ಗ್ರಾಮೀಣ ಭಾಗಗಳಿಗೂ ಸಮ್ಮೇಳನ ವಿಸ್ತರಿಸಬೇಕು ಎಂಬುದು ಕೇಂದ್ರ ಕಸಾಪದ ಆಶಯ : ಬಿ.ಎಂ. ಪಟೇಲ್ ಪಾಂಡು

ಶ್ರೀ ಕಾಡನಕುಪ್ಪೆ ಶಿವರಾಂರವರ ವೇದಿಕೆ :

ಪ್ರಸ್ತುತ ಜಾಗತೀಕರಣ ಯುಗದಲ್ಲಿ ಕನ್ನಡತನವನ್ನು ಉಳಿಸಿ ಬೆಳಸಲು ಸಮ್ಮೇಳನದಂತಹ ಸಾಹಿತ್ಯ ಕಾರ್ಯಕ್ರಮಗಳು ಸಹಕಾರಿಯಾಗಿವೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಕೋಶಾಧ್ಯಕ್ಷ ಬಿ.ಎಂ.ಪಟೇಲ್  ಪಾಂಡು ತಿಳಿಸಿದರು.

ರಾಮನಗರ ತಾಲೂಕಿನ ಕೈಲಾಂಚದಲ್ಲಿ  ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಆಯೋಜಿಸಿದ್ದ ರಾಮನಗರ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಭಾಷೆ ಕುರಿತಾದ ಕನ್ನಡದ ಹಬ್ಬಗಳು ಹೆಚ್ಚಾಗಿ ಗ್ರಾಮೀಣ ಭಾಗದಲ್ಲಿ  ನಡೆದರೆ ಎಲ್ಲರ ಅಂತಕರಣದಲ್ಲಿ ಭಾವನಾತ್ಮಕವಾಗಿ ಕನ್ನಡ ಭಾಷೆಯನ್ನು ಬೆಳೆಸಲು ಸಾಧ್ಯವಾಗುತ್ತದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಕನ್ನಡ ನಾಡು, ನುಡಿ, ಗಡಿ, ನೆಲ, ಜಲ ವಿಷಯವಾಗಿ ಹೋರಾಡುತ್ತಾ ಕನ್ನಡದ ಅಸ್ಮಿತೆಯನ್ನು ಉಳಿಸುವ ಕೆಲಸದಲ್ಲಿ  ನಿರತವಾಗಿದೆ. ಕನ್ನಡದ ನಾಡು ನುಡಿಯ ಇತಿಹಾಸದ ಬಗ್ಗೆ ತಿಳಿಯುವುದು ಬಹಳ ಮುಖ್ಯ. ಹಾಗಾಗಿ ಗ್ರಾಮೀಣ ಭಾಗಗಳಿಗೂ ಸಮ್ಮೇಳನ ವಿಸ್ತರಿಸಬೇಕು ಎಂಬುದು ಕೇಂದ್ರ ಕಸಾಪದ ಆಶಯ. ಅದಕ್ಕೆ ಪೂರಕವಾಗಿ ರಾಮನಗರ ತಾಲೂಕು ಸಾಹಿತ್ಯ ಸಮ್ಮೇಳನ ಗ್ರಾಮೀಣ ಭಾಗದಲ್ಲಿ ಆಯೋಜಿಸಿ ಕನ್ನಡದ ಅಸ್ಮಿತೆ ಉಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.

ಇತ್ತೀಚಿನ  ದಿನಗಳಲ್ಲಿ ಭಾಷಾ ಮಾಧ್ಯಮದ ಗೊಂದಲಗಳು ವಿದ್ಯಾರ್ಥಿಗಳನ್ನು ಕಾಣುತ್ತಿವೆ. ಆದರೆ ಅಧ್ಯಯನ ಪ್ರಕಾರ ಕನ್ನಡ ಮಾಧ್ಯಮದಲ್ಲಿ ಓದಿದವರೇ ಐಎಎಸ್ ಪರೀಕ್ಷೆಯನ್ನು ಎದುರಿಸಿ ಶೇ. 80 ರಷ್ಟು ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಕನ್ನಡ ಭಾಷೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು ಎಂದು ತಿಳಿಸಿದರು.

ಸರ್ಕಾರಿ ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಆರ್ .ಕೆ. ಬೈರಲಿಂಗಯ್ಯ ಮಾತನಾಡಿ, ಕಸಾಪ ನಾಡು, ನುಡಿ, ಜಲಕ್ಕಾಗಿ ಹೋರಾಟ ಮಾಡುತ್ತಿದೆ. ಅಂತಹ ಪರಿಷತ್ತಿನಿಂದ ಆಯೋಜಿಸುವ ಕಾರ್ಯಕ್ರಮಗಳಿಗೆ ಸಾಹಿತ್ಯಾಶಕ್ತರ ಕೊರತೆ ಎದ್ದು ಕಾಣುವುದು ವಿಷಾದನೀಯ. ನಮ್ಮ ಕಾರ್ಯಕ್ರಮ ಎಂಬ ಅಭಿಮಾನ ಕನ್ನಡಿಗರಲ್ಲಿ ಹುಟ್ಟಿದಾಗ ಮಾತ್ರ ಸಮ್ಮೇಳನಗಳು ಯಶಸ್ಸು ಕಾಣಲು ಸಾಧ್ಯವಾಗಲಿದೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ. ನಾಗೇಶ್, ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಪಿ. ಅಶ್ವಥ್, ಸಮಾಜ ಸೇವಕ ಸಬ್ಬಕೆರೆ ಶಿವಲಿಂಗಯ್ಯ ಮಾತನಾಡಿದರು.  ಸಮ್ಮೇಳನದಲ್ಲಿ ಮಾವಿನಸಿರಿ ಸ್ಮರಣಸಂಚಿಕೆ, ರೇಷ್ಮೆಸಿರಿ, ಅರ್ಕಾವತಿಯ ತೊಟ್ಟಿಲು ಮೂರು ಪುಸ್ತಕಗಳನ್ನು ವೇದಿಕೆ ಗಣ್ಯರು ಲೋಕಾರ್ಪಣೆಗೊಳಿಸಿದರು.

ನಗರಸಭೆ ಅಧ್ಯಕ್ಷೆ ಬಿ.ಕೆ. ಪವಿತ್ರ, ಕೈಲಾಂಚ ಗ್ರಾಪಂ ಅಧ್ಯಕ್ಷೆ ಚಂದ್ರಮ್ಮ, ಮಾಜಿ ಅಧ್ಯಕ್ಷರಾದ ಪಾಂಡು, ಕೆಂಪರಾಮು, ಸದಸ್ಯರಾದ ದಾಸೇಗೌಡ, ವೆಂಕಟೇಶ್, ವಾಸು , ಹುಲಿಕೆರೆ ಗುನ್ನೂರು ಗ್ರಾಪಂ ಅಧ್ಯಕ್ಷೆ  ತೇಜಸತೀಶ್  , ಬನ್ನಿಕುಪ್ಪೆ ಕೆಂಗಲ್ ಹನುಮಂತಯ್ಯ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಶಿವಲಿಂಗಯ್ಯ, ಅಂಕನಹಳ್ಳಿ ಗಿರೀಶ್, ಮಾಜಿ ಗೌರವ ಕಾರ್ಯದರ್ಶಿ ಸಿ.ರಾಜಶೇಖರ್, ಕಸಾಪ ಕೋಶಾಧ್ಯಕ್ಷ ರಾಜೇಶ್, ತಾಲೂಕು ಅಧ್ಯಕ್ಷ ಬಿ.ಟಿ. ದಿನೇಶ್, ಕೋಶಾಧ್ಯಕ್ಷ ಬಾನಂದೂರು ನಂಜುಂಡಿ,  ಸಂಚಾಲಕ ಬಿ.ಟಿ. ರಾಜೇಂದ್ರ, ಸಾಹಿತಿಗಳಾದ ಡಾ.ಎಲ್.ಸಿ. ರಾಜು, ಡಾ.ಎಂ. ಬೈರೇಗೌಡ, ಸು.ಚಿ.ಗಂಗಾಧರಯ್ಯ, ಎಲ್ಲೇಗೌಡ ಬೆಸಗರಹಳ್ಳಿ, ಕೂ.ಗಿ. ಗಿರಿಯಪ್ಪ, ಜಿ. ಶಿವಣ್ಣ, ಚೌ.ಪು.ಸ್ವಾಮಿ ಇತರರು ಇದ್ದರು.

ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :

https://chat.whatsapp.com/IY8d8seeQSCIZewIP8uKdh

Leave a Reply

Your email address will not be published. Required fields are marked *