ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳು
ಶ್ರೀ ಕಾಡನಕುಪ್ಪೆ ಶಿವರಾಂರವರ ವೇದಿಕೆ :
1. ರಾಮನಗರ ತಾಲೂಕು ಕೇಂದ್ರದಲ್ಲಿ ಸುಸಜ್ಜಿತ ಕನ್ನಡ ಭವನ ನಿರ್ಮಾಣ ಮಾಡಬೇಕು.
2. ಕನ್ನಡ ಭಾಷೆ, ಸಾಹಿತ್ಯ, ಕಲೆ ಹಾಗೂ ಸಂಸ್ಕøತಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕು.
3. ತಾಲೂಕಿನ ಕಸಬಾ, ಕೈಲಾಂಚ ಹೋಬಳಿ ಮೂಲಕ ಹರಿಯುವ ಮೂಲಕ ಕುಡಿಯುವ ನೀರಿನ ಜೀವಸೆಲೆಯಾಗಿರುವ ಅರ್ಕಾವತಿ ನದಿಯ ಸ್ವಚ್ಚತೆ ಕಾಪಾಡಲು ಕ್ರಮ ವಹಿಸಬೇಕು.
4. ಕೈಲಾಂಚ ಹೋಬಳಿ ತಾಲೂಕು ಕೇಂದ್ರವಾಗುವ ಮಟ್ಟದಲ್ಲಿ ಬೆಳೆಯುತ್ತಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರಿ ಪದವಿ ಕಾಲೇಜು ಸ್ಥಾಪಿಸಬೇಕು.

ಸಮ್ಮೇಳನಾಧ್ಯಕ್ಷರ ಅದ್ಧೂರಿ ಮೆರವಣಿಗೆ
ರಾಮನಗರ ತಾಲೂಕಿನ ಕೈಲಾಂಚ ಗ್ರಾಮದ ರಾಜಬೀದಿಯಲ್ಲಿ ರಾಮನಗರ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಜಿ.ಎಚ್.ರಾಮಯ್ಯ ಅವರ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.
ಕೈಲಾಂಚ ಗ್ರಾಮದ ಬಸವೇಶ್ವರ ದೇವಾಲಯದ ಮುಂಭಾಗದಿಂದ ಸಮ್ಮೇಳನಾಧ್ಯಕ್ಷ ಜಿ.ಎಚ್. ರಾಮಯ್ಯ ಅವರನ್ನು ಗ್ರಾಮದ ಪ್ರಮುಖ ಬೀದಿಯಲ್ಲಿ ಪೂರ್ಣ ಕುಂಭ ಹಾಗೂ ಜನಪದ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.
ತಾಲೂಕು ಕಸಾಪ ಸಂಚಾಲಕ ಬಿ.ಟಿ.ರಾಜೇಂದ್ರ, ಹೋಬಳಿ ಘಟಕದ ಅಧ್ಯಕ್ಷರುಗಳಾದ ವಡ್ಡರಹಳ್ಳಿ ಗಿರೀಶ್, ಲಕ್ಕಸಂದ್ರಮಹದೇವು, ಕ್ಯಾಸಾಪುರ ದೇವರಾಜು, ಡೇರಿ ವೆಂಕಟೇಶ್, ಗ್ರಾಮದ ಮುಖಂಡ ನಾಗೋಹಳ್ಳಿ ದೀಪು, ಕೃಷ್ಣ, ಸಮದ್, ಕೆಂಪರಾಮು, ಪಾಂಡು ಸೇರಿದಂತೆ ಶಾಲಾ ವಿದ್ಯಾರ್ಥಿಗಳು, ಸಾಹಿತಿಗಳು, ಕನ್ನಡ ಪ್ರೇಮಿಗಳು ಮೆರವಣಿಗೆಯ ನೇತೃತ್ವ ವಹಿಸಿ ಯಶಸ್ವಿಗೊಳಿಸಿದರು.
ಮೆರವಣಿಗೆ ಆರಂಭಕ್ಕೂ ಮುನ್ನ ಸಮ್ಮೇಳನದ ಮುಖ್ಯ ವೇದಿಕೆ ಮುಂಭಾಗ ತಹಸೀಲ್ದಾರ್ ತೇಜಸ್ವಿನಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜ ಮತ್ತು ಕನ್ನಡ ಧ್ವಜವನ್ನು ಆರೋಹಣ ಮಾಡಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್ ಬಾಬು, ಶಿಕ್ಷಕ ನಾರಾಯಣ್ ಸೇರಿದಂತೆ ಕಸಾಪ ಪದಾಧಿಕಾರಿಗಳು ಹಾಜರಿದ್ದರು.

ಗೋಷ್ಠಿಗಳು – ಸಾಂಸ್ಕೃತಿಕ ಕಾರ್ಯಕ್ರಮ :
ಸಮ್ಮೇಳನದಲ್ಲಿ ಕಾವ್ಯ ಗೋಷ್ಠಿ, ವಿಚಾರಗೋಷ್ಠಿ, ಸಾಹಿತ್ಯ ವಾಹಿನಿ ಹಾಗೂ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಜರುಗಿತು. ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರಿಗೆ ರೇಷ್ಮೆ ನಾಡು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ, ಗೀತ ಗಾಯನ ಹಾಗೂ ಹಾಸ್ಯ ಸಂಜೆ ಜನರ ಮನಸೂರೆಗೊಂಡಿತು.
ಚುನಾಯಿತ ಪ್ರತಿನಿಧಿಗಳ ಗೈರು :
ಅಕ್ಷರ ಜಾತ್ರೆ ಹಬ್ಬಕ್ಕೆ ಸ್ಥಳೀಯ ಶಾಸಕರು ಸ್ವಾಗತ ಸಮಿತಿ ಅಧ್ಯಕ್ಷರಾಗಿ ಸಮ್ಮೇಳನ ಯಶಸ್ವಿ ಮಾಡುವುದು ವಾಡಿಕೆ. ಆದರೆ, ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕಿ ಅನಿತಾಕುಮಾರಸ್ವಾಮಿ ಗೈರಾಗಿದ್ದರು.
ಆಹ್ವಾನ ಪತ್ರಿಕೆಯಲ್ಲಿದ್ದ ಸಂಸದ ಡಿ.ಕೆ. ಸುರೇಶ್, ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ, ಶಾಸಕ ಎ. ಮಂಜುನಾಥ್, ಮಾಜಿ ಶಾಸಕರಾದ ಕೆ. ರಾಜು, ಎಚ್.ಸಿ. ಬಾಲಕೃಷ್ಣ ಸೇರಿದಂತೆ ಹಲವು ಜನಪ್ರತಿನಿಧಿಗಳು ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಗೈರಾಗಿದ್ದು ಎದ್ದು ಕಾಣುತ್ತಿತ್ತು.
ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :