ಹಾರೋಹಳ್ಳಿ ನೂತನ ತಾಲ್ಲೂಕು ಕಚೇರಿ ಉದ್ಘಾಟನೆ
ರಾಮನಗರ : ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಹಾರೋಹಳ್ಳಿ ತಾಲ್ಲೂಕಿನ ನೂತನ ತಾಲ್ಲೂಕು ಕಚೇರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನೂತನ ತಾಲ್ಲೂಕು ಒಟ್ಟು 11 ಗ್ರಾಮ ಪಂಚಾಯತಿಗಳನ್ನು ಒಳಗೊಂಡಿದ್ದು, 82 ಗ್ರಾಮಗಳಿವೆ. ಹೊಸ ತಾಲ್ಲೂಕಿನ ಜನಸಂಖ್ಯೆಯು 90 ಸಾವಿರ ಆಗಿದೆ ಎಂದು ತಿಳಿಸಿದರು.
ತಾಲ್ಲೂಕು ಕಚೇರಿಗೆ ಬೇಕಾದ ಹುದ್ದೆಗಳನ್ನು ಬಿಜೆಪಿ ಸರಕಾರ ಸೃಜಿಸಿದ್ದು, ಎಲ್ಲ ಕಚೇರಿಗಳಿಗೂ ಜಾಗ ಒದಗಿಸಿದೆ. ಅಗತ್ಯ ಬಿದ್ದರೆ ಕಚೇರಿಗಳ ಕಟ್ಟಡ ನಿರ್ಮಿಸಲು 30 ಗುಂಟೆ ಜಮೀನನ್ನು ಮೀಸಲಿಡಲಾಗಿದೆ ಎಂದು ತಿಳಿಸಿದರು.
ಹಿಂದಿನ ಸರಕಾರ ಹಾರೋಹಳ್ಳಿಯನ್ನು ತಾಲ್ಲೂಕು ಎಂದು ಘೋಷಿಸಿಲ್ಪಟ್ಟಿತು. ಆದರೆ ಅದಕ್ಕೆ ಅಗತ್ಯವಾದ ಪ್ರಕ್ರಿಯೆಗಳನ್ನು ನಡೆಸಿದ ಶ್ರೇಯಸ್ಸು ಬಿಜೆಪಿ ಸರಕಾರಕ್ಕೆ ಸಲ್ಲಬೇಕು ಎಂದು ಅವರು ಪ್ರತಿಪಾದಿಸಿದರು.
ಬಿಜೆಪಿಯಿಂದ ಅಭಿವೃದ್ಧಿ ಪರ್ವ: ಬಿಜೆಪಿ ಸರಕಾರವು ರಾಮನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಕಲ್ಪ ಮಾಡಿದೆ. ಸಂಸದ ಡಿ.ಕೆ. ಸುರೇಶ್ ಇದನ್ನು ಮೆಚ್ಚಬೇಕಾಗಿತ್ತು. ಆದರೆ ಅವರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ನೂತನ ತಾಲ್ಲೂಕು ಕಚೇರಿಯನ್ನು ವ್ಯವಸ್ಥಿತವಾಗಿ ಮಾಡಲಾಗಿದೆ. ಇದನ್ನು ಚುನಾವಣೆ ಮೇಲೆ ಕಣ್ಣಿಟ್ಟುಕೊಂಡು ಕಾಟಾಚಾರಕ್ಕೇನೂ ಮಾಡಿಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.
ಈ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಜಿಟಿಟಿಸಿ, ಶ್ರೀರಂಗ ಮತ್ತು ಸತ್ತೇಗಾಲ ನೀರಾವರಿ ಯೋಜನೆ, ಜಲಜೀವನ್ ಮಿಷನ್, ಇಂಡೋ ಜರ್ಮನ್ ಟೆಕ್ನಾಲಜಿ ಸೆಂಟರ್, ಸ್ನಾತಕೋತ್ತರ ಕೇಂದ್ರ, ಸರಕಾರಿ ಎಂಜಿನಿಯರಿಂಗ್ ಕಾಲೇಜು ಉನ್ನತೀಕರಣ, ಹೈಟೆಕ್ ರೇಷ್ಮೆ ಮಾರುಕಟ್ಟೆ, ಮಾವು ಸಂಸ್ಕರಣಾ ಘಟಕ, ಇವೆಲ್ಲವನ್ನೂ ತಂದಿದ್ದು ನಮ್ಮ ಸರ್ಕಾರದಲ್ಲಿ ಆಗಿದ್ದು. ಬೇರೆ ಯಾರೇ ಆಗಿದ್ದರೂ ಮೂವತ್ತು ವರ್ಷವಾದರೂ ಇವೆಲ್ಲ ಬರುತ್ತಿರಲಿಲ್ಲ ಎಂದು ಅವರು ಎದುರೇಟು ಕೊಟ್ಟರು.
ನನ್ನ ವಿರುದ್ಧ ಮಾತನಾಡುವವರ ಕೈಯಲ್ಲಿ ನಾಡಪ್ರಭು ಕೆಂಪೇಗೌಡರ ಸಮಾಧಿ ಸ್ಥಳವನ್ನು ಏಕೆ ಅಭಿವೃದ್ಧಿ ಪಡಿಸಲು ಆಗಲಿಲ್ಲ? ನಮ್ಮ ಸರಕಾರ ಇಡೀ ಕೆಂಪಾಪುರದ ಜನರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ಈ ಕೆಲಸವನ್ನು ಕೈಗೆತ್ತಿಕೊಂಡಿದೆ. ಟೀಕಿಸುವವರು ಮೊದಲು ಇದನ್ನೆಲ್ಲ ಯೋಚಿಸಬೇಕು ಎಂದು ಅಶ್ವತ್ಥ ನಾರಾಯಣ ಅಭಿಪ್ರಾಯ ಪಟ್ಟರು.
ರಾಮನಗರದಲ್ಲಿ 270 ಎಕರೆ ಜಾಗದಲ್ಲಿ ಆರೋಗ್ಯ ವಿವಿ ಮತ್ತು ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸರ್ಕಾರ 300 ಕೋಟಿ ರೂ. ಮಂಜೂರು ಮಾಡಿದ್ದು, ಮುಖ್ಯಮಂತ್ರಿಗಳು ಸದ್ಯದಲ್ಲೇ ಶಂಕುಸ್ಥಾಪನೆ ಮಾಡಲಿದ್ದಾರೆ ಎಂದು ತಿಳಿಸಿದರು.
ರಾಮನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿ ಕೂಡ ಸ್ಥಾಪನೆಯಾಗಲಿದೆ. ಜೊತೆಗೆ ಹೊಸ ವೈದ್ಯಕೀಯ ಕಾಲೇಜೂ ಬರಲಿದೆ. ಇದಕ್ಕೆ ಬೇಕಾಗಿರುವ ಹಣದಲ್ಲಿ ಶೇಕಡ 50ರಷ್ಟನ್ನು (300 ಕೋಟಿ ರೂ) ಈಗಾಗಲೇ ಮಂಜೂರು ಮಾಡಲಾಗಿದೆ ಎಂದು ಅವರು ತಿಳಿಸಿದರು.
ಬಿಡದಿಯಲ್ಲಿ ಹೊಸ ಐಟಿಐ ಮತ್ತು ಪಾಲಿಟೆಕ್ನಿಕ್ ಕಾಲೇಜನ್ನು ಆರಂಭಿಸಲಾಗುವುದು. ಬೆಂಗಳೂರು ವಿವಿಯ ಸ್ನಾತಕೋತ್ತರ ಕೇಂದ್ರದ ನಿರ್ಮಾಣಕ್ಕೆ ಜಿಗೇನಹಳ್ಳಿಯಲ್ಲಿ ಜಾಗ ಗುರುತಿಸುವ ಜೊತೆಗೆ 50 ಕೋಟಿ ರೂ. ಒದಗಿಸಲಾಗಿದೆ. ತಿಪ್ಪಸಂದ್ರದಲ್ಲಿ ಕೇವಲ ಒಂದು ವರ್ಷದಲ್ಲಿ 49 ಕೋಟಿ ರೂ. ವೆಚ್ಚದಲ್ಲಿ ಜಿಟಿಟಿಸಿ ನಿರ್ಮಿಸಿದ್ದು, ಲೋಕಾರ್ಪಣೆಗೆ ಸಜ್ಜಾಗಿದೆ. ಟಾಟಾ ಟೆಕ್ನಾಲಜೀಸ್ ಜೊತೆ ಒಡಂಬಡಿಕೆ ಮಾಡಿಕೊಂಡು ಪ್ರತಿ ಐಟಿಐ ಕಾಲೇಜನ್ನು 30 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲಾಗಿದೆ ಎಂದರು.
ರಾಮನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ತಿಳಿಸಿದರು.
ಉದ್ಯಮಗಳಿಗೂ ಒತ್ತು: ರಾಮನಗರ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೂ ಒತ್ತು ಕೊಡಲಾಗಿದೆ. ರಾಜ್ಯದಲ್ಲಿ ಅತ್ಯಂತ ಹೆಚ್ಚು ಕೈಗಾರಿಕೆಗಳ ಜಿಲ್ಲಾ ಪಟ್ಟಿಯಲ್ಲಿ ಜಿಲ್ಲೆಯು 2ನೇ ಸ್ಥಾನದಲ್ಲಿದೆ. ಬಿಡದಿಯ ಟೊಯೋಟಾ ಕಾರ್ಖಾನೆಯಲ್ಲಿ ವರ್ಷಕ್ಕೆ 3 ಲಕ್ಷ ವಾಹನಗಳನ್ನು ತಯಾರಿಸಲಾಗುತ್ತಿದೆ. ಅಲ್ಲಿ ಸುಜುಕಿ ಕಾರುಗಳ ತಯಾರಿಕೆಯೂ ಶುರುವಾಗಿದೆ. ಇದರಿಂದ ಉದ್ಯೋಗ ಅವಕಾಶಗಳ ಸಂಖ್ಯೆ ಮೂರು ಪಟ್ಟು ಜಾಸ್ತಿಯಾಗಿದೆ. ಪ್ರಪಂಚದ ಎಲ್ಲಾ ದೇಶಗಳಿಗೂ ಕಾರುಗಳ ಬಿಡಿಭಾಗಗಳು ಇಲ್ಲಿಂದ ಪೂರೈಕೆ ಆಗುತ್ತಿದೆ ಎಂದು ಅವರು ವಿವರಿಸಿದರು.
ಬಿಡದಿ ಮತ್ತು ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳ ವಿಸ್ತರಣೆಗೆ ಅನುವು ಮಾಡಿಕೊಡಲಾಗಿದೆ. ಇಲ್ಲಿ ಕೈಗಾರಿಕಾ ಟೌನ್ಶಿಪ್ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಕುದೂರಿನ ಬಳಿ ಹೊಸದಾಗಿ ಕೈಗಾರಿಕಾ ಪ್ರದೇಶ ನಿರ್ಮಾಣವಾಗಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ಹಾರೋಹಳ್ಳಿ ತಾಲೂಕು ರಚನೆಗೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ತಾತ್ವಿಕ ಅನುಮೋದನೆ ನೀಡಿದ್ದರು. ನಮ್ಮ ಸರ್ಕಾರ 2022ರ ಜನವರಿಯಲ್ಲಿ ಈ ಸಂಬಂಧ ಅಂತಿಮ ಅಧಿಸೂಚನೆ ಹೊರಡಿಸಿತು. ಹೊಸದಾಗಿ ಘೋಷಣೆಯಾದ 12 ತಾಲೂಕುಗಳ ಪೈಕಿ ಎರಡರಲ್ಲಿ ಮಾತ್ರ ಅಂತಿಮ ಅಧಿಸೂಚನೆ ಆಗಿದೆ. ಅವೆರಡರಲ್ಲಿ ಒಂದು ಹಾರೋಹಳ್ಳಿಯಾಗಿದೆ ಎಂದು ಅಶ್ವತ್ಥನಾರಾಯಣ ವಿವರಿಸಿದರು.
ರಾಮನಗರ ಜಿಲ್ಲೆಯ ಎಲ್ಲಾ ತಾಲೂಕುಗಳ 2.25 ಲಕ್ಷ ಮನೆಗಳಿಗೆ ಶುದ್ದ ಕುಡಿಯುವ ನೀರು ಒದಗಿಸುವುದಕ್ಕಾಗಿ ಜಲಜೀವನ್ ಮಿಷನ್ ಯೋಜನೆ ಅಡಿ 1,800 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ದೊಡ್ಡ ಮರಳವಾಡಿ ಯೋಜನೆ, ಮಂಚನಬೆಲೆ ಜಲಾಶಯ ಯೋಜನೆ, ಸತ್ತೇಗಾಲ ಯೋಜನೆ, ವೈಜಿ ಗುಡ್ಡ ಯೋಜನೆ, ಬಹುಗ್ರಾಮ ಕುಡಿಯುವ ನೀರು ಯೋಜನೆ ಇವುಗಳು ಇದರಲ್ಲಿ ಸೇರಿವೆ. ಇದಲ್ಲದೆ, ರಾಮನಗರದಲ್ಲಿ ಕುಡಿಯುವ ನೀರು ಸೌಕರ್ಯಕ್ಕಾಗಿ 450 ಕೋಟಿ ರೂ. ಒದಗಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ರೇಷ್ಮೆ ಮಂಡಳಿ ಅಧ್ಯಕ್ಷ ಗೌತಮ್ ಗೌಡ, ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಅನಿತಾ ಕುಮಾರಸ್ವಾಮಿ, ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ, ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ ಸೇರಿದಂತೆ ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :