ಶಿವಾಜಿ ಅವರು ರಾಮನಗರಕ್ಕೆ ಬಂದು ಹೋಗಿರುವ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಾಗಿದೆ : ಪಿ.ಜಿ.ಆರ್. ಸಿಂಧ್ಯಾ

ರಾಮನಗರ : ಶಿವಾಜಿ ಅವರು ರಾಮನಗರಕ್ಕೆ ಬಂದು ಹೋಗಿರುವ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಾಗಿದ್ದು, ಮರಾಠರಿಗೂ ಹಾಗೂ ರಾಮನಗರಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್, ರಾಮನಗರ ಜಿಲ್ಲಾ ಕ್ಷತ್ರೀಯ ಮರಾಠ ಸೇವಾ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮರಾಠಿ ಭಾಷೆಯಲ್ಲಿ ವಾಡಿ ಎಂದರೆ ಒಂದು ಪ್ರದೇಶವಾಗಿದ್ದು, ರಾಮನಗರ ಜಿಲ್ಲೆಯಲ್ಲಿರುವ ಮುದವಾಡಿ, ಚಿಕ್ಕ ಮುದವಾಡಿ, ಮರಳವಾಡಿ, ದೊಡ್ಡ ಮರಳವಾಡಿಯಲ್ಲಿಯೂ ಮರಾಠಿಗರು ನೆಲೆಸಿದ್ದಾರೆ ಎಂದು ತಿಳಿಸಿದರು.

ಮರಾಠರು ದೇಶ ಕಟ್ಟಿದ ಜನ. ಭಾರತ ದೇಶದಲ್ಲಿ 9 ಕೋಟಿ ಜನಸಂಖ್ಯೆಯನ್ನು ಹೊಂದಿದ್ದು, ಕರ್ನಾಟಕದಲ್ಲಿ 20 ಲಕ್ಷ ಜನರಿದ್ದಾರೆ ಎಂದರು.

ಶಿವಾಜಿ ಅವರು 37 ಯುದ್ಧಗಳನ್ನು ಮಾಡಿದ್ದು, ಅದರಲ್ಲಿ 35 ಯುದ್ಧಗಳು ಮರಾಠ ರಾಜರ ವಿರುದ್ಧವೇ ಆಗಿತ್ತು. ಅಂದಿನ ಕಾಲದಲ್ಲಿ ಶಿವಾಜಿ ಅವರನ್ನು ಮಹಾರಾಜರು ಎಂದು ಒಪ್ಪಿರಲಿಲ್ಲ. ದೇಶದ ಒಳಿತಿಗಾಗಿ ಭಾರತವನ್ನು ಉಳಿಸಲು ಒಬ್ಬ ಹಿಂದೂವಾಗಿ ಹೋರಾಟ ಮಾಡಿದರು ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಶಿವಾಜಿ ಮಹಾರಾಜರು ದಕ್ಷಿಣ ಭಾರತದಲ್ಲಿ ಅಲ್ಲದೇ ಇಡೀ ಭಾರತದಲ್ಲಿಯೇ ಸಂಚಲನ ಮೂಡಿಸಿದ ಮಹಾರಾಜ. ದೇಶದಲ್ಲಿ ಸಂಘಟನೆ ಮೂಲಕ ಏನನ್ನಾದರೂ ಸಾಧಿಸಬಹುದು ಎಂದು ತಿಳಿಸಿದವರು ಶಿವಾಜಿ ಮಹಾರಾಜರು. ಗೆರಿಲ್ಲಾ ಮಾದರಿಯ ಯುದ್ಧವು ಅವರ ರಣತಂತ್ರವಾಗಿತ್ತು. ಸ್ವಾಭಿಮಾನಿ ರಾಷ್ಟ್ರ ನಿರ್ಮಾಣಕ್ಕೆ ಹೋರಾಡಿದ ಮಹಾರಾಜರಲ್ಲಿ ಅವರು ಮುಂಚೂಣಿಯಲ್ಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ಜಿಲ್ಲಾ ಕ್ರೀಡಾಂಗಣದಿಂದ ಡಾ.ಬಿ.ಆರ್. ಅಂಬೇಡ್ಕರ್ ಭವನದ ವರೆಗೆ ಮೆರವಣಿಗೆ ನಡೆಯಿತು. ಇದೇ ಸಂದರ್ಭದಲ್ಲಿ ಮರಾಠ ಸಮುದಾಯದ ಹಿರಿಯ ಮುಖಂಡರು, ಸಂಗೀತ ವಿದ್ವಾನ್ ಶಿವಾಜಿರಾವ್ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ರೇಷ್ಮೆ ಕೈಗಾರಿಕೆಗಳ ನಿಗಮದ ಅಧ್ಯಕ್ಷ ಗೌತಮ್ ಗೌಡ, ನಗರಸಭೆ ಅಧ್ಯಕ್ಷೆ ಬಿ.ಕೆ. ಪವಿತ್ರಾ, ನಗರಸಭೆ ಸದಸ್ಯ ಕೆ. ಶೇಷಾದ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಜಿ. ರಮೇಶ್ ಬಾಬು, ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಜಿ. ಮೂಳೆ, ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ತಿನ ಜಿಲ್ಲಾಧ್ಯಕ್ಷ ಸೋಮಶೇಖರ ರಾವ್ ಕಾಂಬ್ಳೆ, ಕಾರ್ಯದರ್ಶಿ ತುಕಾರಾಂ ರಾವ್ ಖಾಂಡೆ, ಖಜಾಂಚಿ ಬಾಬುರಾವ್, ಶ್ರೀ ಛತ್ರಪತಿ ಶಿವಾಜಿ ಸೇನೆಯ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಕವಿತಾರಾವ್ ಜಗತಾಪ್, ರಾಮನಗರ ಜಿಲ್ಲಾ ಕ್ಷತ್ರಿಯ ಮರಾಠ ಸೇವಾ ಟ್ರಸ್ಟಿನ ಅಧ್ಯಕ್ಷ ನಾರಾಯಣರಾವ್ ಚೌಹಾಣ್, ಕಾರ್ಯದರ್ಶಿ ಶ್ರೀನಿವಾಸರಾವ್ ನಲಿಗೆ, ಖಜಾಂಚಿ ಶಂಕರರಾವ್, ಮರಾಠ ಸಮುದಾಯದ ಮುಖಂಡರಾದ ಸಿದ್ದೋಜಿರಾವ್, ಯಶವಂತರಾವ್, ಶ್ರೀಧರರಾವ್, ಷಣ್ಮುಗರಾವ್, ಹರೀಶ್ ರಾವ್, ಚಂದನ್ ಮೋರೆ, ಬಾಬುರಾವ್ , ಸೋನಾಬಾಯಿ ಖಾಂಡೆ, ತುಕಾರಾಮ್ ರಾವ್ ಖಾಂಡೆ, ಆರ್.ಕೆ. ಬಾಬುರಾವ್ ಕಾಂಬ್ಳೆ, ಲಕ್ಷ್ಮಣ್‌ ರಾವ್ ಮಾನೆ, ಷಣ್ಮುಖರಾವ್ ಸಾಳಂಕೆ, ಶಂಕರ್‌ರಾವ್ ವಳಕುಂದೆ, ಮಾಧುರಾವ್ ಖಾಂಡೆ ಇತರರು ಇದ್ದರು.

ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :

https://chat.whatsapp.com/IY8d8seeQSCIZewIP8uKdh

Leave a Reply

Your email address will not be published. Required fields are marked *