ವ್ಯಾಪಾರಸ್ಥರಾದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು !
ರಾಮನಗರ : ನಗರದ ರೆಹಮಾನಿಯಾ ನಗರದಲ್ಲಿರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಒಂದು ದಿನದ ಮಟ್ಟಿಗೆ ವ್ಯಾಪಾರಸ್ಥರಾಗಿದ್ದರು! ತಾವೇ ತಯಾರಿಸಿದ ಚುರುಮುರಿ, ಮಜ್ಜಿಗೆ, ತಂಪು ಪಾನಿಯ, ತಮ್ಮ ಕ್ರಿಯಾಶೀಲತೆಗೆ ಕಾರಣವಾಗಿದ್ದ ಬಣ್ಣ ಬಣ್ಣದ ಚಿತ್ರಗಳು, ಪೇಪರ್ ಆರ್ಟ್ ಹೀಗೆ ಅನೇಕ ಪದಾರ್ಥಗಳನ್ನು ಮಾರಾಟ ಮಾಡುವುದರ ಮೂಲಕ ಮಾರಾಟ ಕಲೆ, ಲಾಭ-ನಷ್ಟ, ಹಣ-ಕಾಸು ನಿರ್ವಹಣೆ, ಲೆಕ್ಕಚಾರದ ಕೌಶಲಗಳನ್ನು ಪ್ರಾಯೋಗಿಕವಾಗಿ ಪಡೆದುಕೊಂಡರು.

ನಗರದ ರೆಹಮಾನಿಯನಗರದ ಮುಮ್‍ತಾಜ್ ಶಾದಿ ಮಹಲ್‍ನಲ್ಲಿ ಶಾಲೆಯವತಿಯಿಂದ ಆಯೋಜನೆಯಾಗಿದ್ದ ಮೆಟ್ರಿಕ್ ಮೇಳದಲ್ಲಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸುಮಾರು 30 ಸ್ಟಾಲ್‍ಗಳನ್ನು ತೆರೆದಿದ್ದರು. ಮೆಟ್ರಿಕ್ ಮೇಳಕ್ಕೆ ಪೋಷಕರು ಮತ್ತು ಸ್ಥಳೀಯ ನಾಗರೀಕರನ್ನು ಆಹ್ವಾನಿಸಲಾಗಿತ್ತು. ಕತ್ತರಿಸಿದ ಕಲ್ಲಂಗಡಿ ಹಣ್ಣು, ಮಜ್ಜಿಗೆ, ತಂಪು ಪಾನಿಯ ಬಿಸಿಲಿನ ತಾಪವನ್ನು ತಣಿಸಿದವು. ದೋಸೆ, ಚುರುಮುರಿ, ಬೋಂಡ, ಬಜ್ಜಿ, ಸಿಹಿ ತಿನಿಸುಗಳು ಹಸಿವು ನೀಗಿಸಿದವು. ರೆಡಿಮೇಡ್ ಬಟ್ಟೆಗಳು, ತರಕಾರಿ, ಹಣ್ಣಿನ ಸ್ಟಾಲ್‍ಗಳು, ತಾವೆ ಚಿತ್ರಿಸಿದ ಬಣ್ಣದ ಚಿತ್ರಗಳಿಗೆ ಹಾಕಿದ್ದ ಫ್ರೇಮ್‍ಗಳು, ಪೇಪರ್ ಕ್ರಾಫ್ಟ್ ಇಲ್ಲಿದ್ದವು.

ಮೆಟ್ರಿಕ್ ಮೇಳಕ್ಕೆ ಆಗಮಿಸಿದ್ದ ಪೋಷಕರು ಮತ್ತು ನಾಗರೀಕರು ಪ್ರತಿಯೊಂದು ಸ್ಟಾಲ್‍ಗೂ ಭೇಟಿ ನೀಡಿದಾಗ, ವಿದ್ಯಾರ್ಥಿಗಳು ತಮ್ಮ ಮಾರಾಟದ ವಸ್ತುಗಳನ್ನು ಕೊಳ್ಳುವಂತೆ ಮನವೊಲಿಸುವ ನಡೆಸಿದ ಪ್ರಯತ್ನಗಳು ಅವರಲ್ಲಿನ ವ್ಯಾಪಾರಿ ಕೌಶಲಗಳು ಮೊಳೆಯುತ್ತಿರುವುದು ಸ್ಪಷ್ಟವಾಗಿತ್ತು. ಪ್ರತಿಯೊಂದು ವಸ್ತುವಿಗೂ ಇಂತಿಷ್ಟು ಬೆಲೆ ನಿಗಧಿ ಮಾಡಲಾಗಿತ್ತು. ಭೇಟಿ ನೀಡಿದ ಪೋಷಕರು ಮತ್ತು ನಾಗರೀಕರು ತಮಗಿಷ್ಟವಾದದ್ದನ್ನು ದುಡ್ಡು ಕೊಟ್ಟು ಖರೀದಿಸಿದರು. ಮಕ್ಕಳು ವ್ಯಾಪಾರದಲ್ಲಿ ತೊಡಗಿದ್ದರೆ ಶಾಲೆಯ ಶಿಕ್ಷಕರು ಅವರತ್ತ ನಿಗಾವಹಿಸಿದ್ದರು.
ಮೆಟ್ರಿಕ್ ಮೇಳವನ್ನು ಡಯಟ್ ಪ್ರಾಂಶುಪಾಲ ಸೂರ್ಯಪ್ರಕಾಶ್ ಉದ್ಘಾಟಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಪಾರ್ವತಮ್ಮ, ಡಯಟ್ ಹಿರಿಯ ಉಪನ್ಯಾಸಕ ರಂಗಸ್ವಾಮಿ, ತಬಾಸುಮ್, ಮಂಜುಳಾ, ಉರ್ದು ಇಸಿಒ ಸೈಯದ್ ಜಿನ್ನಾ, ಉರ್ದು ಸಿಆರ್‍ಪಿ ಜುಲ್ಪಿಕರ್, ಎಸ್.ಡಿ.ಎಂ.ಸಿ ಅಧ್ಯಕ್ಷ ಸೈಯದ್ ರೆಹಮಾನ್, ಶಾಲೆಯ ಮುಖ್ಯ ಶಿಕ್ಷಕ ಡಿ. ಜಗದೀಶ್ ಹಾಜರಿದ್ದರು.
ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :