ಪರಭಾಷೆಯನ್ನು ಕಲಿಯಬೇಕು ; ಮಾತೃ ಭಾಷೆಯನ್ನು ಮೆರೆಸಬೇಕು : ಜಿ.ಎಚ್. ರಾಮಯ್ಯ
ಬೆಳಗಾವಿಯಲ್ಲಿನ ಬೆಳವಣಿಗೆಗಳು ಕನ್ನಡ ನಾಡಿನ ಜನಮನದಲ್ಲಿ ನೋವುಗಳನ್ನು ಹೆಪ್ಪುಗಟ್ಟಿಸಿವೆ. ಸಹನೆಯ ಕಟ್ಟೆ ಒಡೆದು ಹೋಗುವ ಕಾಲ ಸನಿಹದಲ್ಲಿದೆ. ಮಹಾರಾಷ್ಟ್ರ ಸರ್ಕಾರ ಪದೇ ಪದೇ ಗಡಿಯ ಬಗ್ಗೆ ಕ್ಯಾತೆ ತೆಗೆಯುತ್ತಲೇ ಬರುತ್ತಿರುವುದು ಕನ್ನಡಿಗರಾದ ನಮಗೆ ನಾಚಿಕೆಗೇಡಿನ ಸಂಗತಿ. ಮಹಾರಾಷ್ಟ್ರದ ಜತ್ ಹಾಗೂ ತಮಿಳುನಾಡಿನ ಕನ್ನಡವ ತಾಲೂಕಿನಲ್ಲಿನ ಜನರು ಕನ್ನಡವನ್ನೇ ಮಾತನಾಡುತ್ತಿರುವುದು ಕನ್ನಡಾಭಿಮಾನಕ್ಕೆ ಸಾಕ್ಷಿ. ಅವರ ಅಭಿಮಾನಕ್ಕೆ ಧಕ್ಕೆ ತರದಂತೆ ಸೂಕ್ತ ಕ್ರಮ ಜರುಗಿಸಬೇಕೆಂಬುದು ಪ್ರತಿಯೊಬ್ಬ ಕನ್ನಡಿಗರ ಅಂತರಾಳದ ಮಾತಾಗಿಸಿ.
– ಜಿ.ಎಚ್. ರಾಮಯ್ಯ, ಸರ್ವಾಧ್ಯಕ್ಷರು, ರಾಮನಗರ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನ
ಶ್ರೀ ಕಾಡನಕುಪ್ಪೆ ಶಿವರಾಂರವರ ವೇದಿಕೆ :
ಕನ್ನಡ ಭಾಷೆಗೆ ಸಂಸ್ಕೃತ, ಇಂಗ್ಲಿಷ್ , ಹಿಂದಿ ಹೇರಿಕೆಯ ಅಪಾಯಗಳನ್ನು ಎದುರಿಸುವ ಸಶಕ್ತತೆ ಇದೆ. ಕಣ್ಣಿಗೆ ಕಾಣಲಿರುವ ಕನ್ನಡ, ಕಿವಿಗೆ ಕೇಳುತ್ತಿರುವ ಕನ್ನಡ, ನಾಲಿಗೆಯಲ್ಲಿ ನಲಿಯುತ್ತಿರುವ ಕನ್ನಡ, ಕಾವ್ಯದಲ್ಲಿ ಅರಳುತ್ತಿರುವ ಕನ್ನಡವನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ ಎಂದು ರಾಮನಗರ ತಾಲೂಕಿನ 7ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಜಿ.ಎಚ್ . ರಾಮಯ್ಯ ತಿಳಿಸಿದರು.
ರಾಮನಗರ ತಾಲೂಕಿನ ಕೈಲಾಂಚದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಆಯೋಜಿಸಿರುವ ರಾಮನಗರ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಯಾವುದೇ ಆಂತಕಗಳನ್ನು ಮೆಟ್ಟಿನಿಲ್ಲುವಲ್ಲಿ ಹಿಂದೆ, ಇಂದು ಮತ್ತು ಮುಂದೆಯೂ ಕನ್ನಡ ಭಾಷೆ ಯಶಸ್ವಿಯಾಗುತ್ತದೆ. ಈ ಬಗ್ಗೆ ಯಾರಿಗೂ ಆತಂಕ ಬೇಡ ಎಂದು ತಿಳಿಸಿದರು.
