗೆ ಬಂದು ಮಾತನಾಡಲು ಸಾಧ್ಯವಿಲ್ಲ’ ಎಂದು ಹೇಳಿದರು.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಮಧ್ಯಪ್ರವೇಶಿಸಿ, ಶುಕ್ರವಾರ ಬಿ ಎಸ್ ಯಡಿಯೂರಪ್ಪ ಅವರು ಸದನದಲ್ಲಿ ಕೊನೆಯ ಭಾಷಣ ಮಾಡಲಿದ್ದಾರೆ ಎಂದರು.
ಕಳೆದ ವರ್ಷ ಜುಲೈನಲ್ಲಿ ಯಡಿಯೂರಪ್ಪ ಅವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದರು. ತಮ್ಮ ಶಿಕಾರಿಪುರ ವಿಧಾನಸಭಾ ಸ್ಥಾನವನ್ನು ತೆರವು ಮಾಡುವುದಾಗಿ ತಿಳಿಸಿದರು. ಹೈಕಮಾಂಡ್ ಒಪ್ಪಿಗೆ ನೀಡಿದರೆ ಅವರ ಕಿರಿಯ ಮಗ ಮತ್ತು ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಸ್ಪರ್ಧಿಸಲಿದ್ದಾರೆ ಎಂದರು.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ‘ಪುರಸಭಾ’ ಸದಸ್ಯರಾಗಿ ಚುನಾವಣಾ ರಾಜಕೀಯ ಆರಂಭಿಸಿದ ಹಿರಿಯ ನಾಯಕ, 1983 ರಲ್ಲಿ ಶಿಕಾರಿಪುರದಿಂದ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾದರು ಮತ್ತು ಅಲ್ಲಿಂದ ಎಂಟು ಬಾರಿ ಗೆದ್ದರು.
ಯಡಿಯೂರಪ್ಪ ಅವರಿಗೆ ಅನ್ಯಾಯ ಮಾಡಿದ್ದಾರೆ. ನನ್ನನ್ನು ನಿರ್ಲಕ್ಷಿಸಿದ್ದಾರೆ ಎಂದು ವಿರೋಧ ಪಕ್ಷಗಳ ನಾಯಕರು ಹೇಳುವುದನ್ನು ಕೇಳಿದ್ದೇನೆ. ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ನನ್ನನ್ನು ಎಂದಿಗೂ ನಿರ್ಲಕ್ಷಿಸಿಲ್ಲ, ಅವರು ನನಗೆ ನೀಡಿದ ಸ್ಥಾನ ಮತ್ತು ಗೌರವವನ್ನು ಪರಿಗಣಿಸಿ, ನಾನು ಮೋದಿಗೆ ಋಣಿಯಾಗಿದ್ದೇನೆ. ನನಗೆ ನೀಡಿದ ಅವಕಾಶಗಳು ಮತ್ತು ಸ್ಥಾನಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು. ಪಕ್ಷ ಅವಕಾಶ ನೀಡಿದ್ದರಿಂದ ನಾಲ್ಕು ಬಾರಿ ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು ಎಂದು ತಿಳಿಸಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರನ್ನು ಗುರಿಯಾಗಿಸಿ ಯಡಿಯೂರಪ್ಪ ವಾಗ್ದಾಳಿ ನಡೆಸಿದರು. ‘ನೀವು (ಸಿದ್ದರಾಮಯ್ಯ) ಬಾದಾಮಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿಲ್ಲ. ಅಲ್ಲಿಂದ ಮತ್ತೆ ಗೆಲ್ಲುವ ವಿಶ್ವಾಸ ಇಲ್ಲವೇ? ಕಳೆದ ಐದು ವರ್ಷಗಳಿಂದ ಕ್ಷೇತ್ರದಲ್ಲಿ ಕೆಲಸ ಮಾಡಿದರೂ, ಕ್ಷೇತ್ರದಿಂದ ಸ್ಪರ್ಧಿಸುವ ಧೈರ್ಯ ಇಲ್ಲದಿರುವಂತಾಗಿರುವುದು ಹೇಗೆ? ಇತರ ಕ್ಷೇತ್ರದ ಜನರು ನಿಮ್ಮನ್ನು ನಂಬುತ್ತಾರೆಯೇ? ನಿಮಗೆ ಅವಕಾಶ ನೀಡುತ್ತಾರೆಯೇ?’ ಎಂದು ಯಡಿಯೂರಪ್ಪ ಪ್ರಶ್ನಿಸಿದರು.
ಬಿಎಸ್‌ವೈಗೆ ಕರ್ನಾಟಕ ಚುನಾವಣೆ ನೇತೃತ್ವ: ಬಿಜೆಪಿಗೆ ಲಿಂಗಾಯತ ನಾಯಕನೇ ಅನಿವಾರ್ಯ- ವರದಿ, ವಿಶ್ಲೇಷಣೆ’ನನಗೆ ಸಿಕ್ಕಿರುವ ಅವಕಾಶಗಳು ಬೇರೆ ಯಾರಿಗೂ ಸಿಕ್ಕಿಲ್ಲ, ಯಾರೋ ಯಡಿಯೂರಪ್ಪನವರನ್ನು ಸುಮ್ಮನೆ ಕೂರಿಸಬಹುದು ಎಂಬ ಭ್ರಮೆಯಲ್ಲಿದ್ದರೆ, ಯಡಿಯೂರಪ್ಪ ಸುಮ್ಮನೆ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಶಾಸಕರಿಗೆ ಹೇಳಲು ಬಯಸುತ್ತೇನೆ. ಬಿಜೆಪಿಯವರು ಸ್ಪಷ್ಟ ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಖಚಿತ. ಅದರಲ್ಲಿ ಯಾವುದೇ ಅನುಮಾನ ಬೇಡ. ನಾನು ಭವಿಷ್ಯವಾಣಿಯನ್ನು ಹೇಳುತ್ತಿದ್ದೇನೆ ಎಂದು ಭಾವಿಸುವುದಿಲ್ಲ’ ಎಂಬುದಾಗಿ ಅವರು ಹೇಳಿದರು.
ಈ ಬಾರಿಯ ವಿಧಾನಸಭಾ ಅಧಿವೇಶನದ ನಂತರ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೂ ಭೇಟಿ ನೀಡಲಿದ್ದು, ಇನ್ನೆರಡು ತಿಂಗಳಲ್ಲಿ ಕರ್ನಾಟಕದಲ್ಲಿ ಯಾವ ರೀತಿ ಬದಲಾವಣೆಯಾಗಲಿದೆ ಎಂಬುದನ್ನು ಎಲ್ಲರೂ ನೋಡಲಿದ್ದಾರೆ. ಬಿಜೆಪಿ ಪರ ಗಾಳಿ ಬೀಸಲಿದೆ ಎಂದು ಯಡಿಯೂರಪ್ಪ ಹೇಳಿದರು.
‘ನೀವು (ಆಡಳಿತ ಪಕ್ಷದ ಶಾಸಕರು) ಅಧಿವೇಶನದ ನಂತರ ನಿಮ್ಮ ಕ್ಷೇತ್ರಗಳಿಗೆ ಹಿಂತಿರುಗಿ, ಜನರ ವಿಶ್ವಾಸ ಗಳಿಸಿ. ಅವರ ಅನುಕೂಲಕ್ಕಾಗಿ ಬಜೆಟ್‌ನಲ್ಲಿ ಘೋಷಿಸಲಾದ ಕಾರ್ಯಕ್ರಮಗಳು ಮತ್ತು ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿ ಕೊಡಿ’ ಎಂದು ತಿಳಿಸಿದರು.
ಯಡಿಯೂರಪ್ಪ ಅವರು ಜುಲೈ 26, 2021 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. 75 ವರ್ಷಕ್ಕಿಂತ ಮೇಲ್ಪಟ್ಟವರನ್ನು ದೂರವಿಡುವ ಬಿಜೆಪಿಯಲ್ಲಿನ ಅಲಿಖಿತ ನಿಯಮದ ಪ್ರಕಾರ, ಅವರು ಉನ್ನತ ಹುದ್ದೆಯಿಂದ ನಿರ್ಗಮಿಸಿದರು ಎನ್ನಲಾಗಿದೆ. ವಿಧಾನಸಭೆ ಚುನಾವಣೆಗೂ ಮುನ್ನ ಹೊಸ ನಾಯಕತ್ವಕ್ಕೆ ದಾರಿ ಮಾಡಿಕೊಡಲು ಹೈಕಮಾಂಡ್ ಬಯಸಿತ್ತು ಎಂಬ ಮಾತುಗಳು ಕೇಳಿಬಂದಿದ್ದವು.
ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :