ನಾಳೆ (ಫೆಬ್ರವರಿ 25) ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ : ಬಿ.ಟಿ. ದಿನೇಶ್

ರಾಮನಗರ : ತಾಲ್ಲೂಕು ಮಟ್ಟದ ಏಳನೇ ಕನ್ನಡ ಸಾಹಿತ್ಯ ಸಮ್ಮೇಳನವು ಫೆಬ್ರವರಿ 25ರಂದು ತಾಲ್ಲೂಕಿನ ಕೈಲಾಂಚ ಗ್ರಾಮದಲ್ಲಿ ನಡೆಯಲಿದ್ದು, ಜಿ.ಎಚ್. ರಾಮಯ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಬಿ.ಟಿ. ದಿನೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ಧ್ವಜಾರೋಹಣದೊಂದಿಗೆ ಸಮ್ಮೇಳನಕ್ಕೆ ಚಾಲನೆ ದೊರೆಯಲಿದೆ. ಸಮ್ಮೇಳನಾಧ್ಯಕ್ಷರ ಮೆರವಣಿಗೆ, ಉದ್ಘಾಟನೆ, ಸಮ್ಮೇಳನಾಧ್ಯಕ್ಷರ ಭಾಷಣ, ಕವಿಗೋಷ್ಠಿ, ರೇಷ್ಮೆ, ಹೈನುಗಾರಿಕೆ, ತೋಟಗಾರಿಕೆ, ಖುಷ್ಕಿ, ಸಾಹಿತ್ಯ, ರಂಗಭೂಮಿ, ಪತ್ರಿಕೋದ್ಯಮ, ಮಹಿಳೆಯರ ಪಾತ್ರ, ಪ್ರವಾಸೋದ್ಯಮದಲ್ಲಿ ಯುವ ಜನತೆಯ ಪಾತ್ರ ವಿಷಯಗಳ ಕುರಿತು ಆಸಕ್ತರು ವಿಚಾರ ಮಂಡಿಸಲಿದ್ದಾರೆ. ಇದರೊಟ್ಟಿಗೆ ಬಹಿರಂಗ ಅಧಿವೇಶನ, ಸಂವಾದ, ಸನ್ಮಾನ ಮತ್ತು ಸಮಾರೋಪ ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ ಎಂದರು.
ಶಾಸಕಿ ಅನಿತಾ ಕುಮಾರಸ್ವಾಮಿ ಸಮ್ಮೇಳನ ಉದ್ಘಾಟಿಸಲಿದ್ದು, ಜನಪ್ರತಿನಿಧಿಗಳು ಹಾಗೂ ಕಸಾಪ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರಿಗೆ ರೇಷ್ಮೆ ನಾಡು ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಟಿ. ನಾಗೇಶ್ ಮಾತನಾಡಿ, ಸಮ್ಮೇಳನವನ್ನು ಗ್ರಾಮೀಣ ಭಾಗಕ್ಕೆ ಕೊಂಡೊಯ್ಯುವ ಸಲುವಾಗಿ ಕೈಲಾಂಚದಲ್ಲಿ ಈ ಬಾರಿಯ ಸಮ್ಮೇಳನ ನಡೆದಿದೆ ಎಂದು ಮಾಹಿತಿ ನೀಡಿದರು.
ಕಸಾಪ ಪದಾಧಿಕಾರಿಗಳಾದ ರಾಜೇಶ್, ಬಾನಂದೂರು ನಂಜುಂಡಿ, ಬಿ.ಟಿ. ರಾಜೇಂದ್ರ, ವಡ್ಡರಹಳ್ಳಿ ಗಿರೀಶ್, ಮಹದೇವ ಲಕ್ಕಸಂದ್ರ, ದೇವರಾಜು ಉಪಸ್ಥಿತರಿದ್ದರು.

ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :

https://chat.whatsapp.com/IY8d8seeQSCIZewIP8uKdh

Leave a Reply

Your email address will not be published. Required fields are marked *