ಪರಭಾಷೆಯನ್ನು ಕಲಿಯಬೇಕು. ಮಾತೃ ಭಾಷೆಯನ್ನು ಮೆರೆಸಬೇಕು. ಸಂಘಟನೆಗಳು ಸದಾ ಜಾಗೃತವಾಗಿರಬೇಕು. ಬೇರೆ ಭಾಷೆಗಳನ್ನು ಗೌರವಿಸಬೇಕು. ಅಲ್ಲಿನ ಗುಣಾತ್ಮಕ ಅಂಶಗಳನ್ನು ಅಳವಡಿಸಿಕೊಳ್ಳಬೇಕು. ಕನ್ನಡದ ಪರಿಸರ ಎಲ್ಲೆಡೆ ಬೆಳಗುವಂತಾಗಬೇಕು. ಪಾಶ್ಚಾತ್ಯ ಸಂಸ್ಕøತಿಯಿಂದ ಪ್ರಭಾವಿತರಾಗದೇ ನಮ್ಮ ಸಂಸ್ಕøತಿಯ ಏಳಿಗೆಗೆ ಎಲ್ಲರೂ ದುಡಿಯಬೇಕು ಎಂದು ಸಲಹೆ ನೀಡಿದರು.
ಕನ್ನಡದ ಮೇಲಿನ ಅಭಿಮಾನ ಎನ್ನುವುದು ಕೇವಲ ಭಾಷೆಗೆ ಸಂಬಂ„ಸಿದ್ದಲ್ಲ. ಭಾಷೆಯು ಒಂದು ಜೀವನ ವಿಧಾನ. ಸಂಸ್ಕೃತಿಯು ಸಂವಿಧಾನ. ಕನ್ನಡ, ಕನ್ನಡಿಗ, ಕರುನಾಡು ನಿತ್ಯ ಸತ್ಯ ಪದಪುಂಜಗಳು. ಈ ಮೂರು ಪ್ರಮುಖ ವಸ್ತುನಿಷ್ಠ ಅಂಶಗಳು ಉಳಿದು ಬೆಳೆಯಲಿಕ್ಕೆ ಜನಪದರು ಮೂಲ ಕರ್ತರು ಎಂದು ತಿಳಿಸಿದರು.
ಪ್ರಾಚೀನ ಭಾಷೆಗಳ ಪಟ್ಟಿಯಲ್ಲಿ ಸಂಸ್ಕೃತ, ಗ್ರೀಕ್ ನಂತರ ಕನ್ನಡ ಮೂರನೇ ಸ್ಥಾನ ಪಡೆದಿದೆ. ಕನ್ನಡ ಭಾಷೆಯು ಶೇ. 99.99ರಷ್ಟು ಪರಿಪೂರ್ಣ ಭಾಷೆಯಾಗಿ ಹೊರ ಹೊಮ್ಮಿದೆ. ಇಂಗ್ಲಿಷ್ ಭಾಷೆಗೆ ಕನ್ನಡಕ್ಕಿರುವಂತೆ ತನ್ನದೇ ಆದ ಸ್ವಂತ ಲಿಪಿ ಇಲ್ಲ. ಅವರು ರೋಮನ್ ಲಿಪಿಯಲ್ಲಿ ವ್ಯವಹರಿಸುತ್ತಾರೆ. ಅದೇ ರೀತಿ ಹಿಂದಿ ಭಾಷೆಗೂ ಸ್ವಂತ ಲಿಪಿ ಇಲ್ಲದ ಕಾರಣ ದೇವನಾಗರಿ ಭಾಷೆಯಲ್ಲಿ ವ್ಯವಹರಿಸುತ್ತಿದೆ. ಆದರೆ, ಕನ್ನಡ ಭಾಷೆಗೆ ಪರಿಪೂರ್ಣತೆಯಿದೆ ಎಂದು ಹೇಳಿದರು.
ಕವಿರಾಜಮಾರ್ಗ ಕೃತಿ ಕನ್ನಡದಲ್ಲಿ ರಚನೆಗೊಂಡ ಕಾಲಘಟ್ಟದಲ್ಲಿ ಇಂಗ್ಲಿಷ್ ಭಾಷೆ ತೊಟ್ಟಿಲಲ್ಲಿದ್ದರೆ, ಹಿಂದಿ ಭಾಷೆ ಹುಟ್ಟೇ ಇರಲಿಲ್ಲ. ವಿದೇಶಿಗರೊಬ್ಬರು ಕರ್ನಾಟಕರದಲ್ಲಿ ನೆಲೆಸಿ ಕನ್ನಡ ಭಾಷೆಯನ್ನು ಕಲಿತು ಕನ್ನಡದ ನಿಘಂಟು ರಚಿಸಿದ ದಾಖಲೆ ಪ್ರಪಂಚದ ಯಾವ ಭಾಷೆಗೂ ಸಾಧ್ಯವಾಗಿಲ್ಲ ಎಂದರು.
ಮತ್ತೊಂದೆಡೆ ಪಂಪ ಕವಿ ಕನ್ನಡ ನಾಡು ಸುಂದರ ಮತ್ತು ಪ್ರಾಕೃತಿಕ ಮಿಲನಗಳ ಸಂಪತ್ತು ಎಷ್ಟು ಹೇರಳವಾಗಿದೆ ಎಂಬ ನಿಲುವಿನಲ್ಲಿ ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮುಮಂ ಎಂದು ವರ್ಣಿಸಿರುವುದನ್ನು ಗಮನಿಸಿದರೆ ಕನ್ನಡ ಭಾಷಾ ಪರಂಪರೆಯ ಮಹತ್ವವನ್ನು ಅರಿಯಬಹುದಾಗಿದೆ ಎಂದು ತಿಳಿಸಿದರು.
ಕನ್ನಡ ಭಾಷೆಯ ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸುವ ತಾತ್ವಿಕ ತಂತ್ರ, ಹೋರಾಟಗಳ ಕುರಿತು ಚರ್ಚಿಸುವ ಮೂಲಕ ಕನ್ನಡಿಗರ ಜಾಗೃತಿಗೆ, ಒಗ್ಗಟ್ಟಿಗೆ, ಅಭಿವೃದ್ದಿಗೆ ಭದ್ರ ಅಡಿಪಾಯ ಹಾಕುವ ನಿಟ್ಟಿನಲ್ಲಿ ಸಮ್ಮೇಳನಗಳು ನೆರವಾಗುತ್ತವೆ ಎಂದು ತಿಳಿಸಿದರು.
ರಾಮನಗರ ಸಾಹಿತ್ಯ, ಸಾಂಸ್ಕೃತಿಕ, ರಾಜಕೀಯ, ಧಾರ್ಮಿಕ ವಿಷಯಗಳನ್ನು ಮೆಲುಕು ಹಾಕಿ ಜಿಲ್ಲಾ ಕೇಂದ್ರದಲ್ಲಿ ಸಾಹಿತ್ಯ ಭವನ ನಿರ್ಮಾಣ, ಅರ್ಕಾವತಿ ನದಿ ಶುದ್ದೀಕರಣ ಹಾಗೂ ಪ್ರಮುಖ ತಾಣಗಳನ್ನು ಪ್ರವಾಸಿ ಕೇಂದ್ರಗಳನ್ನಾಗಿ ಮಾಡಬೇಕೆಂಬ ಹಲವು ವಿಷಯಗಳ ಬಗ್ಗೆ ಸಮ್ಮೇಳನಾಧ್ಯಕ್ಷರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.
ಪರಿಷತ್ತು ಧ್ವಜ ಹಸ್ತಾಂತರಿಸಿದ ನಿಕಟಪೂರ್ವ ಸಮ್ಮೇಳನಾದ್ಯಕ್ಷ ಡಾ. ಎಲ್.ಸಿ. ರಾಜು ಮಾತನಾಡಿ ಅಕ್ಷರವನ್ನು ಕಲಿಯದ ಜನರು ಕಾವ್ಯವನ್ನು ಪ್ರಯೋಗ ಮಾಡಬಲ್ಲಂತ ಪರಿಣಿತಮತಿಗಳು ಜನಪದರಾಗಿದ್ದರು. ಜನಪದರ ಮೂಲ ನೆಲೆ ಗ್ರಾಮ. ಬಿಎಂಶ್ರೀಯವರ ಮಾತಿನಂತೆ ಜನವಾಣಿ ಬೇರು-ಕವಿವಾಣಿ ಹೂ ಎನ್ನುವಂತೆ ಹೂ ಅರಳಲು ಕವಿಗಳಿಗೆ ಅಂತಃ ಸತ್ವ ನೀಡುವ ರೀತಿಯಲ್ಲಿ ಜನಪದ ಕೆಲಸ ಮಾಡಿದೆ ಎಂಬುದು ಸ್ಪಷ್ಟವಾಗುತ್ತದೆ. ಹೀಗೆ ಶ್ರಮವನ್ನು ಮರೆಯಲು ಸಾಹಿತ್ಯ ರಚನೆ, ಕಟ್ಟಿಕೊಟ್ಟ ಹಾಡುಗಳೇ ಅತ್ಯಂತ ಮËಲ್ಯಯುತವಾದ ಜನಪದ ಸಾಹಿತ್ಯವಾಗಿವೆ ಎಂದು ಹೇಳಿದರು.
ಮಾತು ಎಂಬುದು ಹುಟ್ಟಿದ ದಿನವೇ ಸಾಹಿತ್ಯ ಸಹ ಹುಟ್ಟಿತು ಎಂಬುದಕ್ಕೆ ಜನಪದ ಸಾಹಿತ್ಯವೇ ಒಂದು ಸ್ಪಷ್ಟ ಉದಾಹರಣೆಯಾಗಿದೆ. ಅಕ್ಷರರೂಪಕ್ಕೆ ಬಾರದೆ ಇದ್ದರೂ ಮಾತಿನ ರೂಪದಲ್ಲಿ ಹುಟ್ಟಿದ್ದು ಸಾಹಿತ್ಯವಾದದ್ದು ಜನಪದ ಸಾಹಿತ್ಯವಾಗಿದೆ. ಹಳ್ಳಿಗಳಿಂದ ಅರಳಿರುವ ಸಾಹಿತ್ಯ ಜಾಗತೀಕಮಟ್ಟಕ್ಕೆ ಹರಡಲು ಸಾಧ್ಯ ಎಂದ ಅವರು ಸಮ್ಮೇಳನ ಅರ್ಥಪೂರ್ಣವಾಗಿದ್ದು, ಎಲ್ಲರೂ ಕನ್ನಡ ತೇರನ್ನು ಎಳೆಯುವ ಕೆಲಸ ಮಾಡೋಣ ಎಂದು ತಿಳಿಸಿದರು.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಕೋಶಾಧ್ಯಕ್ಷ ಬಿ.ಎಂ. ಪಟೇಲ್ ಪಾಂಡು, ಸರ್ಕಾರಿ ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಆರ್.ಕೆ. ಬೈರಲಿಂಗಯ್ಯ , ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ. ನಾಗೇಶ್, ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಪಿ. ಅಶ್ವಥ್, ಸಮಾಜ ಸೇವಕ ಸಬ್ಬಕೆರೆಶಿವಲಿಂಗಯ್ಯ, ನಗರಸಭೆ ಅಧ್ಯಕ್ಷೆ ಬಿ.ಕೆ. ಪವಿತ್ರ, ಕೈಲಾಂಚ ಗ್ರಾಪಂ ಅಧ್ಯಕ್ಷೆ ಚಂದ್ರಮ್ಮ, ಮಾಜಿ ಅಧ್ಯಕ್ಷರಾದ ಪಾಂಡು, ಕೆಂಪರಾಮು, ಸದಸ್ಯರಾದ ದಾಸೇಗೌಡ, ವೆಂಕಟೇಶ್, ವಾಸು , ಹುಲಿಕೆರೆ ಗುನ್ನೂರು ಗ್ರಾಪಂ ಅಧ್ಯಕ್ಷೆ ತೇಜಸತೀಶ್ , ಬನ್ನಿಕುಪ್ಪೆ ಕೆಂಗಲ್ ಹನುಮಂತಯ್ಯ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಶಿವಲಿಂಗಯ್ಯ, ಅಂಕನಹಳ್ಳಿ ಗಿರೀಶ್, ಮಾಜಿ ಗೌರವ ಕಾರ್ಯದರ್ಶಿ ಸಿ.ರಾಜಶೇಖರ್, ಜಿಲ್ಲಾ ಕಸಾಪ ಕೋಶಾಧ್ಯಕ್ಷ ರಾಜೇಶ್, ತಾಲೂಕು ಅಧ್ಯಕ್ಷ ಬಿ.ಟಿ. ದಿನೇಶ್, ಕೋಶಾಧ್ಯಕ್ಷ ಬಾನಂದೂರು ನಂಜುಂಡಿ, ಸಂಚಾಲಕ ಬಿ.ಟಿ. ರಾಜೇಂದ್ರ, ಸಾಹಿತಿಗಳಾದ ಡಾ.ಎಂ. ಬೈರೇಗೌಡ, ಸು.ಚಿ.ಗಂಗಾಧರಯ್ಯ, ಎಲ್ಲೇಗೌಡ ಬೆಸಗರಹಳ್ಳಿ, ಕೂ.ಗಿ. ಗಿರಿಯಪ್ಪ, ಜಿ. ಶಿವಣ್ಣ, ಚೌ.ಪು. ಸ್ವಾಮಿ ಇತರರು ಇದ್ದರು.
ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :